ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಸಿಸಿ ಅಧ್ಯಕ್ಷರ ನೇಮಕ: ಶೀಘ್ರ ನಿರ್ಧರಿಸಿ

Last Updated 10 ಮೇ 2017, 19:36 IST
ಅಕ್ಷರ ಗಾತ್ರ

ಬೆಂಗಳೂರು: ‘ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಅಥವಾ ಮುಂದುವರಿಕೆ ಬಗ್ಗೆ ತಕ್ಷಣ ನಿರ್ಧಾರ ತೆಗೆದುಕೊಳ್ಳಿ’ ಎಂದು ಕಾಂಗ್ರೆಸ್‌ ಸಮನ್ವಯ ಸಮಿತಿ ಸಭೆಯಲ್ಲಿ ಹಲವು ಮುಖಂಡರು ಒತ್ತಾಯಿಸಿದ್ದಾರೆ.

‘ಅಧ್ಯಕ್ಷರ ಬದಲಾವಣೆ ಕುರಿತ ಊಹಾಪೋಹಗಳಿಂದ ಪಕ್ಷದ ಚಟುವಟಿಕೆ ಮೇಲೆ  ಪರಿಣಾಮ ಉಂಟಾಗಿದೆ. ಕಾರ್ಯಕರ್ತರಲ್ಲೂ  ಗೊಂದಲ ಮನೆ ಮಾಡಿದೆ’ ಎಂದು ಅವರು ಹೇಳಿದ್ದಾರೆ.
2018ರ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟು ಕಾಂಗ್ರೆಸ್ ಪಕ್ಷದ ಬಲವರ್ಧನೆ ಮತ್ತು ಪುನರ್‌ರಚನೆ  ಕುರಿತು ಸಮನ್ವಯ ಸಭೆಯಲ್ಲಿ ಮಾತನಾಡಿದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರು, ‘ಮುಂಬರುವ ಚುನಾವಣೆ ಗೆಲ್ಲುವುದಷ್ಟೆ ನಮ್ಮ ಮುಂದಿರುವ ಕಾರ್ಯಸೂಚಿ’ ಎಂದು ಸಭೆಯಲ್ಲಿ ಒತ್ತಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಪಕ್ಷದ ಅಧ್ಯಕ್ಷರಾಗಿ  ಜಿ. ಪರಮೇಶ್ವರ್‌ ಅವರನ್ನೇ ಮುಂದುವರಿಸುವುದು ಸೂಕ್ತ. ಈಗ ಬದಲಾವಣೆ ಮಾಡುವುದು ಬೇಡ’ ಎಂಬ ಅನಿಸಿಕೆಯನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಹಿರಿಯ ನಾಯಕ ವೀರಪ್ಪ ಮೊಯಿಲಿ,  ‘ಬದಲಾವಣೆ ಮಾಡುವುದಾರೆ ತಕ್ಷಣವೇ ಮಾಡಿ’ ಎಂದು ಸಲಹೆ ನೀಡಿದ್ದಾರೆ.
ಬೆಳಿಗ್ಗೆ ವೇಣುಗೋಪಾಲ್‌   ಅವರು ಪರಮೇಶ್ವರ್ ಮತ್ತು ಪಕ್ಷದ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆ ಪ್ರತ್ಯೇಕ ಮಾತುಕತೆ ನಡೆಸಿದರು.
‘ಅಧ್ಯಕ್ಷ ಸ್ಥಾನದಲ್ಲಿ ನನ್ನನ್ನೇ ಮುಂದುವರಿಸಬೇಕು’ ಎಂದು ಪರಮೇಶ್ವರ್ ಅಭಿಪ್ರಾಯ ಮಂಡಿಸಿದ್ದಾರೆ ಎಂದು ಗೊತ್ತಾಗಿದೆ. ಹೊಸಬರಿಗೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವುದು ಕಷ್ಟ ಆಗಬಹುದು. ಸರ್ಕಾರ, ಪಕ್ಷದ ನಡುವೆ ಸಮನ್ವಯ ಸಾಧಿಸುವಲ್ಲಿ ನಾನು ಯಶಸ್ವಿಯಾಗಿದ್ದೇನೆ’ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

‘ಕಳೆದ ಆರೂವರೆ ವರ್ಷಗಳಲ್ಲಿ ಅಧ್ಯಕ್ಷನಾಗಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಸಾಕಷ್ಟು ಜನರ ಅಭಿಪ್ರಾಯವೂ ನನ್ನ ಪರ ಇದೆ. ಹೀಗಾಗಿ ಅಧ್ಯಕ್ಷನಾಗಿ 2018 ಚುನಾವಣೆ ಎದುರಿಸಲು ಸಿದ್ಧ ’ ಎಂದಿದ್ದಾರೆ.
‘ಅಧ್ಯಕ್ಷ ಸ್ಥಾನ ಬದಲಿಸಿದರೆ ಚುನಾವಣೆಯಲ್ಲಿ ನಮಗೆ ಆಗುವ ಲಾಭಕಿಂತ ನಷ್ಟವೇ ಜಾಸ್ತಿ. ದಲಿತರನ್ನು ಮುಖ್ಯಮಂತ್ರಿ ಮಾಡಲಿಲ್ಲ ಅನ್ನೋ ಅಸಮಾಧಾನ ರಾಜ್ಯದಲ್ಲಿ ಇದೆ. ಅಧ್ಯಕ್ಷ ಸ್ಥಾನವೂ ಬೇರೆಯವರಿಗೆ ಕೊಟ್ಟರೆ ಸಮುದಾಯ ಬೇರೆ ಯೋಚನೆ ಮಾಡಬಹುದು. ಇದು ನನ್ನ ಅಭಿಪ್ರಾಯ ಅಷ್ಟೆ. ಅಂತಿಮವಾಗಿ ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ’ ಎಂದೂ ಪರಮೇಶ್ವರ್‌ ಹೇಳಿದ್ದಾರೆ ಎಂದು ಗೊತ್ತಾಗಿದೆ.

‘ಸರ್ಕಾರ ಹಲವು ಉತ್ತಮ ಯೋಜನೆಗಳನ್ನು ಜಾರಿ ಮಾಡಿದೆ. ಆದರೆ, ಪ್ರಚಾರ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ. ಈ ವರ್ಷ ಪ್ರಚಾರಕ್ಕೆ ಒತ್ತು ನೀಡಲು ಮುಖ್ಯಮಂತ್ರಿ ಕೂಡಾ ನಿರ್ಧರಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ನೇಮಕ ಸಂಬಂಧ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ’ ಎಂದರು.
ಕಾವೇರಿಯಲ್ಲಿ ಉಪಾಹಾರ: ಮುಖ್ಯಮಂತ್ರಿ ಅಧಿಕೃತ ನಿವಾಸ ಕಾವೇರಿಗೆ ಬುಧವಾರ ಬೆಳಿಗ್ಗೆ ಉಪಾಹಾರಕ್ಕೆ ಬಂದ ವೇಣುಗೋಪಾಲ್, ಸಿದ್ದರಾಮಯ್ಯ ಜೊತೆ ಕೆಲಹೊತ್ತು ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ನಿವಾಸಕ್ಕೆ ಶಾಸಕರು, ಪಕ್ಷದ ಮುಖಂಡರಿಗೆ
ಪ್ರವೇಶ ನಿರ್ಬಂಧಿಸಲಾಗಿತ್ತು. ಇದೇ ವೇಳೆ ಮುಖ್ಯಮಂತ್ರಿ ಭೇಟಿಗೆ ಬಂದಿದ್ದ ಶಾಸಕ ಪ್ರಸನ್ನಕುಮಾರ್‌ ಅವರನ್ನು ಪೊಲೀಸರು ತಡೆದಾಗ ವಾಗ್ವಾದ ಉಂಟಾಯಿತು.

ಮುನಿಯಪ್ಪ, ಪ್ರಮೋದ್ ಭೇಟಿ

ಬೆಳಿಗ್ಗೆ ಕುಮಾರಕೃಪಾ ಅತಿಥಿಗೃಹದಲ್ಲಿ ಸಚಿವ ಪ್ರಮೋದ್ ಮಧ್ವರಾಜ್, ಸಂಸದ ಕೆ.ಎಚ್. ಮುನಿಯಪ್ಪ ಸೇರಿದಂತೆ ಕೆಲವು ಮುಖಂಡರು  ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿದರು. ಬಳಿಕ ಮಾತನಾಡಿದ ಮುನಿಯಪ್ಪ, ‘ಕೆಪಿಸಿಸಿ ಅಧ್ಯಕ್ಷರ ನೇಮಕದ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಪಕ್ಷ ಸಂಘಟನೆಗೆ ಕೆಲವು ಸಲಹೆ ನೀಡಿದ್ದೇನೆ’ ಎಂದರು.

‘ಈ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಯಾರನ್ನೆ ಅಧ್ಯಕ್ಷರನ್ನಾಗಿ ಮಾಡಿದರೂ ಕೆಲಸ ಮಾಡಲು ಸಿದ್ಧ’ ಎಂದರು.
‘ಪಕ್ಷದಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸಿದ್ದೇನೆ. ಅಧ್ಯಕ್ಷ ಸ್ಥಾನ ನೀಡಿದರೆ  ನಿಭಾಯಿಸುತ್ತೇನೆ. ಖರ್ಗೆ ದೆಹಲಿ ಮಟ್ಟದಲ್ಲಿ ಉನ್ನತ ಸ್ಥಾನದಲ್ಲಿ ಇದ್ದಾರೆ. ಅವರು ರಾಜ್ಯಕ್ಕೆ ಬಂದರೆ ಸ್ವಾಗತ’ ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಗೊಂದಲಗಳನ್ನು ಈ ತಿಂಗಳ ಅಂತ್ಯದೊಳಗೆ ಬಗೆಹರಿಸಲಾಗುವುದು. ಆ ಮೂಲಕ ಎಲ್ಲ ಊಹಾಪೋಹಗಳಿಗೆ ಉತ್ತರ ಸಿಗಲಿದೆ
ಕೆ.ಸಿ. ವೇಣುಗೋಪಾಲ್‌
ರಾಜ್ಯ ಕಾಂಗ್ರೆಸ್‌ ಉಸ್ತುವಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT