ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನ್‌ ಪುನ್‌ ಕಿಂದರಜೋಗಿ!

Last Updated 10 ಮೇ 2017, 19:30 IST
ಅಕ್ಷರ ಗಾತ್ರ

ಆ ಸಂದೇಶದಲ್ಲಿ ಅಡಗಿರುವ ಅಂತಹ ಸೆಳೆತವಾದರೂ ಏನು? ಜಾನ್‌ ಅವರ ಮಾತುಗಳಲ್ಲೇ ಕೇಳಿ ಅವರ ಬದುಕಿನ ಫಿಲಾಸಫಿ...

‘ಲೈಫ್‌ ಈಸ್‌ ಈಜಿ’
ನನ್ನ ಬದುಕಿನಲ್ಲಿ ಸಂಧಿಸುವ ಪ್ರತಿಯೊಬ್ಬರಿಗೂ ನಾನು ಹೇಳಬಯಸುವ ಮಾತಿದು. ಹೌದು, ಈ ಜೀವನ ಎಷ್ಟೊಂದು ಸಲೀಸಾಗಿದೆ ಹಾಗೂ ತಮಾಷೆಯಿಂದ ಕೂಡಿದೆಯಲ್ಲವೆ? ಆದರೆ, ಮೊದಲು ನಾನು ಈ ರೀತಿ ಯೋಚನೆಯನ್ನೇ ಮಾಡಿರಲಿಲ್ಲ. ನಾನು ಬ್ಯಾಂಕಾಕ್‌ನಲ್ಲಿದ್ದಾಗ ಜೀವನ ಅತ್ಯಂತ ಕಠಿಣ ಹಾಗೂ ಸಂಕೀರ್ಣ ಎಂದುಕೊಂಡಿದ್ದೆ.

ಥಾಯ್ಲೆಂಡ್‌ನ ಈಶಾನ್ಯಭಾಗದ ಒಂದು ಪುಟ್ಟ ಹಳ್ಳಿಯಲ್ಲಿ ನಾನು ಜನಿಸಿದೆ.  ಚಿಕ್ಕವನಿದ್ದಾಗ ಪ್ರತಿಯೊಂದೂ ತಮಾಷೆಯಿಂದ ಕೂಡಿತ್ತು. ಜೀವನ ಸಲೀಸಾಗಿತ್ತು. ಟಿ.ವಿಗಳು ಬಂದಾದ ಮೇಲೆ ಹಲವು ಮಂದಿ ನಮ್ಮೂರಿಗೆ ಬಂದರು. ‘ನೀವೆಲ್ಲ ಬಡವರಿದ್ದೀರಿ, ಯಶಸ್ಸಿನ ಮಾದರಿಗಳನ್ನು ನೀವು ಅನುಸರಿಸಬೇಕು. ಜೀವನದಲ್ಲಿ ಮುಂದೆ ಬರಲು ಬ್ಯಾಂಕಾಕ್‌ವರೆಗೆ ಪಾದ ಬೆಳೆಸಬೇಕು’ ಎಂಬ ಸಲಹೆಕೊಟ್ಟರು.

ನಾನು ಬಡವ ಎನ್ನುವುದು ಮೊದಲ ಬಾರಿಗೆ ಗೊತ್ತಾಯಿತು, ಬಲು ಕೆಡುಕೆನಿಸಿತು, ಆಗ ನಾನು ಬ್ಯಾಂಕಾಕ್‌ಗೆ ಹೋಗಲೇಬೇಕಿತ್ತು. ಬ್ಯಾಂಕಾಕ್‌ಗೆ ಹೋದಾಗ ಅಲ್ಲಿನ ಸನ್ನಿವೇಶ ಆಹ್ಲಾದಕರವೇನೂ ಆಗಿರಲಿಲ್ಲ. ಕಲಿಕೆಯಲ್ಲಿ ತಲ್ಲೀನವಾಗಬೇಕಿತ್ತು, ನಿರಂತರ ಅಧ್ಯಯನ ನಡೆಸಬೇಕಿತ್ತು, ಕಠಿಣ ಪರಿಶ್ರಮ ಮಾಡಬೇಕಿತ್ತು; ನಂತರವಷ್ಟೇ ಯಶಸ್ಸು ಹಿಂಬಾಲಿಸಲಿತ್ತು.

ನಾನು ಕಠಿಣ ಪರಿಶ್ರಮವನ್ನೇ ಹಾಕಿದೆ. ಪ್ರತಿದಿನ ಕನಿಷ್ಠ ಎಂಟು ಗಂಟೆ ಓದಿನಲ್ಲಿ ಮುಳುಗಿರುತ್ತಿದ್ದೆ. ಹಸಿದ ಹೊಟ್ಟೆಗೆ ಆಗ ಸಿಗುತ್ತಿದ್ದುದು ಏನು ಗೊತ್ತೆ? ಒಂದ್ಹೊತ್ತಿನ ಊಟಕ್ಕೆ ಕೇವಲ ಒಂದು ಕಪ್‌ ನೂಡಲ್‌ ಇಲ್ಲವೆ ಫ್ರೈಡ್‌ ರೈಸ್‌ ಅಥವಾ ಅಂತಹದ್ದೇ ಏನೋ ಒಂದು.

ಮತ್ತೆ ನಾನು ವಾಸವಾಗಿದ್ದ ಜಾಗ ಎಷ್ಟೊಂದು ಕೆಟ್ಟದಾಗಿತ್ತು ಅಂತೀರಿ! ಚಿಕ್ಕ ಕೋಣೆಯಲ್ಲೇ ತುಂಬಾ ಜನ ಮಲಗಬೇಕಿತ್ತು. ಸಹಿಸಲಸಾಧ್ಯ ಸೆಕೆ ಬೇರೆ.
ಪ್ರಶ್ನೆಗಳನ್ನು ಹಾಕಿಕೊಳ್ಳಲು ಆರಂಭಿಸಿದೆ. ನಾನು ಇಷ್ಟು ಪರಿಶ್ರಮ ಪಡುತ್ತಿರುವಾಗ ನನ್ನ ಜೀವನ ಏಕೆ ಇಷ್ಟೊಂದು ಕಠಿಣವಾಗಿರಬೇಕು? ಹೌದು, ಏನೋ ಲಯ ತಪ್ಪಿದೆ. ನನ್ನ ದುಡಿಮೆಗೆ ತಕ್ಕಷ್ಟು ಪ್ರತಿಫಲ ಸಿಗುತ್ತಿಲ್ಲ. ಓದಲು, ಅದೂ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸಲು ನಾನು ತುಂಬಾ ಶ್ರಮಪಡುತ್ತಿದ್ದೆ. ವಿಶ್ವವಿದ್ಯಾಲಯದ ಕಲಿಕೆ ಬಲು ಕಠಿಣ; ಮಾತ್ರವಲ್ಲ, ಬೋರ್‌ ಹೊಡಿಸುವಂಥದು.

ವಿಶ್ವವಿದ್ಯಾಲಯದ ಪಠ್ಯದ ಮೇಲೆ ಕಣ್ಣು ಹಾಯಿಸಿದಾಗಲೆಲ್ಲ ನನಗೆ ಇದೆಲ್ಲ ವಿಧ್ವಂಸಕ ಜ್ಞಾನ ಎನಿಸೋದು. ವಿಶ್ವವಿದ್ಯಾಲಯದಲ್ಲಿ ಜೀವನ್ಮುಖಿಯಾದ ಜ್ಞಾನ ಸಿಗಲಾರದು ಎನ್ನುವುದು ನನ್ನ ಖಚಿತ ಭಾವನೆ. ಉದಾಹರಣೆಗೆ ಎಂಜಿನಿಯರ್‌ಗಳು ಹೆಚ್ಚಾದಷ್ಟೂ ಪರ್ವತಗಳು ಕರಗುತ್ತವೆ. ಫಲವತ್ತಾದ ಭೂಮಿಯಲ್ಲೂ ಕಾಂಕ್ರೀಟ್‌ ಕಟ್ಟಡಗಳು ತಲೆ ಎತ್ತುತ್ತವೆ. ಅಂದರೆ, ಪರಿಸರದ ಮತ್ತಷ್ಟು ವಿನಾಶ.

ನೀವು ವಿಶ್ವವಿದ್ಯಾಲಯದಲ್ಲಿ ಕೃಷಿಯ ವಿಷಯವಾಗಿಯೇ ಕಲಿಯುತ್ತೀರಿ ಎಂದುಕೊಳ್ಳಿ. ಭೂಮಿಗೆ ಹೇಗೆ ವಿಷ ಉಣಿಸುವುದು, ನೀರನ್ನು ಹೇಗೆ ಹಾಳು ಮಾಡುವುದು ಇದನ್ನೇ ಅಲ್ಲವೆ, ನೀವು ಕಲಿಯುವುದು? ನಮ್ಮ ಒಂದೊಂದು ಕ್ರಿಯೆಯೂ ಬಲುಸಂಕೀರ್ಣ, ಅದರಿಂದ ನಮ್ಮ ಸುತ್ತಲಿನ ಎಲ್ಲವನ್ನೂ ನಾವು ಹಾಳು ಮಾಡುತ್ತೇವೆ, ಕಠಿಣಗೊಳಿಸುತ್ತೇವೆ ಎನ್ನುವುದು ನನ್ನ ಬಲವಾದ ನಂಬಿಕೆ.

ಮತ್ತೆ ಅದೇ ಪ್ರಶ್ನೆಯ ಕಾಟ. ನಾನೇಕೆ ಬ್ಯಾಂಕಾಕ್‌ನಲ್ಲಿ ಇರಬೇಕು? ನಾನು ಸುಮ್ಮನೇ ಕುಳಿತು ಬಾಲ್ಯದ ದಿನಗಳನ್ನೊಮ್ಮೆ ಮೆಲುಕು ಹಾಕಿದೆ. ನಮ್ಮೂರಿನಲ್ಲಿ ಯಾರೊಬ್ಬರೂ ಪ್ರತಿದಿನ ಎಂಟು ಗಂಟೆಗಳವರೆಗೆ ಕೆಲಸ ಮಾಡುತ್ತಿರಲಿಲ್ಲ. ಪ್ರತಿಯೊಬ್ಬರೂ ವರ್ಷದ ಎರಡು ತಿಂಗಳುಗಳಲ್ಲಿ ಮಾತ್ರ ದಿನಕ್ಕೆ ಎರಡು ಗಂಟೆಗಳಂತೆ ಕೆಲಸ ಮಾಡುತ್ತಿದ್ದರು.

ಒಂದು ತಿಂಗಳು ಭತ್ತದ ಸಸಿ ನಾಟಿ ಮಾಡಿದರೆ, ಮತ್ತೊಂದು ತಿಂಗಳು ಒಕ್ಕುವುದು, ಇಷ್ಟೇ ಕೆಲಸ. ಉಳಿದ ಹತ್ತು ತಿಂಗಳು ಅವರೆಲ್ಲ ಬಿಡುವಾಗಿರುತ್ತಿದ್ದರು. ಆದ್ದರಿಂದಲೇ ಥಾಯ್ಲೆಂಡ್‌ನಲ್ಲಿ ಪ್ರತಿ ತಿಂಗಳೂ ಒಂದೊಂದು ಹಬ್ಬ. ಹೌದು, ಇಲ್ಲಿನ ಜನರಿಗಿತ್ತು ಅಷ್ಟೊಂದು ಬಿಡುವಿನ ಸಮಯ!

ಮಧ್ಯಾಹ್ನದ ನಿದ್ದೆ
ನಮ್ಮೂರಿನ ಜನ ಮಧ್ಯಾಹ್ನ ಊಟದ ಬಳಿಕ ಒಂದು ಸಣ್ಣ ನಿದ್ದೆಯನ್ನೂ ತೆಗೆಯುತ್ತಿದ್ದರು. ಲಾವೋಸ್‌ ಕಡೆಗೆ ನೀವು ಬಂದಿದ್ದಾದರೆ ಮಧ್ಯಾಹ್ನದ ಹೊತ್ತು ಇಡೀ ಊರಿಗೆ ಊರೇ ಮಲಗಿ ಗಡದ್ದಾಗಿ ನಿದ್ದೆ ಹೊಡೆಯುವುದನ್ನು ಕಾಣಬಹುದು. ನಿದ್ದೆ ಮುಗಿಸಿದ ಮೇಲೆ ಅವರೆಲ್ಲ ‘ನಿನ್ನ ಅಳಿಯ ಹಾಗೆ, ಅವನ ಹೆಂಡತಿ ಹೀಗೆ...’ ಎಂದೆಲ್ಲ ಗಾಸಿಪ್‌ನಲ್ಲಿ ಕಾಲ ಕಳೆಯುತ್ತಿದ್ದರು.

ಸಾಕಷ್ಟು ಸಮಯ ಇದ್ದುದರಿಂದ ಅವರು ತಮ್ಮನ್ನು ತಾವು ಅರ್ಥೈಸಿಕೊಳ್ಳುತ್ತಿದ್ದರು. ತಮ್ಮ ಬದುಕಿಗೆ ಏನು ಬೇಕಿದೆ ಎಂಬುದನ್ನೂ ಅವರು ಅರಿತಿದ್ದರು. ಆದ್ದರಿಂದಲೇ ಊರಿನಲ್ಲಿ ಸಂಭ್ರಮ, ಪ್ರೀತಿ, ಉತ್ಸಾಹ ತುಂಬಿ ತುಳುಕುತ್ತಿತ್ತು.

ಬಿಡುವಿನ ವೇಳೆಯನ್ನು ಕಳೆಯಲು ಕೆಲವರು ಚಾಕುವಿಗೆ ಚಿತ್ತಾರದ ಹ್ಯಾಂಡಲ್‌ ಮಾಡಿದರೆ, ಇನ್ನು ಕೆಲವರು ಸುಂದರ ಬ್ಯಾಸ್ಕೆಟ್‌ಗಳನ್ನು ಹೆಣೆಯುತ್ತಿದ್ದರು. ಆದರೆ, ಈಗ ಯಾರೂ ಹೀಗೆ ಮಾಡುವುದಿಲ್ಲ. ಬ್ಯಾಸ್ಕೆಟ್‌ಗಳು ಕಾಣೆಯಾಗಿವೆ, ಪ್ಲಾಸ್ಟಿಕ್‌ ಬಳಸುವುದೇ ಖಯಾಲಿಯಾಗಿದೆ.

ಮನದಂಗಳದಲ್ಲಿ ಈ ನೆನಪುಗಳ ಮೆರವಣಿಗೆ ನಡೆದಾಗ ನಾನು ದೃಢನಿರ್ಧಾರ ಮಾಡಿದೆ: ನಾನಿಲ್ಲಿ ಇರಲಾರೆ, ವಿಶ್ವವಿದ್ಯಾಲಯ ತೊರೆದು ವಾಪಸ್‌ ಊರಿಗೆ ಹೋಗಲೇಬೇಕು ಎಂದು.

ವಾಪಸ್‌ ಬಂದೆ
ಊರಿಗೆ ವಾಪಸ್‌ ಬಂದಬಳಿಕ ನಮ್ಮೂರಿನ ಹಿಂದಿನ ಪೀಳಿಗೆಯವರು ಬಾಳಿದಂತೆಯೇ ಜೀವನ ಸಾಗಿಸಲು ನಿರ್ಧರಿಸಿದೆ. ಹೀಗಾಗಿ ಭತ್ತದ ನಾಟಿ ಮಾಡಿದೆ. ಮೊದಲ ಫಸಲಿಗೆ ನಾಲ್ಕು ಟನ್‌ ಅಕ್ಕಿ ಸಿಕ್ಕಿತು. ಆರು ಜನ ಸದಸ್ಯರಿದ್ದ ನಮ್ಮ ಕುಟುಂಬದ ವರ್ಷವಿಡೀ ಊಟಕ್ಕೆ ಅರ್ಧ ಟನ್‌ ಅಕ್ಕಿ ಸಾಕಿತ್ತು. ಹೀಗಾಗಿ ಉಳಿದ ಅಕ್ಕಿಯನ್ನು ಮಾರಾಟ ಮಾಡಿದೆ. ನಮ್ಮ ಹೊಲದಲ್ಲಿ ಎರಡು ಪುಟ್ಟ ಕೆರೆಗಳನ್ನು ತೋಡಿದೆ. ಅದರಲ್ಲಿ ಮೀನುಗಳನ್ನು ಸಾಕಿದೆ.

ವರ್ಷದುದ್ದಕ್ಕೂ ನಮಗೆ ಬೇಕಾದಷ್ಟು ಮೀನುಗಳು ಈ ಎರಡು ಕೆರೆಗಳಿಂದ ಸಿಕ್ಕವು. ಅರ್ಧ ಎಕರೆಯಲ್ಲಿ ಒಂದು ಸಣ್ಣ ಕೈತೋಟ ಮಾಡಿದೆ. ಅದರ ಆರೈಕೆಗೆ ನಾನು ನಿತ್ಯ ವ್ಯಯಿಸುತ್ತಿದ್ದುದು ಬರೀ ಕಾಲು ಗಂಟೆ. ನನ್ನ ಕೈತೋಟದಲ್ಲಿ 30 ವಿಧದ ತರಕಾರಿಗಳು ಬೆಳೆದವು. ಅಲ್ಲಿನ ತರಕಾರಿಯನ್ನೆಲ್ಲ ನನ್ನ ಕುಟುಂಬವಷ್ಟೇ ತಿನ್ನಲು ಸಾಧ್ಯವಿರಲಿಲ್ಲ. ಹೀಗಾಗಿ ಕೈತೋಟ ಕೂಡ ನನ್ನ ವರಮಾನದ ಒಂದು ಸಣ್ಣ ತೊರೆಯಾಯಿತು.

ಬ್ಯಾಂಕಾಕ್‌ನಲ್ಲಿ ಹೊಟ್ಟೆ ತುಂಬಾ ಊಟವಿಲ್ಲದೆ ಏಳು ವರ್ಷ ಕಠಿಣ ಶ್ರಮ ವಹಿಸುವ ಅಗತ್ಯವೇನಿದೆ, ಜೀವನ ಇಷ್ಟೊಂದು ಸಲೀಸಾಗಿರುವಾಗ ಅಂದುಕೊಂಡೆ. ಅಲ್ಲವೆ ಮತ್ತೆ, ವರ್ಷದ ಎರಡು ತಿಂಗಳು ಹಾಗೂ ದಿನದ 15 ನಿಮಿಷದ ಕೆಲಸ ನನ್ನ ಇಡೀ ಕುಟುಂಬದ ಹೊಟ್ಟೆ ತುಂಬಿಸುತ್ತಿರುವಾಗ ಜೀವನ ತುಂಬಾ ಸಲೀಸಲ್ಲವೆ?

ಶಾಲೆಯಲ್ಲಿ ಎಂದಿಗೂ ಒಳ್ಳೆಯ ಅಂಕ ತೆಗೆಯದ ನನ್ನಂತಹ ಮೂರ್ಖರು ಮನೆ ಕಟ್ಟುವುದು ಸಾಧ್ಯವೇ ಇಲ್ಲ ಅಂದುಕೊಂಡಿದ್ದೆ. ಏಕೆಂದರೆ, ನನಗಿಂತ ಜಾಣರಾದ ವ್ಯಕ್ತಿಗಳು, ಪ್ರತಿವರ್ಷ ಮೊದಲ ಶ್ರೇಣಿಯಲ್ಲೇ ತೇರ್ಗಡೆ ಆಗುತ್ತಿದ್ದವರು, ಒಳ್ಳೆಯ ನೌಕರಿ ಪಡೆಯುತ್ತಾರೆ, ಅಂಥವರೇ ಮನೆ ಕಟ್ಟಲು 30 ವರ್ಷಗಳವರೆಗೆ ಕಠಿಣ ಪರಿಶ್ರಮ ವಹಿಸುವುದು ಅನಿವಾರ್ಯವಾಗಿದೆ ಎನ್ನುವುದು ನನ್ನ ನಂಬಿಕೆಯಾಗಿತ್ತು.

ವಿಶ್ವವಿದ್ಯಾಲಯದ ಓದನ್ನೇ ಪೂರ್ಣಗೊಳಿಸದ ನನ್ನಂಥ ವ್ಯಕ್ತಿ ಮನೆಕಟ್ಟಲು ಸಾಧ್ಯವೇ? ಹೆಚ್ಚಿನ ಶಿಕ್ಷಣ ಪಡೆಯದ ನನ್ನಂಥವರಿಗೆ ಇದು ಅಸಾಧ್ಯದ ಮಾತೇ ಸರಿ ಎಂಬ ಅಭಿಪ್ರಾಯಕ್ಕೆ ಬಂದಿದ್ದೆ.
ಎಷ್ಟೊಂದು ಮನೆಗಳು!

ನಮ್ಮ ಹೊಲದಲ್ಲಿ ನಾನು ಮಣ್ಣಿನ ಮನೆ ನಿರ್ಮಿಸಲು ಆರಂಭಿಸಿದಾಗ ‘ಓಹ್‌! ಈ ಕೆಲಸ ಕೂಡ ಸಲೀಸು’ ಎಂದೆನಿಸಿತು. ಪ್ರತಿದಿನ ಬೆಳಗಿನ ಐದರಿಂದ ಏಳರವರೆಗೆ, ಎರಡು ಗಂಟೆ, ಮೂರು ತಿಂಗಳವರೆಗೆ ನಾನು ಶ್ರಮಹಾಕಿದೆ. ನನ್ನ ಮುದ್ದು ಮನೆ ಸಿದ್ಧಗೊಂಡಿತು. ನನ್ನ ಜಾಣ ಗೆಳೆಯನೊಬ್ಬ ಕೂಡ ಮೂರು ತಿಂಗಳಲ್ಲೇ ಮನೆ ಕಟ್ಟಿದ್ದಾನೆ. ಆದರೆ, ಅದರ ಜತೆಗೆ ಸಾಲದ ಹೊರೆಯೂ ಅವನ ಮೇಲೆ ಬಿದ್ದಿದೆ.

ಆ ಸಾಲ ತೀರಿಸಲು ಆತ 30 ವರ್ಷ ದುಡಿಯಬೇಕು. ಅವನೊಂದಿಗೆ ಹೋಲಿಸಿಕೊಂಡರೆ ನನ್ನ ಬಳಿಯೀಗ 29 ವರ್ಷ, 9 ತಿಂಗಳು ಬಿಡುವಿನ ಸಮಯವಿದೆ! ಮನೆಯನ್ನು ಇಷ್ಟೊಂದು ಸುಲಭವಾಗಿ ಕಟ್ಟಬಹುದೆಂದು ಎಂದಿಗೂ ಅಂದುಕೊಂಡಿರಲಿಲ್ಲ. ಪ್ರತಿವರ್ಷ ನಾನು ಒಂದೊಂದು ಮನೆ ಕಟ್ಟುತ್ತಾ ಹೋದೆ. ನನ್ನ ಬಳಿಯೀಗ ಹಣವಿಲ್ಲ; ಆದರೆ, ಹಲವು ಮನೆಗಳಿವೆ! ಇವತ್ತು ಯಾವ ಮನೆಯಲ್ಲಿ ಮಲಗಬೇಕು ಎನ್ನುವುದು ನನ್ನ ಸಮಸ್ಯೆ. ಹೌದು, ಯಾರು ಬೇಕಾದರೂ ಮನೆ ಕಟ್ಟಬಹುದು. ಅದೇನು ಕಷ್ಟದ ಕೆಲಸವಲ್ಲ.

ನಾನು ಬಡವ, ಕುರೂಪಿ, ಸಿನಿಮಾ ತಾರೆಯಂತೆ ಹೊಳೆಯಲು ಅವರಂತೆಯೇ ಬಟ್ಟೆ ಧರಿಸಬೇಕು ಎಂಬ ಯೋಚನೆ ಕಾಡುತ್ತಿತ್ತು. ಒಂದು ತಿಂಗಳ ದುಡಿಮೆಯಿಂದ ಹಣ ಉಳಿತಾಯ ಮಾಡಿ ಜೀನ್ಸ್‌ ಖರೀದಿಸಿದೆ. ಆ ಬಟ್ಟೆಯನ್ನು ಧರಿಸಿ ಕನ್ನಡಿ ಮುಂದೆ ಗಿರಿಕಿ ಹೊಡೆದು ನೋಡಿಕೊಂಡೆ. ಯಾವ ಕೋನದಿಂದ ನೋಡಿದರೂ ನಾನು ಅದೇ ವ್ಯಕ್ತಿಯಾಗಿದ್ದೆ. ದುಬಾರಿಯಾದ ಪ್ಯಾಂಟ್‌ ನನ್ನ ಜೀವನವನ್ನು ಬದಲಿಸಲಿಲ್ಲ.

ಇಷ್ಟೊಂದು ಗಳಿಕೆ ವ್ಯಯಿಸಿ, ಫ್ಯಾಷನ್‌ನ ದುಂಬಾಲು ಬೀಳುವ ಅಗತ್ಯವೇನಿದೆ ಎಂಬ ಪ್ರಶ್ನೆಯನ್ನು ಕೇಳಿಕೊಂಡೆ. ಬಟ್ಟೆ ಖರೀದಿಸಿ ತೊಟ್ಟ ಮಾತ್ರಕ್ಕೆ ನಾನು ಬದಲಾಗಲ್ಲ, ನನ್ನಲ್ಲಿ ಲಭ್ಯವಿದ್ದ ಬಟ್ಟೆಯನ್ನೇ ತೊಡಬೇಕು ಎಂಬ ನಿರ್ಧಾರ ಮಾಡಿದೆ.

ನನಗೆ ಈ ಯೋಚನೆ ಬಂದಬಳಿಕ ನಾನು ಬಟ್ಟೆ ಖರೀದಿಸುವುದನ್ನೇ ಬಿಟ್ಟೆ. ನನ್ನ ಬಳಿ ಬಂದವರು ಹೋಗುವಾಗ ಬಿಟ್ಟು ಹೋಗುತ್ತಿದ್ದ ಬಟ್ಟೆಯನ್ನೇ ಧರಿಸಲು ಆರಂಭಿಸಿದೆ. ನಾನು ಹಳೆಯ ಬಟ್ಟೆಗಳನ್ನು ಧರಿಸುವುದು ಗೊತ್ತಾದ ಮೇಲೆ ಜನ ಇನ್ನಷ್ಟು ಮತ್ತಷ್ಟು ಬಟ್ಟೆ ತಂದು ಗುಡ್ಡೆ ಹಾಕತೊಡಗಿದರು. ನನ್ನ ಬಳಿಯೀಗ ಅರ್ಧ ಟನ್‌ನಷ್ಟು ಬಟ್ಟೆಗಳಿವೆ.

ಆರೋಗ್ಯ ಕೈಕೊಟ್ಟಾಗ ಹಣವಿಲ್ಲದೆ ಏನು ಮಾಡಬೇಕು ಎಂಬ ಪ್ರಶ್ನೆ ಕಾಡುತ್ತಿತ್ತು. ಈ ಕುರಿತು ಚಿಂತಿಸುತ್ತಾ ಹೋದಾಗ ಅನಿಸಿತು, ಅನಾರೋಗ್ಯ ಕೂಡ ಸಾಮಾನ್ಯ ವಿದ್ಯಮಾನ. ಜೀವನದಲ್ಲಿ ನಾವು ಏನೋ ತಪ್ಪು ಮಾಡಿದ್ದೇವೆ ಎಂಬುದನ್ನು ಜ್ಞಾಪಿಸಲು ಅದು ಬರುತ್ತದೆ. ಹೀಗಾಗಿ, ನಾನು ಹಾಸಿಗೆ ಹಿಡಿದಾಗ ನನ್ನಷ್ಟಕ್ಕೆ ನಾನೇ ಯೋಚಿಸುತ್ತೇನೆ, ನಾನೆಲ್ಲಿ ತಪ್ಪು ಮಾಡಿದೆ ಎಂದು.

ನೀರನ್ನು, ಮಣ್ಣನ್ನು, ನನ್ನ ಜ್ಞಾನವನ್ನು ಆರೋಗ್ಯ ಕಾಪಾಡಿಕೊಳ್ಳಲು ಹೇಗೆ ಬಳಸಿಕೊಳ್ಳಬೇಕು ಎಂಬುದು ಹೊಳೆಯುತ್ತದೆ. ಜೀವನ ಸಲೀಸಾಗಿದೆ, ಅದರಲ್ಲಿ ಪೂರ್ಣ ಸ್ವಾತಂತ್ರ್ಯವಿದೆ, ಬೇಕಾದಷ್ಟು ಕಾಲಾವಕಾಶವಿದೆ ಎಂದು ನನಗೆ ನಾನೇ ಹೇಳಿಕೊಳ್ಳುತ್ತೇನೆ. ಯಾವುದರ ಬಗೆಗೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ನನಗೆ ಹೆದರಿಕೆ ಕಡಿಮೆ.

ಜೀವನದಲ್ಲಿ ಬಯಸಿದ್ದನ್ನೆಲ್ಲ ಮಾಡಬಲ್ಲೆ. ಮೊದಲು ನನಗೂ ಭಯವಿತ್ತು. ಆದರೆ, ಜಗತ್ತಿನಲ್ಲೇ ಅತೀ ವಿಶಿಷ್ಟ ವ್ಯಕ್ತಿ ನಾನು, ನನ್ನಂತೆ ಬೇರೆ ಯಾರೂ ಇಲ್ಲ, ನಾನೇ ನಂಬರ್‌ ಒನ್‌ ಎಂದುಕೊಂಡೆ. ಇದ್ದಬಿದ್ದ ಭಯವೆಲ್ಲ ಓಡಿಹೋಯಿತು.

ಸ್ವತಂತ್ರವಾಗಿ ಬದುಕಲು ಬೇಕಾದ ಸಂಗತಿಗಳಿಂದ ಸಂಪರ್ಕ ಕಡಿದುಕೊಳ್ಳುವುದು ಹೇಗೆಂಬುದನ್ನು ನಾವೆಲ್ಲ ಕಲಿಯುತ್ತಿರುವುದೇ ಸಮಸ್ಯೆಗಳಿಗೆ ಕಾರಣ. ನಾವು ಹಣದ ಬೆನ್ನುಬಿದ್ದಿದ್ದೇವೆ, ಪರಾವಲಂಬಿಗಳಾಗಿದ್ದೇವೆ. ಮಿಸ್ಸಿಂಗ್‌ ಲಿಂಕ್‌ ಮತ್ತೆ ಜೋಡಣೆಯಾದರೆ ಸ್ವಾವಲಂಬಿ ಬದುಕಿಗೆ ಬೇಕಾದ ಸಾಮರ್ಥ್ಯ ಸಿಗುತ್ತದೆ. ಆಹಾರ, ವಸತಿ, ಬಟ್ಟೆ ಮತ್ತು ಔಷಧ –ಇಷ್ಟೇ ಈ ಬದುಕಿಗೆ ಬೇಕಿರುವುದು.

ಎಲ್ಲರಿಗೂ ಇವು ಸುಲಭವಾಗಿ ಕೈಗೆಟುಕಬೇಕು. ಅದೇ ನಾಗರಿಕತೆ. ಈ ನಾಲ್ಕು ಅಗತ್ಯಗಳನ್ನು ಗಿಟ್ಟಿಸಲು ಜನ ತುಂಬಾ ಪ್ರಯಾಸಪಡುವಂತೆ ಮಾಡಿದರೆ ಅದು ಅನಾಗರಿಕತೆ. ಆದರೆ, ನಮ್ಮ ಸುತ್ತಲಿನ ಜನ ಪ್ರತಿಯೊಂದಕ್ಕೂ ಪರದಾಡುವುದನ್ನು ನಾವು ನೋಡುತ್ತಿದ್ದೇವೆ. ಅತ್ಯಂತ ಅನಾಗರಿಕ ಕಾಲದಲ್ಲಿ ನಾವಿದ್ದೇವೆ.

ಈ ಭೂಮಿಯಲ್ಲಿ ಎಷ್ಟೊಂದು ವಿಶ್ವವಿದ್ಯಾಲಯಗಳಿವೆ, ಅಲ್ಲಿಂದ ಓದಿ ಬಂದವರ ಸಂಖ್ಯೆಯೂ ದೊಡ್ಡದಿದೆ, ಜಾಣರು ತುಂಬಿ ತುಳುಕುತ್ತಿದ್ದಾರೆ. ಆದರೆ, ಬದುಕು ಮಾತ್ರ ಕಠಿಣವಾಗಿಬಿಟ್ಟಿದೆ.

ಇದೆಲ್ಲ ಅಸಹಜವಾಗಿ ನನಗೆ ತೋರುತ್ತದೆ. ಸಹಜ ಮಾರ್ಗದತ್ತ ನಾವು ಹೆಜ್ಜೆ ಹಾಕಬೇಕಿದೆ. ನಾವು ಎಷ್ಟು ಸಹಜವಾಗಬೇಕೆಂದರೆ ಪ್ರಾಣಿಗಳಂತಾಗಬೇಕು. ಪಕ್ಷಿಯೊಂದು ಎರಡು ದಿನಗಳಲ್ಲಿ ಗೂಡು ಕಟ್ಟುತ್ತದೆ. ಇಲಿಯೊಂದು ಒಂದು ರಾತ್ರಿಯಲ್ಲಿ ಬಿಲ ತೋಡುತ್ತದೆ. ಆದರೆ, ಜಾಣ ಮನುಷ್ಯನಿಗೆ ಮನೆ ಕಟ್ಟಲು 30 ವರ್ಷಗಳೇಬೇಕು. ಕೋಟ್ಯಂತರ ಜನರಿಗೆ ತಾವು ಈ ಜೀವನದಲ್ಲಿ ಒಂದು ಮನೆ ಹೊಂದಬಹುದು ಎಂಬ ಭರವಸೆಯೂ ಇಲ್ಲ.


ನಮ್ಮ ಸ್ಫೂರ್ತಿಯನ್ನು ಏಕೆ ಕಳೆದುಕೊಳ್ಳಬೇಕು, ಸಾಮರ್ಥ್ಯವನ್ನು ಏಕೆ ವ್ಯರ್ಥಗೊಳಿಸಬೇಕು? ನಮ್ಮ ಎದುರಿನಲ್ಲಿ ಎರಡು ಆಯ್ಕೆಗಳಿವೆ. ಒಂದು ಸಲೀಸಾದರೆ ಮತ್ತೊಂದು ಕಠಿಣ. ಆಯ್ಕೆ ಆಯಾ ವ್ಯಕ್ತಿಗೆ ಬಿಟ್ಟಿದ್ದು.

ಆವೆ ಮಣ್ಣಿನಲ್ಲಿ ಅರಳಿದ ನಕ್ಷತ್ರ
‘ಎಲ್ಲರೂ ನಿಧಾನವಾಗಿ ಉಣ್ಣಬೇಕು, ಕೃಷಿ ಚಟುವಟಿಕೆಗಳು ಸಹ ಅಷ್ಟೇ ಸಾವಧಾನವಾಗಿ ಸಾಗಬೇಕು. ಅಂತೆಯೇ ನಮ್ಮಿಂದ ಇ–ಮೇಲ್‌ ಉತ್ತರ ಪಡೆಯಲು ಆತುರ ಸಲ್ಲ’ –ಜಾನ್‌ ಜಂದಾಯ್‌ ಅವರಿಂದ ಇ–ಮೇಲ್‌ಗೆ ಉತ್ತರ ಬರುವ ಮುನ್ನ ಅವರ ಪತ್ನಿ ಪೆಗ್ಗಿ ಕಳುಹಿಸಿದ್ದ ಪುಟ್ಟ ಸಂದೇಶವಿದು. ‘ನಮ್ಮದು ಕೃಷಿಕ ಕುಟುಂಬ. 

ಮಣ್ಣಿನಲ್ಲೇ ನಾವು ಕಾಲ ಕಳೆಯೋದು ಹೆಚ್ಚು. ವಾರದಲ್ಲಿ ಅಪರೂಪಕ್ಕೊಮ್ಮೆ ಕಂಪ್ಯೂಟರ್‌ ಮುಂದೆ ಕೂರುತ್ತೇವೆ. ಆದ್ದರಿಂದಲೇ ಉತ್ತರ ನೀಡುವುದು ತಡ’ ಎಂದು ಅವರು ಬರೆದಿದ್ದರು.

ಜಾನ್‌ ಕುಟುಂಬದ ಜೀವನ ಶೈಲಿಗೆ ಆ ಪತ್ರ ಒಂದು ಬೆಳಕಿಂಡಿಯಂತಿತ್ತು. ಜಾನ್‌ ಮೂಲತಃ ಕೃಷಿಕ. ಥಾಯ್ಲೆಂಡ್‌ನ ಯಸೋಥಾನ್‌ ಪ್ರಾಂತ್ಯದ ಗಿರಿಶ್ರೇಣಿಯ ಪುಟ್ಟ ಹಳ್ಳಿ ಪುನ್‌ ಪುನ್‌ ಅವರೂರು. ತಮ್ಮ ಎಂಟು ಎಕರೆ ಭೂಮಿಯಲ್ಲಿ ಸಹಜ ಕೃಷಿ ಮಾಡುತ್ತಿರುವ ಅವರು, ಅಪರೂಪದ ದೇಸಿ ತಳಿ ಬೀಜಗಳ ರಕ್ಷಣೆಗೆ ಟೊಂಕಕಟ್ಟಿ ನಿಂತಿದ್ದಾರೆ.

ಸಾವಯವ ಕೃಷಿ ಪದ್ಧತಿಯಲ್ಲಿ ಇವರ ತೋಟದಲ್ಲಿ ಬೆಳೆಯುವ ತರಕಾರಿಗೆ ಎಲ್ಲಿಲ್ಲದ ಬೇಡಿಕೆ. ‘ಮಣ್ಣಿನ ಮನೆಗಳ ಮನುಷ್ಯ’ನಾಗಿ ಹೆಸರಾಗಿರುವ ಜಾನ್‌ ತಮ್ಮ ಹೊಲದಲ್ಲೇ ಹಲವು ಮಣ್ಣಿನ ಮನೆಗಳನ್ನು ಕಟ್ಟಿದ್ದಾರೆ. ಹಳ್ಳಿಗರ ಹಳೆಯ ತಂತ್ರಜ್ಞಾನಗಳಿಗೆ ಮರುಜನ್ಮ ನೀಡಿದ್ದಾರೆ.

ಎಲ್ಲಕ್ಕಿಂತ ಹೆಚ್ಚಾಗಿ ಯುವಸಮೂಹಕ್ಕೆ ಸ್ವಾವಲಂಬನೆಯಿಂದ ಬದುಕು ಕಟ್ಟಿಕೊಳ್ಳುವುದು ಹೇಗೆಂದು ಹೇಳಿಕೊಡುತ್ತಿದ್ದಾರೆ. ಸ್ವತಂತ್ರವಾಗಿ ಯೋಚಿಸುವಂತೆ ಪ್ರೇರೇಪಿಸುತ್ತಿದ್ದಾರೆ. ಪುನ್‌ ಪುನ್‌ನಲ್ಲಿ ಅವರು ಯುವಕರಿಗಾಗಿ ಅಭ್ಯಾಸ ವರ್ಗ ನಡೆಸುತ್ತಾರೆ.

ಅಲ್ಲಿ ತರಬೇತಿ ಪಡೆಯಲು ಜಗತ್ತಿನ ಎಲ್ಲೆಡೆಯಿಂದ ಎಷ್ಟು ಬೇಡಿಕೆಯೆಂದರೆ ವರ್ಷಾಂತ್ಯದವರೆಗಿನ ವರ್ಗಗಳೆಲ್ಲ ಬಹುತೇಕ ಬುಕ್‌ ಆಗಿವೆ. ತರಬೇತಿಗೆ ಬಂದವರಿಂದ ನಿತ್ಯದ ನಿರ್ವಹಣಾ ವೆಚ್ಚವನ್ನಲ್ಲದೆ ಬೇರೇನನ್ನೂ ಅವರು ಪಡೆಯುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT