ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರಿಗೆ ‘ವನದರ್ಶನ’ ಬೇಕು

Last Updated 11 ಮೇ 2017, 19:30 IST
ಅಕ್ಷರ ಗಾತ್ರ

‘ಅರಣ್ಯ ಇಲಾಖೆ ನೆಟ್ಟ ಗಿಡಗಳನ್ನೆಲ್ಲ ಕಡಿದುಹಾಕಿರಿ’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ  ಹೇಳಿದ್ದು ‘ಪ್ರಜಾವಾಣಿ’ಯಲ್ಲಿ ವರದಿಯಾಗಿದೆ (ಮೇ 9). ಬಗರ್‌ಹುಕುಂ ಅಡಿಯಲ್ಲಿ ಜಮೀನು ಮಂಜೂರಿಗೆ ಗಿಡಗಳು ಸಮಸ್ಯೆ ಎಂದು ಶಾಸಕ ಮನೋಹರ ತಹಶೀಲ್ದಾರ್ ಹೇಳಿದಾಗ, ಗಿಡ ಕಡಿಯಲು ಹೇಳಿದ್ದರ ಹಿಂದಿನ ಗುಟ್ಟು ಬಹಿರಂಗವಾಗಿದೆ.  ‘ಕಾಡಲ್ಲಿ ಮಂಗ, ಹಂದಿ, ಕಾಡುಕೋಣ ಸಾಕೋದಕ್ಕಿಂತ ಮುಖ್ಯವಾಗಿ ಮನುಷ್ಯ ಬದುಕಬೇಕು’ ಎಂದು ಇದೇ ಸಚಿವರು ಹಿಂದೊಮ್ಮೆ ಹೇಳಿದ್ದರು. ವಿವಿಧ ಸಭೆಗಳಲ್ಲಿ ತಿಮ್ಮಪ್ಪನವರು  ಅರಣ್ಯದ ಮೇಲೆ ಮಾತಿನ ಕತ್ತಿ ಬೀಸುತ್ತಿರುತ್ತಾರೆ.

ಕೇಂದ್ರದಲ್ಲಿ ಪರಿಸರ ಇಲಾಖೆಯಿದೆ, ರಾಜ್ಯದಲ್ಲಿ ಅರಣ್ಯ ಇಲಾಖೆಯಿದೆ. ಅರಣ್ಯ, ಪರಿಸರ ಕಾನೂನುಗಳಿವೆ. ಕಾಡು ಕಾಯಲು ಕಠಿಣ ನಿಯಮಗಳಿದ್ದರೂ ರಾಜ್ಯದ ಪರಿಸರ ಪರಿಸ್ಥಿತಿ ವರ್ಷದಿಂದ ವರ್ಷಕ್ಕೆ ಹದಗೆಡುತ್ತಿದೆ. ಭೂಮಿಯ ಹವಾಮಾನ ಹೇಗೆ ಬದಲಾಗುತ್ತದೆಂದು ಅರಿಯಲು ನಮ್ಮದೇ ರಾಜ್ಯದ ಬೀದರ್, ಕಲಬುರ್ಗಿ, ಕೊಪ್ಪಳಕ್ಕೆ ಹೋಗಿ ಕೆಲವು ದಿನ ಬದುಕಿದರೆ ಯಾರಿಗೂ ಅರ್ಥವಾಗುತ್ತದೆ. ಹಗಲಿನಲ್ಲಿ  ಕಾದ ಕಾವಲಿಯಂತಾದ ಮನೆಗಳಲ್ಲಿರಲಾಗದೇ ಅಳಿದುಳಿದ ಬೇವು, ಹುಣಸೆ ಮರದಡಿಯಲ್ಲಿ ಕುಳಿತು  ದಿನಕಳೆಯುವ ಕಲಬುರ್ಗಿಯ ಆಳಂದ ಪಟ್ಟಣ ಹಾಗೂ ವಿಜಯಪುರದ ಇಂಚಗೇರಿ ಹಳ್ಳಿಯನ್ನು ನೋಡಬಹುದು. ಒಂದು ಮರದ ಬೆಲೆ ಆಗ ತಿಳಿಯುತ್ತದೆ. ಒಂದು ಸಸಿ ಬೆಳೆಸುವ ಕಷ್ಟ ಏನು ಎಂಬುದನ್ನು  ಅರಣ್ಯ ಇಲಾಖೆಯ ಕಾವಲುಗಾರರಲ್ಲಿ  ಕೇಳಬಹುದು.

ಬಡವರಿಗೆ ಭೂಮಿ ಮಂಜೂರು ಮಾಡಬಾರದೆಂದು ಯಾರೂ ಹೇಳುವುದಿಲ್ಲ, ನಿಯಮಗಳನ್ವಯ ನಡೆಯಬೇಕು. ನಾವೇ ರೂಪಿಸಿದ ಅರಣ್ಯ ನಿಯಮಗಳು ಅಡ್ಡಿಯಾಗುತ್ತವೆಂದು ಗಿಡ ಕಡಿಯಿರಿ ಎಂದು ಹೇಳುವುದು ಸಚಿವರ  ಯೋಚನಾ ಕ್ರಮಕ್ಕೆ  ಸಾಕ್ಷಿಯಾಗಿದೆ. ಸಭೆಗಳಲ್ಲಿ ಮನಸ್ಸಿಗೆ ಬಂದಂತೆ ಮಾತಾಡುವುದು  ಉನ್ನತ ಸ್ಥಾನದಲ್ಲಿರುವವರಿಗೆ ಶೋಭೆಯಲ್ಲ. ‘ಅರಣ್ಯ ಬೆಳೆಸಬೇಕು, ಹುಲಿ ಉಳಿಸಬೇಕು, ಕಾಡಿದ್ದರೆ ನಾಡು’ ಎಂದು ಸದಾ ಹೇಳುವ ಸರ್ಕಾರಿ ಘೋಷಣೆಗಳನ್ನು  ಆಡಳಿತವೇ ಅಣಕಿಸಿದಂತಾಗುತ್ತದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅರಣ್ಯಾಭಿವೃದ್ಧಿಗೆ ಹೊಸ ಹೊಸ ಪ್ರಯೋಗ ನಡೆಸಿರುವ ನಮ್ಮ ರಾಜ್ಯದಲ್ಲಿ ಈಗ ತೀವ್ರ ಬರ ಇದೆ. ‘ಕಾಡಿದ್ದರೆ ಮಳೆ, ಮಳೆ ಸುರಿದರೆ ಅನ್ನ’ ಎಂದು ಜನಜಾಗೃತಿ ಮೂಡಿಸಬೇಕಾದವರು ಹೀಗೆಲ್ಲ ಮಾತಾಡುವುದು ಸರಿಯೇ? ಒಮ್ಮೆ ಸಚಿವರ ಮಾತು ಕೇಳಿ ಜನರು ಅರಣ್ಯದ ಗಿಡಗಳನ್ನು ಕಡಿಯಲು ಆರಂಭಿಸಿದರೆ ಪರಿಣಾಮ ಏನಾದೀತು? ಯೋಚಿಸಬೇಕು. ಅರಣ್ಯ ಅತಿಕ್ರಮಣಕ್ಕೆ ಪ್ರೋತ್ಸಾಹಿಸುವ ಮಾತಾಡಿದರೆ ಕಾಡು ಕಾಯಲು ಶ್ರಮಿಸುವ  ನಮ್ಮದೇ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಯಾಗುತ್ತದೆ. ಹಸಿರಿನ ಬಗ್ಗೆ  ಹಗುರವಾಗಿ ಮಾತಾಡುವ ಶೈಲಿಯಿಂದ ಅತಿಕ್ರಮಣ ಎಷ್ಟು ಹೆಚ್ಚಿದೆ ಎಂಬುದನ್ನು ಪತ್ರಿಕೆಗಳು ಬಹಿರಂಗಪಡಿಸಿವೆ.
ಮಕ್ಕಳಲ್ಲಿ ಪರಿಸರ ಪ್ರೀತಿ ಹೆಚ್ಚಿಸಲು ‘ಚಿಣ್ಣರ ವನದರ್ಶನ’ ಕಾರ್ಯಕ್ರಮವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆರಂಭಿಸಿದೆ. ಕಾಗೋಡು ತಿಮ್ಮಪ್ಪನವರಂಥ ಸಚಿವರಿಗೆ ಹಾಗೂ ಶಾಸಕರಿಗೆ ಅರಣ್ಯದ ಮಹತ್ವದ ಅರಿವು ಮೂಡಿಸಲು ಯೋಗ್ಯ ತರಬೇತಿ ಕಾರ್ಯಕ್ರಮವನ್ನು ಸರ್ಕಾರ ರೂಪಿಸುವ  ಅಗತ್ಯವಿದೆ. ಇದಕ್ಕೆ ‘ಸಚಿವರ ವನದರ್ಶನ’ ಎಂದು ಹೆಸರಿಸಬಹುದು, ಮುಂಬರುವ ಜೂನ್ 5ರ ವಿಶ್ವ ಪರಿಸರ ದಿನದಂದು ಕಾರ್ಯಕ್ರಮವನ್ನು ವಿಧ್ಯುಕ್ತವಾಗಿ ಆರಂಭಿಸಲು ಅರಣ್ಯ ಸಚಿವರು ಯೋಚಿಸಬಹುದು. ಸಚಿವರಿಗೆ ಯೋಗ್ಯ ತರಬೇತಿ ನೀಡಿದ ಬಳಿಕ ಮಕ್ಕಳಿಗೆ ಪರಿಸರ ಸಂರಕ್ಷಣೆಯ ಕಾರ್ಯಕ್ರಮ ಆರಂಭಿಸೋಣ. ಏಕೆಂದರೆ ಒಂದೆಡೆ ಪರಿಸರ ರಕ್ಷಿಸಲು ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತ ಇನ್ನೊಂದೆಡೆ ಕಾಡು ಕಡಿಯಲು ಹೇಳುವುದು ಸರಿಯಲ್ಲ.  ಅತ್ಯಂತ ಹೆಚ್ಚು ಉಷ್ಣತೆಯಿರುವ ಹೈದರಾಬಾದ್ ಕರ್ನಾಟಕದ ಯಾವುದೇ ಊರಿನ ಎ.ಸಿ.ರಹಿತ ಕಟ್ಟಡವನ್ನು  ‘ಸಚಿವರ ವನದರ್ಶನ’ ತರಬೇತಿ ಕೇಂದ್ರಕ್ಕೆ ಆಯ್ದುಕೊಳ್ಳಬಹುದು, ವಾರಕ್ಕೊಮ್ಮೆ ಸ್ನಾನ ಮಾಡುವ ಪರಿಸ್ಥಿತಿಯಿರುವ ಇಲ್ಲಿನ ಹಳ್ಳಿಗಳಿಗೆ ಕ್ಷೇತ್ರ ದರ್ಶನಕ್ಕೆ ಕರೆದೊಯ್ಯಬಹುದು. ಕುಡಿಯುವ ನೀರಿನ ಸಮಸ್ಯೆಯಿಂದ ಸಾವನ್ನಪ್ಪುತ್ತಿರುವ ವನ್ಯಸಂಕುಲಗಳ ಸಾಕ್ಷ್ಯಚಿತ್ರ ಪ್ರದರ್ಶಿಸಬಹುದು.
***
ಮೀಸಲು ಅರಣ್ಯವೂ ಮುಗಿದೀತು!
ಭೂರಹಿತರಿಗೆ ಜಮೀನು ನೀಡುವುದರ ಪರವಾಗಿ ಕಾಗೋಡು ತಿಮ್ಮಪ್ಪ ಪದೇ ಪದೇ  ದನಿ ಎತ್ತಿದ್ದಾರೆ. ಕೆಲವು ಸಂಘಟನೆಗಳೂ ತಮ್ಮವರಿಗೆ ಜಮೀನು ಕೊಡಿಸಲು  ಆಗಾಗ  ಆಗ್ರಹಿಸುತ್ತಲೇ ಇವೆ. ‘ಸರ್ಕಾರದ ಭೂಮಿ ನಮ್ಮ ಭೂಮಿ’ ಎಂಬುದು ಕೆಲವರ ಘೋಷಣೆಯೂ  ಆಗಿದೆ. ಅರ್ಹರಾದವರಿಗೆ ನಿವೇಶನ, ಕೃಷಿ ಜಮೀನು ನೀಡುವುದು ಸರ್ಕಾರದ  ಕರ್ತವ್ಯ. ಅದು ಸಾಮಾಜಿಕ ನ್ಯಾಯವೂ ಹೌದು. ಆದರೆ, ‘ಅಳಿದುಳಿದ ಅರಣ್ಯ ಭೂಮಿಯನ್ನೂ ಅವರಿಗೆ ಕೊಟ್ಟುಬಿಡಿ’ ಎಂದು ಅಧಿಕಾರಿಗಳಿಗೆ ಧಮಕಿ ಹಾಕುವುದು ಎಷ್ಟು ಸರಿ? ಹೀಗೇ ಆದರೆ, ಮೀಸಲು ಅರಣ್ಯವೂ ಮುಗಿದೀತು.
ಇನಾಮತಿ, ಬಗರ್‌ಹುಕುಂ  ಹೆಸರಿನಲ್ಲಿ ಭೂಮಿ ಮಂಜೂರಾಗುತ್ತಲೇ ಬಂದಿದೆ. ಹಾಗೆ ಜಮೀನು ಪಡೆದ ಎಷ್ಟೋ ಕುಟುಂಬಗಳು ಈಗ ಮತ್ತೆ ಭೂಹೀನ ಆಗಿವೆಯಲ್ಲ, ಆ ಸರ್ಕಾರಿ ಜಮೀನು ಎಲ್ಲಿಹೋಯಿತು? ಎಷ್ಟೋ ದೇವಸ್ಥಾನಗಳ ಉಂಬಳಿ ಜಮೀನೂ ಇಂದು ಮತ್ತಾರದೋ ಪಾಲಾಗಿರುವುದನ್ನೂ ಕೆಲ ಸಮಿತಿಗಳು ಪತ್ತೆ ಮಾಡಿವೆಯಲ್ಲ! ಭೂಮಿತಿ ಕಾಯಿದೆ, ಉಳುವವನೇ ನೆಲದೊಡೆಯ ಕಾನೂನು ಜಾರಿಗೆ ಬಂದ ಮೇಲೆಯೂ  ಕೆಲವೆಡೆ ಸಣ್ಣ ಪುಟ್ಟ ಕೃಷಿಕರು ಭೂಹೀನರಾಗಿಯೂ, ಅದೇ ವೇಳೆ ಕೆಲ ರಾಜಕಾರಣಿಗಳು, ಉದ್ದಿಮೆದಾರರು, ಅಧಿಕಾರಿಗಳು ನೂರಾರು ಎಕರೆ ಭೂ ಮಾಲೀಕರೂ ಆಗಿದ್ದಾರಲ್ಲಾ! ಇದು ಕೇವಲ ಆಕಸ್ಮಿಕವೇ, ವಿಪರ್ಯಾಸವೇ? ಇದು ಯಾರಿಗೂ ತಿಳಿಯದ ರಹಸ್ಯವೇನೂ ಅಲ್ಲ.
ಸಮಾಜ ಕಲ್ಯಾಣದ ಹೆಸರಲ್ಲಿ  ಅರಣ್ಯಭೂಮಿಗೂ ಲಗ್ಗೆ ಹಾಕಿ, ಬರಿದು ಮಾಡುವ ಬದಲು ಎಲ್ಲರೂ ಉಳಿವ ಇತರ ದಾರಿ ಹುಡುಕುವುದೇ ವಿವೇಕವಲ್ಲವೇ? ಹಸಿವು ಎಂದು ಉಣ್ಣೋ ಗಂಗಾಳವನ್ನೂ ಮಾರಿಕೊಂಡರೆ ಹೇಗೆ? ಹಳ್ಳಿಗಳ ಬದುಕಿನ ಭಾಗವಾಗಿದ್ದ ಗೋಮಾಳ ಈಗ ಯಾರದೋ ಪಾಲಾಗಿದೆ. ದನಗಳಿಗೆ, ಕುರಿಗಳಿಗೆ ಮೇಯಲೂ ಜಾಗವಿಲ್ಲದೆ ಪಶುಪಾಲಕರು ದಿಕ್ಕೆಟ್ಟವರಾಗಿದ್ದಾರೆ.  ಅರಣ್ಯ ಭೂಮಿಯ  ಒತ್ತುವರಿಯಿಂದ ವನ್ಯಜೀವಿಗಳು  ನಗರಗಳಿಗೇ ನುಗ್ಗಿ ದಾಂದಲೆ ಮಾಡುವಂತಾಗಿದೆ. 
ಒಂದು ಸಮಸ್ಯೆಯ ಪರಿಹಾರದ ನೆವದಲ್ಲಿ  ಮತ್ತಷ್ಟು ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳುವ ಬುದ್ಧಿಗೆ ಇನ್ನಾದರೂ ಇತಿಶ್ರೀ ಹಾಡುವುದೇ ನಿಜವಾದ ಲೋಕಕಲ್ಯಾಣವಾಗುತ್ತದೆ.
  ಡಾ. ಟಿ. ಗೋವಿಂದರಾಜು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT