ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಂಗಲ್‌’ಪ್ರಿಯ ನೆಲ್ಸನ್ ವೂಸ್‌

ನಗರದ ಅತಿಥಿ
Last Updated 12 ಮೇ 2017, 19:30 IST
ಅಕ್ಷರ ಗಾತ್ರ

ತಾಯ್ನಾಡಿನ ಸೆಳೆತಕ್ಕೆ ಸಿಕ್ಕಿ ಆಸ್ಟ್ರೇಲಿಯಾಕ್ಕೆ ಹಿಂತಿರುಗಿದ ನೆಲ್ಸನ್ ಜನ ಸಾಮಾನ್ಯರಿಗೆ ಇಷ್ಟವಾಗುವ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಆಸ್ಟ್ರೇಲಿಯನ್ ಸಿನಿಮೋತ್ಸವದಲ್ಲಿ ಪಾಲ್ಗೊಂಡಿದ್ದ ಅವರು ‘ಮೆಟ್ರೊ’ದೊಂದಿಗೆ ಮಾತನಾಡಿದರು...

*ಆಸ್ಟ್ರೇಲಿಯಾದ ಸಿನಿಮಾ ಜಗತ್ತು ಎಂಥ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತದೆ?
ಎಲ್ಲಾ ರೀತಿಯ ಕಥೆಗಳನ್ನು ಸಿನಿಮಾಕ್ಕೆ ಬಳಸುತ್ತೇವೆ. ನನಗಂತೂ ಜನಸಾಮಾನ್ಯರಿಗೆ ಇಷ್ಟವಾಗುವ ಸಿನಿಮಾಗಳನ್ನು ನಿರ್ಮಿಸುವ ಆಸೆ. ಸಾಮಾನ್ಯರು ಮಾಡಿರುವ ಅಸಾಧಾರಣ ಸಾಧನೆ, ಸಾಹಸದ ಕತೆಯುಳ್ಳ ಸಿನಿಮಾಗಳನ್ನು ನಿರ್ಮಿಸಲು ಆದ್ಯತೆ ಕೊಡುತ್ತೇನೆ.

*ಹಾಲಿವುಡ್‌ನ ಸಿನಿಮಾಗಳಿಗೂ, ಆಸ್ಟ್ರೇಲಿಯನ್ ಸಿನಿಮಾಗಳಿಗೂ ಇರುವ ವ್ಯತ್ಯಾಸವೇನು?
ಹಾಲಿವುಡ್‌ನಲ್ಲಿ ಇಪ್ಪತ್ತು ವರ್ಷ ಕೆಲಸ ಮಾಡಿದ ಅನುಭವದ ಮೇಲೆ ಹೇಳುವುದಾದರೆ ಅಲ್ಲಿ ಬ್ಲಾಕ್ ಬಸ್ಟರ್, ಸಾಹಸ ಪ್ರಧಾನ ಸಿನಿಮಾಗಳಿಗೆ ಆದ್ಯತೆ ನೀಡುತ್ತಾರೆ. ಅಲ್ಲಿ ಸ್ಪೆಷಲ್ ಎಫೆಕ್ಟ್‌ನ ಸಿನಿಮಾಗಳಿಗೆ ಹೆಚ್ಚು ಬೇಡಿಕೆ.

ಕಾಮಿಕ್ ಬುಕ್ ಪಾತ್ರಗಳನ್ನು ವೈಭವೀಕರಿಸುತ್ತಾರೆ. ₹100 ಕೋಟಿ ಬಂಡವಾಳದ ಸಿನಿಮಾ ಮಾಡಿದರೆ ಅಷ್ಟೇ ಮೊತ್ತದ ಬಂಡವಾಳವನ್ನು ವಾಪಸ್ ಪಡೆಯುತ್ತಾರೆ.

ಆದರೆ ಆಸ್ಟ್ರೇಲಿಯಾದ ಸಿನಿ ಜಗತ್ತು ಹಾಗಲ್ಲ. ಹಾಲಿವುಡ್‌ನಷ್ಟು ಬಂಡವಾಳ ಹೂಡದಿದ್ದರೂ ನಾವು ಸ್ಥಳೀಯ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಗುಣಮಟ್ಟದ ಸಿನಿಮಾಗಳನ್ನು ತಯಾರಿಸುತ್ತೇವೆ.  ‘ಲಯನ್’ ಸಿನಿಮಾ ಇದಕ್ಕೆ ಉದಾಹರಣೆ. ಈ ಸಿನಿಮಾ ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ  ಬಿಡುಗಡೆ ಕಂಡು ಲಾಭ ಗಳಿಸಿ, ಪ್ರಶಸ್ತಿಗೂ ಭಾಜನವಾಯಿತು. 

*ಅಲ್ಲಿಯ ಸಿನಿಮಾ ಮಾರುಕಟ್ಟೆ ಹೇಗಿದೆ?
ಆಸ್ಟ್ರೇಲಿಯಾ ಸರ್ಕಾರ ಸಿನಿಮೋದ್ಯಮಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತದೆ. ಹೊಸದಾಗಿ ಸಿನಿಮಾ ತಯಾರಿಸುವವರಿಗೆ ಬೆನ್ನುತಟ್ಟುವ ಕೆಲಸವನ್ನೂ ಮಾಡುತ್ತದೆ. ಪ್ರೇಕ್ಷಕರನ್ನು ಸೆಳೆಯಲು ಅಲ್ಲಿನ ಸಿನಿಮಾ ಜಗತ್ತು ಅಪ್‌ಡೇಟ್ ಮಾಡಿಕೊಳ್ಳುತ್ತಿರುತ್ತದೆ.

ಬಹಳಷ್ಟು ಮಂದಿ ಚಿತ್ರಮಂದಿರಗಳಿಗಿಂತ ಟೆಲಿವಿಷನ್, ಮೊಬೈಲ್‌ಗಳಲ್ಲೇ ಸಿನಿಮಾ ನೋಡುತ್ತಾರೆ. ಅವರನ್ನು ಸಿನಿಮಾ ಮಂದಿರಕ್ಕೆ ಕರೆ ತರಲು ಆಸ್ಟ್ರೇಲಿಯಾ ಸಿನಿಮೋದ್ಯಮ ಹಲವು ಪ್ರಯೋಗಗಳನ್ನು ಮಾಡುತ್ತಿರುತ್ತದೆ.

ಭಾರತದಂತೆಯೇ ಆಸ್ಟ್ರೇಲಿಯಾದಲ್ಲಿ ಸಿನಿಮಾ ಪ್ರೇಮಿಗಳಿದ್ದಾರೆ. ನನ್ನ ಮಕ್ಕಳನ್ನೂ ಸಿನಿಮಾ ಮಂದಿರಕ್ಕೆ ಕರೆದೊಯ್ಯುತ್ತೇನೆ. ನಾನಂತೂ ಸಿನಿಮಾವನ್ನು ತುಂಬಾ ಎಂಜಾಯ್ ಮಾಡುತ್ತೇನೆ.

*ಅಲ್ಲಿನ ಜನರು ಭಾರತೀಯ ಸಿನಿಮಾಗಳನ್ನು ಇಷ್ಟಪಡುತ್ತಾರೆಯೇ?
ಖಂಡಿತಾ. ಆಸ್ಟ್ರೇಲಿಯಾದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಬೇಡಿಕೆ ಇದೆ. ಅದರಲ್ಲೂ ಭಾವನಾತ್ಮಕ ಸಿನಿಮಾಗಳನ್ನು ಅಲ್ಲಿನ ಪ್ರೇಕ್ಷಕರು ಇಷ್ಟ ಪಡುತ್ತಾರೆ. ಇತ್ತೀಚೆಗೆ ‘ದಂಗಲ್’ ಸಿನಿಮಾ ನೋಡಿ ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. 

*ಇತ್ತೀಚೆಗೆ ಯಾವ ಭಾರತೀಯ ಸಿನಿಮಾ ನೋಡಿದಿರಿ?
ನಾನೂ ‘ದಂಗಲ್’ ನೋಡಿದೆ. ಅಪ್ಪನ ಕನಸನ್ನು ನನಸು ಮಾಡುವ ಪುಟ್ಟ ಹೆಣ್ಣುಮಕ್ಕಳ ಕಥೆ ತುಂಬಾ ಇಷ್ಟವಾಯಿತು. ಚಿತ್ರವನ್ನು ಎಷ್ಟೊಂದು ಚೆನ್ನಾಗಿ ತೆಗೆದಿದ್ದಾರೆ.

*ಭಾರತೀಯ ಸಿನಿಮಾ ರಂಗದಲ್ಲಿ ಯಾರ ಜತೆ ಕೆಲಸ ಮಾಡಲು ಇಷ್ಟಪಡುತ್ತೀರಿ?
ನಾನಂತೂ ದಂಗಲ್ ಸಿನಿಮಾದ ನಿರ್ದೇಶಕ ನಿತೀಶ್ ತ್ರಿಪಾಠಿ ಅವರ ದೊಡ್ಡ ಅಭಿಮಾನಿಯಾಗಿದ್ದೇನೆ. ಎಂಥ ಅದ್ಭುತ ನಿರ್ದೇಶಕ ಅವರು. ಬಹುಶಃ ಅವರು ನನ್ನ ಜತೆ ಕೆಲಸ ಮಾಡುತ್ತಾರೆ ಇಲ್ಲವೋ ಗೊತ್ತಿಲ್ಲ. ನಾನಂತೂ ಅವರ ಜತೆ ಕೆಲಸ ಮಾಡಲು ಬಯಸುತ್ತೇನೆ.

‘ಪ್ರೈಡ್ ಅಂಡ್ ಪ್ರಿಜ್ಯುಡಿಸ್’ ಸಿನಿಮಾದ ನಿರ್ದೇಶಕಿ ಗುರಿಂದರ್ ಚಡ್ಡಾ  ಅವರೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ. ಆಕೆ ಒಳ್ಳೆಯ ನಿರ್ದೇಶಕಿ. ಆಕೆಯ ಚಿತ್ರಗಳು ನನಗಿಷ್ಟ.

ನೆಲ್ಸನ್ ಹೇಳಿದ ರಾಜಕುಮಾರ್‌ ಕತೆ
ಏರ್‌ಪೋರ್ಟಿನಿಂದ ನಗರಕ್ಕೆ ಬರುವಾಗ ಟ್ಯಾಕ್ಸಿ ಚಾಲಕನೊಂದಿಗೆ ಕುಶಲೋಪರಿ ಮಾತನಾಡುತ್ತಿದ್ದಾಗ ಆತ ಕನ್ನಡದ ನಟ ರಾಜಕುಮಾರ್‌ ಅವರ ಅಭಿಮಾನಿ ಎಂದು ತಿಳಿಯಿತು. ನಮ್ಮಿಬ್ಬರ ಸಂಭಾಷಣೆ ಆರಂಭವಾದಾಗ ಆತ ನಾನು ಆಸ್ಟ್ರೇಲಿಯಾದವನಾಗಿದ್ದರಿಂದ ಕ್ರಿಕೆಟ್‌ ಇಷ್ಟವೆಂದು ಭಾವಿಸಿದ್ದ. ಆದರೆ ನನಗೆ ಕ್ರಿಕೆಟ್ ಎಂದರೆ ಅಷ್ಟಕ್ಕಷ್ಟೆ.

ಆ ಚಾಲಕನೊಂದಿಗೆ ಹಾದಿಯುದ್ದಕ್ಕೂ ಮಾತನಾಡಿದಾಗ ರಾಜಕುಮಾರ್‌ ಅವರ ಬಗ್ಗೆ ತಿಳಿಯಿತು. ಪಯಣದುದ್ದಕ್ಕೂ ಅವರ ಅಭಿನಯದ ಸಿನಿಮಾಗಳ ಪರಿಚಯ ಮಾಡಿಕೊಟ್ಟ ಚಾಲಕನ ಸಿನಿಪ್ರೇಮ ಕಂಡು ನಾನು ಮೂಕವಿಸ್ಮಿತನಾದೆ.  ಒಬ್ಬ ನಟನಿಗೆ ಇಷ್ಟೊಂದು ಸಂಖ್ಯೆಯ ಅಭಿಮಾನಿಗಳಿದ್ದಾರೆ ಎಂದು ಕೇಳಿ ಅಚ್ಚರಿಯಾಯಿತು.
-ನೆಲ್ಸನ್ ವೂಸ್,  ಸಿನಿಮಾ ನಿರ್ದೇಶಕ, ಆಸ್ಟ್ರೇಲಿಯಾ

*
ನೆಲ್ಸನ್  ನಿರ್ಮಾಣದ ಚಿತ್ರಗಳು
ನೆಡ್ ಕೆಲ್ಲಿ, ರೆಡ್ ಡಾಗ್, ಕಿಲ್ ಮಿ ತ್ರೀ ಟೈಮ್ಸ್, ರೆಡ್‌ ಡಾಗ್: ಟ್ರೂ ಬ್ಲೂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT