ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಬ್‌ಸೈಟ್‌ನಲ್ಲಿ ಪೌರಕಾರ್ಮಿಕರ ಪಟ್ಟಿ ಪ್ರಕಟ

Last Updated 9 ಮೇ 2017, 19:55 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿಯೊಂದು ವಾರ್ಡ್‌ನಲ್ಲಿ  ಕಾರ್ಯನಿರ್ವಹಿಸುವ ಗುತ್ತಿಗೆ ಪೌರಕಾರ್ಮಿಕರ ಹೆಸರುಗಳನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ವೆಬ್‌ ಸೈಟ್‌ನಲ್ಲಿ (http://bbmp.gov.in) ಪ್ರಕಟಿಸಿದೆ.

‘ಗುತ್ತಿಗೆ ಪೌರಕಾರ್ಮಿಕರ ನಕಲಿ ಹೆಸರುಗಳನ್ನು ಸೃಷ್ಟಿಸಿ ಜನರ ದುಡ್ಡನ್ನು ಕೊಳ್ಳೆಹೊಡೆಯಲಾಗುತ್ತಿದೆ’ ಎಂಬ ಆರೋಪವನ್ನು ಪುಷ್ಟೀಕರಿಸುವಂತಿವೆ ಈ ಪಟ್ಟಿಯಲ್ಲಿ ಕೆಲವು ಹೆಸರುಗಳು ಹಾಗೂ ವಿವರಗಳು.

ಪೌರಕಾರ್ಮಿಕರ ಹೆಸರು, ವಿಳಾಸ, ಕಾರ್ಮಿಕರ ರಾಜ್ಯ ವಿಮೆ (ಇ.ಎಸ್‌.ಐ) ಸಂಖ್ಯೆ, ಭವಿಷ್ಯನಿಧಿ (ಪಿ.ಎಫ್‌) ಸಂಖ್ಯೆ, ಆಧಾರ್‌ ಸಂಖ್ಯೆ, ಹುದ್ದೆ, ಉದ್ಯೋಗದ ವಿಧ, ಉದ್ಯೋಗ ಸಂಖ್ಯೆ  ಹಾಗೂ ಭಾವಚಿತ್ರಗಳು ವಿವರ ಈ ಪಟ್ಟಿಯಲ್ಲಿದೆ.

ತಲಘಟ್ಟಪುರದ ಮಂಗಲಮ್ಮ ಅವರು ಉತ್ತರಹಳ್ಳಿ ವಾರ್ಡ್‌ನಲ್ಲಿ ಪೌರಕಾರ್ಮಿಕರಾಗಿದ್ದಾರೆ. ಅವರ ಹೆಸರು,   ಮತ್ತು ವಿಳಾಸ, ಇ.ಎಸ್‌.ಐ ಮತ್ತು ಪಿ.ಎಫ್‌ ಸಂಖ್ಯೆ, ಆಧಾರ್‌ ಸಂಖ್ಯೆಗಳು ನಾಲ್ಕು ಕಡೆ ಉಲ್ಲೇಖವಾಗಿವೆ. ಆದರೆ, ನೋಂದಣಿ ಸಂಖ್ಯೆ ಮಾತ್ರ ಬೇರೆ ಬೇರೆ.

ತಲಘಟ್ಟಪುರದಲ್ಲಿ ವಜ್ರಮ್ಮ ಹೆಸರಿನ ಇಬ್ಬರು ಇದ್ದಾರೆ. ಅವರ ನೋಂದಣಿ ಸಂಖ್ಯೆ, ಇಎಸ್‌ಐ– ಪಿಎಫ್‌, ಆಧಾರ್‌ ಸಂಖ್ಯೆಗಳು ಬೇರೆ ಬೇರೆ. ಆದರೆ, ಇದೇ ವಾರ್ಡ್‌ನ ಪಟ್ಟಿಯಲ್ಲಿ ಅದವಕ್ಕ ಎಂಬ ಹೆಸರು ಎರಡು ಬಾರಿ ಕಾಣಿಸಿಕೊಳ್ಳುತ್ತದೆ. ಆದರೆ, ಈ ಎರಡೂ ಹೆಸರುಗಳ ಮುಂದಿರುವ ನೋಂದಣಿ ಸಂಖ್ಯೆ, ಇಎಸ್‌ಐ– ಪಿಎಫ್‌, ಆಧಾರ್‌ ಸಂಖ್ಯೆಗಳು ಒಂದೇ. ಅಚ್ಚರಿಯೆಂದರೆ, ಅದವಕ್ಕ ಹಾಗೂ ವಜ್ರಮ್ಮ ಅವರ ಭಾವಚಿತ್ರಗಳು ಒಂದೇ ಆಗಿವೆ.

ಎಲ್ಲ ಪೌರಕಾರ್ಮಿಕರು ಆಧಾರ್‌ ಸಂಖ್ಯೆ ಹಾಗೂ ಭಾವಚಿತ್ರ ಒದಗಿಸಬೇಕು ಎಂದು ಬಿಬಿಎಂಪಿ ಕಟ್ಟುನಿಟ್ಟಾಗಿ ಸೂಚಿಸಿತ್ತು. ಆದರೂ ಈ ಪಟ್ಟಿಯಲ್ಲಿರುವ ಅನೇಕ ಕಾರ್ಮಿಕರ ಆಧಾರ್‌ ಸಂಖ್ಯೆ ಹಾಗೂ ಭಾವಚಿತ್ರ ನಮೂದಿಸಿಲ್ಲ.  ಕೆಲವು ಹೆಸರುಗಳ ಮುಂದೆ ವ್ಯಕ್ತಿಯ ಚಹರೆಯನ್ನು ಗುರುತಿಸಲೂ ಸಾಧ್ಯವಾಗದಷ್ಟು ಸಣ್ಣ ಗಾತ್ರದ  ಭಾವಚಿತ್ರ ಪ್ರಕಟಿಸಲಾಗಿದೆ.  ಬಹುತೇಕ ಎಲ್ಲ ವಾರ್ಡ್‌ಗಳ ಪೌರಕಾರ್ಮಿಕರ ಪಟ್ಟಿಯಲ್ಲೂ ಇಂತಹ ಲೋಪಗಳಿವೆ. 

ಶಾಂತಲಾನಗರ ವಾರ್ಡ್‌ನ ಪಟ್ಟಿಯಲ್ಲಿ ಉಮಾ ಅವರ ಹೆಸರು ಎರಡು ಬಾರಿ ಕಾಣಿಸಿಕೊಳ್ಳುತ್ತದೆ.  ಒಂದು ಹೆಸರಿನ ಮುಂದೆ ಆಧಾರ್‌ ಸಂಖ್ಯೆ ಇದೆ, ಇನ್ನೊಂದಕ್ಕೆ ಇಲ್ಲ.

‘ಈ ಪಟ್ಟಿ ಗೊಂದಲದಿಂದ ಕೂಡಿದೆ’ ಎಂದು  ಬಿಬಿಎಂಪಿ ಜೊತೆ ಸಹಯೋಗ ಹೊಂದಿರುವ ಸಂಸ್ಥೆಯ ಸ್ವಯಂಸೇವಕರೊಬ್ಬರು ತಿಳಿಸಿದರು.
‘ಇಂತಹ ವಂಚನೆಗಳಿಂದಾಗಿಯೇ ಬೆಂಗಳೂರು ಸ್ವಚ್ಛ ನಗರಗಳ ಪಟ್ಟಿಯಲ್ಲಿ  210ನೇ ಸ್ಥಾನಕ್ಕೆ ಕುಸಿಯಬೇಕಾಗಿ ಬಂದಿದೆ. ಇದಕ್ಕೆ ಕಾರಣರಾದವರಿಗೆ ಶಿಕ್ಷೆ ಆಗಲೇಬೇಕು’ ಎಂದು ಅವರು ಒತ್ತಾಯಿಸಿದರು.

ಲೋಪ ಒಪ್ಪಿಕೊಂಡ ಬಿಬಿಎಂಪಿ: ಈ ಗೊಂದಲಗಳ ಬಗ್ಗೆ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌ (ಘನತ್ಯಾಜ್ಯ) ಅವರ ಗಮನ ಸೆಳೆದಾಗ, ‘ಈ ಲೋಪಗಳು ಗಂಭೀರವಾದುವು. ಈ ಪಟ್ಟಿಯನ್ನು ಪರಿಶೀಲಿಸುತ್ತೇನೆ. ತಪ್ಪೆಸಗಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ’ ಎಂದರು.

‘ಪೌರಕಾರ್ಮಿಕರ ಪಟ್ಟಿಯನ್ನು ಪರಿಶೀಲಿಸಲು ಸಾರ್ವಜನಿಕರಿಗೂ ಅವಕಾಶ ಕಲ್ಪಿಸಬೇಕು ಎಂಬ ಉದ್ದೇಶದಿಂದಲೇ ಇದನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದೇವೆ. ಜನರು ಇಂತಹ ಲೋಪಗಳನ್ನು ಗಮನಿಸಿರುವುದು ಉತ್ತಮ ಅಂಶ. ಇದರಿಂದ ಬಿಬಿಎಂಪಿ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಹೆಚ್ಚಲಿದೆ’ ಎಂದರು.

‘ಪೌರಕಾರ್ಮಿಕರು ಆಧಾರ್‌ ಸಂಖ್ಯೆ ನೀಡುವುದನ್ನು ಕಡ್ಡಾಯ ಮಾಡಲಿದ್ದೇವೆ. ಇದರಿಂದ ಪೌರಕಾರ್ಮಿಕರನ್ನು ಪತ್ತೆ ಹಚ್ಚುವುದು ಸುಲಭವಾಗಲಿದೆ’ ಎಂದರು.

**

‘ಬಯೊಮೆಟ್ರಿಕ್ ಜಾರಿಯಾಗಲಿ’

ಪೌರಕಾರ್ಮಿಕರ ಶೋಷಣೆ ತಪ್ಪಿಸಲು   ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಗೆ ತರಬೇಕು ಎಂದು ಪೌರಕಾರ್ಮಿಕರ ಮುಖಂಡ ನಾರಾಯಣ್‌ ಒತ್ತಾಯಿಸಿದರು.

‘ಗುತ್ತಿಗೆದಾರರು ಹಾಗೂ ಬಿಬಿಎಂಪಿ ಅಧಿಕಾರಿಗಳ ನಡುವೆ ಅಕ್ರಮ ನಂಟು ಇದೆ. ನಾನು ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷನಾಗಿದ್ದಾಗ ಬಿಬಿಎಂಪಿ 19,400 ಪೌರಕಾರ್ಮಿಕರನ್ನು ಸ್ವಚ್ಛತಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿತ್ತು. ಆದರೆ ನಾವು ಖುದ್ದಾಗಿ ಪರಿಶೀಲಿಸಿದಾಗ 12,000 ಕಾರ್ಮಿಕರು ಮಾತ್ರ ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂತು. ಈಗ 32,000 ಪೌರಕಾರ್ಮಿಕರ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಹೇಳುತ್ತಿದೆ. ಈಗ ಈ ಅಂತರ ಇನ್ನಷ್ಟು ಹೆಚ್ಚಾಗಿರಬಹುದು’ ಎಂದು ಅವರು ತಿಳಿಸಿದರು.

ಪೌರಕಾರ್ಮಿಕರ ಭವಿಷ್ಯನಿಧಿ  ಹಾಗೂ ಇಎಸ್‌ಐಗೆ ಸಂಬಂಧಿಸಿದ ₹ 250 ಕೋಟಿ ಮೊತ್ತವನ್ನು ಗುತ್ತಿಗೆದಾರರು ವಂಚಿಸಿದ್ದ ಬಗ್ಗೆ ಅವರು  ಸರ್ಕಾರಕ್ಕೆ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT