ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೂಕಡಿಕೆ ತಡೆಯಲೂ ಇದೆ ತಂತ್ರಜ್ಞಾನ...

ಅಕ್ಷರ ಗಾತ್ರ

ಕಾರು ಚಲಿಸುವಾಗ, ಒಮ್ಮೊಮ್ಮೆ ತೂಕಡಿಕೆ ಬರುವುದು ಸಹಜ. ರಾತ್ರಿ ಪಯಣದಲ್ಲೋ, ಸುಸ್ತಾಗಿದ್ದಾಗಲೋ ಚಾಲನೆ ಮಾಡುವಾಗ ಗೊತ್ತೇ ಆಗದಂತೆ ಕಣ್ಣಿಗೆ ಸಣ್ಣ ಜೋಂಪು ಹತ್ತಿಬಿಡಬಹುದು. ಆ ಸಣ್ಣ ಕಾರಣ ಹಲವು ಜನರ ಜೀವಕ್ಕೇ ಎರವಾಗಿಬಿಡಬಹುದು.

ಹೀಗಾಗುವುದನ್ನು ತಡೆಯುವ ನಿಟ್ಟಿನಲ್ಲಿ ಕೆಲವು ಕಾರು ತಂತ್ರಜ್ಞರು, ಈ ‘ಮೈಕ್ರೋ ಸ್ಲೀಪ್’ (ತೂಕಡಿಕೆ)  ತಡೆಯುವ, ಚಾಲಕನನ್ನು ಜೋಂಪಿನಿಂದ ಎಚ್ಚರಿಸಿ, ಅಪಘಾತದ ಸಾಧ್ಯತೆಯನ್ನು ನಿವಾರಿಸುವ ಪ್ರಯತ್ನಗಳನ್ನು ಮಾಡಿದ್ದಾರೆ. ಅದಕ್ಕೆ ನೆರವಾಗುವಂಥ ತಂತ್ರಜ್ಞಾನವನ್ನು ಕೆಲವು ಕಾರುಗಳಲ್ಲಿ ಅಳವಡಿಸಿಯೂ ಇದ್ದಾರೆ. ಬೆಳಿಗ್ಗೆ ನಿದ್ದೆಯಿಂದ ಎಚ್ಚರಗೊಳ್ಳಲು  ಅಲಾರಂ ಇಟ್ಟುಕೊಂಡಂತೆಯೇ, ಕಾರು ಚಾಲನೆ ಮಾಡುವಾಗ ಬರುವ ತೂಕಡಿಕೆಯಿಂದ ಎಚ್ಚರಿಸುವ ತಂತ್ರಜ್ಞಾನಗಳು ಈಗ ಲಭ್ಯ.

ತೂಕಡಿಕೆ ಪತ್ತೆ ಹೇಗೆ ಸಾಧ್ಯ?
ಎರಡು ರೀತಿಯಲ್ಲಿ ತೂಕಡಿಕೆ ಪತ್ತೆ ತಂತ್ರಜ್ಞಾನ ಸಾಧ್ಯವಾಗಿದೆ. ಒಂದು, ಕಾರುಗಳಲ್ಲಿ ಇನ್‌ಬಿಲ್ಟ್ ಆಗಿರುವ ತಂತ್ರಜ್ಞಾನ. ಮತ್ತೊಂದು, ಧರಿಸಬಲ್ಲ ಸಾಧನ.

ಸ್ಟೀರಿಂಗ್ ಶೈಲಿ, ಕಾರಿನ ಕಾರ್ಯವೈಖರಿ, ಚಾಲಕರ ಕಣ್ಣು/ ಮುಖದ ಚಲನವಲನ, ಶಾರೀರಿಕ ಅಂಶಗಳು (ಮೆದುಳಿನ ಚಟುವಟಿಕೆ, ಹೃದಯಬಡಿತ,  ಸ್ನಾಯುಚಲನೆ, ಕಣ್ಣು ರೆಪ್ಪೆ ಮಿಟುಕಿಸುವ ಸಂಖ್ಯೆ) ಇವುಗಳ ಆಧಾರದ ಮೇಲೆ ತಂತ್ರಜ್ಞಾನ ರೂಪಿತಗೊಂಡಿದೆ.

ಈಗಾಗಲೇ ಕೆಲವು ಐಷಾರಾಮಿ ಕಾರು ತಯಾರಿಕಾ ಕಂಪೆನಿಗಳು ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ. ವೋಲ್ವೊ ಕಂಪೆನಿ 2007ರಲ್ಲಿ ‘ಡ್ರೈವರ್ ಅಲರ್ಟ್‌ ಕಂಟ್ರೋಲ್’ ಎಂಬ ತಂತ್ರಜ್ಞಾನ ಬಿಡುಗಡೆಗೊಳಿಸುವ ಮೂಲಕ ‘ಮೊದಲ ತೂಕಡಿಕೆ ಪತ್ತೆ ವ್ಯವಸ್ಥೆ ಅಳವಡಿಸಿದ ಸಂಸ್ಥೆ’ ಎಂದು ಕರೆಸಿಕೊಂಡಿತು. ನಂತರ ತನ್ನ ಹಲವು ಮಾದರಿಯ ಕಾರುಗಳಲ್ಲೂ ಈ ಸೌಲಭ್ಯ ಕಲ್ಪಿಸಿತು.

ಕಾರಿನ ಚಲನವಲನದ ಆಧಾರದ ಮೇಲೆ, ಚಾಲಕನ ನಿಯಂತ್ರಣ ನಿರ್ಧರಿಸಿ, ಡ್ಯಾಷ್‌ಬೋರ್ಡ್‌ ಮೇಲೆ ಸಂದೇಶ ನೀಡುವ ಹಾಗೂ ಧ್ವನಿ ಮೂಲಕ ಎಚ್ಚರಿಕೆ ನೀಡುವ ತಂತ್ರಜ್ಞಾನ ಅದಾಗಿತ್ತು.



ಫೋರ್ಡ್‌ ಕಂಪೆನಿಯೂ ತನ್ನ ಕಾರುಗಳಲ್ಲಿ ‘ಡ್ರೈವರ್ ಅಲರ್ಟ್‌ ಸಿಸ್ಟಮ್’ ಅಳವಡಿಸಿದೆ. ಕ್ಯಾಮೆರಾ ಮೂಲಕ ಚಾಲಕನ ಚಲನಾ ವೈಖರಿ ಗಮನಿಸಿ  ಚಾಲಕನ ಕುರ್ಚಿ ಕಂಪನ ಆಗುವಂತೆ ಮಾಡುತ್ತದೆ. ಇದನ್ನು ಫೋರ್ಡ್‌ ತನ್ನ 2016ರ ಫೋರ್ಡ್‌ ಟಿಟಾನಿಯಂ ಕಾರಿನಲ್ಲಿ ಅಳವಡಿಸಿತು. ಕೆಲ ಆಡಿ ಕಾರುಗಳಲ್ಲೂ ಈ ತಂತ್ರಜ್ಞಾನ ‘ರೆಸ್ಟ್ ರೆಕಮೆಂಡೇಷನ್ ಸಿಸ್ಟಮ್’ (ವಿಶ್ರಾಂತ ಸೂಚಕ ವ್ಯವಸ್ಥೆ) ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಬಾಷ್ ಕಂಪೆನಿ ಕೂಡ ಕ್ಯಾಮೆರಾ ಅವಲಂಬಿತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಇದು, ಸ್ಟೀರಿಂಗ್‌ ಸೆನ್ಸರ್ ಹಾಗೂ ಮುಂಬದಿ ಅಳವಡಿಸಿದ ಕ್ಯಾಮೆರಾ ಮೂಲಕ ಚಾಲಕನ ಕಣ್ಣು ಹಾಗೂ ತಲೆಯ ಚಲನೆಯನ್ನು ಗಮನಿಸಿ ತೂಕಡಿಕೆ ಪತ್ತೆ ಹಚ್ಚಲಿದೆ. 2009ರಲ್ಲಿ ಮರ್ಸಿಡಿಸ್, ‘ಅಟೆನ್ಷನ್ ಅಸಿಸ್ಟ್’ ಎಂಬ ತಂತ್ರಜ್ಞಾನವನ್ನು ಪರಿಚಯಿಸಿದೆ.

ಸ್ಟೀರಿಂಗ್‌ನಲ್ಲಿನ ಸೆನ್ಸರ್ ಮೂಲಕ ಚಾಲಕರನ್ನು ಎಚ್ಚರಗೊಳಿಸಿ ತಕ್ಷಣವೇ ತಮ್ಮ ಚಾಲನೆಯನ್ನು ತಿದ್ದುಕೊಳ್ಳಲು ನೆರವಾಗುತ್ತದೆ. ಕಾರಿನ ನೇವಿಗೇಷನ್ ಸಂಪರ್ಕ ವ್ಯವಸ್ಥೆಯನ್ನು ಬಳಸಿಕೊಂಡು, ತೂಕಡಿಕೆ ಬಂದ ಸಂದರ್ಭ, ಕ್ರಮಿಸುತ್ತಿರುವ ಹಾದಿಯಲ್ಲಿ ಸಮೀಪದಲ್ಲಿ ಎಲ್ಲಿ ಕಾಫಿ ಸಿಗುತ್ತದೆ ಎಂದೂ ಮಾಹಿತಿ ನೀಡುತ್ತದೆ.

ಬಿಎಂಡಬ್ಲ್ಯು ತನ್ನ  6 ಸಿರೀಸ್ ಹಾಗೂ 7 ಸಿರೀಸ್‌ ಕಾರುಗಳಲ್ಲಿ ಈ ತಂತ್ರಜ್ಞಾನವನ್ನು ಕಡ್ಡಾಯವೆಂಬಂತೆ ಅಳವಡಿಸಿದೆ. ಎಚ್ಚರಿಸುವ ಧ್ವನಿಯೊಂದಿಗೆ ಸೆಂಟರ್ ಕನ್ಸೋಲ್‌ನಲ್ಲಿ ಕಾಫಿ ಚಿತ್ರ ಕಾಣಿಸಿಕೊಳ್ಳುವುದು ಇದರ ವಿಶೇಷ.

ಸಿಟ್ರೋನ್ ಕಾರುಗಳಲ್ಲಿ ಎರಡು ರೀತಿಯಲ್ಲಿ ಪರೋಕ್ಷವಾಗಿ ತೂಕಡಿಕೆ ನಿಯಂತ್ರಣ ಸಾಧ್ಯವಾಗುತ್ತದೆ. ಒಂದು, ಮುಂದಿನ ಚಕ್ರಗಳಲ್ಲಿ ಕ್ಯಾಮೆರಾ ಅಳವಡಿಸಿ, ‘ಲೇನ್ ಮಾರ್ಕಿಂಗ್’ ಗಮನಿಸುವ ಮೂಲಕ. ಮತ್ತೊಂದು, ಮುಂದಿನ ವಿಂಡ್‌ಸ್ಕ್ರೀನ್‌ ಮೇಲೆ ಕ್ಯಾಮೆರಾ ಅಳವಡಿಕೆ ಮೂಲಕ. ಹಾದಿ ತಪ್ಪಿದರೆ ಚಾಲಕರ ಸೀಟ್‌ನಲ್ಲಿ ಕಂಪನ ಮೂಡುವ ಮೂಲಕ ಎಚ್ಚರಿಸುತ್ತದೆ.

ಜಾಗ್ವಾರ್, ಲ್ಯಾಂಡ್‌ರೋವರ್‌ಗಳಲ್ಲಿ ಚಾಲಕನ ಆಯಾಸ ಪತ್ತೆ  ಹಚ್ಚಿ, ‘ಟೇಕ್ ಎ ಬ್ರೇಕ್’ ಎಂದು ಧ್ವನಿ ಮೂಲಕ ಎಚ್ಚರಿಕೆ ನೀಡುತ್ತದೆ. ಮೊದಲನೇ ಎಚ್ಚರಿಕೆ  ಸಂದೇಶದ ನಂತರವೂ ಏನೂ ಬದಲಾವಣೆ ಆಗದೆ ಮುಂದುವರೆದರೆ 15 ನಿಮಿಷದ ನಂತರ ಸ್ಟೀರಿಂಗ್ ವೀಲ್ ಮೆನು ಕಂಟ್ರೋಲ್‌ ಒತ್ತುವವರೆಗೂ ಮುಂದುವರೆಯುತ್ತಲೇ ಇರುತ್ತದೆ.

ನಿಸ್ಸಾನ್‌ನಲ್ಲಿ ‘ಡ್ರೈವರ್ ಅಟೆನ್ಷನ್ ಅಲರ್ಟ್‌’, ಸುಬಾರುನಲ್ಲಿ ‘ಐಸೈಟ್ ಡ್ರೈವರ್ ಅಸಿಸ್ಟ್’ ಫೋಕ್ಸ್‌ವಾಗನ್‌ನಲ್ಲಿ ‘ಫ್ಯಾಟಿಗ್ ಡಿಟೆಕ್ಷನ್ ಸಿಸ್ಟಮ್’ ಹೀಗೆ ಭಿನ್ನ ಭಿನ್ನ ಹೆಸರುಗಳಲ್ಲಿ ಚಾಲಕರನ್ನು ಎಚ್ಚರಗೊಳಿಸುವ ಸಾಧನಗಳಿವೆ.

ಇವಿಷ್ಟು ಇನ್‌ ಬಿಲ್ಟ್ ವಿಷಯವಾದರೆ, ಧರಿಸಬಹುದಾದ ಕೆಲವು ಸಾಧನಗಳ ಮೂಲಕವೂ ತೂಕಡಿಕೆಯನ್ನು ತಡೆಯಬಹುದಾಗಿದೆ. ‘ಆ್ಯಂಟಿ ಸ್ಲೀಪ್’ ಎನ್ನುವ ಕಿವಿಯ ಸಾಧನ, ತಲೆಯು ಆಚೀಚೆ ಬಾಗುವ ಕೋನದ ಆಧಾರದ ಮೇಲೆ ಅಲಾರಂ ಹೊಡೆಯುತ್ತದೆ.

ಆ್ಯಂಟಿ ಸ್ಲೀಪ್ ಪೈಲಟ್‌, ವಿಗೊದ ಸ್ಮಾರ್ಟ್‌ ಬ್ಲೂಟೂಥ್ ಹೆಡ್‌ಸೆಟ್ ಕೂಡ ಇದೇ ಉದ್ದೇಶದಿಂದ ರೂಪುಗೊಂಡಿವೆ. ಕಣ್ಣು ಮತ್ತು ತಲೆಯ ಚಲನವಲನ ಅವಲಂಬಿಸಿ ಬೆಳಕು, ಶಬ್ದ ಹಾಗೂ ಕಂಪನದ ಮೂಲಕ ಚಾಲಕರನ್ನು ಎಚ್ಚರಿಸುತ್ತದೆ. ನ್ಯಾಪ್ ಝಾಪರ್, ನೋ ನ್ಯಾಪ್, ಡೋಜ್ ಅಲರ್ಟ್‌ ಇವೂ ಜೋಂಪು ತಡೆದು, ಕಾರನ್ನು ತುರ್ತು ನಿಲ್ಲಿಸಲು ಚಾಲಕರಿಗೆ ನೆರವಾಗುವ ತಂತ್ರಜ್ಞಾನಗಳು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT