ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಕದ ಹಿಂದಿನ ‘ದೇವಸೇನಾ’

ಅನುಷ್ಕಾ ಶೆಟ್ಟಿ ಮೊದಲ ಫೋಟೊಶೂಟ್‌!
Last Updated 11 ಮೇ 2017, 19:30 IST
ಅಕ್ಷರ ಗಾತ್ರ

ಅನುಷ್ಕಾ ಅವರಲ್ಲಿ ನಟನೆಯ ಅಭಿಲಾಷೆ ಬಿತ್ತಿದ ನಿರ್ದೇಶಕ ಕೋಡ್ಲು ರಾಮಕೃಷ್ಣ ಅಂದಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.

‘‘ಅದು 2000ನೇ ಇಸವಿ. ನಾನು ಬೆಂಗಳೂರಿನ ಇಂದಿರಾನಗರದಲ್ಲಿ ‘ಹಲೋ’ ಎಂಬ ಸಿನಿಮಾದ ಚಿತ್ರೀಕರಣ ಮಾಡುತ್ತಿದ್ದೆ. ಅಲ್ಲಿ ಪ್ರತಿದಿನವೂ ಹುಡುಗಿಯೊಬ್ಬಳು ಚಿತ್ರೀಕರಣ ನೋಡಲು ಬರುತ್ತಿದ್ದಳು. ಸುಮ್ಮನೆ ಒಂದೆಡೆ ನಿಂತು, ಚಿತ್ರೀಕರಣ ನೋಡಿಕೊಂಡು ವಾಪಸ್‌ ಹೋಗಿಬಿಡುತ್ತಿದ್ದಳು. ಅದನ್ನು ಗಮನಿಸಿದ ನಾನು ಒಂದು ದಿನ ಮಾತಾಡಿಸಿದೆ.

‘ಏನಮ್ಮಾ, ಆ್ಯಕ್ಟಿಂಗ್‌ ಮಾಡ್ತೀಯಾ?’ ಅಂತ ರೇಗಿಸಲೆಂದು ಕೇಳಿದೆ. ಅವಳು ‘ಇಲ್ಲ ಸರ್‌, ನಾನಿನ್ನೂ ಸೆಕೆಂಡ್‌ ಪಿಯುಸಿ ಓದ್ತಿದ್ದೀನಿ’ ಅಂದಳು. ನಾನು ಸುಮ್ಮನಾದೆ.’’ ಹೀಗೆ ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ ಹಳೆಯ ನೆನಪುಗಳನ್ನು ಮೊಗೆಮೊಗೆದು ಮಾತಾಗಿಸುತ್ತಿದ್ದರು.

ಕೋಡ್ಲು ರಾಮಕೃಷ್ಣ ಅವರನ್ನು ಹತ್ತಿರದಿಂದ ಬಲ್ಲವರಿಗೆ ಇದು ಅಂಥ ವಿಶೇಷ ಸಂಗತಿಯೇನೂ ಅಲ್ಲ. ತಮ್ಮ ಕಣ್ಣಿಗೆ ಬಿದ್ದ ಪ್ರತಿಭಾವಂತರನ್ನು  ಗುರ್ತಿಸಿ, ಸಿನಿಮಾರಂಗಕ್ಕೆ ಪರಿಚಯಿಸುವುದು ಅವರ ಗುಣಸ್ವಭಾವ. ಆದರೆ ಈಗ ಅವರು ಮಾತನಾಡಿಸಿದ ಹುಡುಗಿಯದು ಮಾಮೂಲು ಪ್ರಸಂಗವಲ್ಲ. ಅವಳು ಹತ್ತರಲ್ಲಿ ಹನ್ನೊಂದನೆಯವಳು ಅಲ್ಲವೇ ಅಲ್ಲ. 

ಇಲ್ಲಿನ ಚಿತ್ರಗಳನ್ನು ನೋಡಿದಾಗ ಮನಸಲ್ಲಿ ಯಾವುದೋ ಸುಳಿವಿನ ಮಿಂಚೊಂದು ಸುಳಿದು ಹೋಗಿರಬೇಕಲ್ಲವೇ? ಅಂದು ಚಿತ್ರೀಕರಣದ ಸ್ಥಳಕ್ಕೆ ಓಡೋಡಿ ಬಂದು, ಎಲ್ಲವನ್ನೂ ಬೆರಗಿನಿಂದ ನೋಡುತ್ತಿದ್ದ ಆ ಮುಗ್ಧ ಹುಡುಗಿ ಬೇರೆ ಯಾರೂ ಅಲ್ಲ. ಇಂದು ದಕ್ಷಿಣ ಭಾರತದಲ್ಲಿ ಬಹುಬೇಡಿಕೆಯ ನಟಿ, ‘ಬಾಹುಬಲಿ 2’ ಸಿನಿಮಾದ ನಾಯಕಿ ಅನುಷ್ಕಾ ಶೆಟ್ಟಿ! ‘ಅರುಂಧತಿ’, ‘ರುದ್ರಮ್ಮದೇವಿ’ ಖ್ಯಾತಿಯ ನಟಿ.

ಅನುಷ್ಕಾ ಶೆಟ್ಟಿಗೂ, ಕೋಡ್ಲು ರಾಮಕೃಷ್ಣ ಅವರಿಗೂ, ಬೆಂಗಳೂರಿನ ಇಂದಿರಾನಗರಕ್ಕೂ ಎತ್ತಣಿಂದೆತ್ತಣ ಸಂಬಂಧ ಎಂದು ಹುಬ್ಬೇರಿಸುವಂತಿಲ್ಲ.   ಅನುಷ್ಕಾ ಕನ್ನಡತಿ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ. ಆದರೆ ಅವರಲ್ಲಿ ನಟನೆಯ ಆಸೆ ಮೊಳೆತಿದ್ದು, ನಾಯಕಿಯ ಅವಕಾಶಕ್ಕಾಗಿ ಮೊದಲ ಫೋಟೊಶೂಟ್‌ ನಡೆದಿದ್ದು ಬೆಂಗಳೂರಿನಲ್ಲಿಯೇ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ.

ಕೋಡ್ಲು ಅವರ ಸ್ಮೃತಿಪಟಲದ ಪುಟಗಳನ್ನು ಇನ್ನೊಂಚೂರು ತಿರುವಿಹಾಕಿದರೆ ಎಲ್ಲವೂ ಸ್ಪಷ್ಟವಾಗುತ್ತದೆ. ಅದನ್ನು ಅವರ ಮಾತಿನಲ್ಲಿಯೇ ಕೇಳಬೇಕು. ‘‘ನಾನು ‘ನಟಿಸುತ್ತೀಯಾ’ ಎಂದು ಕೇಳಿ, ಆಕೆ ‘ಇಲ್ಲ’ ಅಂದಮೇಲೆಯೂ ತಪ್ಪದೇ ಚಿತ್ರೀಕರಣ ನೋಡಲು ಬರುತ್ತಿದ್ದಳು. ಒಲ್ಲೆ ಎಂದರೂ ಆಕೆಯೊಳಗಿನ ನಟನೆಯ ತುಡಿತ ನನಗೆ ಅರ್ಥವಾಗಿತ್ತು. ನಾನು ಮತ್ತೊಮ್ಮೆ, ‘ಇಷ್ಟು ಚೆನ್ನಾಗಿದ್ದೀಯಾ. ಸಿನಿಮಾದಲ್ಲಿ ಆಸಕ್ತಿ ಇರುವಂತಿದೆ. ಯಾಕೆ ಪ್ರಯತ್ನ ಪಡಬಾರದು?’ ಎಂದು ಕೇಳಿದೆ. ಆಗ ಅವಳು ‘ನನ್ನ ತಂದೆಯನ್ನು ಕೇಳಿ ಹೇಳುತ್ತೇನೆ’ ಎಂದು ಹೇಳಿಹೋದಳು.

ಅವರು ಮಂಗಳೂರಿನ ಕಡೆಯವರು. ಅವರ ತಂದೆ ಇಂದಿರಾನಗರದಲ್ಲಿ ಹೋಟೆಲ್‌ ನಡೆಸುತ್ತಿದ್ದರು. ಮರುದಿನ ನನ್ನನ್ನು ಊಟಕ್ಕೆ ಕರೆದರು. ನಾನು ಹೋದೆ. ತುಂಬ ಸರಳ ಜನರು. ಪ್ರೀತಿಯಿಂದ ಉಪಚರಿಸಿದರು. ಅಲ್ಲಿ ಮೀನೂಟ ಮಾಡಿದ್ದು ನನಗಿನ್ನೂ ನೆನಪಿದೆ. ‘ಹಲೋ’ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಎರಡು ದಿನ ಅಲ್ಲಿಯೇ ಊಟ ಮಾಡಿದೆ. ಅವರ ತಂದೆಯ ಬಳಿಯೂ ಮಗಳನ್ನು ಸಿನಿಮಾ ನಟನೆಗೆ ಕಳಿಸುವಂತೆ ಕೇಳಿಕೊಂಡೆ.

ಅವರು ತಕ್ಷಣಕ್ಕೆ ಹಿಂಜರಿದರು. ನಂತರ ಒಪ್ಪಿಕೊಂಡರು. ನಂತರ ನಾನು ಆಕೆಯನ್ನು  ಛಾಯಾಗ್ರಾಹಕ ಡಿ.ಸಿ. ನಾಗೇಶ್‌ ಅವರ ಬಳಿ ಕರೆದುಕೊಂಡು ಹೋಗಿ ಫೋಟೊಶೂಟ್‌ ಮಾಡಿಸಿದೆ. ಚಿತ್ರಗಳು ತುಂಬ ಚೆನ್ನಾಗಿ ಬಂದವು. ನನ್ನ ಮುಂದಿನ ಸಿನಿಮಾ ‘ಮಿಸ್‌ ಕ್ಯಾಲಿಫೋರ್ನಿಯಾ’ ಮಾಡುವಾಗ ಆಕೆಯನ್ನೇ ನಾಯಕಿಯನ್ನಾಗಿ ಪರಿಚಯಿಸಲು ನಿರ್ಧರಿಸಿದೆ.



ನಾಗೇಶ್‌ ತೆಗೆದಿದ್ದ ಫೋಟೊಗಳನ್ನೆಲ್ಲ ನಿರ್ಮಾಪಕರಿಗೆ ತೋರಿಸಿದೆ. ಅವರೂ ಒಪ್ಪಿಕೊಂಡರು. ನಂತರ ನಮಗೆ ಪ್ರಾಯೋಜಕರಾಗಿದ್ದ ಕೆಲವರ ಒತ್ತಾಯದ ಮೇಲೆ, ಅನುಷ್ಕಾ ಜಾಗಕ್ಕೆ ನ್ಯೂಜೆರ್ಸಿಯಲ್ಲಿದ್ದ ಸೌಮ್ಯಾ ಎನ್ನುವ ಹುಡುಗಿಯನ್ನು ಹಾಕಿಕೊಳ್ಳಬೇಕಾಯ್ತು.

ನಾನು ಅನುಷ್ಕಾ ಬಳಿ ‘ಸಾರಿ ಕಣಮ್ಮಾ, ನಿನ್ನನ್ನು ಈ ಸಿನಿಮಾಗೆ ನಾಯಕಿ ಮಾಡಕ್ಕಾಗ್ತಿಲ್ಲ’ ಅಂದೆ. ಆಕೆ ಬೇಸರ ಮಾಡಿಕೊಳ್ಳದೇ – ‘ಪರ್ವಾಗಿಲ್ಲ ಸರ್‌, ನಾನು ಪದವಿ ಮುಗಿಸಿ ಮತ್ತೆ ನಟನೆಗೆ ಬರ್ತೇನೆ’ ಎಂದು ಹೇಳಿದ್ದಳು. ಇದೆಲ್ಲ ಆದ ಮೇಲೂ ಒಂದೆರಡು ಸಲ ಫೋನ್‌ನಲ್ಲಿ ಮಾತನಾಡಿದ್ದಳು. ಆಮೇಲೆ ಸಂಪರ್ಕ ಕಡಿದು ಹೋಯ್ತು.

ಎಷ್ಟೋ ವರ್ಷಗಳ ನಂತರ ಮಂಗಳೂರಿಗೆ ಬಂದಿದ್ದ ಅನುಷ್ಕಾ, ಯಾವುದೋ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ನನ್ನ ಬಗ್ಗೆ ಹೇಳಿದ್ದಳಂತೆ. ಅದನ್ನು ಕೇಳಿದ್ದ ಸ್ನೇಹಿತರೊಬ್ಬರು ‘ಏನಯ್ಯಾ ಟ್ರಂಪ್‌ ಕಾರ್ಡನ್ನೇ ಮಿಸ್‌ ಮಾಡಿಬಿಟ್ಟಿದ್ದೀಯಾ’ ಎಂದು ತಮಾಷೆ ಮಾಡಿದ್ದರು. 

ಅದಾದ ಮೇಲೆ ಕೆಲವು ವರ್ಷಗಳ ನಂತರ 2012ರಲ್ಲಿ, ಯಾವುದೋ ಸಿನಿಮಾದ ಕೆಲಸಕ್ಕೆ ಹೈದರಾಬಾದ್‌ಗೆ ಹೋಗಿದ್ದೆ. ಅಲ್ಲಿ ಅನುಷ್ಕಾ ಶೆಟ್ಟಿ ಅವರ ಸ್ನೇಹಿತರೊಬ್ಬರು ಸಿಕ್ಕಿದರು. ಅವರಿಂದ ನಾನು ಅನುಷ್ಕಾ ದೂರವಾಣಿ ನಂಬರ್‌ ಪಡೆದುಕೊಂಡು ಪೋನ್‌ ಮಾಡಿದೆ.

ಅವತ್ತು ದೂರವಾಣಿ ಮಾತುಕತೆಗೆ ಸಿಕ್ಕ ಅನುಷ್ಕಾ – ‘ಏನ್‌ ಸರ್‌ ಚೆನ್ನಾಗಿದ್ದೀರಾ?’ ಎಂದು ಅಚ್ಚ ಕನ್ನಡದಲ್ಲಿಯೇ ಬಾಯ್ತುಂಬಾ ಮಾತನಾಡಿದರು. ಆಗ ಅವರು ಮುಂಬೈನಲ್ಲಿ ಚಿತ್ರೀಕರಣದಲ್ಲಿದ್ದರು. ‘ನಾಳೆ ಹೈದರಾಬಾದ್‌ಗೆ ಬರ್ತೀನಿ. ಭೇಟಿ ಮಾಡೋಣ’ ಎಂದು ಆಹ್ವಾನವನ್ನೂ ನೀಡಿದರು. ಆದರೆ ನಾನು ಅವತ್ತೇ ತುರ್ತಾಗಿ ಬೆಂಗಳೂರಿಗೆ ಮರಳಬೇಕಿತ್ತು. ಹಾಗಾಗಿ ಭೇಟಿ ಮಾಡಲು ಸಾಧ್ಯವೇ ಆಗಲಿಲ್ಲ.

ಆಮೇಲೆ ಮತ್ತೆ ಭೇಟಿ ಮಾಡಲು, ಮಾತನಾಡಲು ಸಾಧ್ಯವಾಗಿಲ್ಲ. ಆದರೆ ಇಂದಿಗೂ ಅವರು ನನ್ನನ್ನು ಮರೆತಿಲ್ಲ ಎಂಬ ವಿಶ್ವಾಸವಂತೂ ಇದೆ.
ಅಂದು ‘ಹಲೋ’ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ನೋಡಿದ ಆ ಮುಖ ಇನ್ನೂ ನನ್ನ ಮನಸಲ್ಲಿ ಅಚ್ಚಳಿಯದೇ ಉಳಿದುಕೊಂಡಿದೆ. ಆಗ ಆಕೆಗೆ ಸಿನಿಮಾ ಗಂಧಗಾಳಿಯೇ ಗೊತ್ತಿರಲಿಲ್ಲ. ತುಂಬ ಸರಳ ಮತ್ತು ಅಷ್ಟೇ ಮುಗ್ಧ ಹುಡುಗಿ. ಸಿನಿಮಾ ನಟನೆಗೆ ಒಪ್ಪಿಕೊಂಡಿದ್ದೂ ನನ್ನ ಒತ್ತಾಯದಿಂದಲೇ’’.

ಇಷ್ಟನ್ನು ಒಂದೇ ಉತ್ಸಾಹದಿಂದ ಹೇಳಿ ಮಾತಿಗೆ ಕೊಂಚ ವಿರಾಮ ನೀಡಿದರು ಕೋಡ್ಲು ರಾಮಕೃಷ್ಣ. ಅವರ ಮಾತುಗಳಲ್ಲಿ ತಮ್ಮ ಸಿನಿಮಾಗೆ ನಾಯಕಿ ಮಾಡಲು ಸಾಧ್ಯವಾಗದೆ ಹೋದ ಬೇಸರಕ್ಕಿಂತಲೂ, ಅನುಷ್ಕಾ ಅವರೊಳಗಿನ ನಟಿಯನ್ನು ಆಗಲೇ ಗುರ್ತಿಸಿ ನಟನೆಯ ಅಭಿಲಾಷೆಯನ್ನು ಬಿತ್ತಿದ ಹೆಮ್ಮೆಯೇ ಎದ್ದು ಕಾಣುತ್ತಿತ್ತು. ಹಾಗೆಯೇ ಅವರು ಇಂದು ಬೆಳೆದು ನಿಂತ ಎತ್ತರದ ಕುರಿತು ಬೆರಗೂ ಇತ್ತು. ಇದು ಕೋಡ್ಲು ಅವರ ಹೆಮ್ಮೆಯಷ್ಟೇ ಅಲ್ಲ, ಅನುಷ್ಕಾ  ಅವರಂಥ ಪ್ರತಿಭಾವಂತ ನಟಿ ಕನ್ನಡದವರು ಎನ್ನುವುದು ಕನ್ನಡಿಗರ ಹೆಮ್ಮೆಯೂ ಹೌದು.


ಕೋಡ್ಲು ರಾಮಕೃಷ್ಣ ಜತೆ ಅನುಷ್ಕಾ ಶೆಟ್ಟಿ

*
‘ಮುಗ್ಧತೆ ಗಮನಸೆಳೆದಿತ್ತು’
ಕೋಡ್ಲು ರಾಮಕೃಷ್ಣ ನನ್ನ ಸ್ನೇಹಿತರು. ಆಗ ಎಲ್ಲೆಲ್ಲಿಂದಲೋ ಹೊಸ ಕಲಾವಿದರನ್ನು ಕರೆದುಕೊಂಡು ಬರುತ್ತಿದ್ದರು. ನನ್ನ ಬಳಿ ಫೋಟೊಶೂಟ್‌ ಮಾಡಿಸಿಕೊಂಡು ಹೋಗುತ್ತಿದ್ದರು. ಅನುಷ್ಕಾ ಕೂಡ ನಾನಿದ್ದಲ್ಲಿಗೆ ಬಂದಿದ್ದು ಹಾಗೆಯೇ. ಅವರ ಫೋಟೊಶೂಟ್‌ ನಡೆದಿದ್ದು ನಮ್ಮ ಮನೆಯಲ್ಲಿಯೇ. ಆಕೆಯ ಮುಖದಲ್ಲಿನ ಮುಗ್ಧತೆ ನನ್ನ ಗಮನಸೆಳೆದಿತ್ತು. ಚಿತ್ರರಂಗಕ್ಕೆ ಬಂದರೆ ಯಶಸ್ವಿ ನಟಿಯಾಗುತ್ತಾಳೆ ಅನಿಸಿತ್ತು. ಆದರೆ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾಳೆ ಎಂದು  ಅಂದುಕೊಂಡಿರಲಿಲ್ಲ. ಇಂದು ಯಶಸ್ಸಿನ ಉತ್ತುಂಗದಲ್ಲಿರುವ ಅನುಷ್ಕಾ ಶೆಟ್ಟಿಯ ಮೊದಲ ಫೋಟೊಶೂಟ್‌ ಮಾಡಿದ್ದು ನಾನು ಎಂಬುದು ಹೆಮ್ಮೆಯ ವಿಷಯ.
–ಡಿ.ಸಿ. ನಾಗೇಶ್‌, ಛಾಯಾಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT