ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡು–ಕಳಕಳಿಯ ಸವಕಳಿ

ಮಾಸ್ತಿಗುಡಿ
Last Updated 12 ಮೇ 2017, 11:23 IST
ಅಕ್ಷರ ಗಾತ್ರ

ಮಾಸ್ತಿಗುಡಿ
ನಿರ್ಮಾಣ: ಸುಂದರ್‌ ಪಿ. ಗೌಡ್ರು, ಅನಿಲ್ ಕುಮಾರ್ ವಿ.
ನಿರ್ದೇಶನ: ನಾಗಶೇಖರ್
ತಾರಾಗಣ: ಅಮೂಲ್ಯ, ಕೃತಿ ಕರಬಂಧ, ವಿಜಯ್

‘ಕಾಡು ಉಳಿಸಿ, ನಾಡು ಉಳಿಸಿ’ ಎನ್ನುವ ನಾಯಕಿಯ ಪುಲಕದ ಮಾತು ಕೇಳಿ ಮಾವುತನಿಗೆ ಅಚ್ಚರಿ. ‘ಇಷ್ಟೊತ್ತು ಸರಿ ಇದ್ದೆಯಲ್ಲಮ್ಮ, ಈಗೇನಾಯಿತು?’ ಎನ್ನುವ ಮಾವುತನ ಉದ್ಗಾರ, ನಾಯಕಿಯ ಮಾತು ಕೃತಕ ಎನ್ನುವುದನ್ನು ಸೂಚಿಸುತ್ತದೆ. ಈ ಅಸಹಜತೆ ಸಿನಿಮಾದ ಆಶಯದಲ್ಲೂ ಇದೆ. ಕಾಡು ಹಾಗೂ ಹುಲಿಗಳನ್ನು ಉಳಿಸುವ ಬಗ್ಗೆ ಮಾತನಾಡುವ ಸಿನಿಮಾ, ಆ ಕಾಳಜಿಯನ್ನು ದಾಟಿಸಲು ಅನುಸರಿಸುವ ಮಾರ್ಗ ನೇರವಾಗಿಲ್ಲ, ಸಹಜವಾಗಿಲ್ಲ.

ವಿಜಯ್‌ ನಿರ್ದೇಶನದ ‘ಗಂಧದಗುಡಿ’ಗೂ ಈ ಚಿತ್ರಕ್ಕೂ ಯಾವ ಸಂಬಂಧವೂ ಇಲ್ಲ ಎಂದು ಚಿತ್ರತಂಡ ಹೇಳಿಕೊಂಡಿದೆ. ಆದರೆ, ನಾಗಶೇಖರ್‌ ನಿರ್ದೇಶನದ ‘ಮಾಸ್ತಿ ಗುಡಿ’ ಅನೇಕ ಸಂದರ್ಭಗಳಲ್ಲಿ ರಾಜಕುಮಾರ್‌ ಸಿನಿಮಾವನ್ನು ನೆನಪಿಸುತ್ತದೆ. ‘ಗಂಧದಗುಡಿ’ಯ ನಾಯಕ ನಾಡು–ನುಡಿಯ ಬಣ್ಣನೆಯ ಕುರಿತು ಹಾಡಿದರೆ, ಇಲ್ಲಿನ ನಾಯಕ ಬದುಕಿನ ಸಾರ್ಥಕತೆಯ ಕುರಿತು ಹಾಡುತ್ತಾನೆ.

ಎರಡೂ ಸಿನಿಮಾಗಳಲ್ಲಿ ಅಪ್ಪ–ಅಮ್ಮನಿಲ್ಲದ ಪುಟಾಣಿಯೊಬ್ಬಳಿದ್ದಾಳೆ ಹಾಗೂ ಆಕೆ ದುರಂತ ಅಂತ್ಯ ಕಾಣುತ್ತಾಳೆ. ಎರಡೂ ಚಿತ್ರಗಳ ಕ್ಲೈಮ್ಯಾಕ್ಸ್‌ನಲ್ಲಿ ಕಾಡನ್ನು ಸುಡಲು ಖಳನಟರು ಪ್ರಯತ್ನಿಸುತ್ತಾರೆ. ದೆವ್ವದ ನೆರಳು ಕೂಡ ಅಲ್ಲೂ ಇಲ್ಲೂ ಇದೆ. ಈ ಸಾಮ್ಯತೆಗಳ ಜೊತೆಗೆ, ‘ಗಂಧದಗುಡಿ’ ಚಿತ್ರ ಕೊಡುವ ಕಾಡಿನ ಆಪ್ತ ಅನುಭವ ಹಾಗೂ ಹೃದಯಂಗಮ ಸನ್ನಿವೇಶಗಳು ‘ಮಾಸ್ತಿ ಗುಡಿ’ಯಲ್ಲಿ ಇಲ್ಲದಿರುವುದನ್ನು ಗಮನಿಸಬೇಕು. ರಾಜಕುಮಾರ್‌ ಸಿನಿಮಾದಲ್ಲಿ ದಕ್ಷ ಅಧಿಕಾರಿ ಅರಣ್ಯವನ್ನು ರಕ್ಷಿಸಿದರೆ, ಇಲ್ಲಿ ಅಧಿಕಾರಿಗಳು ಭ್ರಷ್ಟರಾಗಿದ್ದಾರೆ ಇಲ್ಲವೇ ಖಳರ ಷಡ್ಯಂತ್ರಕ್ಕೆ ಮಣಿದವರಾಗಿದ್ದಾರೆ.

ಮಾವುತನ ಮಗನಿಗೆ ಕಾಡಿನ ಬಗ್ಗೆ, ವಿಶೇಷವಾಗಿ ಹುಲಿಗಳ ಬಗ್ಗೆ ಪ್ರೀತಿ. ಕಾಡು–ಹುಲಿಗಳನ್ನು ರಕ್ಷಿಸಲಿಕ್ಕಾಗಿ ಅವನು ನಡೆಸುವ ಹೋರಾಟದ ಕಥೆ ‘ಮಾಸ್ತಿ ಗುಡಿ’ಯದು. ಈ ಹೋರಾಟದಲ್ಲಿ ನಾಯಕನ ದೈಹಿಕ ಶಕ್ತಿ ಹಾಗೂ ಮಾಸ್ತಮ್ಮನ ರಕ್ಷೆ ಒಂದೆಡೆಗಿದ್ದರೆ, ಇನ್ನೊಂದೆಡೆ ಖಳನಟರ ದುಷ್ಟತನ ಹಾಗೂ ಮಾಂತ್ರಿಕಶಕ್ತಿಯಿದೆ. ಈ ಮಾಂತ್ರಿಕ ಛಾಯೆ ಕಥನದ ಆಶಯವನ್ನು ಮಸುಕಾಗಿಸಿ, ದೈವ–ದೆವ್ವದ ಸಂಘರ್ಷವಾಗಿ ಸಿನಿಮಾ ಕೊನೆಗೊಳ್ಳುತ್ತದೆ.

ಅಮೂಲ್ಯ ಹಾಗೂ ಕೃತಿ ಕರಬಂಧ ಚಿತ್ರದ ನಾಯಕಿಯರು. ಇಬ್ಬರೂ ತಮಗೆ ದೊರೆತ ಪಾತ್ರಗಳಿಗೆ ಜೀವತುಂಬಿದ್ದಾರೆ. ಉಳಿದಂತೆ ಬಿ. ಜಯಶ್ರೀ ಹಾಗೂ ರಂಗಾಯಣ ರಘು ಪಾತ್ರಪೋಷಣೆ ಚೆನ್ನಾಗಿದೆ. ಮಾಸ್ತಿಯ ಪಾತ್ರದಲ್ಲಿ ವಿಜಯ್‌ ಉತ್ಸಾಹದಿಂದ ನಟಿಸಿದ್ದಾರೆ.

ತಾಂತ್ರಿಕವಾಗಿ ‘ಮಾಸ್ತಿಗುಡಿ’ ಸಮಾಧಾನಕರ ಹಂತದಿಂದ ಮೇಲೇರುವುದಿಲ್ಲ. ಕಾಡಿನ ಛಾಯೆಯನ್ನು ಸೆರೆಹಿಡಿಯಲು ಸತ್ಯ ಹೆಗಡೆ ದಣಿದಿದ್ದರೆ, ಆ ದಣಿವನ್ನು ಸಾಧು ಕೋಕಿಲ ಸಂಗೀತ ಮತ್ತಷ್ಟು ಹೆಚ್ಚಿಸುತ್ತದೆ.

ಖಳನಟರಾದ ಅನಿಲ್‌ ಹಾಗೂ ಉದಯ್‌ ಪುಟ್ಟ ಪಾತ್ರಗಳಲ್ಲಿ ನೆನಪಿನಲ್ಲುಳಿಯುತ್ತಾರೆ. ಈ ಇಬ್ಬರು ಕಲಾವಿದರು ಚಿತ್ರೀಕರಣದ ಸಮಯದಲ್ಲಿ ಹೆಲಿಕಾಪ್ಟರ್‌ನಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಧುಮುಕಿ ಮುಳುಗಿ ಸಾವನ್ನಪ್ಪಿದ್ದರು. ರವಿವರ್ಮ ಸಾಹಸ ಸಂಯೋಜನೆಯ ಈ ದೃಶ್ಯ ಇಲ್ಲದೆ ಹೋಗಿದ್ದರೆ ಸಿನಿಮಾಕ್ಕೆ ಯಾವ ಕೊರತೆಯೂ ಆಗುತ್ತಿರಲಿಲ್ಲ.

ಸಿನಿಮಾದ ಆರಂಭದಲ್ಲಿ ಗೆಳೆಯರ ಅಗಲಿಕೆ ಕುರಿತಂತೆ ನಿರ್ಮಾಪಕರ ಶ್ರದ್ಧಾಂಜಲಿ ರೂಪದ ಮಾತುಗಳನ್ನು ಹೊರತುಪಡಿಸಿದರೆ, ದುರಂತದ ಯಾವ ಉಲ್ಲೇಖವೂ ಸಿನಿಮಾದಲ್ಲಿಲ್ಲ. ಅಷ್ಟರಮಟ್ಟಿಗೆ ಇದೊಂದು ಸಂವೇದನಾರಹಿತ ಚಿತ್ರ. ನಾಗಶೇಖರ್ ಹಿಂದಿನ ಸಿನಿಮಾಗಳ ಭಾವೋತ್ಕರ್ಷ ಹಾಗೂ ನವಿರುತನ ಈ ಚಿತ್ರದಲ್ಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT