ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ತಯಾರಿಗೆ ಪ್ರೇರಣೆಯಾದ ಚಕ್ರ

Last Updated 10 ಮೇ 2017, 19:30 IST
ಅಕ್ಷರ ಗಾತ್ರ

ಕ್ರಿ.ಪೂ. 3500 ಹೊತ್ತಿಗೆ ಪುರಾತನ ನಾಗರಿಕತೆಗಳ ಜನರಿಗೆ ಚಕ್ರದಿಂದಾಗುವ ಅನುಕೂಲಗಳ ಬಗ್ಗೆ ಸ್ಪಷ್ಟ ಅರಿವು ಉಂಟಾಗಿತ್ತು. ನಂತರ ಅವರ ದೃಷ್ಟಿ ಹರಿದಿದ್ದು ವಾಹನಗಳ ತಯಾರಿಕೆಯ ಕಡೆಗೆ. ಎರಡು ಚಕ್ರಗಳನ್ನು ದಂಡವೊಂದರಿಂದ (ಆಕ್ಸಲ್‌) ಬಂಧಿಸಿದರೆ ವಾಹನವನ್ನು ಸುಲಭವಾಗಿ ಚಲಾಯಿಸಬಹುದು ಎಂಬುದನ್ನು ಅವರು ಕಂಡುಕೊಂಡರು. ಈ ಯೋಚನೆಯು ತಳ್ಳುಗಾಡಿ, ಸಾರೋಟುಗಳ ನಿರ್ಮಾಣಕ್ಕೆ ಪ್ರೇರಣೆಯಾಯಿತು.

ಕ್ರಿ.ಪೂ ನಾಲ್ಕನೇ ಸಹಸ್ರಮಾನದ ಎರಡನೇ ಅವಧಿಯಲ್ಲಿ ಕಚ್ಚಾ ವಾಹನಗಳ ಬಳಕೆ ಪ್ರಾರಂಭವಾಯಿತು. ಮೆಸಪೊಟೇಮಿಯಾ (ಸುಮೇರಿಯನ್ನರ ನಾಗರಿಕತೆ), ಉತ್ತರ ಕಾಕೆಸಸ್‌ (ಮೇಕೊಪ್‌ ಸಂಸ್ಕೃತಿ) ಮತ್ತು ಮಧ್ಯ ಯುರೋಪ್‌ನಲ್ಲಿ (ಕುಕುಟೆನಿ-ಟ್ರಿಪಿಲಿಯನ್‌ ಸಂಸ್ಕೃತಿ) ಇವುಗಳು ಸಂಚರಿಸಲು ಆರಂಭಿಸಿದವು. ಆದರೆ, ಯಾವ ಸಂಸ್ಕೃತಿಯು ಈ ವಾಹನಗಳನ್ನು ರೂಪಿಸಿತ್ತು ಎಂಬ ಬಗ್ಗೆ ಇನ್ನೂ ಗೊಂದಲಗಳಿವೆ.

ದಕ್ಷಿಣ ಪೋಲೆಂಡ್‌ನಲ್ಲಿ ಕ್ರಿ.ಪೂ 3500-3350ರ ಅವಧಿಯಲ್ಲಿ ಅಸ್ತಿತ್ವದಲ್ಲಿದ್ದ ಫನ್ನೆಲ್‌ಬೀಕರ್‌ ಸಂಸ್ಕೃತಿಯಲ್ಲಿ ಬಳಸಲಾಗಿದ್ದ ಮಣ್ಣಿನ ಮಡಕೆಯೊಂದರಲ್ಲಿ ನಾಲ್ಕು ಚಕ್ರಗಳ ಬಂಡಿಯ ಚಿತ್ರ ಕಂಡು ಬಂದಿದೆ. ತಲಾ ಎರಡು ಚಕ್ರಗಳನ್ನು ಹೊಂದಿದ್ದ ಎರಡು ಆಕ್ಸಲ್‌ಗಳನ್ನು ಸಮಾನಾಂತರವಾಗಿ ಆ ಬಂಡಿಗೆ ಅಳವಡಿಸಲಾಗಿದೆ. ಆ ಕಾಲದಲ್ಲಿ ಜಟಕಾ ಬಂಡಿಗಳಿದ್ದವು ಎಂಬುದಕ್ಕೆ ಮಡಕೆಯಲ್ಲಿನ ಈ ಚಿತ್ರ ಸಾಕ್ಷಿಯಾಗಿ ನಿಂತಿದೆ.


ಕ್ರಿ.ಪೂ 3340-3030ರ ಅವಧಿಯಲ್ಲಿ ತಯಾರಿಸಲಾಗಿದ್ದ ಮರದ ದೊಡ್ಡ ಚಕ್ರವೊಂದು 2002ರಲ್ಲಿ ಸ್ಲೊವೇನಿಯಾದ ಲುಬ್ಲಿಯಾನದ ಜವುಗು ಭೂಮಿಯಲ್ಲಿ ಪತ್ತೆಯಾಗಿದೆ. 76 ಸೆಂ.ಮೀ ತ್ರಿಜ್ಯ ಹೊಂದಿರುವ ಈ ಚಕ್ರವನ್ನು ಓಕ್‌ ಮರದಿಂದ ನಿರ್ಮಿಸಲಾಗಿತ್ತು.

ಆ ಕಾಲದಲ್ಲಿ ಎರಡು ರೀತಿಯ ಆಕ್ಸಲ್‌ಗಳನ್ನು ಬಳಸಲಾಗುತ್ತಿತ್ತು. ಒಂದು, ಚಕ್ರ ತಿರುಗುವಾಗ ಅದರೊಂದಿಗೆ ಆಕ್ಸಲ್‌ ಕೂಡ ತಿರುಗುವಂತಹದ್ದು. ಸ್ಲೊವೇನಿಯಾದಲ್ಲಿ ಪತ್ತೆಯಾದ ಚಕ್ರ ಈ ರೀತಿಯದ್ದು. ಇನ್ನೊಂದು ಮಾದರಿಯಲ್ಲಿ ಆಕ್ಸಲ್‌ ತಿರುಗುತ್ತಿರಲಿಲ್ಲ. ಚಕ್ರಗಳು ಮಾತ್ರ ಚಲಿಸುತ್ತಿದ್ದವು.
ಹಂಗೇರಿಯ ಬಡೆನ್‌ ಸಂಸ್ಕೃತಿಯಲ್ಲಿ ಇವು ಬಳಕೆಯಲ್ಲಿದ್ದವು ಎಂದು ಹೇಳುತ್ತಾರೆ ಇತಿಹಾಸ ತಜ್ಞರು.

ಚೀನಾದಲ್ಲಿ ಕ್ರಿ.ಪೂ 2000ದ ಹೊತ್ತಿಗೆ ಸಾರೋಟುಗಳ ಬಳಕೆ ಇತ್ತು ಎಂದು ಹೇಳಲಾಗುತ್ತಿದೆ. ಕುದುರೆ, ಒಂಟೆ, ಎತ್ತುಗಳಂತಹ ಪ್ರಾಣಿಗಳ ಮೂಲಕ ಬಂಡಿಗಳನ್ನು ಎಳೆಯಲಾಗುತ್ತಿತ್ತಂತೆ.

ಕ್ರಿ.ಪೂ 1800-800ರ ಅವಧಿಗೆ ಸೇರಿದ ಒಂದು ಮೀಟರ್‌ ವ್ಯಾಸದ ದೊಡ್ಡ ಚಕ್ರವೊಂದು ಬ್ರಿಟನ್ನಿನ ವಿಟ್ಲೆಸಿಯಲ್ಲಿರುವ ಮಸ್ಟ್‌ ಫಾರ್ಮ್‌ನಲ್ಲಿ 2016ರಲ್ಲಿ ಪತ್ತೆಯಾಗಿದೆ. ಅದರ ಪಕ್ಕದಲ್ಲಿ ಕುದುರೆಯ ಮೂಳೆಗಳೂ ಕಂಡು ಬಂದಿವೆ. ಇದರ ಆಧಾರದಲ್ಲಿ, ಬಂಡಿಯನ್ನು ಕುದುರೆಗೆ ಕಟ್ಟಿ ಎಳೆಯಲಾಗುತ್ತಿತ್ತು ಎಂದು ತಜ್ಞರು ಊಹಿಸಿದ್ದಾರೆ.

ಇದೆಲ್ಲದವರ ನಡುವೆಯೇ, ಚಕ್ರದ ತಯಾರಿಕೆಯಲ್ಲಿ ಸುಧಾರಣೆ ತರುವಂತಹ ಪ್ರಯತ್ನಗಳು ಜಗತ್ತಿನ ವಿವಿಧ ಭಾಗಗಳಲ್ಲಿ ನಡೆದವು. ಇದಕ್ಕೆ 1500 ವರ್ಷಗಳೇ ಹಿಡಿದವು. ಕ್ರಿ.ಪೂ 2000ದಲ್ಲಿ ಮೊದಲ ಬಾರಿಗೆ ಚಕ್ರದಲ್ಲಿ ಆರೆ ಅಥವಾ ಕಂಬಿಗಳನ್ನು (ಸ್ಪೋಕ್ಸ್‌) ಬಳಸಲಾಯಿತು.

ಈ ಚಕ್ರದ ಸೃಷ್ಟಿಕರ್ತರು ಪ್ರಾಚೀನ ಗ್ರೀಕರು. ಇವುಗಳು ಹಗುರವಾಗಿದ್ದವು. ಈ ಕಾರಣಕ್ಕಾಗಿ ಹಗುರ ಬಂಡಿಗಳ ನಿರ್ಮಾಣವೂ ಸಾಧ್ಯವಾಯಿತು. ಇವುಗಳು ಕಾಣುವುದಕ್ಕೂ ಆಕರ್ಷಣೀಯವಾಗಿದ್ದವು. ನಂತರ ಸ್ಪೋಕ್ಸ್ ಹೊಂದಿದ್ದ ಚಕ್ರಗಳ ಬಳಕೆ ಜಗತ್ತಿನ ಇತರ ಕಡೆಗಳಿಗೂ ಹರಡಿದವು. ಭಾರತದ ಹರಪ್ಪ ನಾಗರಿಕತೆಯಲ್ಲೂ ಈ ಚಕ್ರಗಳ ಬಳಕೆ ಇತ್ತು. (ಮುಂದುವರಿಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT