ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಳೆವ ಹಳದಿ ದಿರಿಸು

Last Updated 11 ಮೇ 2017, 19:30 IST
ಅಕ್ಷರ ಗಾತ್ರ

ಈ ಬಾರಿಯ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಳದಿ ಉಡುಪು ತೊಟ್ಟಿದ್ದ ನಟಿ ಅಲಿಸಿಯಾ ವಿಕಂಡೆರ್ ಮೇಲೆಯೇ ಎಲ್ಲರ ಕಣ್ಣುಗಳು ನೆಟ್ಟಿದ್ದವು.
ತೆಳು ಮೈಕಟ್ಟಿನ ಈ ಸುಂದರಿ ತೊಟ್ಟಿದ್ದ ಹಳದಿ ಉಡುಪಿನ ಮೇಲೆ ಬೆಳ್ಳಿ ರೇಖೆಯ ಚಿತ್ತಾರ ಹರಡಿಕೊಂಡಿತ್ತು. ಸೊಂಟದ ಮೇಲೆ ಕೈಇಟ್ಟು ಅತ್ತಿತ್ತ ತಿರುಗಿ ಅಲಿಸಿಯಾ ಕೊಡುತ್ತಿದ್ದ ಪೋಸುಗಳಿಗೆ ಛಾಯಾಗ್ರಾಹಕರು ಮುಗಿಬಿದ್ದು ಫೋಟೊ ತೆಗೆಯುತ್ತಿದ್ದರು. 

ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ರಂಗು ಹೆಚ್ಚಿಸಿದ್ದ ಅಲಿಸಿಯಾಳ ಹಳದಿ ಉಡುಪು ಫ್ಯಾಷನ್ ಲೋಕದಲ್ಲಿ ಭಾರಿ ಚರ್ಚೆಗೂ ಗ್ರಾಸವಾಯಿತು.
ಹೆಚ್ಚಾಗಿ ಕಪ್ಪು ಇಲ್ಲವೇ ಕೆಂಪು ಉಡುಪುಗಳನ್ನೇ ಧರಿಸುತ್ತಿದ್ದ  ಹಾಲಿವುಡ್ ನಟಿಯರ ಪರಂಪರೆಯನ್ನು ಅಲಿಸಿಯಾ ಹಳದಿ ಉಡುಪು ಧರಿಸುವ ಮೂಲಕ ಮುರಿದಿದ್ದರು. ಅಂದು ಅಲಿಸಿಯಾ ಧರಿಸಿದ್ದ ಉಡುಪಿನ ಬಣ್ಣವೀಗ ಫ್ಯಾಷನ್ ಲೋಕದಲ್ಲಿ ಲೇಟೆಸ್ಟ್‌ ಟ್ರೆಂಡ್‌.

ಹೌದು. ಒಂದು ಕಾಲದಲ್ಲಿ ಗಾಢ ಹಳದಿ ಬಣ್ಣದ ಬಟ್ಟೆಗಳನ್ನು ಜನಸಾಮಾನ್ಯರಿರಲಿ, ರೂಪದರ್ಶಿಯರೂ ಧರಿಸಲು ಹಿಂದೆ ಮುಂದೆ ನೋಡುತ್ತಿದ್ದರು. ಆದರೆ, ಬದಲಾದ ಫ್ಯಾಷನ್‌ ಪರಿಭಾಷೆಯಲ್ಲಿ ಹಳದಿ ಬಣ್ಣ ಹಲವು ರೀತಿಯಲ್ಲಿ ತನ್ನ  ಅಸ್ತಿತ್ವ ಕಂಡುಕೊಳ್ಳತೊಡಗಿದೆ.

ನಿಂಬೆ ಹಳದಿ, ಅರಿಶಿನ ಹಳದಿ, ರೇಡಿಯಂ ಹಳದಿ, ಮೆಂತ್ಯೆ ಹಳದಿ,  ಮೊಟ್ಟೆಯೊಳಗಿನ ಹಳದಿ... ಹೀಗೆ ವೈವಿಧ್ಯಮಯವಾಗಿ ಹಳದಿ ಲೋಕ ಹರಡಿಕೊಂಡಿದೆ.

ಹಳದಿ ಬಣ್ಣ ಈಗ ಫ್ಯಾಷನ್ ಲೋಕದ ಹೊಸ ಬಣ್ಣವಾಗಿ ಮಾರ್ಪಟ್ಟಿದೆ ಎನ್ನುತ್ತಾರೆ ಫ್ಯಾಷನ್ ಲೋಕದ ತಜ್ಞರು. ಧೈರ್ಯ, ಜ್ಞಾನ ಮತ್ತು ಶಾಂತಿಯ ಪ್ರತೀಕವಾಗಿ ಹಳದಿ ಬಣ್ಣದ ಉಡುಪುಗಳು ಪ್ರಚಲಿತವಾಗಿವೆ. ಹಾಲಿವುಡ್ ಮಾತ್ರವಲ್ಲ ಬಾಲಿವುಡ್‌, ಟಾಲಿವುಡ್‌ನಲ್ಲೂ ನಾಯಕಿಯರು ಹಳದಿ  ಉಡುಪುಗಳಲ್ಲಿ ಮಿಂಚುತ್ತಿದ್ದಾರೆ.

ದಶಕಗಳ ಹಿಂದೆ ಅಕ್ಷಯ್ ಕುಮಾರ್ ಜತೆ ಚಿತ್ರವೊಂದರಲ್ಲಿ ‘ಟಿಪ್‌ ಟಿಪ್ ಬರ್ಸಾ ಪಾನಿ’ ಹಾಡಿನಲ್ಲಿ ಮಸ್ತ್‌ ಬೆಡಗಿ ರವೀನಾ ಟಂಡನ್ ಹಳದಿ ಸೀರೆಯಲ್ಲೇ ರಸಿಕರೆದೆಗೆ ಕಿಚ್ಚು ಹಚ್ಚಿದ್ದರು. ಅದುವರೆಗೆ ಮಳೆಯಲ್ಲಿ  ನಾಯಕಿಯರು ನೆನೆಯುವ ದೃಶ್ಯಗಳಲ್ಲಿ ಬಿಳಿಸೀರೆಯನ್ನೇ ಮಾದರಿಯನ್ನಾಗಿ ಬಳಸಿಕೊಂಡಿದ್ದ ಬಾಲಿವುಡ್‌, ಈ ಹಾಡಿನಲ್ಲಿ ಹಳದಿ ಸೀರೆಯ ಮೂಲಕ ಹೊಸ ಟ್ರೆಂಡ್‌ಗೆ ನಾಂದಿ ಹಾಡಿತ್ತು.

ಸೀರೆಯಷ್ಟೇ ಅಲ್ಲ, ಘಾಗ್ರಾ ಚೋಲಿ, ಲೆಹೆಂಗಾ, ಶಾರ್ಟ್ ಟಾಪ್ಸ್, ಟೀಶರ್ಟ್‌ಗಳಲ್ಲೂ ಹಳದಿ ಬಣ್ಣ ಈಗೀಗ ಢಾಳಾಗಿ ಬಳಕೆಯಾಗತೊಡಗಿದೆ. ಎದ್ದು ಹೊಡೆಯುವ ಬಣ್ಣವನ್ನು ಯಾರು ಧರಿಸುತ್ತಾರೆ ಎಂದು ಮೂಗು ಮುರಿಯುತ್ತಿದ್ದ ನಟೀಮಣಿಯರೇ ಎಲ್ಲರ ನಡುವೆ ಎದ್ದು ಕಾಣಲು ಹಳದಿ ಬಣ್ಣದ ಉಡುಪುಗಳ ವಿನ್ಯಾಸಕ್ಕೆ ಮೊರೆ ಹೋಗುತ್ತಿದ್ದಾರೆ.

ಜೋಧಾ ಅಕ್ಬರ್‌ನಲ್ಲಿ ಐಶ್ವರ್ಯಾ ರೈ ಧರಿಸಿದ್ದ ಪಾರದರ್ಶಕ ಹಳದಿ ಸೀರೆ ಆಕೆಗೆ ರಾಯಲ್ ಲುಕ್ ನೀಡಿತ್ತು. ಅಂತೆಯೇ ತೆಲುಗು ನಟಿ ಅನುಷ್ಕಾ ಶೆಟ್ಟಿ ಸಿನಿಮಾವೊಂದರಲ್ಲಿ  ಹಳದಿ ಡೀಪ್ ನೆಕ್‌ ಬ್ಲೌಸ್‌ನ ಲಂಗ ದಾವಣಿಯಲ್ಲಿ ಪಡ್ಡೆಹೈಕಳ ಹೃದಯಕ್ಕೆ ಕನ್ನ ಹಾಕಿದ್ದರು.

ಈ ಬೇಸಿಗೆಯಲ್ಲಂತೂ  ಹಳದಿ ಉಡುಪುಗಳ ಸುಗ್ಗಿಯೇ ಮೇಳೈಸಿದೆ. ಪೂರ್ತಿಯಾಗಿ ಹಳದಿ ಬಣ್ಣದ ಉಡುಪು ಧರಿಸುವುದಕ್ಕಿಂತ ಅದಕ್ಕೆ ಪ್ಯಾಚ್ ವರ್ಕ್‌ನಂತೆ ಅಲ್ಲಲ್ಲಿ ಬೇರೆ ಬಣ್ಣಗಳನ್ನು ಬಳಸಿಯೂ ಹಳದಿ ಉಡುಪುಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ.

ಚೂಡಿದಾರ್ ಟಾಪ್‌ನಲ್ಲಿ ಒಂದು ಭಾಗ ಪೂರ್ತಿ ಕಪ್ಪಿದ್ದರೆ ಮತ್ತೊಂದು ಭಾಗ ಹಳದಿ ಆವರಿಸಿರುತ್ತದೆ. ಸೈಡ್ ಸ್ಲಿಟ್‌ಗಳಿಗೆ ಪೈಪಿಂಗ್ ಮಾದರಿಯಲ್ಲೂ ಹಳದಿ ಬಣ್ಣ ಜನಪ್ರಿಯವಾಗುತ್ತಿದೆ. ರೇಷ್ಮೆ, ಹತ್ತಿ, ಲಿನನ್, ಜಾರ್ಜೆಟ್‌ ಹೀಗೆ ವಿವಿಧ ಬಗೆಯ ಬಟ್ಟೆಗಳಲ್ಲಿ ಹಳದಿ  ಬಣ್ಣದ ಉಡುಪುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. 

ಹಳದಿ ಬಣ್ಣದ ಉಡುಪುಗಳನ್ನು ಧರಿಸುವುದಕ್ಕೆ ಇಲ್ಲಿವೆ ಕೆಲ ಟಿಪ್ಸ್‌ಗಳು
*ನೀಲಿ ಜೀನ್ಸ್ ಮೇಲೆ  ಹಳದಿ ಬಣ್ಣದ ಟೀಶರ್ಟ್ ಚೆನ್ನಾಗಿ ಒಪ್ಪುತ್ತದೆ. ಅದಕ್ಕೆ ತಕ್ಕಂತೆ ಸರಳ ಆಭರಣಗಳನ್ನೂ ಧರಿಸಬಹುದು.
*ಬ್ಲೇಜರ್‌ಗೆ ಗಾಢ ಹಳದಿ ಬಣ್ಣವನ್ನು ಆಯ್ಕೆ ಮಾಡುವುದು ಸೂಕ್ತ.
*ಹಳದಿ ಉಡುಪಿಗಷ್ಟೇ ಅಲ್ಲ ಶೂಗೆ ಕೂಡಾ ಚೆನ್ನಾಗಿ ಒಪ್ಪುವ ಬಣ್ಣ.  ಹಳದಿ ಶೂ ನೋಡಲು ಟ್ರೆಂಡಿಯಾಗಿರುತ್ತದೆ.
*ಗಾಢ ಹಳದಿ ಬಣ್ಣದ ವ್ಯಾನಿಟಿ ಬ್ಯಾಗ್‌ಗಳು ಕೂಡಾ ಟ್ರೆಂಡಿಯಾಗಿವೆ.
*ಕಪ್ಪು ಕುರ್ತಾ ಸೆಟ್‌ಗೆ ಹಳದಿ ದುಪ್ಪಟ್ಟಾ ಶ್ರೀಮಂತಿಕೆಯ ನೋಟ  ನೀಡುತ್ತದೆ.
*ಪುಟ್ಟ ಮಕ್ಕಳಿಗೆ ಹಳದಿ ರೇಷ್ಮೆಲಂಗ ಕೆಂಪು ಜಾಕೀಟು ಹೇಳಿ ಮಾಡಿಸಿದ ಕಾಂಬಿನೇಷನ್.
*ತೆಳು ಹಳದಿ ಬಣ್ಣದ ಸೀರೆಗೆ ಅಲ್ಲಲ್ಲಿ ಕೆಂಪು ಬಣ್ಣದ ಹೂವುಗಳ ಎಂಬ್ರಾಯ್ಡರಿ ಆಕರ್ಷಕ ನೋಟ ನೀಡುತ್ತದೆ.
*ಹಳದಿ ಸೀರೆ ಅಥವಾ ಲಂಗದಾವಣಿಗೆ ಗುಲಾಬಿ ಅಥವಾ ನೇರಳೆ ಬಣ್ಣದ ಕಾಂಬಿನೇಷನ್ ಉತ್ತಮ ಆಯ್ಕೆ.

*
ಹಳದಿ ಬಣ್ಣದ ಉಡುಪು ಯುವಜನರ ನೆಚ್ಚಿನ ಬಣ್ಣ. ಇದು ಎಲ್ಲರಿಗೂ ಒಪ್ಪುತ್ತದೆ. ಸಾಂಪ್ರದಾಯಿಕ ಉಡುಪುಗಳಿಂದ ಹಿಡಿದು ಆಧುನಿಕ ವಿನ್ಯಾಸದ ಉಡುಪುಗಳಿಗೂ ಈ ಬಣ್ಣ ಸೂಕ್ತ.
–ಸುಷ್ಮಾ,
ವಸ್ತ್ರ ವಿನ್ಯಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT