ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಶಾಲೆಗಳ ಸ್ಥಿತಿಗತಿ ಖುದ್ದು ಪರಿಶೀಲನೆ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಹೇಳಿಕೆ
Last Updated 12 ಮೇ 2017, 10:33 IST
ಅಕ್ಷರ ಗಾತ್ರ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕನ್ನಡ ಭಾಷೆಯ ಬಳಕೆ, ಅನುಷ್ಠಾನ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ ಎಸ್‌.ಜಿ.ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ  ‘ಶಿಕ್ಷಣ ಇಲಾಖೆ ಇಲ್ಲಿ ಜಾರಿಗೊಳಿಸುವ ಕ್ರಮಗಳು ಇತರೆ ಜಿಲ್ಲೆಗಳಲ್ಲೂ ಅನುಸರಿಸಬಹುದು. ವಸ್ತುಸ್ಥಿತಿ ಅರಿಯಲು ಶಾಲೆಗಳ ಪುನರ್‌ ಆರಂಭದ ಬಳಿಕ ಖುದ್ದು ಪರಿಶೀಲನೆಗೆ ಪ್ರವಾಸ ಕೈಗೊಳ್ಳುತ್ತೇನೆ’ ಎಂದು ಶಿಕ್ಷಣಾ ಧಿಕಾರಿಗಳಿಗೆ ತಿಳಿಸಿದರು.
 
ಕನ್ನಡ ಅನುಷ್ಠಾನ, ಮಕ್ಕಳ ಕೊರತೆ ನಡುವೆಯೂ ಶಾಲೆಗಳನ್ನು ಮುಚ್ಚದೇ ನಡೆಸುತ್ತಿರುವ ಕ್ರಮ, ಗ್ರಂಥಾಲಯಗಳ ನಿರ್ವಹಣೆ ಇನ್ನಿತರ ಕಾರ್ಯಗಳನ್ನು ಅವರು ಶ್ಲಾಘಿಸಿದರು.
 
‘ಶಿಕ್ಷಣ ಇಲಾಖೆ ಕಾರ್ಯಕ್ರಮಗಳ ವರದಿಯಲ್ಲಿ ಸಾಕಷ್ಟು ಹೊಸ ಯೋಜನೆ ಗಳನ್ನು ಉಲ್ಲೇಖಿಸಿದೆ. 114 ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಿದ್ದರೂ ಬಂದ್‌ ಮಾಡದೆ ನಡೆಸುತ್ತಿರುವುದಾಗಿ ತಿಳಿಸಿದೆ. ಇದು,  ಉತ್ತಮ ಕ್ರಮ’ ಎಂದರು.
 
ಪ್ರಭಾರ ಡಿಡಿಪಿಐ ಮಲ್ಲಿಸ್ವಾಮಿ ಇದಕ್ಕೆ, ‘ಬಂದ್ ಆಗಿರುವ 12 ಶಾಲೆಯ ವಿದ್ಯಾರ್ಥಿಗಳೂ ಸಮೀಪದ ಸರ್ಕಾರಿ ಶಾಲೆಗಳಿಗೆ ಪ್ರವೇಶ ಪಡೆದಿದ್ದಾರೆ. ಮಕ್ಕಳ ಕೊರತೆಯಿಂದ ಸಾಂಸ್ಕೃತಿಕ ಹಿನ್ನಡೆಗೆ ಕಾರಣವಾಗಬಹುದು ಎಂದು ಬೇರೆ ಶಾಲೆಗಳಿಗೆ ಸೇರಿಸಿದ್ದಾರೆ’ ಎಂದರು.
 
‘ಬಿಇಒಗಳು ಶಾಲೆಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಬೇಕು. ಸಿಬಿ ಎಸ್‌ಇ ಶಾಲೆಗಳಲ್ಲೂ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಅಭ್ಯಾಸ ಮಾಡಬೇಕು. ಸರ್ಕಾರದ ಸುತ್ತೋಲೆಯನ್ನು ಕಡ್ಡಾಯವಾಗಿ ಜಾರಿ ಗೊಳಿಸಬೇಕು’ ಎಂದು ಅಧ್ಯಕ್ಷರು ಸೂಚಿಸಿದರು.
 
‘ಜಿಲ್ಲಾಡಳಿತದ ವೆಬ್‌ಸೈಟ್‌ ಕನ್ನಡಮಯವಾಗಿದೆ. ಬೇರೆ ಯಾವುದೇ ಜಿಲ್ಲೆ ಯಲ್ಲೂ ವೆಬ್‌ಸೈಟ್‌ಗೆ ಯುನಿಕೋಡ್‌ ಬಳಸಿಲ್ಲ. ಕೊಡಗು ಮಾದರಿಯಾಗಿದೆ. ಆದರೆ, ವಿವಿಧ ಇಲಾಖೆಗಳ ಟೆಂಡರ್‌ ಪ್ರಕ್ರಿಯೆ, ನಾಮಫಲಕಗಳು ಕನ್ನಡ ಬಳಕೆಯಾಗಿಲ್ಲ ಎಂಬ ದೂರುಗಳಿವೆ. ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕು. ಕನ್ನಡದಲ್ಲಿ ನಾಮಫಲಕ ಅಳವಡಿಸ ದಿದ್ದರೆ ನಗರಸಭೆ, ಪುರಸಭೆ ಪರವಾನಗಿ ನವೀಕರಣ ಮಾಡಬಾರದು’ ಎಂದು ತಾಕೀತು ಮಾಡಿದರು.
 
‘ವಿರಾಜಪೇಟೆ, ಕುಟ್ಟ, ಮಾಕುಟ್ಟ ಭಾಗದಲ್ಲಿ ಕನ್ನಡದ ಬದಲಿಗೆ ಮಲಯಾಳಂ ಭಾಷೆಯ ನಾಮಫಲಕ ಗಳು ಹೆಚ್ಚಾಗಿವೆ. ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕೆಂಬ ನಿಯಮವಿದ್ದರೂ ಪಾಲಿಸುತ್ತಿಲ್ಲ. ಜಿಲ್ಲಾ ಪಂಚಾಯಿತಿ ಸಭೆ ಗಳಲ್ಲೂ ಕನ್ನಡದ ಬಗ್ಗೆ ಕೊನೆಗೆ ಚರ್ಚೆ ಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
 
ಇದರಿಂದ ಸಮಗ್ರ ಚರ್ಚೆ ಸಾಧ್ಯವಾಗುತ್ತಿಲ್ಲ. ಮೊದಲಿಗೆ ಚರ್ಚೆಗೆ ಅವಕಾಶ ಕಲ್ಪಿಸ ಬೇಕು. ಪ್ರಾಧಿಕಾರದ ಅಧ್ಯಕ್ಷರು ಈ ಸಂಬಂಧ ನಿರ್ದೇಶನ ನೀಡಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್‌ ಸಾಗರ್‌ ಕೋರಿದರು. ‘ಅಗತ್ಯ ಕ್ರಮ ತೆಗೆದು ಕೊಳ್ಳಬೇಕು’ ಎಂದು ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗೆ ಸೂಚಿಸಿದರು.
 
‘ಜಿಲ್ಲೆಯ 138 ಕಾರ್ಖಾನೆಗಳಲ್ಲಿ ಕೇವಲ 550 ಕನ್ನಡಿಗರಿಗೆ ಕೆಲಸ ನೀಡಲಾಗಿದೆ. ‘ಸಿ’ ಮತ್ತು ‘ಡಿ’ ದರ್ಜೆಯಲ್ಲಿ ನೂರರಷ್ಟು ಕನ್ನಡಿಗರಿಗೆ ಉದ್ಯೋಗಾವ ಕಾಶ ಕಲ್ಪಿಸಬೇಕು. ‘ಎ’ 50ರಷ್ಟು, ‘ಬಿ’ ದರ್ಜೆ 80ರಷ್ಟು ಉದ್ಯೋಗ ನೀಡಲೇ ಬೇಕು. ನೆಲದ ಕಾರ್ಮಿಕರಿಗೆ ಮೊದಲು ಆದ್ಯತೆ ಸಿಗಬೇಕು’ ಎಂದು ಸೂಚಿಸಿದರು.
 
ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ, ‘ನಾಡಭಾಷೆ, ಆಡುಭಾಷೆ ಕನ್ನಡ. ಕನ್ನಡದಲ್ಲೇ ವ್ಯವಹರಿಸಲು ಆದ್ಯತೆ ನೀಡಲಾಗುತ್ತಿದೆ. ಶುದ್ಧ ಕನ್ನಡ ಬಳಸುವ ಕಿಚ್ಚು ಇರಬೇಕು’ ಎಂದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್‌, ಪ್ರಾಧಿಕಾರದ ಕಾರ್ಯದರ್ಶಿ ಮುರಳೀಧರ್‌ ಹಾಜರಿದ್ದರು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT