ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ದೇಶ, 12,000 ಕಿ.ಮೀ ಬೈಕ್‌ ಯಾನ

Last Updated 11 ಮೇ 2017, 20:11 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಮೂವರು ಸಾಹಸಿಗರು 45 ದಿನಗಳಲ್ಲಿ ಆರು ದೇಶಗಳ ಮೂಲಕ 12,000 ಕಿ.ಮೀ. ಬೈಕ್‌ ಯಾನ ಮಾಡಲು ಸಿದ್ಧತೆ ನಡೆಸಿದ್ದಾರೆ.

ನುರಿತ ರೈಡರಾದ ದೀಪಕ್‌ ಕಾಮತ್‌, ಸಹ ರೈಡರ್‌ಗಳಾದ ದಿಲೀಪ್‌ಕೃಷ್ಣ ಭಟ್‌ ಹಾಗೂ ಸುಧೀರ್‌ ಪ್ರಸಾದ್‌ ಎಂಬುವರು ಈ ಸಾಹಸ ಯಾನ ಮಾಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯವರಾದ ಇವರು, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ.

ಉಜ್ಬೆಕಿಸ್ತಾನದ ರಾಜಧಾನಿ ತಾಷ್ಕೆಂಟ್‌ನಿಂದ ಆರಂಭವಾಗುವ ಯಾನವು ತಜಕಿಸ್ತಾನ, ಕಿರ್ಗಿಸ್ತಾನ, ಕಜಕಿಸ್ತಾನ, ಮಂಗೋಲಿಯಾ, ರಷ್ಯಾ ದೇಶಗಳಲ್ಲಿ ಸಾಗಲಿದೆ.

‘ನಮ್ಮ ಸಾಹಸಕ್ಕೆ ಬೈಕ್‌ ತಯಾರಿಕಾ ಸಂಸ್ಥೆ ಬಜಾಜ್‌ ಪ್ರಾಯೋಜಕತ್ವ ನೀಡುತ್ತಿದೆ. ಸಂಸ್ಥೆಯು ಡಾಮಿನಾರ್‌–400 ಶ್ರೇಣಿಯ ಮೂರು ಬೈಕ್‌ಗಳನ್ನು ಸವಾರಿಗೆಂದೇ ವಿಶೇಷ ರೀತಿಯಲ್ಲಿ ಸಜ್ಜುಗೊಳಿಸುತ್ತಿದೆ. ಇದೇ 15ರಂದು ಬೈಕ್‌ಗಳು ಬೆಂಗಳೂರಿಗೆ ಬರಲಿವೆ’ ಎಂದು ದೀಪಕ್‌ ಕಾಮತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದೇ 25ರಂದು ಬೆಂಗಳೂರಿನಿಂದ ಪುಣೆಗೆ ಬೈಕ್‌ಗಳಲ್ಲಿ ಸಂಚಾರ ಆರಂಭಿಸಲಿದ್ದೇವೆ. ಅಲ್ಲಿಂದ ವಿಮಾನದ ಮೂಲಕ ಬೈಕ್‌ಗಳನ್ನು ತಾಷ್ಕೆಂಟ್‌ಗೆ ಕಳುಹಿಸಲಾಗುತ್ತದೆ. ನಾವು ಜೂನ್‌ 5ರಂದು ತಾಷ್ಕೆಂಟ್‌ಗೆ ತೆರಳಲಿದ್ದೇವೆ. 9ರಂದು ಅಲ್ಲಿಂದ ಹೊರಟು 450 ಕಿ.ಮೀ. ದೂರದ ತಜಕಿಸ್ತಾನದ ರಾಜಧಾನಿ ದುಶಾನ್ಬೆಗೆ ತಲುಪುತ್ತೇವೆ’ ಎಂದು ವಿವರಿಸಿದರು.

‘ತಜಕಿಸ್ತಾನದಿಂದ ಹೊರಟು ಕಿರ್ಗಿಸ್ತಾನ, ಕಜಕಿಸ್ತಾನ ದೇಶಗಳನ್ನು ಹಾದು ರಷ್ಯಾ ದೇಶವನ್ನು ಪ್ರವೇಶಿಸುತ್ತೇವೆ. ಅಲ್ಲಿಂದ ಮಂಗೋಲಿಯಾ ದೇಶ ದಾಟಿ ಮತ್ತೆ ರಷ್ಯಾವನ್ನು ಪ್ರವೇಶಿಸುತ್ತೇವೆ’ ಎಂದರು.

‘ವಿಶ್ವದ ಅತಿದೊಡ್ಡ ಸರೋವರ  ಎನಿಸಿರುವ ಬೈಕಾಲ್‌ ಸರೋವರದ ಸನಿಹದಲ್ಲೇ 2,300 ಕಿ.ಮೀ. ಸಾಗಬೇಕು. ಇದು ಕಠಿಣ ಹಾಗೂ ದುರ್ಗಮ ಹಾದಿ. ಅಲ್ಲಿಂದ ತೆರಳಿ ಸೈಬೀರಿಯಾದಲ್ಲಿರುವ ಮಗದಾನ್‌ನಲ್ಲಿ ಪ್ರಯಾಣ ಅಂತ್ಯಗೊಳ್ಳಲಿದೆ’ ಎಂದು ವಿವರಿಸಿದರು.

**

ಈ ಯಾನದ ಹಿಂದೆ ಸಾಹಸ ಪ್ರವೃತ್ತಿಯ ಹೊರತು ಬೇರೆ ಉದ್ದೇಶವಿಲ್ಲ.  ರಸ್ತೆಗಳೇ ಇಲ್ಲದ, ಹಳ್ಳ–ದಿಣ್ಣೆಗಳ ಮಾರ್ಗ, ಕೊರೆಯುವ ಚಳಿ  ಪ್ರದೇಶದಲ್ಲಿ ಪ್ರಯಾಣ ಮಾಡಲಿದ್ದೇವೆ.
-ದೀಪಕ್‌ ಕಾಮತ್‌, ಬೈಕ್‌ ರೈಡರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT