ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೋಟು ರದ್ದತಿಯಿಂದ ದೀರ್ಘಾವಧಿ ಪರಿಣಾಮ’

Last Updated 11 ಮೇ 2017, 20:22 IST
ಅಕ್ಷರ ಗಾತ್ರ

ಬೆಂಗಳೂರು: ‘ನಗದುರಹಿತ ವ್ಯವಹಾರ ಜಾರಿಗೆ ತರಲು ನೋಟು ರದ್ದತಿ ಅಗತ್ಯವಾಗಿತ್ತು ಎಂದು ಸರ್ಕಾರ ಹೇಳಿದೆ. ಆದರೆ, ಹಳ್ಳಿಗಳಲ್ಲಿ ಈ ಹಿಂದೆಯೇ ನೋಟು ಇಲ್ಲದ ಕೊಡುಕೊಳ್ಳುವಿಕೆ ಅಸ್ತಿತ್ವದಲ್ಲಿತ್ತು’ ಎಂದು ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯ (ನಿಯಾಸ್‌) ಪ್ರಾಧ್ಯಾಪಕ ನರೇಂದ್ರ ಪಾಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರವು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ  ‘ನೋಟು ರದ್ದತಿ; ಆರು ತಿಂಗಳ ನಂತರ’ ಕುರಿತ ಚರ್ಚೆಯಲ್ಲಿ ಅವರು ಮಾತನಾಡಿದರು.

‘ಅರ್ಥಶಾಸ್ತ್ರದ ಪ್ರಕಾರ ರೂಪಾಯಿ ಮೌಲ್ಯ ಕಳೆದುಕೊಂಡಾಗ ಮಾತ್ರ ನೋಟು ರದ್ದತಿ ಸಂಭವಿಸುತ್ತದೆ. ಆದರೆ, ನಮ್ಮ ದೇಶದಲ್ಲಿ ಆ ರೀತಿಯ ಪರಿಸ್ಥಿತಿಯೇ ಬಂದಿರಲಿಲ್ಲ. ಆದರೂ ನೋಟು ರದ್ದತಿ ಮಾಡಲಾಯಿತು. ಇದು ಆರ್ಥಿಕತೆ ಮೇಲೆ ಅಲ್ಪ ಮತ್ತು ದೀರ್ಘಾವಧಿಯ ಪರಿಣಾಮ ಬೀರುತ್ತದೆ’ ಎಂದು ಅವರು ಹೇಳಿದರು.

‘ಯಜಮಾನ ಹೇಳಿದ ಮಾತನ್ನು ಯಾರೂ ಧಿಕ್ಕರಿಸುವುದಿಲ್ಲ. ಹಾಗಾಗಿ ಬಹಳಷ್ಟು ಜನ ಕಷ್ಟವಾದರೂ ಅದನ್ನು ಸಹಿಸಿಕೊಂಡರು. ಶೇ 92ರಷ್ಟು ಜನ ಅಲ್ಲ, ಶೇ 99ರಷ್ಟು ಜನ ಸಮೀಕ್ಷೆಯಲ್ಲಿ ಪ್ರಧಾನಿ ಅವರನ್ನು ಸಮರ್ಥಿಸಿಕೊಳ್ಳಬೇಕಿತ್ತು’ ಎಂದು ಹೇಳಿದರು.

ಬಿಜೆಪಿ ಯುವ ಮುಖಂಡ ತೇಜಸ್ವಿ ಸೂರ್ಯ, ‘ನೋಟು ರದ್ದತಿಗೆ ಅವಕಾಶ ಇದೆ ಎಂದು ಆರ್‌ಬಿಐ ಕಾಯ್ದೆ–1934ರ ಸೆಕ್ಷನ್‌ 26 ಸ್ಪಷ್ಟವಾಗಿ ಹೇಳಿದೆ. ಹಾಗಾಗಿ ಈ ನಡೆ ಕಾನೂನಾತ್ಮಕವಾಗಿ ಸರಿಯಾಗಿದೆ. ರಾಜ್ಯ ಹೈಕೋರ್ಟ್‌, ದೆಹಲಿ ಹೈಕೋರ್ಟ್‌ನಲ್ಲಿ ನೋಟು ರದ್ದತಿ ವಿರುದ್ಧ ಅನೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದಾಖಲಾಗಿವೆ. ನೋಟು ರದ್ದತಿ ಮಾಡಲು ಕಾನೂನಿನಲ್ಲಿ ಅವಕಾಶ ಇದೆಯೇ, ಜನರು ಮತ್ತು ಸರ್ಕಾರದ ನಡುವೆ ಆಗಿರುವ ಒಪ್ಪಂದವನ್ನು ಸರ್ಕಾರವೇ ಏಕಪಕ್ಷಿಯವಾಗಿ ಮುರಿಯಬಹುದೇ ಎಂಬ ಎರಡು ಪ್ರಶ್ನೆಗಳನ್ನು ಪ್ರಮುಖವಾಗಿ ಕೇಳಿದ್ದಾರೆ’ ಎಂದು ಹೇಳಿದರು.

‘ನೋಟು ರದ್ದತಿಯ ಬಳಿಕ ಹಣ ಪಡೆಯಲು ಸರತಿಯಲ್ಲಿ ನಿಂತು ಜನ ಸಾಯುತ್ತಿದ್ದಾರೆ ಎಂದು ಮಾಧ್ಯಮದಲ್ಲಿ ವಾಸ್ತವಕ್ಕಿಂತ ದೊಡ್ಡದಾಗಿ ಬಿಂಬಿಸಲಾಯಿತು. ಜನ ಕಷ್ಟವನ್ನು ಅನುಭವಿಸಿರುವುದು ನಿಜ. ಆದರೆ, ಭ್ರಷ್ಟಾಚಾರದಿಂದ ಹಣ ಮಾಡಿದವರಿಗೆ ಶಿಕ್ಷೆ ಆಗುತ್ತದೆ ಎಂಬ ಕಾರಣಕ್ಕೆ ಅದನ್ನು ಸಹಿಸಿಕೊಂಡಿದ್ದಾರೆ’ ಎಂದು ಹೇಳಿದರು.

ಸ್ಕ್ರಾಲ್‌.ಇನ್‌ ರೀಡರ್ಸ್‌ ಸಂಪಾದಕ ರಾಮಮನೋಹರ್‌ ರೆಡ್ಡಿ ಅವರು ತಮ್ಮ ‘ಡಿಮೊನಿಟೈಸೇಷನ್‌’ ಪುಸ್ತಕದ ಕುರಿತು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT