ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಸ್ಲಿಮರ ನೋವು, ನಲಿವು’ ಸಂವಾದ ಕಾರ್ಯಕ್ರಮ

Last Updated 12 ಮೇ 2017, 9:33 IST
ಅಕ್ಷರ ಗಾತ್ರ
ಹಾಸನ: ಮುಸ್ಲಿಂ ಸಮುದಾಯದ ನೋವು, ನಲಿವುಗಳನ್ನು ಹಂಚಿಕೊಳ್ಳುವ ಉದ್ದೇಶದಿಂದ ಡಿವೈಎಫ್‌ಐ ಸಂಘಟನೆಯಿಂದ ಮೇ 14 ಮತ್ತು 15ರಂದು ಮಂಗಳೂರಿನ ಬಲ್ಮಠದ ಶಾಂತಿ ನಿಲಯದಲ್ಲಿ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಾಹಿತಿ ಬಾನು ಮುಷ್ತಾಕ್‌ ತಿಳಿಸಿದರು.
 
ದೇಶದಲ್ಲಿ ಮುಸ್ಲಿಂ ಸಮುದಾಯ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನೆಲೆಗಟ್ಟಿನಲ್ಲಿ ಹಲವು ನೋವುಗಳನ್ನು ಅನುಭವಿಸುತ್ತಿದೆ. ಸರ್ಕಾರಗಳ ಅನಾದರ ನೀತಿಗೆ ಬಲಿಯಾಗುತ್ತಿದೆ. ಬಹುತೇಕ ಜನರು ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದು, ಇಂತಹ ಹಲವು ಸಮಸ್ಯೆಗಳನ್ನು ಚರ್ಚಿಸಲು ಎರಡು ದಿನಗಳ ಕಾಲ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 
 
ದೇಶದ ಜನಸಂಖ್ಯೆಯಲ್ಲಿ ಶೇ 15ರಷ್ಟು ಮುಸ್ಲಿಮರು ಇದ್ದಾರೆ. ಉದ್ಯೋಗ, ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಸ್ಥಿತಿ–ಗತಿಗಳಲ್ಲಿ ಸಮುದಾಯದವರು ಹೀನಾಯ ಸ್ಥಿತಿಯಲ್ಲಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. 
 
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಜೆಟ್‌ನಲ್ಲಿ ಸಮುದಾಯದ ಪರ ಕಾಳಜಿ ವಹಿಸಿಲ್ಲ. ಮತ್ತೊಂದೆಡೆ ಕೋಮುವಾದಕ್ಕೆ ಬಲಿಪಶುಗಳಾಗುತ್ತಿದ್ದಾರೆ. ಇಂತಹ ಅಸುರಕ್ಷಿತ ಕಾಲಘಟ್ಟದಲ್ಲಿ ತೀವ್ರವಾದಿಗಳು ಮತ್ತು ಭಯೋತ್ಪಾದಕರ ಹಣೆಪಟ್ಟಿ ಹಚ್ಚಿ ವಿಚಾರಣೆ ನೆಪದಲ್ಲಿ ವರ್ಷಗಟ್ಟಲೆ ಶಿಕ್ಷೆ ವಿಧಿಸಲಾಗುತ್ತಿದೆ ಎಂದು ದೂರಿದರು. 
 
ಸಮುದಾಯದ ಬಗ್ಗೆ ಹೊಂದಿರುವ ಪೂರ್ವಗ್ರಹ, ಸಂಶಯ ದೂರಮಾಡಬೇಕು. ಜನಾಂಗದಲ್ಲಿ ಆತ್ಮವಿಶ್ವಾಸ ತುಂಬಬೇಕು. ರಾಜಕೀಯ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಪ್ರಬಲರಾಗಬೇಕು ಎಂಬ ಉದ್ದೇಶದಿಂದ ಸಂವಾದ ಏರ್ಪಡಿಸಲಾಗಿದೆ ಎಂದರು. 
 
ಡಿವೈಎಫ್‌ಐನ ರಾಷ್ಟ್ರೀಯ ಅಧ್ಯಕ್ಷ ಮುಹಮ್ಮದ್‌ ರಿಯಾಜ್‌ ಕಾರ್ಯಕ್ರಮ ಉದ್ಘಾಟಿಸುವರು. ಪ್ರೊ.ಮುಜಫರ್‌ ಅಸ್ಸಾದಿ, ಪ್ರೊ.ರಹಮತ್‌ ತರೀಕೆರೆ, ರಂಜಾನ್‌ ದರ್ಗಾ, ಮಾಜಿ ಸಚಿವ ಬಿ.ಎ.ಮೊಯಿದ್ದಿನ್‌, ದಿನೇಶ್‌ ಅಮೀನ್‌ ಮಟ್ಟು, ಜಿ.ವಿ.ಶ್ರೀರಾಮರೆಡ್ಡಿ, ಅಬ್ದುಸ್ಸಲಾಂ ಪುತ್ತಿಗೆ ಭಾಗವಹಿಸುವರು ಎಂದು ತಿಳಿಸಿದರು. 
 
ಡಿವೈಎಫ್‌ಐನ ಜಿಲ್ಲಾ ಘಟಕ ಕಾರ್ಯದರ್ಶಿ ಎಂ.ಜಿ.ಪೃಥ್ವಿ, ವಕೀಲರಾದ ಎಚ್‌.ಇ.ಅನ್‌ಷಾದ್‌, ಶಾಹಿನ್‌ ಷಾ, ವಾಸುದೇವ್‌ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT