ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲ್ಕತ್ತ ನೈಟ್‌ರೈಡರ್ಸ್‌ಗೆ ಸೋಲು: ಕಿಂಗ್ಸ್‌ ಪ್ಲೇಆಫ್‌ ಅವಕಾಶ ಜೀವಂತ

Last Updated 9 ಮೇ 2017, 20:08 IST
ಅಕ್ಷರ ಗಾತ್ರ

ಮೊಹಾಲಿ: ಲೆಗ್‌ಸ್ಪಿನ್ನರ್ ರಾಹುಲ್ ತೆವಾಟಿಯಾ (ಔಟಾಗದೆ 15 ಮತ್ತು 18ಕ್ಕೆ2)ಅವರ ಆಲ್‌ರೌಂಡ್ ಆಟ ಮತ್ತು ಮೋಹಿತ್ ಶರ್ಮಾ (24ಕ್ಕೆ2)  ಅವರ ಬೌಲಿಂಗ್‌ನಿಂದ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡವು 14 ರನ್‌ಗಳಿಂದ ಕೋಲ್ಕತ್ತ ನೈಟ್ ರೈಡರ್ಸ್‌ ವಿರುದ್ಧ ಜಯಿಸಿತು. ಅದರೊಂದಿಗೆ ತಂಡದ ಪ್ಲೇ ಆಫ್ ಪ್ರವೇಶದ  ಅವಕಾಶ ಇನ್ನೂ ಜೀವಂತವಾಗಿದೆ.

ಪಂಜಾಬ್ ಕ್ರಿಕೆಟ್ ಸಂಸ್ಥೆ (ಪಿಸಿಎ) ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್‌ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ ಗಳಿಗೆ 167 ರನ್ ಗಳಿಸಿತ್ತು. ಕೆಕೆಆರ್ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 153 ರನ್‌ ಗಳಿಸಿ ಸೋತಿತು. ಆರಂಭಿಕ ಬ್ಯಾಟ್ಸ್‌ ಮನ್ ಕ್ರಿಸ್ ಲಿನ್ ಅವರ (84; 52ಎ, 8ಬೌಂ, 3ಸಿ) ಅಮೋಘ ಆಟವು ವ್ಯರ್ಥವಾಯಿತು.

ಕಿಂಗ್ಸ್ ಒಟ್ಟು 12 ಪಂದ್ಯಗಳಲ್ಲಿ ಆರರಲ್ಲಿ ಗೆದ್ದು ಆರರಲ್ಲಿ ಸೋತಿದೆ.12 ಪಾಯಿಂಟ್‌ಗಳೊಂದಿಗೆ ಐದನೇ ಸ್ಥಾನದಲ್ಲಿದೆ.  ನಾಲ್ಕನೇ ಸ್ಥಾನದಲ್ಲಿರುವ ಸನ್‌ರೈಸರ್ಸ್‌ ತಂಡವು ತನ್ನ ಪಾಲಿನ ಇನ್ನೊಂದು ಪಂದ್ಯದಲ್ಲಿ  ಮೇ 13ರಂದು ಗುಜರಾತ್ ಲಯನ್ಸ್ ಎದುರು ಸೋತರೆ ಮತ್ತು ಕಿಂಗ್ಸ್ ತನ್ನ ಪಾಲಿನ ಎರಡೂ ಪಂದ್ಯಗಳಲ್ಲಿ ಗೆದ್ದರೆ. ಆಗ ನಾಕೌಟ್ ಹಂತದಲ್ಲಿ ಆಡುವ ಅವಕಾಶ ಲಭ್ಯವಾಗಲಿದೆ. ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್‌ (ಮೇ 11) ಮತ್ತು ರೈಸಿಂಗ್ ಪುಣೆ ಸೂಪರ್‌ಜೈಂಟ್ (ಮೇ 14) ವಿರುದ್ಧ ಪಂದ್ಯಗಳನ್ನು ಆಡಲಿದೆ.

ರಾಹುಲ್–ಮೋಹಿತ್ ಬೌಲಿಂಗ್ ಮೋಡಿ: ಹರಿಯಾಣದ  ರಾಹುಲ್ ಅವರು ಕೆಕೆಆರ್ ತಂಡದ ಮಧ್ಯಮ ಕ್ರಮಾಂಕಕ್ಕೆ ಪೆಟ್ಟು ನೀಡಿದ್ದು ಕಿಂಗ್ಸ್‌ ತಂಡದ ಗೆಲುವಿಗೆ ಕಾರಣವಾಯಿತು. ಅವರಿಗೆ ಮೋಹಿತ್ ಶರ್ಮಾ ಉತ್ತಮ ಜೊತೆ ನೀಡಿದರು.

ಅವರು ಕೆಕೆಆರ್ ನಾಯಕ ಗೌತಮ್ ಗಂಭೀರ್ (8 ರನ್) ಮತ್ತು ರಾಬಿನ್ ಉತ್ತಪ್ಪ (00)ಅವರ ವಿಕೆಟ್‌ಗಳನ್ನು  ಒಂದೇ ಓವರ್‌ನಲ್ಲಿ ಕಬಳಿಸಿದರು. ಇದ ರಿಂದ ಚೇತರಿಸಿಕೊಳ್ಳಲು ತಂಡಕ್ಕೆ ಸಾಧ್ಯವಾಗಲಿಲ್ಲ. ರಾಹುಲ್ ಅವರು ಬ್ಯಾಟಿಂಗ್‌ನಲ್ಲಿಯೂ (ಔಟಾಗದೆ 15; 8ಎ, 3ಬೌಂ) ಉತ್ತಮ ಕಾಣಿಕೆ ನೀಡಿದ್ದರು.

ತಂಡದ ಆರಂಭಿಕ ಜೋಡಿ ಸುನಿಲ್ ನಾರಾಯಣ್ (18; 10ಎ, 4ಬೌಂ) ಮತ್ತು ಕ್ರಿಸ್ ಲಿನ್ ಅವರ ಅಬ್ಬರದ ಆಟವು ರಂಗೇರಿತು. ಕೇವಲ ಮೂರು ಓವರ್‌ಗಳಲ್ಲಿ 30 ರನ್‌ಗಳು ಸೇರಿದವು.  ಆದರೆ, ನಾಲ್ಕನೇ ಓವರ್‌ನಲ್ಲಿ ಮೋಹಿತ್ ಶರ್ಮಾ ಅವರ ಎಸೆತವು ಸುನಿಲ್ ಕಣ್ತ ಪ್ಪಿಸಿ ಸ್ಟಂಪ್ ಎಗರಿಸಿತು. ಆದರೂ ಲಿನ್ ತಮ್ಮ ಬೀಸಾಟ ಮುಂದುವರಿಸಿದ್ದರು.

ಟೂರ್ನಿಯ ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿರುವ ಗಂಭೀರ್ ಕೇವಲ ಎಂಟು ರನ್ ಗಳಿಸಿ ಔಟಾದರು. ಉತ್ತಪ್ಪ ಸೊನ್ನೆ ಸುತ್ತಿದರು. ತಂಡದಲ್ಲಿರುವ ಕರ್ನಾಟಕದ ಮತ್ತೊಬ್ಬ ಆಟಗಾರ ಮನೀಷ್ ಪಾಂಡೆ ಅವರು ಲಿನ್ ಜೊತೆಗೆ ನಾಲ್ಕನೇ ವಿಕೆಟ್‌ಗೆ 52 ರನ್ ಸೇರಿಸಿದರು. ಆದರೆ, ಮ್ಯಾಟ್‌ ಹೆನ್ರಿ ಬೌಲಿಂಗ್‌ನಲ್ಲಿ ಪಾಂಡೆ ವಿಕೆಟ್ ಚೆಲ್ಲಿದರು.

ನಂತರ ಕಾಲಿನ್ ಡಿ ಗ್ರ್ಯಾಂಡ್‌ ಹೋಮ್ ಅವರು ಆಟಕ್ಕೆ ಕುದುರಿ ಕೊಳ್ಳುವ ಯತ್ನ ಮಾಡಿದರು. 18ನೇ ಓವರ್‌ನಲ್ಲಿ ಲಿನ್ ಅವರು ರನ್‌ಔಟ್ ಆದಾಗ ತಂಡದ ಗೆಲುವಿನ ಆಸೆ ಕಮರಿತು. ಸಿಡಿಲಬ್ಬರದ ಬ್ಯಾಟ್ಸ್‌ಮನ್ ಯೂಸುಫ್ ಪಠಾಣ್ ಕೇವಲ 2 ರನ್ ಗಳಿಸಿ ಮೋಹಿತ್ ಶರ್ಮಾಗೆ ವಿಕೆಟ್ ಒಪ್ಪಿಸಿದರು. ಕ್ರಿಸ್ ವೋಕ್ಸ್‌ (ಔಟಾಗದೆ 8) ಮತ್ತು ಕಾಲಿನ್ ಅವರು ನಿಧಾನವಾಗಿ ಆಡಿದ್ದರಿಂದ ಗೆಲುವಿನ ಗಡಿ ಮುಟ್ಟಲು ಸಾಧ್ಯವಾಗಲಿಲ್ಲ.

ಗ್ಲೇನ್–ಸಹಾ ಮಿಂಚು: ಮೊದಲು ಬ್ಯಾಟಿಂಗ್ ಮಾಡಿದ್ದ ಕಿಂಗ್ಸ್‌ ತಂಡವು ಆರಂಭದಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಾಯಕ  ಗ್ಲೆನ್ ಮ್ಯಾಕ್ಸ್‌ವೆಲ್  (44; 25ಎ, 1ಬೌಂ 4ಸಿ) ಮತ್ತು ವೃದ್ದಿ ಮಾನ್ ಸಹಾ (38; 33ಎ, 2ಬೌಂ 1ಸಿ) ಅವರ ಬ್ಯಾಟಿಂಗ್ ಬಲದಿಂದ   ತಂಡವು ಹೋರಾಟದ ಮೊತ್ತ ಪೇರಿಸಿತ್ತು.

ಸಂಕ್ಷಿಪ್ತ ಸ್ಕೋರ್

ಕಿಂಗ್ಸ್ ಇಲೆವನ್ ಪಂಜಾಬ್: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 167 (ಮಾರ್ಟಿನ್ ಗಪ್ಟಿಲ್ 12, ಮನನ್ ವೊಹ್ರಾ 25, ಶಾನ್ ಮಾರ್ಷ್ 11, ವೃದ್ಧಿಮಾನ್ ಸಹಾ 38, ಗ್ಲೆನ್ ಮ್ಯಾಕ್ಸ್‌ವೆಲ್ 44, ರಾಹುಲ್ ತೆವಾಟಿಯಾ ಔಟಾಗದೆ 15, ಉಮೇಶ್ ಯಾದವ್ 26ಕ್ಕೆ1, ಸುನಿಲ್ ನಾರಾಯಣ್ 27ಕ್ಕೆ1, ಕ್ರಿಸ್ ವೋಕ್ಸ್ 20ಕ್ಕೆ2, ಕುಲದೀಪ್ ಯಾದವ್ 34ಕ್ಕೆ2)

ಕೋಲ್ಕತ್ತ ನೈಟ್‌ರೈಡರ್ಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 153 (ಸುನಿಲ್ ನಾರಾಯಣ್ 18, ಕ್ರಿಸ್ ಲಿನ್ 84, ಮನೀಷ್ ಪಾಂಡೆ 18, ಕಾಲಿ ಡಿ ಗ್ರ್ಯಾಂಡ್‌ಹೋಮ್ 11, ಮ್ಯಾಟ್ ಹೆನ್ರಿ 31ಕ್ಕೆ1, ಮೋಹಿತ್ ಶರ್ಮಾ 24ಕ್ಕೆ2, ರಾಹುಲ್ ತೆವಾಟಿಯಾ 18ಕ್ಕೆ1)

ಫಲಿತಾಂಶ: ಕಿಂಗ್ಸ್‌ ಇಲೆವನ್ ಪಂಜಾಬ್ ತಂಡಕ್ಕೆ 14 ರನ್‌ಗಳ ಜಯ.

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT