ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷಿ ಮೇಲೆ ನಿರೀಕ್ಷೆಯ ಭಾರ

Last Updated 9 ಮೇ 2017, 19:30 IST
ಅಕ್ಷರ ಗಾತ್ರ

ನವದೆಹಲಿ:  ಒಲಿಂಪಿಕ್ಸ್‌ ಕುಸ್ತಿಯಲ್ಲಿ ಪದಕ ಗೆದ್ದ ಭಾರತದ ಮೊಟ್ಟಮೊದಲ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಬುಧವಾರ ಇಲ್ಲಿ ಆರಂಭವಾಗಲಿರುವ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ  ಚಿನ್ನದ ಕನಸಿನೊಂದಿಗೆ ಕಣಕ್ಕಿಳಿಯಲಿದ್ದಾರೆ.

ಅಗ್ರಗಣ್ಯ ಕುಸ್ತಿಪಟುಗಳಾದ ಯೋಗೇಶ್ವರ್ ದತ್, ಸುಶೀಲ್ ಕುಮಾರ್, ಗೀತಾ ಪೋಗಟ್, ಬಬಿತಾ ಪೋಗಟ್ ಅವರು ಈ ಟೂರ್ನಿಯಲ್ಲಿ ಆಡುತ್ತಿಲ್ಲ. ಆದ್ದರಿಂದ ಆತಿಥೇಯ ತಂಡದ ನಾಯಕತ್ವ ವಹಿಸಿರುವ ಸಾಕ್ಷಿ ಅವರ ಮುಂದೆ ಪದಕ ಜಯಿಸುವ  ಸವಾಲು ಕೂಡ ಇದೆ.
ಏಷ್ಯಾದ ಶ್ರೇಷ್ಠ ಕುಸ್ತಿಪಟುಗಳು ಕಣಕ್ಕಿಳಿಯುತ್ತಿರುವ ಮಹಿಳೆಯರ 58 ಕೆಜಿ ವಿಭಾಗದಲ್ಲಿ ಸಾಕ್ಷಿ ಮಲಿಕ್ ಸೆಣಸಲಿದ್ದಾರೆ. ಅವರ ಮೇಲೆ ಅಪಾರ ನಿರೀಕ್ಷೆ ಇದೆ.

ಸಾಕ್ಷಿ ಅವರು ಹೋದ ವರ್ಷ ಆಗಸ್ಟ್‌ನಲ್ಲಿ ರಿಯೊ ಡಿ ಜನೈರೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ನಂತರ ಅಂತರರಾಷ್ಟ್ರೀಯ ಕುಸ್ತಿ ಟೂರ್ನಿಗಳಲ್ಲಿ ಭಾಗವಹಿಸಿಲ್ಲ. ಇತ್ತೀಚೆಗೆ ನಡೆದಿದ್ದ ಪ್ರೊ ಕುಸ್ತಿ ಲೀಗ್ (ಪಿಡಬ್ಲ್ಯುಎಲ್) ಟೂರ್ನಿಯಲ್ಲಿ ಅವರು ಕೆಲವು ಬೌಟ್‌ಗಳಲ್ಲಿ ಆಡಿದ್ದರು. ನಂತರ ಲಖನೌದಲ್ಲಿ   ನಡೆದಿದ್ದ ಏಷ್ಯನ್ ಚಾಂಪಿಯನ್‌ಷಿಪ್‌ನ ಆಯ್ಕೆ ಟ್ರಯಲ್ಸ್‌ನಲ್ಲಿ  ಸಾಕ್ಷಿ 10–0  ಪಾಯಿಂಟ್‌ಗಳಿಂದ ಮಂಜು ವಿರುದ್ಧ ಗೆದ್ದಿದ್ದರು.

ಸಂದೀಪ್–ಬಜರಂಗ್ ಮೇಲೆ ನಿರೀಕ್ಷೆ
ಒಲಿಂಪಿಕ್ಸ್‌ ಪದಕ ವಿಜೇತರಾದ ಸುಶೀಲ್ ಕುಮಾರ್ ಮತ್ತು ಯೋಗೇಶ್ವರ್ ದತ್ ಅವರು ಈ ಸ್ಪರ್ಧೆಯಲ್ಲಿ ಕಣಕ್ಕಿಳಿಯುತ್ತಿಲ್ಲ. ಆದ್ದರಿಂದ ಸಂದೀಪ್ ತೋಮರ್ ಮತ್ತು ಬಜರಂಗ್ ಅವರ ಮೇಲೆ ಹೆಚ್ಚು ನಿರೀಕ್ಷೆ ಇದೆ. ಅವರಿಗೂ ತಮ್ಮ ಪ್ರತಿಭೆ ಸಾಬೀತುಪಡಿಸುವ ದೊಡ್ಡ ಅವಕಾಶ ಇದಾಗಿದೆ. ಅವರಿಬ್ಬರೂ ಫ್ರೀಸ್ಟೈಲ್‌ 65 ಕೆಜಿ ವಿಭಾಗದಲ್ಲಿ ಕಣಕ್ಕಿಳಿಯುವರು.

ಹೋದ ವರ್ಷ ಬ್ಯಾಂಕಾಕ್‌ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾರತ ತಂಡವು ಒಂದು ಚಿನ್ನ, ಮೂರು ಬೆಳ್ಳಿ, ಐದು ಕಂಚಿನ ಪದಕಗಳನ್ನು ಗೆದ್ದಿತ್ತು. ಅದರಲ್ಲಿ ಸಂದೀಪ್ ಅವರು ಪುರುಷರ ಫ್ರೀಸ್ಟೈಲ್ ಕುಸ್ತಿಯ 57 ಕೆಜಿ ವಿಭಾಗದಲ್ಲಿ ಚಿನ್ನದ ಸಾಧನೆ ಮಾಡಿದ್ದರು.
75ಕೆಜಿ ವಿಭಾಗದಲ್ಲಿ ಸುಶೀಲ್ ಮತ್ತು ಅಮಾನತುಗೊಂಡಿರುವ ನರಸಿಂಗ್ ಯಾದವ್ ಅವರು ಇಲ್ಲ. ಆದ್ದರಿಂದ ನವಪ್ರತಿಭೆ ಜಿತೇಂದರ್ ಅವರು ಅಖಾಡಕ್ಕೆ ಇಳಿಯಲಿದ್ದಾರೆ.

ಕಣದಲ್ಲಿ ಸತ್ಯವ್ರತ್ ಕಡಿಯಾನ್
ಸಾಕ್ಷಿ ಮಲಿಕ್ ಅವರ ಪತಿ ಸತ್ಯವ್ರತ್ ಕಡಿಯಾನ್ (97ಕೆಜಿ) ಅವರು ಟ್ರಯಲ್ಸ್‌ನಲ್ಲಿ ವಾಕ್‌ಓವರ್ ಪಡೆದಿದ್ದರು. ಅವರ ಎದುರಾಳಿ ಮೌಸಮ್ ಖತ್ರಿ ಅವರು ಟ್ರಯಲ್ಸ್‌ನಲ್ಲಿ ಭಾಗವಹಿಸಿರಲಿಲ್ಲ.  ಅದರಿಂದಾಗಿ ತಂಡಕ್ಕೆ ಸತ್ಯವ್ರತ್ ಆಯ್ಕೆಯಾಗಿದ್ದರು. ಅವರ ವಿಭಾಗದಲ್ಲಿ ತುರುಸಿನ ಪೈಪೋಟಿ ಇದೆ.  ತವರಿನ ಅಂಗಳದಲ್ಲಿ ಅವರು ಮಿಂಚುವ ನಿರೀಕ್ಷೆ ಇದೆ.

ಕಣದಲ್ಲಿ ವಿನೇಶ
2014ರ ಕಾಮನ್‌ವೆಲ್ತ್ ಕೂಟದ ಚಿನ್ನದ ಪದಕ ವಿಜೇತ ಕುಸ್ತಿಪಟು ವಿನೇಶ ಪೋಗಟ್ ಅವರು ಗಾಯದಿಂದ ಚೇತರಿಸಿಕೊಂಡಿದ್ದು ಕಣಕ್ಕಿಳಿಯಲಿದ್ದಾರೆ.
ಕಳೆದ ಸಲ ಅವರು 53 ಕೆಜಿ ವಿಭಾಗದಲ್ಲಿ  ಕಂಚು ಗೆದ್ದಿದ್ದರು.  ಅನಿತಾ (63 ಕೆಜಿ) ಮತ್ತು ಪ್ರಿಯಾಂಕಾ (55ಕೆಜಿ) ಅವರು ಕ್ರಮವಾಗಿ ಕಂಚು ಮತ್ತು ಬೆಳ್ಳಿ ಜಯಿಸಿದ್ದರು.  ವಿನೇಶ ಅವರ ಸಹೋದರಿ ರಿತು ಪೋಗಟ್ ಅವರು ಕೂದಲೆಳೆಯ ಅಂತರದಲ್ಲಿ ಪದಕ ತಪ್ಪಿಸಿಕೊಂಡಿದ್ದರು. ಈ ವರ್ಷ ಅವರು ಜಯಿಸುವ ವಿಶ್ವಾಸದಲ್ಲಿದ್ದಾರೆ.

  ತಂಡದಲ್ಲಿ 24 ಕುಸ್ತಿಪಟುಗಳು
ಆತಿಥೇಯ ತಂಡವು ಈ ಬಾರಿ 24 ಪೈಲ್ವಾನರನ್ನು ಕಣಕ್ಕಿಳಿಸುತ್ತಿದೆ.  ಫ್ರೀಸ್ಟೈಲ್ ವಿಭಾಗದ ಪುರುಷರು (8), ಮಹಿಳೆಯರು (8) ಮತ್ತು  ಗ್ರಿಕೊ ರೋಮನ್ ವಿಭಾಗದಲ್ಲಿ (8) ತಂಡವು ಸ್ಪರ್ಧಿಸಲಿದೆ.
ಹಾಲಿ ಚಾಂಪಿಯನ್ ಇರಾನ್, ಉಜ್ಬೇಕಿಸ್ತಾನ, ಕಜಕಸ್ತಾನ, ಕಿರ್ಗಿಸ್ತಾನ, ಜಪಾನ್, ಕೊರಿಯಾ, ಚೀನಾ ಮತ್ತು ಮಂಗೋಲಿಯಾದ ಕುಸ್ತಿಪಟುಗಳು ಪದಕಗಳಿಗಾಗಿ ಸೆಣಸುವರು.

ಪುರುಷರ ಫ್ರೀಸ್ಟೈಲ್ ವಿಭಾಗದಲ್ಲಿ 112, ಗ್ರಿಕೊ ರೋಮನ್ ವಿಭಾಗದಲ್ಲಿ 103 ಮತ್ತು  ಮಹಿಳೆಯರ ವಿಭಾಗದಲ್ಲಿ 83 ಸ್ಪರ್ಧಿಗಳು ಕಣಕ್ಕಿಳಿಯಲಿದ್ದಾರೆ.  24 ಚಿನ್ನ, 24 ಬೆಳ್ಳಿ ಮತ್ತು 48 ಕಂಚಿನ ಪದಕಗಳು ವಿಜೇತರ ಕೊರಳುಗಳನ್ನು ಅಲಂಕರಿಸಲು ಕಾದಿವೆ.
ಬಲಿಷ್ಠ ಇರಾನ್ ಸವಾಲು: ಹೋದ ಸಲದ ಚಾಂಪಿಯನ್ ಇರಾನ್ ತಂಡವು ಈ ಬಾರಿಯೂ ತನ್ನ ಉತ್ತಮ ಕುಸ್ತಿಪಟುಗಳ ಪಡೆಯನ್ನು ಕಣಕ್ಕಿಳಿಸಿದೆ.
ಹೋದ ವರ್ಷ ಫ್ರೀಸ್ಟೈಲ್, ಗ್ರಿಕೊ ರೋಮನ್ ವಿಭಾಗಗಳಲ್ಲಿ ಇರಾನ್ ಚಾಂಪಿಯನ್ ಆಗಿತ್ತು. ಏಷ್ಯನ್ ಚಾಂಪಿಯನ್‌ಷಿಪ್‌ ಇತಿಹಾಸದಲ್ಲಿ ಇರಾನ್ ಒಟ್ಟು 344 ಪದಕಗಳನ್ನು (175ಚಿನ್ನ, 75 ಬೆಳ್ಳಿ, 94 ಕಂಚು) ಗೆದ್ದಿದೆ. ಉಳಿದೆಲ್ಲ ದೇಶಗಳಿಗೂ ಇರಾನ್ ತಂಡವು ಕಠಿಣ ಸವಾಲು ಒಡ್ಡುವ ಸಾಧ್ಯತೆ ಇದೆ.
ಭಾರತ ತಂಡಗಳು ಇಂತಿವೆ.
ಪುರುಷರ ಫ್ರೀಸ್ಟೈಲ್: ಸಂದೀಪ್ ತೋಮರ್ (57ಕೆಜಿ), ಹರ್ಫುಲ್ (61ಕೆಜಿ), ಬಜರಂಗ್ (65ಕೆಜಿ), ವಿನೋದ್ (70ಕೆಜಿ), ಜಿತೇಂದರ್ (74ಕೆಜಿ), ಸೋಮವೀರ್ (86ಕೆಜಿ), ಸತ್ಯವ್ರತ್ ಕಡಿಯಾನ್ (97ಕೆಜಿ), ಸುಮಿತ್ (125ಕೆಜಿ).

ಬಲ್ಗೇರಿಯಾದಲ್ಲಿ ಈಚೆಗೆ ನಡೆದ  ಟೂರ್ನಿ ಯಲ್ಲಿ ನಮ್ಮ ಕುಸ್ತಿಪಟುಗಳು ಮೂರು ಪದಕ ಗೆದ್ದಿದ್ದರು.  ತವರಿನಲ್ಲೂ ಹೆಚ್ಚು ಪದಕಗಳನ್ನು ಗೆಲ್ಲುವ ನಿರೀಕ್ಷೆ ಇದೆ.
ಬ್ರಿಜ್‌ಭೂಷಣ್ ಶರಣಸಿಂಗ್
ಡಬ್ಲ್ಯುಎಫ್‌ಐ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT