ಬಿಬಿಎಂಪಿ

ಗಿಡವು ಮರವಾಗಲು 21 ಇಂಚು ಜಾಗ!

ಟೆಂಡರ್‌ಶ್ಯೂರ್‌ ಕಾಮಗಾರಿಯ ಗುತ್ತಿಗೆದಾರರು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಅರಣ್ಯ ವಿಭಾಗದ ಸಹಯೋಗದಲ್ಲಿ ಕೆ.ಜಿ.ರಸ್ತೆ ಮತ್ತು ನೃಪತುಂಗ ರಸ್ತೆಯ ಎರಡೂ ಬದಿಗಳಲ್ಲಿ 200ಕ್ಕೂ ಹೆಚ್ಚು ಬೇವು, ಹೊಂಗೆ ಮತ್ತು ಸಂಪಿಗೆ ಗಿಡಗಳನ್ನು ನೆಟ್ಟಿದ್ದಾರೆ

ನೃಪತುಂಗ ರಸ್ತೆಯ ಬದಿಯಲ್ಲಿ ನೆಟ್ಟಿರುವ ಬೇವಿನ ಗಿಡಗಳು

ಬೆಂಗಳೂರು: ಟೆಂಡರ್‌ಶ್ಯೂರ್‌ ಯೋಜನೆಯಡಿ ಅಭಿವೃದ್ಧಿಪಡಿಸುತ್ತಿರುವ ರಸ್ತೆಗಳ ಇಕ್ಕೆಲಗಳಲ್ಲಿ ಮರವಾಗಿ ಬೆಳೆಯುವ ಸಸಿಗಳನ್ನು ನೆಟ್ಟಿರುವುದಕ್ಕೆ ಜನರಿಂದ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಗಿಡಗಳನ್ನು ಬೆಳೆಸಲು ಯೋಜನೆಯಲ್ಲಿ ಹೆಚ್ಚಿನ ಸ್ಥಳ ಮೀಸಲಿರಿಸಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಟೆಂಡರ್‌ಶ್ಯೂರ್‌ ಕಾಮಗಾರಿಯ ಗುತ್ತಿಗೆದಾರರು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಅರಣ್ಯ ವಿಭಾಗದ ಸಹಯೋಗದಲ್ಲಿ ಕೆ.ಜಿ.ರಸ್ತೆ ಮತ್ತು ನೃಪತುಂಗ ರಸ್ತೆಯ ಎರಡೂ ಬದಿಗಳಲ್ಲಿ 200ಕ್ಕೂ ಹೆಚ್ಚು ಬೇವು, ಹೊಂಗೆ ಮತ್ತು ಸಂಪಿಗೆ ಗಿಡಗಳನ್ನು ನೆಟ್ಟಿದ್ದಾರೆ. ನಗರದ ಸೌಂದರ್ಯ ವೃದ್ಧಿಸಲು ಅಲಂಕಾರಿಕ ಸಸಿಗಳನ್ನು ಬೆಳೆಸುತ್ತಿದ್ದಾರೆ.

‘ಪಾದಚಾರಿ ಮಾರ್ಗದುದ್ದಕ್ಕೂ ಗಿಡ ನೆಟ್ಟಿರುವ ಕಡೆ 21 ಇಂಚಿನಷ್ಟು ಅಗಲ ಜಾಗವನ್ನು ಬಿಡಲಾಗಿದೆ. ಗಿಡವು ಮರವಾಗಿ ಬೆಳೆಯಲು  ಇಷ್ಟು ಚಿಕ್ಕ ಜಾಗ ಸಾಲದು. ಹಸಿರು ಬೆಳೆಸುವ ಯೋಚನೆ ಇದ್ದರೆ ಹೆಚ್ಚು ಜಾಗವನ್ನು ಮೀಸಲಿಡಬೇಕಿತ್ತು’ ಎಂಬುದು ಪರಿಸರ ತಜ್ಞರು, ಪರಿಸರ ಪ್ರೇಮಿಗಳ ಅನಿಸಿಕೆ. 

ಸಸಿಗಳನ್ನು ನೆಡುವ ಸಂಪೂರ್ಣ ವೆಚ್ಚವನ್ನು ಗುತ್ತಿಗೆದಾರರೇ ಭರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಿಬಿಎಂಪಿ ಸಸಿಗಳ ಪೋಷಣೆ ಮಾಡಲಿದೆ.
ರಸ್ತೆ ಅಂಚಿನಲ್ಲಿ ಮರವಾಗಿ ಬೆಳೆಯುವ ಗಿಡಗಳನ್ನು ಹಾಕುವುದರಿಂದ    ಸುಸಜ್ಜಿತ ರಸ್ತೆ ಮತ್ತು ಪಾದಚಾರಿ ಮಾರ್ಗ ಹಾಳಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ಪಾದಚಾರಿ ಮಾರ್ಗದ ಕೆಳಗಡೆ ಕಾವೇರಿ ನೀರು ಪೂರೈಕೆ, ಕೊಳಚೆ ನೀರು ಸರಬರಾಜು, ಮಳೆನೀರು ಹರಿಯಲು ಮತ್ತು ಆಪ್ಟಿಕಲ್ ಫೈಬರ್‌ ಕೇಬಲ್‌ಗಳನ್ನು ಹಾಕಲು ಪ್ರತ್ಯೇಕ ಕೊಳವೆಗಳನ್ನು ಜೋಡಿಸಲಾಗಿದೆ. ಗಿಡಗಳು ದೊಡ್ಡದಾದ ಬಳಿಕ ಬೇರುಗಳು ಹರಡಿಕೊಳ್ಳುತ್ತವೆ. ಆಗ ಕೊಳವೆಗಳು ಬಿರುಕು ಬಿಡಬಹುದು’ ಎಂದು ವಕೀಲ ಮೂರ್ತಿ ಹೇಳಿದರು.

‘ಪಾದಚಾರಿ ಮಾರ್ಗದಲ್ಲಿ ಅಳವಡಿಸಿರುವ ಸಿಮೆಂಟ್‌ನ ಬ್ಲಾಕ್‌ಗಳು ಮತ್ತು ರಸ್ತೆಯ ಮೇಲಿನ ಕಾಂಕ್ರಿಟ್‌ ಹೊದಿಕೆ  ಮೇಲೇಳಬಹುದು’ ಎಂದು ಸೇಂಟ್‌ ಮಾರ್ಥಾಸ್‌ ಆಸ್ಪತ್ರೆಯ ಸಿಬ್ಬಂದಿ ಸಿಮೊನ್‌ ಅಭಿಪ್ರಾಯಪಟ್ಟರು.

‘ನಗರದಲ್ಲಿ ಮರಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಪಾಲಿಕೆ ಗಿಡ ಬೆಳೆಸಲು ಮುಂದಾಗಿರುವುದು ಒಳ್ಳೆ ಕೆಲಸ. ಗಿಡ ಹಚ್ಚುವಾಗ ಅಂತರ ಕಾಯ್ದುಕೊಂಡಿದ್ದಾರೆ. ಬೇರುಗಳು ಒಮ್ಮೆ ಭೂಮಿಯ ಆಳಕ್ಕೆ ಇಳಿದರೆ, ಕಾಮಗಾರಿಯ ರಚನೆಗೆ ಧಕ್ಕೆ ಆಗುವುದಿಲ್ಲ’ ಎಂದು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ಎಚ್‌.ಮುರುಳಿಧರ್‌ ತಿಳಿಸಿದರು.

**

‘ನೀರಿನ ಕೊಳವೆಗಳಿಗೆ ಧಕ್ಕೆ’

‘ಬೇವು ಮತ್ತು ಹೊಂಗೆಯ ಮರಗಳ ಬೇರುಗಳು ನೆಲದಡಿ ಹರಡುತ್ತವೆ. ಇವುಗಳಿಂದ ಮುಂಬರುವ ದಿನಗಳಲ್ಲಿ ನೀರಿನ ಕೊಳವೆಗಳಿಗೆ ಖಂಡಿತ ಧಕ್ಕೆ ಆಗಲಿದೆ’ ಎನ್ನುತ್ತಾರೆ ನಿವೃತ್ತ ಅರಣ್ಯ ಅಧಿಕಾರಿ ಎಸ್‌.ಜಿ.ನೇಗಿನಹಾಳ.

‘ಈಗ ಲಭ್ಯವಿರುವ ಸ್ಥಳಾವಕಾಶದಲ್ಲಿ ಸಂಪಿಗೆ, ಆಕಾಶಮಲ್ಲಿಗೆ, ಅಶೋಕ ವೃಕ್ಷ ಹಾಗೂ ಈಚಲು ಜಾತಿಗೆ ಸೇರಿದ ಗಿಡಗಳನ್ನು ಬೆಳೆಸಬಹುದು. ಇವು ನೇರವಾಗಿ ಬೆಳೆಯುತ್ತವೆ. ನಿರ್ವಹಣೆ ಕೂಡ ಸುಲಭ. ವಿದೇಶದಲ್ಲಿ ಪೈನ್‌ ಮರಗಳನ್ನೇ ರಸ್ತೆ ಬದಿ ಬೆಳೆಸುತ್ತಾರೆ’ ಎಂದು ತಿಳಿಸಿದರು.

**

‘ಆಗಾಗ ರೆಂಬೆಗಳನ್ನು ಕತ್ತರಿಸುತ್ತೇವೆ’

‘ಸರಾಸರಿ 10 ಅಡಿ ಅಂತರದಲ್ಲಿ ಗಿಡ ನೆಟ್ಟಿದ್ದೇವೆ. ಹಾಕಿರುವ ಗಿಡಗಳ ಕಾಂಡ ದಪ್ಪದಾಗಿ ಬೆಳೆಯುವುದಿಲ್ಲ. ಅವುಗಳನ್ನು ನೇರವಾಗಿ ಬೆಳೆಸಲು ರೆಂಬೆಗಳನ್ನು ಆಗಾಗ ಕತ್ತರಿಸುತ್ತೇವೆ. ಬೇವಿನ ಗಿಡ ನಿಧಾನವಾಗಿ ಬೆಳೆಯುತ್ತದೆ. ಹಾಗಾಗಿ ರಸ್ತೆ ಮತ್ತು ಫುಟ್‌ಪಾತ್‌ಗೆ ಧಕ್ಕೆ ಆಗುವುದಿಲ್ಲ’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್‌ (ಯೋಜನೆಗಳು) ಕೆ.ಟಿ.ನಾಗರಾಜ್‌ ಪ್ರತಿಕ್ರಿಯಿಸಿದರು.

‘ವಿದೇಶಗಳಲ್ಲಿ ಈ ರೀತಿ ಗಿಡಗಳನ್ನು ಬೆಳೆಸುತ್ತಾರೆ. ಅಲ್ಲಿ ತೊಂದರೆ ಆಗಿಲ್ಲ. ಬೇವಿನ ಗಿಡ ಮರವಾಗಲು ಹತ್ತಾರು ವರ್ಷ ಬೇಕು. ಅಲ್ಲಿಯವರೆಗೂ ಪಾದಚಾರಿ ಮಾರ್ಗ ಹಾಳಾಗುವುದಿಲ್ಲ’ ಎಂದು ಅವರು ತಿಳಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
‘ಶೆಟ್ಟಿ ಲಂಚ್ ಹೋಮ್’ ಹೋಟೆಲ್‌ ಮಾಲೀಕರ ಮೇಲೆ ಹಲ್ಲೆ ಪ್ರಕರಣ : ಎಸಿಪಿ ಮೇಲಿನ ಆರೋಪ ಸಾಬೀತು

ಬೆಂಗಳೂರು
‘ಶೆಟ್ಟಿ ಲಂಚ್ ಹೋಮ್’ ಹೋಟೆಲ್‌ ಮಾಲೀಕರ ಮೇಲೆ ಹಲ್ಲೆ ಪ್ರಕರಣ : ಎಸಿಪಿ ಮೇಲಿನ ಆರೋಪ ಸಾಬೀತು

20 Nov, 2017
ಸಾರಿಗೆ ಇಲಾಖೆಯ ಆನ್‌ಲೈನ್‌ ಸೇವೆಗಳು ತಾತ್ಕಾಲಿಕ ಸ್ಥಗಿತ

ಬೆಂಗಳೂರು
ಸಾರಿಗೆ ಇಲಾಖೆಯ ಆನ್‌ಲೈನ್‌ ಸೇವೆಗಳು ತಾತ್ಕಾಲಿಕ ಸ್ಥಗಿತ

20 Nov, 2017
ಇನ್ನೂ ಇಲ್ಲ ಮಾಗಿಯ ಚಳಿ ಅನುಭವ

ತಾಪಮಾನದಲ್ಲಿ ಏರಿಕೆ
ಇನ್ನೂ ಇಲ್ಲ ಮಾಗಿಯ ಚಳಿ ಅನುಭವ

20 Nov, 2017

ಪರಿಸರಕ್ಕೆ ಹಾನಿ
ಉಕ್ಕಿನ ಸೇತುವೆ ವಿರೋಧಿಸಿ ಪ್ರತಿಭಟನೆಗೆ ನಿರ್ಧಾರ

ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಂಘಟನೆಯ ನೇತೃತ್ವದಲ್ಲಿ ಶ್ರೀಕಾಂತ ಬಡಾವಣೆ ಹಾಗೂ ಮಾಧವ ನಗರದ ನಿವಾಸಿಗಳು ಶಿವಾನಂದ ವೃತ್ತದ ಬಳಿ ಶನಿವಾರ ಸಭೆ ನಡೆಸಿದರು.

20 Nov, 2017
ಪ್ಲೇಟ್‌ಲೆಟ್‌: ಅರ್ಜಿ ಸಲ್ಲಿಸದ ರೋಗಿಗಳು

ಮೇಯರ್‌ ನಿಧಿಯಿಂದ ಹಣ
ಪ್ಲೇಟ್‌ಲೆಟ್‌: ಅರ್ಜಿ ಸಲ್ಲಿಸದ ರೋಗಿಗಳು

20 Nov, 2017