ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಾಲಯಗಳ ಊರು ಸಂತೆಕಸಲಗೆರೆ

ಇಲ್ಲಿದೆ ಕತ್ತಿಗಳ ಸಂಗ್ರಹಾಲಯ, ಯುಗಾದಿ ವೇಳೆ ವೈಭವದ ಸಿದ್ದೇಶ್ವರ ಜಾತ್ರೆ
Last Updated 12 ಮೇ 2017, 10:40 IST
ಅಕ್ಷರ ಗಾತ್ರ
ಮಂಡ್ಯ: ನಗರದ ಸಮೀಪದಲ್ಲೇ ಇರುವ ಐತಿಹಾಸಿಕ ಸಂತೆಕಸಲಗೆರೆ ಗ್ರಾಮ ದೇವಾಲಯಗಳ ಬೀಡು, ಕೋಟೆ ಕೊತ್ತಲುಗಳ ನಾಡಾಗಿತ್ತು. ಈಗಲೂ ಗ್ರಾಮದಲ್ಲಿ 25ಕ್ಕೂ ಹೆಚ್ಚು ದೇವಾಲಯಗಳಿರುವುದು ವಿಶೇಷ.
 
ನಗರದಿಂದ ಕೇವಲ ಐದು ಕಿಲೋಮೀಟರ್‌ ದೂರ ಇರುವ ಗ್ರಾಮದಲ್ಲಿ ವೆಂಕಟರಮಣ ದೇವಾ ಲಯ, ಹನುಮಂತರಾಯನ ಗುಡಿ, ಮಸಣಕಮ್ಮನ ಗುಡಿ, ಗದ್ದೆ ಬಸವನ ಗುಡಿ, ಬಸವನ ಗುಡಿ, ಈಶ್ವರನ ದೇವಾಲಯ, ಬೋರೆದೇವರ ಗುಡಿ, ಲಕ್ಷ್ಮಿ ದೇವಿ ಹಾಗೂ ಎಲ್ಲಮ್ಮನ ಗದ್ದಿಗೆ, ಹೊಂಬಾಳಮ್ಮನ ಗುಡಿ, ಮಾರಮ್ಮನ ಗುಡಿ, ಮಂಚಮ್ಮನ ಗುಡಿ, ಚೌಡೇಶ್ವರಿ ಹಾಗೂ ಧೂಪದ ಚೌಡಮ್ಮನ ಗುಡಿ, ಭೂಮಿ ಸಿದ್ದೇಶ್ವರ ದೇವಾಲಯ ಸೇರಿದಂತೆ 25 ಕ್ಕೂ ಹೆಚ್ಚು ದೇವಾಲಯಗಳು ಕಾಣಸಿಗುತ್ತವೆ. ಒಂದೊಂದು ದೇವಾಲಯಕ್ಕೂ ಅದರದೇ ಆದ ಐತಿಹ್ಯವಿದೆ.
 
ವೀರಕಲ್ಲು ವಿಶೇಷ: ಗ್ರಾಮವನ್ನು ಕಾಯಲು ಒಬ್ಬ ವೀರನೊಬ್ಬನನ್ನು ನೇಮಿಸಲಾಗಿರುತ್ತದೆ. ಆ ಸಂದರ್ಭದಲ್ಲಿ ಧೂಪದ ಚೌಡಮ್ಮ ಇಬ್ಬರು ರಾಕ್ಷಸರನ್ನು ಕೊಂದು ಊರಿನ ಒಳಗೆ ಪ್ರವೇಶಿಸುವ ಸಂದರ್ಭದಲ್ಲಿ  ಕಾವಲು ಕಾಯುತ್ತಿದ್ದ ವೀರನು ಧೂಪದ ಚೌಡಮ್ಮನನ್ನು ತಡೆಯುತ್ತಾನೆ. ಎಷ್ಟು ಪರಿಯಾಗಿ ಕೇಳಿಕೊಂಡರು ಬಿಡದೇ ಹೋದಾಗ ಅವನ ತಲೆ ಕತ್ತರಿಸುತ್ತಾರೆ.
 
‘ಆ ವೀರನ ತಲೆ ಬಿದ್ದ ಸ್ಥಳದಲ್ಲಿ ‘ವೀರಗಲ್ಲು’ ಇದೆ. ಈ ಕಲ್ಲನ್ನು ಯಾರು ತುಳಿಯುತ್ತಾರೋ ಅವರ ಕಾಲು ಊದಿಕೊಳ್ಳುತ್ತದೆ. ನಂತರ ಆ ವೀರಕಲ್ಲಿಗೆ ತಪ್ಪಾಯಿತು ಎಂದು ಹೇಳಿ ಪೂಜೆ ಸಲ್ಲಿಸಿದರೆ ಊತ ಕಡಿಮೆ ಆಗುತ್ತದೆ ಎಂಬ ನಂಬಿಕೆ ಇದೆ’ ಎಂದು ಗ್ರಾಮದ ಪಟೇಲ್‌ ಕಾಳೇಗೌಡ ಹೇಳುತ್ತಾರೆ.
 
ಕತ್ತಿಗಳ ಸಂಗ್ರಹ: ‘ಗ್ರಾಮದ ಮಸಣಕಮ್ಮ ದೇವಾಲಯದಲ್ಲಿ ಮೈಸೂರಿನ ಒಡೆಯರು, ಸೈನಿಕರು ಯುದ್ಧದ ಸಂದರ್ಭದಲ್ಲಿ ಬಳಸಿದ ಕತ್ತಿ, ಗುರಾಣಿಗಳು ಸಂಗ್ರಹಿಸಿಡಲಾಗಿದೆ. ವೀರಹಬ್ಬದ ಸಂದರ್ಭದಲ್ಲಿ ಅವುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ’ ಎಂದು ಸಿದ್ದಯ್ಯ(ದ್ವಂಸಣ್ಣ), ಸೋಮಣ್ಣ, ಸಿದ್ದ ರಾಜು, ಪೂಜಾರಿಗಾಳದ ಚಿಕ್ಕ ಬೋರ ಯ್ಯ, ದೊಡ್ಡಬೋರಯ್ಯ ಹೇಳುತ್ತಾರೆ.
 
ಗದ್ದೆ ಬಸವನ ದೇವಾಲಯ:  ‘ರೈತರು ಬೆಳೆದಿದ್ದ ಫಸಲನ್ನು ಹೋರಿ  ಪ್ರತಿದಿನ ತಿಂದು ಹಾಳು ಮಾಡುತ್ತಿರುತ್ತದೆ. ಇದನ್ನು ಕಂಡ ಗ್ರಾಮಸ್ಥರು ಗದ್ದೆ ಬಯಲಿನಲ್ಲಿ ಅದನ್ನು ಸರಪಳಿಯಿಂದ ಕಟ್ಟಿ ಹಾಕುತ್ತಾರೆ. ನಂತರ ಅದು ಅಲ್ಲೇ ಕಲ್ಲಿನ ಮೂರ್ತಿ ಆಯಿತು.
 
ನಂತರ ಒಂದು ಗುಡಿ ಕಟ್ಟಿಸಿ ಒಂದು ಸುಂದರ ಲಿಂಗದ ಮೂರ್ತಿ ಪ್ರತಿಷ್ಠಾಪಿಸ ಲಾಯಿತು’ ಎಂದು ಗ್ರಾಮದ ಎಸ್‌.ಎಂ. ನಟರಾಜ್‌ ನೆನಪಿನ ಬುತ್ತಿ ಬಿಚ್ಚಿಟ್ಟರು. ಹೊಂಬಾಳಮ್ಮ, ಚೌಡೇಶ್ವರಿ ರಂಗ ಉತ್ಸವ ಹಾಗೂ ಸಿಡಿ ಹಬ್ಬವು ವಿಜೃಂಭಣೆಯಿಂದ ನಡೆಯುತ್ತದೆ. 
 
ಜಾತ್ರೋತ್ಸವ: ಗ್ರಾಮದಿಂದ ಒಂದು ಕಿ.ಮೀ. ದೂರದ ವಿಶಾಲ ಪ್ರದೇಶದಲ್ಲಿ ಭೂಮಿ ಸಿದ್ದೇಶ್ವರ ದೇವಾಲಯ ಇದೆ. ಆದರೆ ದೇವಾಲಯದ ಒಳಗೆ ಇರುವ ಒಂದು ಕರಿಕಲ್ಲು ಭೂಮಿಯ ಒಳಗಡೆ ಮೂಡಿದೆ ಎಂಬ ಕತೆಯಿದೆ. 
 
ಯುಗಾದಿ ಹಬ್ಬ ಮುಗಿದ ಮಾರನೇ ದಿನ ಜಾತ್ರೆ ಪ್ರಾರಂಭವಾಗುತ್ತದೆ. ಮಂಗಲ, ಕೊತ್ತತ್ತಿ, ಮೊತ್ತಹಳ್ಳಿ, ಸಂತೆಕಸಲಗೆರೆ ಸೇರಿ ಅಕ್ಕಪಕ್ಕದ ಗ್ರಾಮದ ಭಕ್ತರು ಹರಕೆ ಕಟ್ಟಿಕೊಂಡ ದೇವಾಲಯದಲ್ಲಿ ಬಾಯಿಬೀಗ ಸೇವೆ ಮಾಡುತ್ತಾರೆ.  
 
ಈ ಸ್ಥಳದಲ್ಲಿ 1682 ರಲ್ಲಿ ಮೈಸೂರಿನ ಸೈನಿಕರಿಗೂ ಹಾಗೂ ಮರಾಠ ಸೈನಿಕರಿಗೂ ಯುದ್ಧ ನಡೆಯಿತು. ಆಗ ವೀರ ಮಕ್ಕಳು ತಮ್ಮ ಒಡೆಯನಿಗೆ ಜಯ ಸಿಗಲಿ ಎಂದು ಹರಕೆ ಕಟ್ಟಿಕೊಳ್ಳಲಾಯಿತು. ಯುದ್ಧ ನಡೆದ ಸ್ಥಳದಲ್ಲಿ ಮರಿಗಳನ್ನು ಬಲಿ ಕೊಟ್ಟು ಶಾಂತಿ ಮಾಡುವ ಸಂಪ್ರದಾಯ ನಡೆದುಕೊಂಡು ಬರುತ್ತಿದೆ.
 
ಕಲೆಗೂ ಹೆಸರುವಾಸಿ: ಗ್ರಾಮದಲ್ಲಿ ಕುಸ್ತಿ, ಪೂಜಾ ಕುಣಿತ, ಕೋಲಾಟ, ಕತ್ತಿವರಸೆ, ಡೊಳ್ಳುಕುಣಿತ, ಮಾರಿ ಕುಣಿತ, ಸೋಬಾನೆ ಪದ ಕಲಾವಿದರು ಸಿಗುತ್ತಾರೆ. ನಾಟಿ ವೈದ್ಯರಾಗಿದ್ದ ತಾತಯ್ಯ ಹಲವು ಕಾಯಿಲೆಗಳಿಗೆ ಗಿಡಮೂಲಿಕೆ ಕೊಡುತ್ತಿ ದ್ದರು. ಅವರು ಮಕ್ಕಳಾದ ವೆಂಕಟೇಶ್‌, ಸಂಪತ್‌ ಈಗಲೂ ಮುಂದುವರಿಸಿ ಕೊಂಡು ಹೋಗುತ್ತಿದ್ದಾರೆ. ಚಾಮರಾಜು ಎಂಬುವವರು ಹಾಲಿಗೆ ಹೊಕ್ಕ ಜೋರಿ ತೆಗೆಯುವುದರಲ್ಲಿ ಹೆಸರುವಾಸಿ ಆಗಿದ್ದಾರೆ. 
 
ಸಂತೆಕಸಲಗೆರೆ ಗ್ರಾಮದಲ್ಲಿ 100ಕ್ಕೂ ಹೆಚ್ಚು ಲಿಂಗ ಭೂಮಿಯಲ್ಲಿ ಊತು ಹೋಗಿವೆ. ಚೌಡೇಶ್ವರಿ ಗುಡಿ, ವೆಂಕಟರಮಣಸ್ವಾಮಿ ದೇವಾಲಯದ ಸುಂದರ ಮೂರ್ತಿಗಳು, ಮಹದೇಶ್ವರ ಗುಡಿ ಸೇರಿಹಲವು ದೇವಾಲಯಗಳು ಒಂದೊಂದು ಇತಿಹಾಸದ ಕತೆ ಹೇಳುತ್ತವೆ. 
ಮೋಹನ್ ರಾಗಿಮುದ್ದನಹಳ್ಳಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT