ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದಲ್ಲಿ ಐಸಿಟಿ ಅಳವಡಿಕೆ ಶೀಘ್ರ

ಶಿಕ್ಷಣದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಮ್ಮೇಳನ; ಸಚಿವರ ಭರವಸೆ
Last Updated 12 ಮೇ 2017, 9:46 IST
ಅಕ್ಷರ ಗಾತ್ರ
ಮೈಸೂರು: ಕರ್ನಾಟಕ ಜ್ಞಾನ ಆಯೋಗವು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಅಳವಡಿಸಿಕೊಳ್ಳುವಂತೆ ವರದಿ ನೀಡಿದೆ. ಶೀಘ್ರದಲ್ಲೇ ಇದನ್ನು ಅಳವಡಿಸಿಕೊಳ್ಳ ಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‌ ಸೇಠ್ ತಿಳಿಸಿದರು.
 
ಇಲ್ಲಿನ ಸೆನಟ್‌ಭವನದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ ಮೆಂಟ್ ಗುರುವಾರ ಏರ್ಪಡಿ ಸಿದ್ದ ‘ಶಿಕ್ಷಣದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕುರಿತ ಸಮ್ಮೇಳನ’ ಉದ್ಘಾಟಿಸಿ ಮಾತನಾಡಿದರು.
 
ಮುಂಬರುವ ಶೈಕ್ಷಣಿಕ ಸಾಲಿನಿಂದ 1ರಿಂದ 8ನೇ ತರಗತಿವರೆಗೆ ಹೊಸ ಪಠ್ಯಕ್ರಮ ಹಾಗೂ 9 ಮತ್ತು 10ನೇ ತರಗತಿಗೆ ಎನ್‌ಸಿಇಆರ್‌ಟಿ ಪಠ್ಯಕ್ರಮ ಜಾರಿಯಾಗಲಿದೆ ಎಂದು ಅವರು ತಿಳಿಸಿದರು.
 
ರಾಜ್ಯದಲ್ಲಿ 4,396 ಶಾಲೆಗಳಿಗೆ ಕಂಪ್ಯೂಟರ್, ಯುಪಿಎಸ್, ಪ್ರೊಜೆಕ್ಟರ್, ಸಾಫ್ಟ್‌ವೇರ್, ಹಾರ್ಡ್‌ವೇರ್, ಹಾರ್ಡ್‌ ಡಿಸ್ಕ್ ನೀಡಲಾಗಿದೆ. ಆದರೆ, ಸಾಕಷ್ಟು ಶಾಲೆಗಳಲ್ಲಿ ಸಕಾಲಕ್ಕೆ ವಿದ್ಯುತ್ ಇಲ್ಲದಿರುವುದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
 
ಮಾಹಿತಿ ಸಿಂಧು ಉತ್ತಮ: ಸಮ್ಮೇಳನದ ದಿಕ್ಸೂಚಿ ಭಾಷಣ ಮಾಡಿದ ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷ ಕಸ್ತೂರಿರಂಗನ್, ‘ರಾಜ್ಯದ ಮಾಹಿತಿ ಸಿಂಧು ಕಾರ್ಯಕ್ರಮ ಉತ್ತಮ ವಾದುದು’ ಎಂದು ಶ್ಲಾಘಿಸಿದರು.
 
ಕೇರಳದ ‘ಐಟಿ ಅಟ್ ಸ್ಕೂಲ್‌’ ಯೋಜನೆಯನ್ನು ಹೊರಗುತ್ತಿಗೆಗೆ ನೀಡಲಾಗಿದೆ. ಆದರೆ, ಮಾಹಿತಿ ಸಿಂಧು ಯೋಜನೆಯಲ್ಲಿ ಎಲ್ಲರನ್ನೂ ಒಳಗೊಳ್ಳುವ ವ್ಯವಸ್ಥೆ ಇದೆ. ಇದು ಕಲಿಕೆಯ ದೃಷ್ಟಿಯಿಂದ ಅತ್ಯುತ್ತಮವಾದುದು ಎಂದು ಹೇಳಿದರು.
 
ಬೋಧನೆಗೆ ಬಳಸುತ್ತಿರುವ ತಂತ್ರಜ್ಞಾನವು ರಾಜ್ಯದ ಕಟ್ಟಕಡೆಯ ವಿದ್ಯಾರ್ಥಿಗೂ ತಲುಪುತ್ತಿದೆಯೇ ಎಂಬುದನ್ನು ಶಿಕ್ಷಕರು ಗಮನಿಸಬೇಕು. ಆಗ ಮಾತ್ರ ಕಲಿಕೆ ತನ್ನ ಗುರಿ ತಲುಪುತ್ತದೆ ಎಂದು ತಿಳಿಸಿದರು.
 
ಶಿಕ್ಷಣಕ್ಕಾಗಿಯೇ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಬೇಕೆ ಹೊರತು ಬೇರೆ ಉದ್ದೇಶಕ್ಕೆ ಬಳಸಿದ ತಂತ್ರಜ್ಞಾನಗಳನ್ನು ಶಿಕ್ಷಣಕ್ಕೆ ಬಳಸಿಕೊಳ್ಳುವುದು ಸರಿಯಲ್ಲ. ವರ್ಡ್ ಪ್ರೊಸೆಸರ್‌ನ್ನು ವ್ಯವಹಾರ ಉದ್ದೇಶಕ್ಕೆ ರೂಪಿಸಲಾಗಿದೆ. ಆದರೆ, ಈಗ ಅದನ್ನು ಶಿಕ್ಷಣಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಬೋಧನೆಯ ಉದ್ದೇಶ ಈಡೇರುವುದಿಲ್ಲ ಎಂದು ಹೇಳಿದರು.
 
ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಅಧ್ಯಕ್ಷ ಡಾ.ಆರ್.ಬಾಲಸುಬ್ರಹ್ಮಣ್ಯಂ, ಎಕ್ಸಲ್ ಆಫ್ ಟೆಕ್ನಾಲಜಿಸ್ ಕಂಪನಿಯ ಪ್ರಶಾಂತ್ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT