ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌದ್ಧ ಧರ್ಮ ಸ್ವೀಕಾರದಿಂದ ದಲಿತರ ಉದ್ಧಾರ

ಬುದ್ಧ ಪೂರ್ಣಿಮಾ ಸಮಾರಂಭದಲ್ಲಿ ಸಂಸದ ಧ್ರುವನಾರಾಯಣ ಅಭಿಪ್ರಾಯ
Last Updated 11 ಮೇ 2017, 7:36 IST
ಅಕ್ಷರ ಗಾತ್ರ
ಕೊಳ್ಳೇಗಾಲ: ‘ ಮೂಢನಂಬಿಕೆ, ಕಂದಾಚಾರಗಳ ಕಪಿಮುಷ್ಠಿಯಿಂದ ದಲಿತರು ಹೊರಬರಲು ಬೌದ್ಧ ಧರ್ಮ ಸ್ವೀಕಾರದಿಂದ ಮಾತ್ರ ಸಾಧ್ಯ’ ಎಂದು ಸಂಸದ ಆರ್‌.ಧ್ರುವನಾರಾಯಣ ಅಭಿಪ್ರಾಯ ವ್ಯಕ್ತಪಡಿಸಿದರು.
 
ಸರ್ಕಾರಿ ನ್ಯಾಷನಲ್‌ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಬುಧವಾರ ಜೇತವನ ಬುದ್ಧ ವಿಹಾರ, ಭಾರತೀಯ ಬೌದ್ಧ ಮಹಾಸಭಾ ತಾಲ್ಲೂಕು ಘಟಕ, ಗಡಿ, ಕಟ್ಟೆ, ಕಸಬಾ ಯಜಮಾನರುಗಳ ಆಶ್ರಯದಲ್ಲಿ ಆಯೋಜಿಸಿದ್ದ 2561ನೇ ಬುದ್ಧ ಪೂರ್ಣಿಮಾ ಸಮಾರಂಭದಲ್ಲಿ ಮಾತನಾಡಿದರು.
 
‘ಜಿಲ್ಲೆಯಲ್ಲಿ ಅತಿಹೆಚ್ಚಿನ ಮೌಢ್ಯ, ಕಂದಾಚಾರ, ಮೂಢನಂಬಿಕೆ ಇದೆ. ಇಲ್ಲಿ ಬೌದ್ಧ ಧರ್ಮದೆಡೆಗೆ ಜನತೆಯನ್ನು ಸೆಳೆಯುವ ಮೂಲಕ ದುಂದುವೆಚ್ಚ ತಡೆದು ಸರಳ ವಿವಾಹ ಮತ್ತು ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸುವಂತೆ ಮಾಡಬೇಕಿದೆ’ ಎಂದರು.
 
‘ಮಾನವರ ಏಳಿಗೆ ಮತ್ತು ಸಹೋದರತ್ವದಿಂದ ಬಾಳುವ ವಾತಾವರಣ ಧರ್ಮದಲ್ಲಿರಬೇಕು. ಬೌದ್ಧ ಧರ್ಮ ವೈಜ್ಞಾನಿಕ ಧರ್ಮವಾಗಿದ್ದು, ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ಅವರನ್ನು ದಲಿತರು ದೇವರೆಂದು ಭಾವಿಸಿದ್ದಾರೆ. ಅವರು ಸ್ವೀಕರಿಸಿದ ಧರ್ಮವನ್ನು ಸ್ವೀಕರಿಸಲು ನಾವು ಹಿಂದಿದ್ದೇವೆ.
 
ಬೌದ್ಧ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಚಾಮರಾಜನಗರ ಮೆಡಿಕಲ್‌ ಕಾಲೇಜು ಬಳಿ 25 ಎಕರೆ ಜಮೀನನ್ನು ಬುದ್ಧ ವಿಹಾರ ನಿರ್ಮಾಣದ ಸಲುವಾಗಿ ಮುಖ್ಯಮಂತ್ರಿಗಳು ಮಂಜೂರು ಮಾಡಿ ಈ ಜಮೀನಿಗೆ ಪಾವತಿಸಬೇಕಾದ ₹ 14 ಲಕ್ಷ  ಸಹ ಪಾವತಿಮಾಡಲಾಗಿದೆ. ಇಲ್ಲಿ ಮುಂದಿನ ದಿನಗಳಲ್ಲಿ ಬೌದ್ಧ ವಿಹಾರ ನಿರ್ಮಿಸಲಾಗುವುದು’ ಎಂದು ತಿಳಿಸಿದರು.
 
ಸಾನ್ನಿಧ್ಯ ವಹಿಸಿದ್ದ ಜೇತವನ ಬುದ್ಧ ವಿಹಾರದ ಮನೋರಖ್ಖಿತ ಬಂತೇಜಿ, ‘ಸಂಬಂಧಗಳು ದೂರಾಗುತ್ತಿರುವ ಇಂದಿನ ದಿನಗಳಲ್ಲಿ ಸಂಬಂಧ ಉಳಿಸಿ ಬೆಳೆಸಲು ಧಮ್ಮ ಬೇಕು. ಸ್ವಾತಂತ್ರ್ಯ ಸಮಾನತೆ, ಮಾನವಕೋಟಿ ವಿಮೋಚನೆಗಾಗಿ ಪರಿಶುದ್ಧ ಮಾರ್ಗ ಬೌದ್ಧ ಧರ್ಮವನ್ನು ಅನುಸರಿಸಲು ಎಲ್ಲರೂ ಮುಂದಾಗಬೇಕು’ ಎಂದರು.
 
ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಎನ್‌. ಮಹೇಶ್‌, ‘ಬೌದ್ಧ ಧರ್ಮವೇ ಎಲ್ಲಾ ಧರ್ಮಗಳ ಪ್ರೇರಣೆ, ಬೌದ್ಧ ಧರ್ಮದ ತತ್ವಗಳನ್ನು ಜೀವನದಲ್ಲಿ ಹಂತ ಹಂತವಾಗಿ ಅಳವಡಿಸಿಕೊಳ್ಳುವ ಮೂಲಕ ಎಲ್ಲರೂ ಬೌದ್ಧ ಧರ್ಮ ಸ್ವೀಕರಿಸಬೇಕು’ ಎಂದು ತಿಳಿಸಿದರು.
 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್‌. ಜಯಣ್ಣ ,‘ಬೌದ್ಧ ಧರ್ಮದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಕಾರ್ಯಕ್ರಮಗಳಿಗೆ ಹೆಚ್ಚು ಮಹತ್ವ ನೀಡಬೇಕು’ ಎಂದು ಸಲಹೆ ನೀಡಿದರು. ಮಾಜಿ ಶಾಸಕರಾದ ಎ.ಆರ್‌. ಕೃಷ್ಣಮೂರ್ತಿ, ಎಸ್‌. ಬಾಲರಾಜ್‌, ಮುಳ್ಳೂರು ಶಿವಮಲ್ಲು  ಮಾತನಾಡಿದರು.
 
ಸನ್ಮಾನ:  ಗ್ರಾಮದ ಚಾವಡಿಯನ್ನು ಬೌದ್ಧ ವಿಹಾರವನ್ನಾಗಿ ಪರಿವರ್ತಿಸಿದ ಕಣ್ಣೂರು ಗ್ರಾಮದ ಯಜಮಾನರು ಹಾಗೂ ಯುವಕ ಸಂಘದ ಪದಾಧಿಕಾರಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
 
ಮನವಿ:  ಗಡಿ, ಕಟ್ಟೆ, ಕಸಬಾ ಯಜಮಾನರುಗಳ ಪರವಾಗಿ ಪರಿಶಿಷ್ಟ ಜಾತಿ ಕಸಬಾ ಮನೆ ದೊಡ್ಡ ಯಜಮಾನ ಚಿಕ್ಕಮಾಳಿಗೆ ನಗರದಲ್ಲಿ ಬೌದ್ಧ ವಿಹಾರಕ್ಕೆ ನಿವೇಶನ ಒದಗಿಸಬೇಕು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬೌದ್ಧ ಧರ್ಮ ಅಧ್ಯಯನ ಕೇಂದ್ರ, ಪಾಲಿ ಭಾಷೆ ಸಂಶೋಧನಾ ಕೇಂದ್ರ ತೆರೆಯಬೇಕು. ವಿಜಯ ದಶಮಿಯಂದು ದೀಕ್ಷಾ ಭೂಮಿಗೆ ತೆರಳಲು ವಿಶೇಷ ರೈಲು ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಸಲ್ಲಿಸಿದರು.
 
ಟಿಬೆಟನ್‌ ಧರ್ಮಗುರುಗಳು, ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಯಂತಿ, ನಾಗರಾಜು, ಯೋಗೇಶ್‌, ಮಾಜಿ ಸದಸ್ಯ ಕೊಪ್ಪಾಳಿ ಮಹದೇವ, ಗಡಿ ಯಜಮಾನರಾದ ಸೋಮಣ್ಣ, ಕಟ್ಟೆ ಯಜಮಾನರಾದ ಮಲ್ಲಯ್ಯ, ಕಸಬಾ ದೊಡ್ಡ ಯಜಮಾನ ಚಿಕ್ಕಮಾಳಿಗೆ, ಯಜಮಾನ ಕೆ.ಜೆ. ಜವರಪ್ಪ, ತಾ.ಪಂ. ಅಧ್ಯಕ್ಷ ರಾಜು, ನಗರಸಭೆ ಅಧ್ಯಕ್ಷ ಶಾಂತರಾಜು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ತೋಟೇಶ್‌, ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ನಾಗರಾಜು, ಮಲ್ಲಯ್ಯ, ಭಾರತೀಯ ಬೌದ್ಧ ಮಹಾಸಭಾ ತಾಲ್ಲೂಕು ಘಟಕದ  ಅಧ್ಯಕ್ಷ ರಾಚಪ್ಪಾಜಿ, ಸಿದ್ದರಾಜು, ಅಣಗಳ್ಳಿ ಬಸವರಾಜು, ಮಹದೇವಶಂಕನಪುರ, ಮಹದೇವಕುಮಾರ್‌ ಇತರರು ಹಾಜರಿದ್ದರು.
 
ಜಾಥಾ: ಕಾರ್ಯಕ್ರಮಕ್ಕೂ ಮೊದಲು ನಗರದ ಸರ್ಕಾರಿ  ಕಾಲೇಜು ಮೈದಾನದಲ್ಲಿ ಧಮ್ಮ ಜಾಥಾಕ್ಕೆ ನಗರಸಭೆ ಅಧ್ಯಕ್ಷ ಶಾಂತರಾಜು ಬಸ್ತೀಪುರ ಚಾಲನೆ ನೀಡಿದರು. ಜಾಥಾ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಕಾಲೇಜು ಮೈದಾನ ಸೇರಿತು.
 
ಅಂಬೇಡ್ಕರ್ ಅಭಿಮಾನಿಗಳು, ಬೌದ್ಧ ಭಿಕ್ಕುಗಳು ದಲಿತರು, ತಾಲ್ಲೂಕಿನ ದೊಡ್ಡಿಂದುವಾಡಿ, ಕಣ್ಣೂರು, ಮಂಗಲ, ಸಿಂಗಾನಲ್ಲೂರು, ದೊಡ್ಡಿಂದುವಾಡಿ, ಕೊಳ್ಳೇಗಾಲ ಪಟ್ಟಣ, ಸತ್ತೇಗಾಲ ಸೇರಿದಂತೆ ವಿವಿಧ ಗ್ರಾಮಗಳಿಂದ ಬಂದಿದ್ದ ನೂರಾರು ಉಪಾಸಕರು ಬಿಳಿವಸ್ತ್ರ ಧರಿಸಿ ಪಾಲ್ಗೊಂಡಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT