ಹೊರಳು ಹಾದಿಯಲ್ಲಿ ಆಮ್‌ ಆದ್ಮಿ ಪಾರ್ಟಿ

ದೇಶದ ರಾಜಕೀಯ ಭೂಪಟದಲ್ಲಿ 2012ರಲ್ಲಿ ಮೊದಲ ಬಾರಿಗೆ ಮಿಂಚಿನ ವೇಗದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಆಮ್‌ ಆದ್ಮಿ ಪಾರ್ಟಿ (ಎಎಪಿ),  ಮುಖ್ಯವಾಹಿನಿಯಲ್ಲಿದ್ದ ರಾಜಕೀಯ ಪಕ್ಷಗಳಿಗೆ ಹೊಸ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಿತ್ತು

ಹೊರಳು ಹಾದಿಯಲ್ಲಿ ಆಮ್‌ ಆದ್ಮಿ ಪಾರ್ಟಿ

ದೇಶದ ರಾಜಕೀಯ ಭೂಪಟದಲ್ಲಿ 2012ರಲ್ಲಿ ಮೊದಲ ಬಾರಿಗೆ ಮಿಂಚಿನ ವೇಗದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಆಮ್‌ ಆದ್ಮಿ ಪಾರ್ಟಿ (ಎಎಪಿ),  ಮುಖ್ಯವಾಹಿನಿಯಲ್ಲಿದ್ದ ರಾಜಕೀಯ ಪಕ್ಷಗಳಿಗೆ ಹೊಸ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಿತ್ತು. ಆ ಬಗ್ಗೆ ಪಕ್ಷ ಸಾಕಷ್ಟು ಅಭಿಮಾನವನ್ನೂ ಹೊಂದಿತ್ತು. ತನ್ನಷ್ಟಕ್ಕೆ ತಾನೇ ಹೆಮ್ಮೆಯನ್ನೂ ಪಟ್ಟಿತ್ತು. ರಾಜಕೀಯ ರಂಗದಲ್ಲಿ ಆಳವಾಗಿ ಬೇರೂರಿದ್ದ ರಾಜಕೀಯ ಪಕ್ಷಗಳ ತಂತ್ರಗಾರಿಕೆ, ಸೆಳೆತ ಮತ್ತು ಒತ್ತಡಕ್ಕೆ ಪ್ರತಿಯಾಗಿ ಹೊಸ ಶಕ್ತಿಯಾಗಿ ಮತದಾರರ ಗಮನ ಸೆಳೆದಿತ್ತು. 

ಕೇವಲ ನಾಲ್ಕೇ ವರ್ಷಗಳಲ್ಲಿ ಪಕ್ಷವು ಈಗ ಮುಖ್ಯವಾಹಿನಿ ರಾಜಕೀಯಕ್ಕೆ ಇನ್ನೊಂದು ಪರ್ಯಾಯ ಶಕ್ತಿಯಾಗಿ ತನ್ನ ಮಹತ್ವ ಮತ್ತು ಆಕರ್ಷಣೆಗಳನ್ನೆಲ್ಲ ಕಳೆದುಕೊಂಡಿದೆ.  ಈ ಅವಧಿಯಲ್ಲಿ ರಾಜಕೀಯ ಸೇತುವೆಯಡಿ ಸಾಕಷ್ಟು ನೀರು ಹರಿದು ಹೋಗಿದೆ.  ಇತರ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ತಾನು ಸಂಪೂರ್ಣ ಭಿನ್ನ ಎನ್ನುವ ಭರವಸೆ ಮೂಡಿಸಿದ್ದ ಹೊಸ ಪಕ್ಷ,  ಅಲ್ಪಾವಧಿಯಲ್ಲಿಯೇ ಸಾಕಷ್ಟು ನಾಟಕೀಯ ತಿರುವು ಮತ್ತು ಅನಿರೀಕ್ಷಿತ ಬದಲಾವಣೆಗೆ ಸಾಕ್ಷಿಯಾಗಿದೆ.

ವೃತ್ತಿನಿರತ ರಾಜಕಾರಣಿಗಳ ಕುಟಿಲ ಕಾರಸ್ತಾನಗಳಿಂದ  ರೋಸಿ ಹೋಗಿದ್ದ ಅನೇಕರಲ್ಲಿ  ಎಎಪಿ ಅಸ್ತಿತ್ವದಿಂದಾಗಿ  ಹೊಸ ಭರವಸೆ ಮೂಡಿತ್ತು.  ಸ್ವಚ್ಛ, ಭ್ರಷ್ಟಾಚಾರಮುಕ್ತ ಮತ್ತು ರಾಜಕೀಯ ಪರಿವರ್ತನೆಗೆ ಹೆಚ್ಚು ಪ್ರಜಾಸತ್ತಾತ್ಮಕವಾದ ರೀತಿಯಲ್ಲಿ ಸ್ಪಂದಿಸುವ ಹೊಸ ವೇದಿಕೆ ಜನ್ಮ ತಳೆದಿರುವುದಕ್ಕೆ ಅನೇಕರು ಸಂಭ್ರಮಪಟ್ಟಿದ್ದರು. ಸದ್ಯಕ್ಕೆ ಪಕ್ಷದಲ್ಲಿ ನಡೆಯುತ್ತಿರುವ ಒಳಗುದಿಯ ಬೆಳವಣಿಗೆಗಳು ಅಂತಹ ನಿರೀಕ್ಷೆಗಳನ್ನೆಲ್ಲ ತಲೆಕೆಳಗು ಮಾಡಿವೆ. 
ಭರವಸೆಯ ಮಾರ್ಗ ಬದಲಿಸಿದ ಮತ್ತು ನಾಟಕೀಯ ಬೆಳವಣಿಗೆಗಳು ಪಕ್ಷದ ಒಳಗೆ ಎಲ್ಲವೂ ಸರಿಯಾಗಿಲ್ಲ ಎನ್ನುವುದನ್ನು ವಿವರಿಸುತ್ತವೆ.  ಅನೇಕ ಘಟನಾವಳಿಗಳು ಮತ್ತು ಪ್ರಮುಖ ಘಟ್ಟದಲ್ಲಿ ಕೈಗೊಂಡ ತಪ್ಪು ನಿರ್ಧಾರಗಳು ಪಕ್ಷದ ಬೆಳವಣಿಗೆಗೆ ಅಡ್ಡಿಪಡಿಸುವಲ್ಲಿ   ಗಣನೀಯ ಕೊಡುಗೆ ನೀಡಿವೆ. ಪಕ್ಷದ  ಅಸ್ತಿತ್ವಕ್ಕೂ ಮುಳುವಾಗಿವೆ. ದೇಶಿ ರಾಜಕಾರಣದಲ್ಲಿ ಸಂಪ್ರದಾಯಕ್ಕೆ ಹೊರತಾದ ಹೊಸ ಬಗೆಯಲ್ಲಿಯೂ ರಾಜಕೀಯ ಮಾಡಲು ಸಾಧ್ಯ ಎನ್ನುವ ನಿರೀಕ್ಷೆಯು  ಸಾಕಾರಗೊಳ್ಳದಿರುವುದಕ್ಕೆ ಈ ವಿದ್ಯಮಾನಗಳ ಕೊಡುಗೆಯನ್ನು ನಿರ್ಲಕ್ಷಿಸುವಂತಿಲ್ಲ.

ಭ್ರಷ್ಟಾಚಾರ ವಿರೋಧಿ ಆಂದೋಲನವು ಉತ್ತುಂಗದಲ್ಲಿ ಇದ್ದಾಗ ಅದರ ಫಲಶ್ರುತಿ ಎಂಬಂತೆ ಜನ್ಮ ತಳೆದ  ಪಕ್ಷವು 2013ರಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಗಮನಾರ್ಹ ಸಾಧನೆ ಮಾಡಿತ್ತು.  ಪಕ್ಷದ ಸಾಧನೆಯನ್ನು  ಸುವರ್ಣ ಅಕ್ಷರಗಳಲ್ಲಿ ಬರೆದು ಇಡುವಂತಹ ದಿನಗಳು ಅದಾಗಿದ್ದವು.

ಕಾಂಗ್ರೆಸ್‌ ವಿರುದ್ಧದ ಆಡಳಿತ ಪಕ್ಷ ವಿರೋಧಿ ಅಲೆಯ ಬೆನ್ನೇರಿ ಮತದಾರರ ಮನಕ್ಕೆ ಲಗ್ಗೆ ಹಾಕುವಲ್ಲಿ ಯಶಸ್ವಿಯಾಗಿತ್ತು. ಸ್ಥಳೀಯ ಬಿಜೆಪಿಯಲ್ಲಿನ ಒಳಜಗಳ ಮತ್ತು ಜನಪ್ರಿಯತೆ ಕೊರತೆಯ  ಪ್ರಯೋಜನವನ್ನು ಎಎಪಿ  ಸಮರ್ಥವಾಗಿ ಬಳಸಿಕೊಂಡು ಗರಿಷ್ಠ ಲಾಭ ಪಡೆದುಕೊಂಡಿತ್ತು. ಮತಗಳು  ಮೂರು ಪಕ್ಷಗಳಲ್ಲಿ ಹಂಚಿ ಹೋಗುವಂತೆ ಮಾಡುವಲ್ಲಿ ಪಕ್ಷವು ಸಫಲವಾಗಿತ್ತು. ಕಾಂಗ್ರೆಸ್‌ ಪಕ್ಷವನ್ನು ದೂಳಿಪಟ ಮಾಡುವ ರಾಜಕೀಯ ತಂತ್ರಗಾರಿಕೆಯಲ್ಲೂ  ಯಶಸ್ವಿಯಾಗಿತ್ತು. ಮತದಾರರು ಬಿಜೆಪಿಯನ್ನೂ ತಿರಸ್ಕರಿಸಿದ್ದರು.  ಪಕ್ಷವು ಇತರ ರಾಜಕೀಯ ಪಕ್ಷಗಳಿಗೆ   ಏಕೈಕ ಪರ್ಯಾಯ ಶಕ್ತಿಯಾಗಿ ಬೆಳೆಯುವುದು ತನಗೆ ಒದಗಿ ಬಂದ ‘ನೈಸರ್ಗಿಕ ಹಕ್ಕು’ ಎಂಬ ಭಾವನೆ ಪಕ್ಷದ ಕಾರ್ಯಕರ್ತರು ಮತ್ತು  ನಾಯಕರಲ್ಲಿ ಕಂಡು ಬಂದಿತ್ತು.
ದೆಹಲಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದ  ಎಎಪಿಯು ಎರಡನೇ ಅತಿದೊಡ್ಡ ರಾಜಕೀಯ ಶಕ್ತಿಯಾಗಿ ಹೊರ ಹೊಮ್ಮುವಲ್ಲಿ ಯಶಸ್ವಿಯಾಗಿತ್ತು.  ಕಾಂಗ್ರೆಸ್‌ನ ಬಾಹ್ಯ ಬೆಂಬಲದ ನೆರವಿನಿಂದ ಸರ್ಕಾರ ರಚಿಸಲು ಮುಂದಾಗಿದ್ದ ಎಎಪಿಯ ಈ  ಮೊದಲ ಹೊಂದಾಣಿಕೆಯು ಅದಕ್ಕೆ ರಾಜಕೀಯವಾಗಿ ದುಬಾರಿಯಾಗಿ ಪರಿಣಮಿಸಿತ್ತು.  ಆದರೆ, 49 ದಿನಗಳಲ್ಲಿಯೇ ಸರ್ಕಾರವೇ ರಾಜೀನಾಮೆ ನೀಡಿ ಅಧಿಕಾರದಿಂದ ನಿರ್ಗಮಿಸಿ ಅಚ್ಚರಿ ಮೂಡಿಸಿತ್ತು.

ಇಂತಹ ದಿಢೀರ್‌ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಅರವಿಂದ ಕೇಜ್ರಿವಾಲ್‌ ಅವರು ನೀಡಿದ ಕಾರಣಗಳಲ್ಲಿ ಹುರುಳೇ ಇಲ್ಲದಿರುವುದು ಆ ನಂತರ ಸ್ಪಷ್ಟಗೊಂಡಿತ್ತು. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ  ಭಾರಿ ಗೆಲುವು ಸಾಧಿಸಬೇಕು ಎನ್ನುವ ರಾಜಕೀಯ ಮಹತ್ವಾಕಾಂಕ್ಷೆ ಮುಚ್ಚಿಡಲು ಪಕ್ಷವು ಈ ಮುಖವಾಡ ಧರಿಸಿತ್ತು ಎನ್ನುವುದು  ಹೆಚ್ಚು ಸ್ಪಷ್ಟವಾಗಿತ್ತು.  

ದೇಶದಾದ್ಯಂತ ತನ್ನ ರೆಕ್ಕೆಗಳನ್ನು ಚಾಚಲು ತಪ್ಪು ಲೆಕ್ಕಾಚಾರ ಹಾಕಿದ ಎಎಪಿಯು, 400 ಲೋಕಸಭಾ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿತ್ತು. ಸ್ವತಃ ಅರವಿಂದ ಕೇಜ್ರಿವಾಲ್‌ ಅವರು ವಾರಾಣಸಿಯಲ್ಲಿ ನರೇಂದ್ರ ಮೋದಿ ಅವರ ವಿರುದ್ಧ ಸ್ಪರ್ಧಿಸಿ ಸೋತರು. ಪಕ್ಷವು ದೆಹಲಿಯಲ್ಲಿ ತನ್ನ ಖಾತೆಯನ್ನೇ ತೆರೆಯಲಿಲ್ಲ.  ಪಂಜಾಬ್‌ನಲ್ಲಿ ಮಾತ್ರ ನಾಲ್ಕು ಸ್ಥಾನಗಳನ್ನು ಗೆದ್ದು ಸಮಾಧಾನಪಟ್ಟಿತು. ಅಲ್ಲಿಂದಾಚೆಗೆ ‘ಭಿನ್ನ ರಾಜಕೀಯ ಪಕ್ಷ’ ಎನ್ನುವ ಹೆಗ್ಗಳಿಕೆ ಮಸುಕಾಗತೊಡಗಿತು.

ಇದರಿಂದ ಆಘಾತಗೊಂಡ ಪಕ್ಷ ಚಿಪ್ಪಿನೊಳಗೆ ಸೇರಿಕೊಂಡಿತು. ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್‌ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿತು.  2015ರ ಫೆಬ್ರುವರಿಯಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಧೋರಣೆ ಸಂಪೂರ್ಣ ಬದಲಾಗಿತ್ತು.   ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಪಕ್ಷವು ಈ ಹಿಂದೆ ಅನುಸರಿಸುತ್ತಿದ್ದ ಶುದ್ಧ ಚಾರಿತ್ರ್ಯ ಕುರಿತ ಬದ್ಧತೆ ಮತ್ತು ಪಾರದರ್ಶಕತೆಗೆ ತಿಲಾಂಜಲಿ ನೀಡಿತ್ತು.
ಅಧಿಕಾರಕ್ಕೆ ಬರಲು ಇಂತಹ ಹೊಂದಾಣಿಕೆ ಅನಿವಾರ್ಯವಾಗಿತ್ತು ಎಂದು ಪಕ್ಷದ ಬೆಂಬಲಿಗರು ವಾದಿಸುತ್ತಾರೆ. ದೆಹಲಿ ಚುನಾವಣೆಯಲ್ಲಿ ನಿರಾಯಾಸವಾಗಿ ಗೆದ್ದು ಬರುವ ಬಗ್ಗೆ ಬಿಜೆಪಿ ಅತಿಯಾದ ಆತ್ಮವಿಶ್ವಾಸ ಹೊಂದಿತ್ತು.  ಲೋಕಸಭಾ ಚುನಾವಣೆಯಲ್ಲಿನ ಭರ್ಜರಿ ಗೆಲುವು ಇಲ್ಲಿಯೂ ಪುನರಾವರ್ತನೆಯಾಗಲಿದೆ ಎಂದೇ ಪಕ್ಷ ಎಣಿಕೆ ಹಾಕಿತ್ತು. ಲೋಕಸಭಾ ಚುನಾವಣೆಯಲ್ಲಿನ ಪಕ್ಷದ ಗೆಲುವು ಬಿಜೆಪಿಯ ಆತ್ಮವಿಶ್ವಾಸ ಹೆಚ್ಚಿಸಿತ್ತು.
ನರೇಂದ್ರ ಮೋದಿ ಅವರು ಪ್ರಧಾನಿ ಆಗಬೇಕೆಂಬ ಕಾರಣದಿಂದಲೇ ದೆಹಲಿ ಮತದಾರರೂ ಪಕ್ಷವನ್ನು ಬೆಂಬಲಿಸಿದ್ದಾರೆ ಎನ್ನುವುದು ಬಿಜೆಪಿಯ ಲೆಕ್ಕಾಚಾರವಾಗಿತ್ತು.  ಆದರೆ, ದೆಹಲಿ  ಮತದಾರರು ಕೇಜ್ರಿವಾಲ್ ಅವರೇ ತಮ್ಮ ಮುಖ್ಯಮಂತ್ರಿ ಆಗಬೇಕೆಂದು ಬಯಸಿದ್ದಾರೆ ಎನ್ನುವ ಕಟು ವಾಸ್ತವವನ್ನು ಅರ್ಥೈಸಿಕೊಳ್ಳುವಲ್ಲಿ ಬಿಜೆಪಿ ಮುಖಂಡರು ವಿಫಲರಾಗಿದ್ದರು. 70 ಸದಸ್ಯ ಬಲದ ವಿಧಾನಸಭೆಯಲ್ಲಿ ಎಎಪಿಯು 67 ಸೀಟುಗಳನ್ನು ಗೆದ್ದು ಬೀಗಿತ್ತು.  ಇಂತಹ ಐತಿಹಾಸಿಕ ಭರ್ಜರಿ ಗೆಲುವೇ  ಪಕ್ಷದ ಅಧಃಪತನದ ಆರಂಭವೂ ಆಗಿತ್ತು.

ದೆಹಲಿಯಲ್ಲಿನ ಈ ಭಾರಿ ಗೆಲುವಿನ ಬೆನ್ನಲ್ಲೇ ಪಕ್ಷದ ಒಳಗಿನ ಅನಪೇಕ್ಷಿತ ವ್ಯಕ್ತಿಗಳನ್ನು ಹೊರ ಹಾಕುವ ಪ್ರಕ್ರಿಯೆಗೆ ಚಾಲನೆ ದೊರೆತಿತ್ತು.  ಕೇಜ್ರಿವಾಲ್‌ ಅವರು ಎಲ್ಲ ಭಿನ್ನಮತೀಯರನ್ನೂ ಪಕ್ಷದಿಂದ ಉಚ್ಚಾಟಿಸಿ  ಪಕ್ಷದ ಮೇಲೆ ಬಿಗಿ ಹಿಡಿತ ಸಾಧಿಸಿದ್ದರು.
ಪಕ್ಷ ಅನುಸರಿಸುತ್ತಿದ್ದ ಆಂತರಿಕ ಪ್ರಜಾಪ್ರಭುತ್ವ, ಪಾರದರ್ಶಕ ಪ್ರಕ್ರಿಯೆ ಮತ್ತು ಪ್ರಾಮಾಣಿಕತೆಗೆ ಮತದಾರರಿಂದ ಅಸಾಮಾನ್ಯ ರೀತಿಯಲ್ಲಿ ಬೆಂಬಲ ಪಡೆದಿದ್ದ  ಪಕ್ಷದ ತಾತ್ವಿಕ ಚಿಂತನೆಗೆ ಇದರಿಂದ ತೀವ್ರ ಧಕ್ಕೆ ತಟ್ಟಿತ್ತು.

ದೆಹಲಿಯಲ್ಲಿ ಪಕ್ಷವು ಅಧಿಕಾರಕ್ಕೆ ಬರುತ್ತಿದ್ದಂತೆ, ಅರವಿಂದ ಕೇಜ್ರಿವಾಲ್‌ ಧೋರಣೆಯೂ ಬದಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ನಾಯಕತ್ವಕ್ಕೆ ಸವಾಲು ಒಡ್ಡಲು ತಮ್ಮಿಂದ ಮಾತ್ರ ಸಾಧ್ಯ ಎಂದು ಅವರಷ್ಟಕ್ಕೆ ಅವರು ನಿರ್ಧಾರಕ್ಕೆ ಬಂದಿದ್ದರು. ದೆಹಲಿ ಆಡಳಿತದ ಸಮರ್ಥ ನಿರ್ವಹಣೆ, ಭ್ರಷ್ಟಾಚಾರಮುಕ್ತ ಮತ್ತು ದಕ್ಷ ಆಡಳಿತ ನೀಡಲು ತಮ್ಮೆಲ್ಲ ಗಮನ ಕೇಂದ್ರೀಕರಿಸುವುದರ ಬದಲಿಗೆ,  ಪ್ರಧಾನಿ ಮೋದಿ ಅವರನ್ನು ಟೀಕಿಸಲು, ಎದುರು ಹಾಕಿಕೊಳ್ಳಲು ಅವರು ಹೆಚ್ಚು ಉತ್ಸಾಹ ತೋರಿಸಿದರು.

2015ರಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ಮಾಡಿಕೊಂಡ ರಾಜಿ ಮತ್ತು ಚುನಾವಣಾ ಪ್ರಚಾರ ಸ್ವರೂಪವು ಅಲ್ಪಾವಧಿಯಲ್ಲಿಯೇ ಪಕ್ಷವನ್ನು ಮುಜುಗರಕ್ಕೆ ಗುರಿ ಮಾಡತೊಡಗಿದವು.
ಅದುವರೆಗೂ ಕಪಾಟಿನಲ್ಲಿದ್ದ ರಾಜಕೀಯ ಅಸ್ಥಿಪಂಜರಗಳು ಒಂದೊಂದಾಗಿ ಹೊರ ಬರತೊಡಗಿದವು.   ಬಿಜೆಪಿ ಮತ್ತು ಕೇಂದ್ರ ಸರ್ಕಾರದ ರಾಜಕೀಯ ಕಾರ್ಯತಂತ್ರದ ಭಾಗವಾಗಿ   ಕೆಲ ಶಾಸಕರ ಬಗೆಗಿನ ವಿವಾದಗಳು ಬಹಿರಂಗಗೊಂಡವು.  ಇವೆಲ್ಲವೂ ಪಕ್ಷದ ಮತ್ತು ಮುಖಂಡರ ವರ್ಚಸ್ಸಿಗೆ ಗಮನಾರ್ಹ ಪ್ರಮಾಣದಲ್ಲಿ ಧಕ್ಕೆ ಉಂಟು ಮಾಡಿದವು.

ಇಷ್ಟಾದರೂ ಪಕ್ಷವು ಎಚ್ಚೆತ್ತುಕೊಳ್ಳಲಿಲ್ಲ.  ದೆಹಲಿಯ ಆಡಳಿತ ನಿರ್ವಹಣೆ ಬಗ್ಗೆ ಗಮನ ಕೇಂದ್ರೀಕರಿಸುವಲ್ಲಿ ವಿಫಲಗೊಂಡಿತು. ತನ್ನ ಕಾರ್ಯ ವಿಧಾನವು ಇತರ ಪಕ್ಷಗಳಿಗಿಂತ ಭಿನ್ನವಾಗಿದೆ ಎನ್ನುವುದನ್ನು  ರುಜುವಾತುಪಡಿಸುವ  ಅವಕಾಶಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತು.
ದೆಹಲಿ ಮತದಾರರ ಮನ ಗೆಲ್ಲುವ ಬದಲಿಗೆ, ಪಂಜಾಬ್‌ನಲ್ಲಿ ತನ್ನ ಅದೃಷ್ಟ ಪರೀಕ್ಷಿಸಲು ಮುಂದಾಯಿತು.  ಅಲ್ಲಿನ ಎಸ್‌ಎಡಿ ಮತ್ತು ಬಿಜೆಪಿ ಮೈತ್ರಿಕೂಟ ಸರ್ಕಾರವು ಜನಪ್ರಿಯತೆ ಕಳೆದುಕೊಂಡಿರುವುದು ಮತ್ತು 2014ರ ಲೋಕಸಭಾ ಚುನಾವಣೆಯ ಸೋಲಿನಿಂದ ಇನ್ನೂ ಚೇತರಿಸಿಕೊಳ್ಳದ ಕಾಂಗ್ರೆಸ್‌ನಿಂದಾಗಿ ತನ್ನ ಗೆಲುವಿನ ಸಾಧ್ಯತೆ ಹೆಚ್ಚಿಗೆ ಇದೆ ಎಂದೇ ಎಎಪಿ ಲೆಕ್ಕ ಹಾಕಿತ್ತು.

ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದ ಪಕ್ಷವು ರಾಜ್ಯದಲ್ಲಿ ತನ್ನ ನೆಲೆ ವಿಸ್ತರಣೆಯಾಗುವ ಬಗ್ಗೆ  ಅತೀವ ಆತ್ಮವಿಶ್ವಾಸ  ಹೊಂದಿತ್ತು. ತೀವ್ರ ತುರುಸಿನಿಂದ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರ ನಿರೀಕ್ಷೆಗೆ ವ್ಯತಿರಿಕ್ತವಾಗಿ ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಸಫಲವಾಗಿತ್ತು.  ಎಎಪಿಯು ಅತಿದೊಡ್ಡ ವಿರೋಧ ಪಕ್ಷವಾಗಿ ಹೊರ ಹೊಮ್ಮಿತ್ತು.

ಮತದಾನದ ರಾಜಕೀಯವು ಚುನಾವಣೆಯಲ್ಲಿ ಗೆದ್ದವರಿಗೆ ಹಲವಾರು ಅನುಕೂಲಗಳನ್ನು ಕಲ್ಪಿಸಿಕೊಡುತ್ತದೆ.  ಎರಡನೇ ಸ್ಥಾನದಂತಹ ಸಮಾಧಾನಕರ ಬಹುಮಾನಕ್ಕೆ ತೃಪ್ತಿಪಟ್ಟುಕೊಳ್ಳುವವರಿಗೆ ಯಾವುದೇ ರಿಯಾಯಿತಿಯನ್ನು ನೀಡುವುದಿಲ್ಲ. ಗೋವಾದಲ್ಲಿನ ಸ್ಪರ್ಧೆ ಕೂಡ  ಎಎಪಿಗೆ ಯಾವುದೇ ಯಶಸ್ಸು ತಂದುಕೊಡಲಿಲ್ಲ.  ತಾನು ಇತರ ರಾಜಕೀಯ ಪಕ್ಷಗಳಿಗಿಂತ ಭಿನ್ನವಾಗಿರುವುದಾಗಿ ಹೇಳಿಕೊಳ್ಳುತ್ತಲೇ ಬಂದಿರುವ ಪಕ್ಷವು ಈಗ ರಾಜಕೀಯ ಕವಲು ಹಾದಿಯಲ್ಲಿ ಇರುವುದು ಸ್ಪಷ್ಟವಾಗುತ್ತದೆ.

‘ಭಿನ್ನ ರಾಜಕೀಯ ಪಕ್ಷ’ ಎಂದೇ ಎಎಪಿ ಮೊದಲಿನಿಂದಲೂ ಪ್ರತಿಪಾದಿಸುತ್ತ, ತನ್ನನ್ನು ಬಣ್ಣಿಸಿಕೊಳ್ಳುತ್ತ ಬಂದಿದೆ. 2015ರಲ್ಲಿ ದೆಹಲಿಯಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಕಂಡ ಅಭೂತಪೂರ್ವ ಗೆಲುವು ಅದರ ಈ ನಿಲುವಿಗೆ ದೊರೆತ ಸಮರ್ಥನೆಯಾಗಿತ್ತು.
ಆದರೆ, ನಂತರದ ದಿನಗಳಲ್ಲಿ  ಪಕ್ಷ ಕ್ರಮಿಸುತ್ತಿರುವ ಹಾದಿಯ ಉದ್ದಕ್ಕೂ  ತಪ್ಪು ರಾಜಕೀಯ ಲೆಕ್ಕಾಚಾರಗಳೇ ತುಂಬಿಕೊಂಡಿವೆ. ರಾಜಕೀಯ ದುಸ್ಸಾಹಸಗಳೆಲ್ಲವೂ ಎಎಪಿ ಕೂಡ ಹತ್ತರ ಜೊತೆ ಹನ್ನೊಂದನೆಯ ರಾಜಕೀಯ ಪಕ್ಷ ಎನ್ನುವ ಮಟ್ಟಕ್ಕೆ ಅದರ ವರ್ಚಸ್ಸನ್ನು ತಗ್ಗಿಸಿವೆ. ಮುಖ್ಯವಾಹಿನಿಯಲ್ಲಿನ ಇತರ ರಾಜಕೀಯ ಪಕ್ಷಗಳಿಗಿಂತ ತಾನು ಭಿನ್ನ ಎನ್ನುವ ಅದರ ವಿಶಿಷ್ಟ  ಮತ್ತು ಮೂಲ ಮಾರಾಟ ತಂತ್ರವು ಈಗ ಕುಂಟುತ್ತಿದೆ.
ಮುಖ್ಯವಾಹಿನಿಯ ರಾಜಕೀಯಕ್ಕೆ ತಾನು ಪರ್ಯಾಯ ಎಂದು ತನ್ನಷ್ಟಕ್ಕೆ ತಾನು ಬಣ್ಣಿಸಿಕೊಂಡಿದ್ದ ಎಎಪಿಯು ಈಗ  ಸದ್ಯದ ಮುಖ್ಯವಾಹಿನಿ  ರಾಜಕೀಯದಲ್ಲಿನ ಇನ್ನೊಂದು ಪಕ್ಷವಾಗಿದೆಯಷ್ಟೇ ಎಂದು ಖಚಿತವಾಗಿ ಹೇಳಬಹುದು.

Comments
ಈ ವಿಭಾಗದಿಂದ ಇನ್ನಷ್ಟು
ಈಶಾನ್ಯ ರಾಜ್ಯಗಳ ರಾಜಕೀಯ ಸಂದೇಶ

ಜನರಾಜಕಾರಣ
ಈಶಾನ್ಯ ರಾಜ್ಯಗಳ ರಾಜಕೀಯ ಸಂದೇಶ

6 Mar, 2018
ರಾಜ್ಯದಲ್ಲಿ ಮೂರನೇ ರಾಜಕೀಯ ಸ್ಥಿತ್ಯಂತರ?

ಜನರಾಜಕಾರಣ
ರಾಜ್ಯದಲ್ಲಿ ಮೂರನೇ ರಾಜಕೀಯ ಸ್ಥಿತ್ಯಂತರ?

20 Feb, 2018
ಈ ವರ್ಷದ ವಿಧಾನಸಭಾ ಚುನಾವಣೆಗಳಿಗೇಕೆ ಮಹತ್ವ?

ಜನರಾಜಕಾರಣ
ಈ ವರ್ಷದ ವಿಧಾನಸಭಾ ಚುನಾವಣೆಗಳಿಗೇಕೆ ಮಹತ್ವ?

6 Feb, 2018
ರಾಜಕೀಯ ವಲಸೆ ಪರ್ವಕ್ಕೆ ಸನ್ನದ್ಧ ಸ್ಥಿತಿ

ಜನರಾಜಕಾರಣ
ರಾಜಕೀಯ ವಲಸೆ ಪರ್ವಕ್ಕೆ ಸನ್ನದ್ಧ ಸ್ಥಿತಿ

23 Jan, 2018
ರಾಜ್ಯಸಭೆ ಆಯ್ಕೆ ಪ್ರಕ್ರಿಯೆ: ಸುಧಾರಣೆಗೆ ಪಕ್ವ ಕಾಲ

ಜನರಾಜಕಾರಣ
ರಾಜ್ಯಸಭೆ ಆಯ್ಕೆ ಪ್ರಕ್ರಿಯೆ: ಸುಧಾರಣೆಗೆ ಪಕ್ವ ಕಾಲ

9 Jan, 2018