ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರೀದಿದಾರರದ್ದೇ ಅಧಿಪತ್ಯ

Last Updated 11 ಮೇ 2017, 19:30 IST
ಅಕ್ಷರ ಗಾತ್ರ

ನೋಟು ಅಮಾನ್ಯೀಕರಣದ ನಂತರ ರಿಯಲ್‌ ಎಸ್ಟೇಟ್‌ ಕ್ಷೇತ್ರ ಕುಸಿತ ಕಂಡಿದೆ ಎಂಬುದು ಕೆಲವರ ಅಭಿಪ್ರಾಯವಾದರೆ ಮತ್ತೆ ಕೆಲವರು ಈ ಮಾತನ್ನು ಒಪ್ಪುವುದಿಲ್ಲ. ವಸತಿ ಕ್ಷೇತ್ರದ ಬೇಡಿಕೆಯಲ್ಲಿ ಪ್ರಗತಿ ಕಂಡುಬಂದಿದೆ ಎನ್ನುತ್ತದೆ ಜಾಗತಿಕ ರಿಯಲ್‌ ಕನ್ಸಲ್ಟಿಂಗ್‌ ಕಂಪೆನಿಯಾಗಿರುವ ಸಿಬಿಆರ್‌ಇ. ಗ್ರಾಹಕರ ಬೇಡಿಕೆ ಪೂರೈಸಲು ಅನುಕೂಲ ಆಗುವಂತೆ ಇತ್ತೀಚೆಗೆ ನಗರದಲ್ಲಿ ಸಿಬಿಆರ್‌ಇ ಪ್ರಾಪ್‌ಫೇರ್‌ ಆಯೋಜಿಸಿತ್ತು.

ಈ ಸಂದರ್ಭದಲ್ಲಿ ವಸತಿ ಮಾರುಕಟ್ಟೆ ಕ್ಷೇತ್ರದ ಸ್ಥಿತಿಗತಿಯ ಬಗ್ಗೆ ಕಂಪೆನಿಯ ವಸತಿ ಸಮುಚ್ಚಯ ಸೇವೆ (ರೆಸಿಡೆನ್ಶಿಯಲ್‌ ಸರ್ವೀಸಸ್‌) ಮುಖ್ಯಸ್ಥ ಶಿವರಾಮಕೃಷ್ಣನ್‌ ಅಭಿಪ್ರಾಯ ಹಂಚಿಕೊಂಡರು.

*ವಸತಿ ಮಾರುಕಟ್ಟೆಯ ಸ್ಥಿತಿ ಹೇಗಿದೆ?
ದಕ್ಷಿಣ ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ಹೈದರಾಬಾದ್‌, ಚೆನ್ನೈ ನಗರಗಳಲ್ಲಿ 2016ರಿಂದೀಚೆಗೆ ಸಿದ್ಧ ಫ್ಲಾಟ್‌ಗಳ ಮಾರಾಟದಲ್ಲಿ
ಶೇ 50ರಷ್ಟು ಪ್ರಗತಿ ಕಂಡುಬಂದಿದೆ. ಫ್ಲಾಟ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ.

*ಬೆಂಗಳೂರು ನಗರದ ಮಾರುಕಟ್ಟೆ ಪರಿಸ್ಥಿತಿ ಹೇಗಿದೆ?
2015ರಲ್ಲಿ ಇಡೀ ದೇಶದ ರಿಯಲ್‌ ಎಸ್ಟೇಟ್‌ ವಹಿವಾಟಿನಲ್ಲಿ ಬೆಂಗಳೂರಿನ ಪಾಲು ಶೇ 25 ಇತ್ತು. 2016ರಲ್ಲಿ ಒಟ್ಟಾರೆ ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ವಸತಿ ಮಾರುಕಟ್ಟೆ ಶೇ 27ರಷ್ಟು ಪಾಲು ಹೊಂದುವ ಮೂಲಕ ಆಶಾದಾಯಕ ಬೆಳವಣಿಗೆ ಕಂಡಿದೆ. ಕಳೆದ ಒಂದು ವರ್ಷದಲ್ಲಿ ಶೇ 2ರಷ್ಟು ಪ್ರಗತಿ ಸಾಧಿಸಿದ್ದೇವೆ. ನಮ್ಮ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

*ನಗರದಲ್ಲಿ ಯಾವ ರೀತಿಯ ಮನೆಗಳಿಗೆ ಬೇಡಿಕೆ ಇದೆ?
ವಾಣಿಜ್ಯ ರಿಯಲ್‌ ಎಸ್ಟೇಟ್‌ ಡೆವಲಪ್‌ಮೆಂಟ್‌ ಮತ್ತು ಲೀಸಿಂಗ್‌ ಚಟುವಟಿಕೆ ಆಶಾದಾಯಕವಾಗಿವೆ. ಬೆಂಗಳೂರಿನಲ್ಲಿ ಮಧ್ಯಮ ಮತ್ತು ಐಷಾರಾಮಿ ಮನೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದೇ ಟ್ರೆಂಡ್‌ ಅತಿ–ಸಣ್ಣ ಮಾರುಕಟ್ಟೆ ಹಾಗೂ ಕೈಗೆಟುಕುವ ದರದ ಅಂದರೆ ಕಡಿಮೆ ದರದ ಮನೆಗಳ ಕ್ಷೇತ್ರದಲ್ಲೂ ಕಂಡುಬರುತ್ತಿದೆ. ಇತ್ತೀಚೆಗೆ ಗ್ರಾಹಕರು ಮನೆ ಖರೀದಿ ಮಾಡುವಾಗ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಹಾಗಾಗಿ ನಗರದ ಮಾರುಕಟ್ಟೆ ಗುಣಾತ್ಮಕವಾಗಿ ಮುಂದುವರೆಯುತ್ತಿದೆ.

*ನಗರದಲ್ಲಿ ಮನೆ ಖರೀದಿಗೆ ಆದ್ಯತೆ ನೀಡಲು ಕಾರಣ?
ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿರುವ ನಗರವಿದು. ಹಾಗಾಗಿ ಉದ್ಯೋಗ ಅರಸಿ ಬೇರೆ ರಾಜ್ಯಗಳಿಂದ ಇಲ್ಲಿಗೆ ಬರುವವರ ಸಂಖ್ಯೆ ಕೂಡ ಹೆಚ್ಚು. ಹೈದರಾಬಾದ್​ನಲ್ಲಿ ನಿರ್ದಿಷ್ಟ ದಿಕ್ಕಿನ ವಸತಿ ಯೋಜನೆಗಳಿಗೆ ಹೆಚ್ಚು ಬೇಡಿಕೆ ಇದೆ. ಜನರು ನಿಗದಿತ ಸ್ಥಳವನ್ನೇ ಆಯ್ಕೆ ಮಾಡುತ್ತಾರೆ. ಆದರೆ ಬೆಂಗಳೂರು ಇಂತಹ ಆಯ್ಕೆಯಿಂದ ಹೊರಗುಳಿದಿದೆ. ಹೀಗಾಗಿ ಬೆಂಗಳೂರಿನ ಎಲ್ಲ ಭಾಗ ರಿಯಾಲ್ಟಿ ವಿಭಾಗದಲ್ಲಿ ಸುಲಭವಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಮುಂಬೈ, ದೆಹಲಿಗೆ ಹೋಲಿಸಿದರೆ, ಬೆಂಗಳೂರಿನಲ್ಲಿ ಮಾರುಕಟ್ಟೆ ದರವೂ ಕೊಂಚ ಸ್ಥಿರವಾಗಿರುವುದರಿಂದ ಹೆಚ್ಚು ಜನ ಬೆಂಗಳೂರಿನಲ್ಲಿ ಪ್ರಾಪರ್ಟಿ ಖರೀದಿಗೆ ಪ್ರಥಮ ಆದ್ಯತೆ ನೀಡುತ್ತಿದ್ದಾರೆ.

*ನೋಟು ಅಮಾನ್ಯೀಕರಣ ವಸತಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿಲ್ಲವೇ?
ನೋಟು ರದ್ದಾದ ಸಮಯದಲ್ಲಿ ಮಾರುಕಟ್ಟೆ ಅಲ್ಪಮಟ್ಟಿಗೆ ಕುಸಿದಿತ್ತು. ಡಿಸೆಂಬರ್ ತಿಂಗಳಿನಲ್ಲಿ ರಿಯಲ್‌ ಎಸ್ಟೇಟ್‌ ವಹಿವಾಟು ಸಾಮಾನ್ಯವಾಗಿ ಚುರುಕಾಗಿರುವುದಿಲ್ಲ. ಹೀಗಾಗಿ ಗ್ರಾಹಕರು ಕಾದು ನೋಡುವ ಮನಸ್ಥಿತಿ ಹೊಂದಿದ್ದರು. ಆದರೆ ಈಗ ಆ ಮನಸ್ಥಿತಿ ಬದಲಾಗಿದೆ.

ಬೆಂಗಳೂರು, ಚೆನ್ನೈ, ಹೈದರಾಬಾದ್‌ಗಳಲ್ಲಿ ಕಳೆದ ಮೂರು ತಿಂಗಳಿನಿಂದ ರಿಯಲ್‌ಎಸ್ಟೇಟ್‌ ಉದ್ಯಮ ಅಭಿವೃದ್ಧಿ ಕಂಡಿದೆ. 70 ಲಕ್ಷದಿಂದ 1.5 ಕೋಟಿವರೆಗಿನ ವಸತಿ ಯೋಜನೆಗೆ ಬೇಡಿಕೆ ಹೆಚ್ಚಿದೆ.

*ಹೊರ ರಾಜ್ಯದ ಜನರು ಯಾವ ಬಗೆಯ ವಸತಿ ಕೊಳ್ಳಲು ಪ್ರಾಮುಖ್ಯ ನೀಡುತ್ತಿದ್ದಾರೆ?
ಹೊರ ರಾಜ್ಯದವರು ಬಂಡವಾಳ ಹೂಡಿಕೆಗಿಂತ ಇಲ್ಲಿ ಉದ್ಯೋಗದಲ್ಲಿ ಇರುವವರೆಗೂ ವಾಸಯೋಗ್ಯ ಮನೆಗೆ ಪ್ರಾಮುಖ್ಯ ನೀಡುತ್ತಾರೆ. ಈ ಕಾರಣಕ್ಕೆ ಅವರು ಕೊಳ್ಳುವುದು ಫ್ಲಾಟ್‌ ಮತ್ತು ಕಡಿಮೆ ದರದ (ಅಫರ್ಡೆಬಲ್‌) ಮನೆಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಐಟಿ ಕಂಪೆನಿಗಳು ಇರುವ ಸ್ಥಳ ಅವರ ಆಯ್ಕೆಯಾಗಿರುತ್ತದೆ.

*ಹತ್ತು ವರ್ಷಗಳಲ್ಲಿ ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಏನೆಲ್ಲಾ ಬದಲಾವಣೆ ಆಗಿದೆ?
ಕಟ್ಟಡ ನವೀಕರಣ ಮತ್ತು ನಿರ್ಮಾಣ ತಂತ್ರಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮಾರುಕಟ್ಟೆಯಲ್ಲಿ ಗ್ರಾಹಕರ ಅಧಿಪತ್ಯ ಹೆಚ್ಚಾಗಿದೆ. ಚಿಕ್ಕ ನಿವೇಶನದ ಸ್ಥಳಗಳಲ್ಲಿ ಎಲ್ಲಾ ವ್ಯವಸ್ಥೆಗಳೂ ಇರುವಂತೆ ಅಚ್ಚುಕಟ್ಟಾಗಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ನಗರದಲ್ಲಿ ದೊಡ್ಡ ನಿವೇಶನ ಕೊಳ್ಳುವವರಿಗಿಂತ ಅರ್ಧ ನಿವೇಶನ ಸ್ಥಳವನ್ನು ಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ.

ಮೊದಲೆಲ್ಲ 2,000 ಚದರ ಅಡಿಯಲ್ಲಿ ಮೂರು ಕೋಣೆಯ ಮನೆಗಳ ನಿರ್ಮಾಣ ಮಾಡುತ್ತಿದ್ದರೆ, ಈಗ 1,200 ಚದರ ಅಡಿ ನಿವೇಶನದಲ್ಲಿ ಮೂರು ಕೋಣೆಯ ಮನೆಯ ನಿರ್ಮಾಣ ಮಾಡಲಾಗುತ್ತಿದೆ. ಸ್ಥಳ ಉಳಿಸುವುದರ ಜೊತೆಗೆ ಸಕಲ ಸೌಕರ್ಯಗಳಿಗೂ ಆದ್ಯತೆ ನೀಡಲಾಗುತ್ತದೆ.

10 ವರ್ಷದ ಹಿಂದೆ 100 ಯೂನಿಟ್‌, 50 ಯೂನಿಟ್‌ ಪ್ರಾಜೆಕ್ಟ್‌ಗಳೇ ಹೆಚ್ಚಿತ್ತು. ಈಗ 1000 ಯೂನಿಟ್‌ ಪ್ರಾಜೆಕ್ಟ್‌ಗಳು ಹೆಚ್ಚುತ್ತಿವೆ. ಸ್ವಿಮಿಂಗ್‌ ಪೂಲ್‌, ಪ್ಲೇಗ್ರೌಂಡ್‌, ಕಂಟ್ರಿ ಕ್ಲಬ್‌ ಹೀಗೆ ಎಲ್ಲಾ ಸೌಕರ್ಯಗಳಿಗೂ ಪ್ರಾಧಾನ್ಯ ನೀಡಲಾಗುತ್ತಿದೆ.

*ವಸತಿ ಮಾರುಕಟ್ಟೆ ಕ್ಷೇತ್ರಗಳಲ್ಲಿ ಭವಿಷ್ಯದಲ್ಲಿ ಯಾವೆಲ್ಲ ಸೌಕರ್ಯ ನಿರೀಕ್ಷಿಸಬಹುದು?
ಸದ್ಯ ಮಾರುಕಟ್ಟೆ ಸ್ಥಿರವಾಗಿರುವುದರ ಜೊತೆಗೆ ಸುರಕ್ಷಿತವಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ಸುತ್ತಮುತ್ತಲು ಸ್ಯಾಟ್‌ಲೈಟ್‌ ಸಿಟಿಗಳು ಅಭಿವೃದ್ಧಿಗೊಳ್ಳುತ್ತವೆ. ಹಿರಿಯ ನಾಗರಿಕರು ಮತ್ತು ಮುಂದಿನ ಕಾಲಮಾನಕ್ಕೆ ಅಗತ್ಯವಾದ ಪ್ರಾಜೆಕ್ಟ್‌ಗಳು ಹೆಚ್ಚುತ್ತವೆ. ಎಲ್ಲಾ ಸೌಕರ್ಯಗಳನ್ನು ಹೊಂದಿರುವ ‘ಸ್ಟೂಡಿಯೊ ಅಪಾರ್ಟ್‌ಮೆಂಟ್‌’ಗಳ ಸಂಖ್ಯೆ ಹೆಚ್ಚಲಿದೆ.

*ರೇರಾ ಯಾವ ರೀತಿಯ  ಪರಿಣಾಮ ಬೀರಲಿದೆ?
ರೇರಾ  ಕಾಯ್ದೆಯಿಂದಾಗಿ ಪಾರದರ್ಶಕತೆ ಹೆಚ್ಚುವುದರಿಂದ ಗ್ರಾಹಕರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಇದು ಗ್ರಾಹಕರ ಆತ್ಮವಿಶ್ವಾಸ ಹೆಚ್ಚಿಸಲಿದೆ. ರಿಯಲ್‌ ಎಸ್ಟೇಟ್‌ ಉದ್ಯಮ ಸಂಘಟಿತ ರೀತಿಯಲ್ಲಿ ಕೆಲಸ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT