ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕ ಜಾಗದಲ್ಲೂ ಅರಳುವ ಕೈತೋಟ

Last Updated 11 ಮೇ 2017, 19:30 IST
ಅಕ್ಷರ ಗಾತ್ರ

ಚಿಕ್ಕ ನಿವೇಶನಗಳಲ್ಲಿಯೇ ಅಂದವಾದ ಮನೆ ಕಟ್ಟಿಸಬೇಕಾದ ಪರಿಸ್ಥಿತಿ ಇಂದಿನದ್ದು. ಭೂಮಿ ಸಿಗುವುದೇ ಕಷ್ಟವಾಗಿರುವ ಈ ಸಮಯದಲ್ಲಿ ಮನೆ ತುಂಬಾ ಗಿಡ ನೆಡಬೇಕು ಎಂದುಕೊಂಡವರ ಆಸೆ ನೆರವೇರುವುದಾದರೂ ಹೇಗೆ? ಈ ಸವಾಲುಗಳನ್ನು ಮೀರಿ ಪುಟ್ಟ ಸ್ಥಳದಲ್ಲಿಯೇ ಕೆಲಸಕ್ಕೆ ಬರದ ವಸ್ತುಗಳನ್ನು ಬಳಸಿ ಜಾಣತನದಿಂದ ಗಿಡಗಳನ್ನು ಬೆಳೆಸಿಕೊಳ್ಳಬಹುದು.

ಹಳೆಯ ಪೀಠೋಪಕರಣ ಬಳಕೆ: ಬಿಸಾಡಬೇಕೆಂದಿರುವ ಪೀಠೋಪಕರಗಳಲ್ಲಿ ಗಿಡ ಬೆಳೆಸುವುದು ಸಾಧ್ಯವಿದೆ. ಇದು ನೋಡಲು ಆಕರ್ಷಕವಾಗಿರುವುದರ ಜೊತೆಗೆ ನಿಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸುತ್ತದೆ. ಡ್ರೆಸ್ಸಿಂಗ್‌ ಟೇಬಲ್‌ಗಳಲ್ಲಿ ಹಲವು ಡ್ರಾಯರ್‌ಗಳಿರುತ್ತವೆ.

ಅವುಗಳಲ್ಲಿ  ಕಡಿಮೆ ನೀರು ಬೇಡುವ ಕ್ಯಾಕ್ಟಸ್‌ ಮತ್ತು ಸಕ್ಯುಲೆಂಟ್‌, ಸ್ನೇಕ್‌ ಪ್ಲಾಂಟ್‌, ಆಲೊವೆರಾ ಗಿಡಗಳನ್ನು ಬೆಳೆಯಬಹುದು. ಟೇಬಲ್‌ನ ಮೇಲೊಂದು ಕನ್ನಡಿಯನ್ನು ಇಟ್ಟರೆ ಮನೆಯ ಅಲಂಕಾರದ ಜೊತೆಗೆ ಪರಿಸರ ಕಾಳಜಿಯನ್ನು ಪ್ರದರ್ಶಿಸಿದಂತಾಗುತ್ತದೆ.

ವರ್ಟಿಕಲ್‌ ಗಾರ್ಡನಿಂಗ್‌: ಅಡುಗೆ ಮನೆ, ರೂಂಗಳಲ್ಲಿನ ಗೋಡೆ, ಹಾಲ್‌ನಲ್ಲಿರುವ ಗೋಡೆಗಳ ಮೇಲೆ ವರ್ಟಿಕಲ್‌ ಗಾರ್ಡನಿಂಗ್‌ ಮಾಡಬಹುದು. ಮರ, ಅಲ್ಯೂಮಿನಿಯಂ ಫ್ರೇಮ್‌ನಲ್ಲಿ ರ್‍ಯಾಕ್‌ ಮಾಡಿ, ಅವುಗಳಲ್ಲಿ ಪುಟ್ಟ ಕುಂಡಗಳು ಅಥವಾ ಜಿಯೋ ಬ್ಯಾಗ್‌ಗಳಲ್ಲಿ ಗಿಡಗಳನ್ನು ಬೆಳೆಸಬಹುದು.  2/2 ಅಡಿಯ ಗೋಡೆಯಲ್ಲಿ 15 ಗಿಡಗಳನ್ನು ಬೆಳೆಸಬಹುದು. ಮಣ್ಣಿನ ಬಳಕೆಯೇ ಇಲ್ಲದೆ   ಸೊಪ್ಪು, ಹೂವಿನ ಗಿಡಗಳು ಹಾಗೂ ಅಲಂಕಾರಿಕ ಗಿಡಗಳನ್ನು ಬೆಳೆಯಬಹುದು.

ಗಿಡಗಳನ್ನು ನೇತು ಹಾಕಿ: ಗಿಡ ಬೆಳೆಸುವ ಕಂಟೇನರ್‌ಗಳಲ್ಲಿ ಔಷಧೀಯ ಗಿಡಗಳನ್ನು ಮತ್ತು ಕೆಲವು ಬಳ್ಳಿಗಳನ್ನು ನೆಡಬಹುದು. ಇವುಗಳನ್ನು ಮನೆಯ ದ್ವಾರದ ಎದುರು ನೇತುಹಾಕಬೇಕು. ಅಪಾರ್ಟ್‌ಮೆಂಟ್‌ಗಳಲ್ಲಿ ವಾಸವಿರುವವರಿಗೆ ಇದೊಂದು ಉತ್ತಮ ಆಯ್ಕೆ.

ಹಳೆಯ ಪೈಪ್‌ಗಳು ಕುಂಡವಾದಾಗ: ಹಳೆಯ ಪಿವಿಸಿ ಪೈಪ್‌ಗಳನ್ನು ಬೇಕಾದ ಆಕಾರಕ್ಕೆ ಕತ್ತರಿಸಿ ಗಿಡ ಬೆಳೆಸುವ ಕುಂಡಗಳನ್ನಾಗಿ ಬಳಸಬಹುದು. ಇದರಲ್ಲಿ ಭಿನ್ನ ಜಾತಿಯ ನಾಲ್ಕಕ್ಕೂ ಹೆಚ್ಚು   ಗಿಡಗಳನ್ನು ಬೆಳೆಸುವುದು ಸಾಧ್ಯವಿದೆ. ತಂತಿಯನ್ನು ಕಟ್ಟಿ ಮನೆಯ ಮಹಡಿಗೆ ನೇತು ಹಾಕಬಹುದು. ದೊಡ್ಡ ಗಿಡಗಳನ್ನು ಬೆಳೆಸುವುದಕ್ಕಿಂತ ಚಿಕ್ಕ ಗಿಡಗಳನ್ನು ಬೆಳೆಯುವುದು ಒಳ್ಳೆಯದು. ಸೂರ್ಯನ ಕಿರಣಗಳು ನೇರವಾಗಿ ಬೀಳುವ ಸ್ಥಳವನ್ನು ಆಯ್ಕೆ ಮಾಡಲು ಮರೆಯದಿರಿ.

ಬಳ್ಳಿಗಳನ್ನು ಹಬ್ಬಿಸಿ: ಕಿಟಕಿಗಳ ಕಂಬಿ, ಗೋಡೆಗಳಲ್ಲಿ  ಮನಿ ಪ್ಲಾಂಟ್‌, ಅಲ್ಲಾಮಂಡ್‌ ಕ್ರೀಪರ್‌ (ಕೋಟೆ ಹೂವು), ಅಮೃತಬಳ್ಳಿ ಸೇರಿದಂತೆ ವಿವಿಧ ಗಿಡಗಳನ್ನು ಹಬ್ಬಿಸಬಹುದು. ಕಿಟಕಿಯ ಮೇಲೆ ಒಂದು ಕಂಬಿಯನ್ನು ಕಟ್ಟಿ ಅಲ್ಲಿ ಅವುಗಳನ್ನು ಜೋತುಬೀಳುವಂತೆ ಇಡಬೇಕು. ಕಿಟಕಿಯಿಂದ ಬರುವ ಗಾಳಿ ಬೆಳಕು ಬಳ್ಳಿಗಳ ನಡುವೆ ಇರುವ ಜಾಗದಿಂದ ಮನೆಯ ಒಳಕ್ಕೆ ಬರುತ್ತವೆ. ಇದರಿಂದ ಮಲಿನವಾಗಿರುವ ಗಾಳಿ ಗಿಡಗಳ ಮೂಲಕ ಬಂದಾಗ ಶುದ್ಧಗಾಳಿಯಾಗಿ ಪರಿವರ್ತನೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT