ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೂರ್ತಿಯ ಚಿಲುಮೆ…

Last Updated 10 ಮೇ 2017, 19:30 IST
ಅಕ್ಷರ ಗಾತ್ರ

‘ಸಮಾಜ ಸೇವೆ ಮಾಡುವುದಕ್ಕೆ ನೂರೆಂಟು ದಾರಿಗಳಿವೆ, ನಾನು ಮಾತ್ರ ಬಡ ಮಕ್ಕಳಿಗೆ ವೈದ್ಯಕೀಯ ನೆರವು ನೀಡುವ ಜೊತೆಗೆ ಬೊಂಬೆಗಳನ್ನು ಹಂಚುವ ಮೂಲಕ ಅವರ ಮೊಗದಲ್ಲಿ ನಗುವನ್ನು ನೋಡಿ ಸಂಭ್ರಮಿಸುತ್ತೇನೆ’ ಎಂದು ಯುವತಿ ಹಿರಿನ್ ಹೇಳುತ್ತಾರೆ.

ಅಹಮದಾಬಾದ್ ನಿವಾಸಿ ಹಿರಿನ್ ಅವರ ವಿಭಿನ್ನ ಸಾಧನೆಯ ಕಥೆ ಇದು. ವೆಬ್ ಡಿಸೈನರ್ ಆಗಿರುವ ಅವರು, ವಾರಾಂತ್ಯದಲ್ಲಿ ಅಹಮದಾಬಾದ್ ಪಟ್ಟಣದಲ್ಲಿರುವ ಕೊಳೆಗೇರಿ, ಅನಾಥ ಮತ್ತು ಕಟ್ಟಡ ಕಾರ್ಮಿಕ ಮಕ್ಕಳಿಗೆ ತಮ್ಮ ಕೈಲಾದ ಸೇವೆಯನ್ನು ಮಾಡುತ್ತಿದ್ದಾರೆ.

ಲಾಭರಹಿತ ಸ್ವಯಂ ಸೇವಾ ಸಂಸ್ಥೆಯನ್ನು ಸ್ಥಾಪಿಸಿರುವ ಹಿರಿನ್ ಅದರ ಮೂಲಕ ಸಹಾಯ ಹಸ್ತ ಚಾಚಿದ್ದಾರೆ. ವಾರದಲ್ಲಿ ಐದು ದಿನ ಕೆಲಸ ಮಾಡುವ ಅವರು, ಪ್ರತಿ ಶನಿವಾರದಂದು ಸಿರಿವಂತರ ಮನೆಗಳಲ್ಲಿ ವ್ಯರ್ಥವಾಗಿರುವ ಗೊಂಬೆಗಳು, ಬಟ್ಟೆಗಳು, ಪಠ್ಯಪುಸ್ತಕಗಳು, ಆಟಿಕೆಗಳನ್ನು ಸಂಗ್ರಹಿಸಿ ಅವುಗಳನ್ನು ಭಾನುವಾರದಂದು ಬಡ ಮಕ್ಕಳಿಗೆ ಹಂಚುವ ಕೆಲಸ ಮಾಡುತ್ತಿದ್ದಾರೆ. ಎರಡು ತಿಂಗಳಿಗೆ ಮೂರು ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಮಕ್ಕಳಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಹಿರಿನ್ ಇಂತಹ ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಮೂಲಸೌಕರ್ಯಗಳು ಇಲ್ಲದಿರುವ ಮಕ್ಕಳಿಗೆ ಅವಶ್ಯಕ ವಸ್ತುಗಳು ಮತ್ತು ಆಟಿಕೆಗಳನ್ನು ನೀಡುವುದರಿಂದ ಅವರ ಮುಖದಲ್ಲಿ ಕಾಣುವ ನಗುವೇ ನನಗೆ ಚೈತನ್ಯ ನೀಡುತ್ತದೆ ಎಂದು ಅವರು ಹೇಳುತ್ತಾರೆ.

ಕೆಲ ಮಕ್ಕಳಿಗೆ ಅಗತ್ಯ ಸೌಕರ್ಯಗಳಿಂದ ವಂಚಿತರಾಗಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಬಾಲಕಾರ್ಮಿಕರಾಗಿ ದುಡಿಯುತ್ತಿರುವುದನ್ನು ನಾನು ಕಂಡಿದ್ದೇನೆ. ಇಂತಹ ಮಕ್ಕಳಿಗೆ ಉಜ್ವಲ ಭವಿಷ್ಯ ರೂಪಿಸುವುದೇ ನನ್ನ ಜೀವನದ ಗುರಿ ಎಂದು ಅವರು ಹೇಳುತ್ತಾರೆ.
www.facebook.com/hirin.dhamecha

*


ಸಿದ್ಧಾರ್ಥ ಟಾಟಾ
ಐಐಟಿ ಪದವೀಧರ ಸಿದ್ಧಾರ್ಥ ಟಾಟಾ ಅವರ ಸಾವಯವ ಕೃಷಿ ಕಾಯಕದ ಸಾಧನೆಯ ಕಥೆ ಇದು. ಸಿದ್ಧಾರ್ಥ ಮುಂಬೈ ನಿವಾಸಿ. ಅವರ ತಂದೆ ಬ್ಯಾಂಕ್ ಉದ್ಯೋಗಿಯಾದ್ದರಿಂದ ದೆಹಲಿ, ಕೊಚ್ಚಿ, ಚೆನ್ನೈನಂತಹ ಮೆಟ್ರೊ ನಗರಗಳಿಗೆ ಪದೇ ಪದೇ ವರ್ಗವಾಗುತ್ತಿದ್ದರು. ಹಾಗಾಗಿ ಸಿದ್ಧಾರ್ಥ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಸಂಸ್ಕೃತಿ ಮತ್ತು ಜೀವನ ಪದ್ಧತಿ ಬಗ್ಗೆ ಅರಿತುಕೊಂಡರು. ಇದೀಗ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿರುವ ಅವರು, ರೈತರಿಗೆ ಸಾವಯವ ಕೃಷಿಯ ಮಾಹಿತಿ ಮತ್ತು ಆರ್ಥಿಕ ನೆರವು ನೀಡುತ್ತಿದ್ದಾರೆ.

ಟಾಟಾ ಕುಟುಂಬದ ಮೂಲವೃತ್ತಿ ವ್ಯಾಪಾರ. ಹಾಗಾಗಿ ಮಗನೂ ದೊಡ್ಡ ವ್ಯವಹಾರಸ್ಥ ಆಗಬೇಕು ಎಂದು ಬಯಸಿದ್ದರು. ಪಿಯುಸಿ ಬಳಿಕ ಎಂಜಿನಿಯರಿಂಗ್ ಪದವಿ ಸೇರಿದರು. ನಂತರ ಮದ್ರಾಸ್ ಐಐಟಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಬಿಲ್ ಗೇಟ್ಸ್ ಫೌಂಡೇಶನ್‌ನಲ್ಲಿ ಕೆಲಸಕ್ಕೆ ಸೇರಿದರು. ಈ ವೇಳೆ ಗ್ರಾಮಗಳನ್ನು ಸುತ್ತುವ ಅವಕಾಶ ಸಿದ್ಧಾರ್ಥ ಅವರಿಗೆ ಲಭಿಸಿತು. ರೈತರೊಂದಿಗೆ ಸಂವಹನ ನಡೆಸಿ ಅವರ ಕೃಷಿ ಚಟುವಟಿಕೆಗಳ ಬಗ್ಗೆ ಅರಿತರು.

ಕೃಷಿ ಭೂಮಿ, ಉಳುಮೆ, ಬಿತ್ತನೆ, ಗೊಬ್ಬರ, ಬೆಳೆ, ಕಟಾವು ಕುರಿತಂತೆ ಮಾಹಿತಿ ಸಂಗ್ರಹಿಸಿದರು. ಇದರ ನಡುವೆ ಸಾಮಾನ್ಯ ಕೃಷಿ ಮತ್ತು ಸಾವಯವ ಕೃಷಿ ಬಗ್ಗೆ ಸಮಗ್ರವಾಗಿ ಅಧ್ಯಯನ ನಡೆಸಿದ ಸಿದ್ಧಾರ್ಥ ಅವರು ‘ಪರ್ಪಲ್ ಚಿಲ್ಲಿ’ ಎಂಬ ಲಾಭರಹಿತ ಸಂಸ್ಥೆಯೊಂದಿಗೆ ಸೇರಿ ಸಾವಯವ ಕೃಷಿಯನ್ನು ಅಭಿವೃದ್ಧಿಪಡಿಸಲು ಮುಂದಾದರು.

ವಿವಿಧ ಸರ್ಕಾರೇತರ ಸಂಸ್ಥೆಗಳ ಮೂಲಕ ಸಾವಯವ ಕೃಷಿ ಮಾಡುವ ರೈತರಿಗೆ ಹಣಕಾಸು ನೆರವು, ಬೀಜ, ಗೊಬ್ಬರ, ಕೃಷಿ ಯಂತ್ರಗಳನ್ನು ಕೊಡಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಇದರ ಜತೆಗೆ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ರೈತರ ಬೆಳವಣಿಗೆಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬುದು ಸಿದ್ಧಾರ್ಥ ಅವರ ಉವಾಚ. www.sankalpforum.com

*


ಪ್ರಶಾಂತ್ ಜೋಗಿಯಾ
ಗುಜರಾತ್‌ನಲ್ಲಿ  ನೈಸರ್ಗಿಕ ಕೃಷಿ ಕ್ಷೇತ್ರದಲ್ಲಿ ಅತಿ ಕಿರಿಯ ವಯಸ್ಸಿಗೆ ಹಿರಿದಾದ ಸಾಧನೆ ಮಾಡಿದವರು ಪ್ರಶಾಂತ್ ಜೋಗಿಯಾ! ಪರಸ ಸಂಜೀವಿನಿ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ಯುವ ಕೃಷಿಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಯಾವುದೇ ರಾಸಾಯನಿಕವನ್ನು ಬಳಕೆ ಮಾಡದೇ ಕೃಷಿಯಲ್ಲಿ ಹೆಚ್ಚಿನ ಇಳುವರಿ ಪಡೆಯುವುದು ಹೇಗೆ ಎಂಬುದನ್ನು ಸಾವಿರಾರು ಯುವ ಕೃಷಿಕರಿಗೆ ಅವರು ತೋರಿಸಿಕೊಟ್ಟಿದ್ದಾರೆ.

ಪ್ರಶಾಂತ್ ಅವರದ್ದು ಪೋರಬಂದರಿನ ಸಮೀಪ ಇರುವ ಹಾಗೂ ಸಿಮೆಂಟ್ ಕೈಗಾರಿಕೆಗಳಿಗೆ ಜನಪ್ರಿಯವಾಗಿರುವ ಆದಿತ್ಯಾನ ಎಂಬ ಸಣ್ಣ ಪಟ್ಟಣ. ಅವರ ಕುಟುಂಬ ಬಣ್ಣಗಳ ತಯಾರಿಕೆಯ ಸಣ್ಣ ಕೈಗಾರಿಕೆಯನ್ನು ನಡೆಸುತ್ತಿದೆ. ಪ್ರಶಾಂತ್ ಕೂಡ ಇದೇ ಉದ್ಯಮವನ್ನು ನಡೆಸಿಕೊಂಡು ಹೋಗಲಿ ಎಂಬ ಅಪೇಕ್ಷೆ ಅವರ ಕುಟುಂಬದ್ದಾಗಿತ್ತು. ಪರಿಸರಪ್ರೀತಿಯ ಅವರಿಗೆ ಸಿಮೆಂಟ್ ಮತ್ತು ಬಣ್ಣದ ಕೈಗಾರಿಕೆಗಳ ಮೇಲೆ ತುಸು ಕೋಪ. ಯಾಕೆಂದರೆ ಸಿಮೆಂಟ್ ಮತ್ತು ಬಣ್ಣದ ಕೈಗಾರಿಕೆಗಳಿಂದ ಪರಿಸರ ನಾಶವಾಗುತ್ತದೆ ಎಂಬ ವೈಜ್ಞಾನಿಕ ವಾದ ಅವರದಾಗಿತ್ತು.

ಇದೇ ವಿಷಯದ ಮೇಲೆ ಪೋಷಕರ ಜತೆ ಜಗಳ ಮಾಡಿಕೊಂಡು ಮನೆಯಿಂದ ಹೊರಬಂದರು. ನಂತರ ಸಾವಯವ ಕೃಷಿಕ ದೀಪಕ್ ಸುಚೇದ್ ಅವರಿಂದ ಸ್ಫೂರ್ತಿ ಪಡೆದು, ಪಿತ್ರಾರ್ಜಿತವಾಗಿ ಬಂದಿದ್ದ ಒಂದಿಷ್ಟು ಭೂಮಿಯನ್ನು ವಶಕ್ಕೆ ಪಡೆದು ನೈಸರ್ಗಿಕವಾಗಿ ಕೃಷಿ ಮಾಡಲು ಆರಂಭಿಸಿದರು.

ರಾಸಾಯನಿಕವನ್ನು ಬಳಕೆ ಮಾಡದೇ ನೈಸರ್ಗಿಕವಾಗಿ ಕೃಷಿ ಮಾಡುವ ವಿಧಾನವನ್ನು ಯುವ ಪೀಳಿಗೆಗೆ ತಿಳಿಸುವ ಸಲುವಾಗಿ ಪರಸ ಸಂಜೀವಿನಿ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಅದರ ಮೂಲಕ ಯುವ ರೈತರಿಗೆ ತರಬೇತಿ ನೀಡುತ್ತಿದ್ದಾರೆ. ಇಲ್ಲಿಯವರೆಗೂ ಹತ್ತು ಸಾವಿರಕ್ಕೂ ಹೆಚ್ಚು ಯುವ ರೈತರು ಪರಸ ಸಂಜೀವಿನಿ ಸಂಸ್ಥೆಯಿಂದ ನೈಸರ್ಗಿಕ ಕೃಷಿಯ ಬಗ್ಗೆ ತರಬೇತಿ ಪಡೆದಿದ್ದಾರೆ ಎಂದ ಪ್ರಶಾಂತ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT