ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೊಲೀಸರಿಗೆ ಸಂಬಳವೂ ಬೇಕು, ಗಿಂಬಳವೂ ಬೇಕು’

Last Updated 9 ಮೇ 2017, 19:48 IST
ಅಕ್ಷರ ಗಾತ್ರ

ಬೆಂಗಳೂರು: ತನ್ನ ಮನೆ ಮೇಲೆ ದಾಳಿ ನಡೆದ ಬಳಿಕ ತಲೆಮರೆಸಿಕೊಂಡು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ರೌಡಿ ವಿ.ನಾಗರಾಜ್, ಇದೀಗ  ಹೆಚ್ಚುವರಿ ಪೊಲೀಸ್ ಕಮಿಷನರ್ ಹೇಮಂತ್ ನಿಂಬಾಳ್ಕರ್ ಸೇರಿದಂತೆ ಹಲವು ಪೊಲೀಸರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಇನ್ನೊಂದು ಸಿ.ಡಿ. ಬಿಡುಗಡೆ ಮಾಡಿದ್ದಾನೆ.

‘ನಿಂಬಾಳ್ಕರ್, ಅವರ ಕೈಕೆಳಗಿನ ಡಿಸಿಪಿ, ಎಸಿಪಿ, ಇನ್‌ಸ್ಪೆಕ್ಟರ್‌ಗಳು, ಸಂಸದ ಪಿ.ಸಿ.ಮೋಹನ್, ಅವರ ಬಾಮೈದ ದಿವಾಕರ್, ರಿಯಲ್ ಎಸ್ಟೇಟ್ ಏಜೆಂಟ್ ಉಮೇಶ್.. ಇವರೆಲ್ಲ ಒಂದೇ ಗ್ಯಾಂಗ್‌ನ ಸದಸ್ಯರು. ವ್ಯವಸ್ಥಿತವಾಗಿ ಸಂಚು ರೂಪಿಸಿ ನನ್ನನ್ನು ಈ ಸ್ಥಿತಿಗೆ ತಂದಿದ್ದಾರೆ’ ಎಂದು ಆತ ಆರೋಪಿಸಿದ್ದಾನೆ.

‘ಐಪಿಎಸ್ ಅಧಿಕಾರಿಗಳೇ, ದಯವಿಟ್ಟು ಇನ್ನಾದರೂ ಸಂಚು ನಿಲ್ಲಿಸಿ.. ನೀವು ಕೊಟ್ಟಿದ್ದ ದುಡ್ಡನ್ನು ಈಗಾಗಲೇ ತೆಗೆದುಕೊಂಡು ಹೋಗಿದ್ದೀರಾ. ನಿಮ್ಮ ಹತ್ತಿರ ಇನ್ನೂ ಸಾವಿರಾರು ಕೋಟಿ ಮೊತ್ತದ ಹಳೇ ನೋಟುಗಳಿವೆ.

ಅವುಗಳನ್ನು ಬದಲಾಯಿಸಲು ಆಗಲಿಲ್ಲವೆಂದು ಹೀಗೆ ಹುಚ್ಚರಂತೆ ಆಡುತ್ತಿದ್ದೀರಾ’ ಎಂದಿದ್ದಾನೆ.

ಕರೆದರೆ ಬರುತ್ತೇನೆ: ‘ಗೃಹಸಚಿವ ಜಿ.ಪರಮೇಶ್ವರ್ ಅವರು ಜೆಂಟಲ್‌ಮನ್. ನನ್ನ ಮೊದಲ ಸಿ.ಡಿ ಕುರಿತು ಮಾಧ್ಯಮದವರ ಜತೆ ಮಾತನಾಡಿದ್ದ ಅವರು, ‘ಐಎಎಸ್ ಇರಲಿ, ಐಪಿಎಸ್ ಇರಲಿ. ಯಾರೇ ತಪ್ಪು ಮಾಡಿದ್ದರೂ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದಿದ್ದರು. ಅದನ್ನು ಕೇಳಿ ಸಂತೋಷವಾಯಿತು. ಗೃಹಸಚಿವರು ಕರೆದರೆ, 10 ನಿಮಿಷದಲ್ಲಿ ಅವರ ಮುಂದೆ ನಿಲ್ಲುತ್ತೇನೆ’ ಎಂದು ಹೇಳಿದ್ದಾನೆ.

ಮುಖ್ಯಮಂತ್ರಿ ಹೊಣೆ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಲಿಗೆ ಬಿದ್ದು ಕೇಳಿಕೊಳ್ಳುತ್ತೇನೆ. ರಾಜ್ಯದಲ್ಲಿ ಕೆಲ ಐಪಿಎಸ್ ಅಧಿಕಾರಿಗಳು ಮಾಡುತ್ತಿರುವ ಮೋಸಗಳಿಗೆ ಕಡಿವಾಣ ಹಾಕಿ. ಇಲ್ಲವಾದರೆ, ಮುಂದಿನ ಅನಾಹುತಗಳಿಗೆ ನೀವೇ ಹೊಣೆಯಾಗಬೇಕಾಗುತ್ತದೆ.’

‘ಪೊಲೀಸರ ವರ್ತನೆಯಿಂದ ಮನಸ್ಸು ಕೆಟ್ಟು ಹೋಗಿದೆ.  ನಾನು ವಿಧಾನಸೌಧದ ಮುಂದೆ ಏನಾದರೂ ಮಾಡಿಕೊಂಡರೆ, ನಿಮ್ಮ ಹೆಸರೇ ಹಾಳಾಗುತ್ತದೆ. ನಿಂಬಾಳ್ಕರ್‌ ಸೇರಿದಂತೆ ಕೆಲ ಪೊಲೀಸರಿಗೆ ತಲೆ ಕೆಟ್ಟು ಹೋಗಿದೆ. ದಯವಿಟ್ಟು ಅವರಿಗೆ ಬುದ್ಧಿ ಹೇಳಿ.’

‘ನನ್ನ ಮನೆಯಲ್ಲಿ ಹಣ ಪತ್ತೆಯಾದ ಪ್ರಕರಣದ ತನಿಖೆಯನ್ನು ಸ್ಥಳೀಯ ಪೊಲೀಸರಿಗೆ ಕೊಡಬೇಡಿ, ಸಿಬಿಐಗೆ ಒಪ್ಪಿಸಿ. ಆಗ ಐಪಿಸ್ ಅಧಿಕಾರಿಗಳು ಸಮವಸ್ತ್ರ ಕಳಚಿ ಜೈಲಿಗೆ ಹೋಗುತ್ತಾರೆ’ ಎಂದು ನಾಗರಾಜ್ ಹೇಳಿದ್ದಾನೆ.

ಎಲ್ಲ ಜುಜುಬಿ ಪ್ರಕರಣಗಳು: ‘ನನ್ನ ವಿರುದ್ಧ 40 ರಿಂದ 50 ಕೇಸ್‌ಗಳು ದಾಖಲಾಗಿವೆ ಎಂದು ಹೇಳಲಾಗುತ್ತಿದೆ. ಆದರೆ, ಅವೆಲ್ಲ ಕೊಲೆ, ಸುಲಿಗೆಯಂಥ ಗಂಭೀರ ಅಪರಾಧಗಳಲ್ಲ. ಜುಜುಬಿ ₹ 100, ₹200 ದಂಡ ಕಟ್ಟುವಂಥ ಕೇಸ್‌ಗಳು. ಆದರೆ, ಪೊಲೀಸರು ನನ್ನನ್ನು ರೌಡಿ ಎಂದೆಲ್ಲ ಕರೆದಿದ್ದಾರೆ. ಆ ಪದಕ್ಕೆ ನನಗೆ ಅರ್ಥವೇ ಗೊತ್ತಿಲ್ಲ.’

‘1999ರಲ್ಲಿ ಗಾಂಧಿನಗರ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದೆ. ಆಗ, ಸಂಜೆ 5 ಗಂಟೆ ನಂತರ ಚುನಾವಣೆ ಪ್ರಚಾರ ಮಾಡಿದ್ದಕ್ಕೆ, ಭಿತ್ತಿಪತ್ರ ಹಂಚಿದ್ದಕ್ಕೆ, ಅಕ್ರಮವಾಗಿ ಬ್ಯಾನರ್‌ ಕಟ್ಟಿದ್ದಕ್ಕೆ ಪ್ರಕರಣ ದಾಖಲಿಸಲಾಯಿತು. ಆ ನಂತರದ ಚುನಾವಣೆಗಳಲ್ಲೂ ನನ್ನ ವಿರುದ್ಧ ಇಂತಹುದೇ ಕೇಸ್‌ಗಳನ್ನು ಹಾಕಲಾಯಿತು’ ಎಂದು ಹೇಳಿಕೊಂಡಿದ್ದಾನೆ.

ಗಿಂಬಳವೂ ಬೇಕು: ‘ನನ್ನ ಮಕ್ಕಳನ್ನು ಐಎಎಸ್‌, ಐಪಿಎಸ್‌ ಅಧಿಕಾರಿಗಳನ್ನಾಗಿ ಮಾಡಬೇಕು ಎಂದು ಆಸೆ ಇಟ್ಟುಕೊಂಡಿದ್ದೆ. ನೀವೆಲ್ಲ (ಪೊಲೀಸರು) ಸೇರಿಕೊಂಡು ಅವರ ಬಾಳನ್ನೇ ಹಾಳು ಮಾಡಿದಿರಿ.’

‘ಅಧಿಕಾರ ದುರುಪಯೋಗ ಮಾಡಿಕೊಳ್ಳಬೇಡಿ. ಸಾವಿರಾರು ಜನ ನಿಮ್ಮಿಂದ ನೊಂದಿದ್ದಾರೆ. ನಿಮಗೆ ಸಂಬಳವೂ ಬೇಕು. ಈ ಕಡೆ ಗಿಂಬಳವೂ ಬೇಕು. ಜನರಿಗೆ ಅನ್ಯಾಯ ಮಾಡಿದರೆ, ನಿಮ್ಮ ಹೆಂಡತಿ–ಮಕ್ಕಳು ಅನಾಥರಾಗುತ್ತಾರೆ’ ಎಂದು ಪೊಲೀಸರಿಗೆ ಶಾಪ ಹಾಕಿದ್ದಾನೆ.

‘ಸಂಸದ ಪಿ.ಸಿ.ಮೋಹನ್ ಹಲವು ವರ್ಷಗಳಿಂದ ಪರಿಚಿತರು. ಆದರೆ, ‘ನನಗೂ ನಾಗನಿಗೂ ಸಂಬಂಧವಿಲ್ಲ’ ಎಂದು ಅವರು ಮಾಧ್ಯಮಗಳ ಹೇಳಿದ್ದಾರೆ.  ಇನ್ನು ಮುಂದೆ ಅವರು ಹಾಗೆಯೇ ಇರಲಿ’ ಎಂದಿದ್ದಾನೆ.

‘ಸಿ.ಡಿ ಬಿಡುಗಡೆ ಮಾಡುವ ಉದ್ದೇಶ ಇರಲಿಲ್ಲ. ‘ನೀವು ಎಲ್ಲಿದ್ದೀರಾ, ಒಂದು ಸಿ.ಡಿಯನ್ನಾದರೂ ಕಳುಹಿಸಿ’ ಎಂದು ಮಾಧ್ಯಮದವರೇ ನೂರು ಬಾರಿ ಕೇಳಿಕೊಂಡರು. ಹೀಗಾಗಿ, ವಕೀಲರ ಮೂಲಕ ಸಿ.ಡಿ ತಲುಪಿಸಿದೆ ಎಂದು ಹೇಳಿದ್ದಾನೆ.

ಏಪ್ರಿಲ್‌ನಲ್ಲಿ ಮೊದಲ ಕ್ಯಾಸೆಟ್ ಬಿಡುಗಡೆ ಮಾಡಿದ್ದಕ್ಕಾಗಿ ಐಪಿಎಸ್ ಅಧಿಕಾರಿಯ ನೇತೃತ್ವದ ಗ್ಯಾಂಗ್ ಮಲ್ಲೇಶ್ವರ ಎಸಿಪಿ ಮೂಲಕ ನನ್ನ ವಿರುದ್ಧ ಪ್ರಕರಣ ದಾಖಲಿಸಿದೆ’ ಎಂದು ಆರೋಪಿಸಿದ್ದಾನೆ.

**

ನಾಗರಾಜನ ಬಲಗೈ ಬಂಟ ಸೆರೆ
ನಾಗರಾಜ್‌ನ ಮನೆಯಲ್ಲೇ ಬಾಡಿಗೆಗಿದ್ದ ಆತನ ಬಲಗೈ ಬಂಟ ಸೌಂದರ್ಯ ರಾಜನ್ ಅಲಿಯಾಸ್ ಪೆರಿಯಾರ್ ಅಪ್ಪು (31) ಎಂಬಾತನನ್ನು ಎಸಿಪಿ ರವಿಕುಮಾರ್ ನೇತೃತ್ವದ ತಂಡ ಸೋಮವಾರ ಬಂಧಿಸಿದೆ.

‘ನಾಗರಾಜ್ ತಲೆಮರೆಸಿಕೊಂಡ ನಂತರ ಇಲ್ಲಿನ ಎಲ್ಲ ಬೆಳವಣಿಗೆಗಳ ಬಗ್ಗೆ ರಾಜನ್ ಆತನಿಗೆ ಮಾಹಿತಿ ಕೊಡುತ್ತಿದ್ದ.  ನೋಟು ಬದಲಾವಣೆ ದಂಧೆಯಲ್ಲೂ ಈತ ಪ್ರಮುಖ ಪಾತ್ರ ವಹಿಸಿದ್ದ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

**

ಚುನಾವಣೆಗೆ ನಿಲ್ಲಲ್ಲ

‘2018ರಲ್ಲಿ ಎಲೆಕ್ಷನ್‌ ಬರುತ್ತೆ. ಅದಕ್ಕೆ ನಾನು ಸ್ಪರ್ಧಿಸುತ್ತೇನೆ ಅಂತ ತಾನೇ ಇಷ್ಟೊಂದು ಕಾಟ ಕೊಡ್ತಿರೋದು. ಖಂಡಿತ ಚುನಾವಣೆಗೆ ನಿಲ್ಲೋದಿಲ್ಲ. ಯಾರಿಗಾದ್ರೂ ಬೆಂಬಲ ವ್ಯಕ್ತಪಡಿಸ್ತೀನಿ. ಅವರು ಗೆದ್ದುಕೊಳ್ಳಲಿ...’ ಎನ್ನುತ್ತಾ ನಾಗರಾಜ್ ಕಣ್ಣೀರು ಹಾಕಿದ್ದಾನೆ.

**

ಶರಣಾಗತಿಗೆ ಷರತ್ತುಗಳು

‘ಠಾಣೆಗೆ ಬಂದ ಕೂಡಲೇ ಬಂಧಿಸಿ, ನ್ಯಾಯಾಲಯಕ್ಕೆ ಕರೆದೊಯ್ಯಬೇಕು. ಹೆಚ್ಚಿನ ವಿಚಾರಣೆಗೆ ಒಳಪಡಿಸಬಾರದು. ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶರನ್ನು ಕೋರಬಾರದು. ಮತ್ತೆ ಹಣ ಜಪ್ತಿ ಮಾಡಬಾರದು...’

ಈ ಷರತ್ತುಗಳಿಗೆ ಒಪ್ಪಿಕೊಂಡರೆ ಪೊಲೀಸರಿಗೆ ಶರಣಾಗುವುದಾಗಿ  ನಾಗರಾಜ್‌ ವಕೀಲರ ಮೂಲಕ ತನಿಖಾಧಿಕಾರಿಗಳ ಮುಂದೆ ಬೇಡಿಕೆ ಇಟ್ಟಿದ್ದಾನೆ.  ಆದರೆ, ಅದಕ್ಕೆ ಸೊಪ್ಪು ಹಾಕದ ಅಧಿಕಾರಿಗಳು, ‘ಆತ ಶರಣಾಗುವುದು ಬೇಕಾಗಿಲ್ಲ.  ನಾವೇ ಬಂಧಿಸುತ್ತೇವೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT