ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪನ್ನು ಹಸಿರಾಗಿಸಿ

Last Updated 12 ಮೇ 2017, 19:30 IST
ಅಕ್ಷರ ಗಾತ್ರ

ಆ ಮೂರು ದಿನಗಳೆಂದರೆ ಎಲ್ಲರಿಗೂ ಒಂದು ರೀತಿಯ ಮುಜುಗರ, ಏನೋ ಅನಾನುಕೂಲ, ಹೇಳುವಂತಿಲ್ಲ, ಆದರೂ ಅನುಭವಿಸಲೇಬೇಕು. ಆ ದಿನಗಳಲ್ಲಿ ಬೇರೆ ಕೂರ ಬೇಕು, ಯಾರನ್ನೂ ಮುಟ್ಟಿಸಿಕೊಳ್ಳುವಂತಿಲ್ಲ, ಸ್ನಾನವಿಲ್ಲ. ಆ ರಕ್ತಸ್ರಾವವನ್ನು ತಡೆಯಲು ಅಮ್ಮನ ಹಳೆಯ ಸೀರೆಗಳನ್ನು ಬಳಸಲಾಗುತ್ತಿತ್ತು.

ಅದನ್ನು ಯಾರಿಗೂ ಕಾಣದಂತೆ ಒಣಗಿಸಿ ಮತ್ತೆ ಬಳಸುವುದು ಹಿಂದಿನಿಂದ ಬಂದ ಪದ್ಧತಿಯೇ ಆಗಿದೆ. ಆದರೂ ಈ ವಿಷಯದ ಬಗ್ಗೆ ಮುಕ್ತವಾಗಿ ಮಾತನಾಡಲಾಗದು. ಸೃಷ್ಟಿಯ ಸಂಕೇತವಾದ ಮುಟ್ಟು ಜೀವಸೆಲೆಯನ್ನು ನಿಯಂತ್ರಿಸುತ್ತದೆ. ಆದರೆ ಇದರ ನಿಯಂತ್ರಣಕ್ಕೆ ಬಳಸುವ ಅತಿ ಜನಪ್ರಿಯ ಉತ್ಪನ್ನಗಳ ನೈರ್ಮಲ್ಯವನ್ನು ನಿಯಂತ್ರಿಸಲು ಮಾತ್ರ ಸಾಧ್ಯವಾಗಿಲ್ಲ.

ಆಧುನಿಕತೆ ಮುಂದುವರೆದಂತೆ ಹಳೆಯ ಬಟ್ಟೆಗಳ ಬದಲು ಹೊಸ ಹೊಸ ಅವಿಷ್ಕಾರಗಳಾಗಿ ಮುಕ್ತವಾಗಿ ಈ ಪ್ಯಾಡುಗಳ ಜಾಹಿರಾತುಗಳು ಕಾಣಿಸಿಕೊಳ್ಳಲಾರಂಭವಾಯಿತು. ಅನಿವಾರ್ಯವಾಗಿ ಇವುಗಳ ಬಳಕೆ ಹೆಚ್ಚಾಗಿರುವುದರಿಂದ ಎಲ್ಲೆಂದರಲ್ಲಿ, ಅಲ್ಲಲ್ಲಿ ರಸ್ತೆಗಳ ಮೇಲೆಯೂ ಈ ರಕ್ತಸಿಕ್ತ ಪ್ಯಾಡುಗಳ ದರ್ಶನವಾಗುತ್ತಿರುತ್ತವೆ.

ಅಂತೆಯೇ ಕಳೆದ ಹತ್ತು ವರ್ಷಗಳಿಂದ ಸ್ವಲ್ಪ ಮಟ್ಟಿಗೆ ಮೌನ, ಮಾತಾಗಿ ನಿಷೇಧಿಸಿದ್ದ ವಿಷಯ ಸಾರ್ವಜನಿಕ ವಲಯಗಳಲ್ಲಿ ಸದ್ದು ಮಾಡುತ್ತಿದೆ. ಅಂತೆಯೇ ಸರ್ಕಾರ, ಕೆಲವು ಎನ್.ಜಿ.ಒ.ಗಳು ಒಮ್ಮೆ ಬಳಸಿ ಬಿಸಾಡುವಂತಹ ಸ್ಯಾನಿಟರಿ ನ್ಯಾಪ್ಕಿನ್ಸ್ ಅನ್ನು ಉಚಿತವಾಗಿ ನೀಡಲು ಆರಂಭಿಸಿ ಈ ಪ್ಯಾಡುಗಳ ಬಳಕೆ ಚಾಲ್ತಿಗೆ ಬಂದಿತು.

ಮುಟ್ಟಾಗುವ ಮಹಿಳೆಯರ ಸಂಖ್ಯೆ ಭಾರತದಲ್ಲಿ ಸುಮಾರು 30 ಕೋಟಿಯಷ್ಟು. ಎಂದರೆ ಎಷ್ಟರ ಮಟ್ಟಿಗೆ ಈ ಬಳಸಿ ಬಿಸಾಡುವ ಪ್ಯಾಡುಗಳ ಬಳಕೆಯಾಗುತ್ತಿದೆ ಎನ್ನುವುದನ್ನು ಊಹಿಸಿಕೊಳ್ಳಿ. ಆದರೆ ನಮ್ಮ ದೇಶದ ವೇಸ್ಟ್ ಮ್ಯಾನೇಜ್‌ಮೆಂಟ್ ಅಷ್ಟೊಂದು ಸಮರ್ಥವಾಗಿರದ ಕಾರಣ ಇಷ್ಟೊಂದು ಬಳಸಿ ಬಿಸಾಡಿದ ಪ್ಯಾಡುಗಳನ್ನು ಮಾಡುವುದೇನು ಎನ್ನುವುದು ದೊಡ್ಡ ಸಮಸ್ಯೆಯಾಗಿದೆ.

ಮುಟ್ಟಾದಾಗ ಮಹಿಳೆಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ನಮ್ಮ ಪರಿಸರವನ್ನು ಕಲುಷಿತವಾಗದಂತೆ ಗಮನಿಸಬೇಕಾಗಿದೆ. ಜೊತೆಗೆ ನಾವು ಬಿಸಾಡಿದ ಕಸವನ್ನು ವಿಂಗಡಣೆ ಮಾಡುವ ಕೆಲಸವನ್ನು ಮಾಡುವವರ ಆರೋಗ್ಯದ ಬಗ್ಗೆಯೂ ಯೋಚಿಸಬೇಕಿದೆ.

ನಮ್ಮ, ನಮ್ಮ ಪರಿಸರ ಮತ್ತು ಕಸದ ನಿರ್ವಹಣೆ ಮಾಡುವ ಜನರ ಆರೋಗ್ಯ ಕಾಪಾಡಬಲ್ಲಂತಹ ಆರೋಗ್ಯಕರ ಉತ್ಪನ್ನಗಳ ಬಗ್ಗೆ ಎಲ್ಲರಿಗೂ ಇನ್ನೂ ತಿಳಿದಿಲ್ಲ.

ಈ ವಿಷಯದ ಬಗ್ಗೆ ಅರಿವನ್ನು ಮೂಡಿಸುವ ಕೆಲಸವನ್ನು, ಎಂದರೆ ಕೆಂಪನ್ನು ಹಸಿರಾಗಿಸುವ ‘ಗ್ರೀನ್ ದ ರೆಡ್’  ಅಭಿಯಾನವನ್ನು ಬೆಂಗಳೂರಿನ ಎಚ್.ಎಸ್.ಆರ್. ಲೇಔಟ್ ಸಿಟಿಜನ್ ಫೋರಮ್ಮಿನ ಮಹಿಳೆಯರು  ಪ್ರಾರಂಭಿಸಿದ್ದಾರೆ. ಮಹಿಳೆಯರು ಕೆಲಸ ಮಾಡುವೆಡೆಯಲ್ಲಿ ತಮ್ಮ ಈ ಕಾರ್ಯವನ್ನು ಕೈಗೊಂಡಿದ್ದಾರೆ.

ಕಾರ್ಪೊರೇಟ್ ಕಚೇರಿಗಳು, ಅಪಾರ್ಟ್‌ಮೆಂಟುಗಳು, ಶಾಲೆ, ಆಸ್ಪತ್ರೆಗಳು – ಎಲ್ಲೆಡೆ ಈ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಎಲ್ಲವೂ ಮತ್ತೆ ಹಿಂದಿನಂತೆ ಎನ್ನುವ ಹಾಗೆ ಮತ್ತೆ ಮತ್ತೆ ಬಳಸಬಲ್ಲಂತಹ ಬಟ್ಟೆಗಳ ಪ್ಯಾಡುಗಳು, ಬಟ್ಟೆಯ ಡೈಪರ್‌ಗಳು ಮತ್ತು ಮೆನ್ಸ್ಟುರಲ್ ಕಪ್ಸ್‌ನ ಬಗ್ಗೆ ಮಹಿಳೆಯರಿಗೆ ತಿಳಿಸುವ ಈ ಕೈಂಕರ್ಯದಲ್ಲಿ ರಾಜ್ಯದ ಪರಿಸರ ನಿಯಂತ್ರಣ ಕೇಂದ್ರವೂ ಇವರೊಡನೆ ಕೈಗೂಡಿಸಿದೆ.

ಬಳಸಿ ಬಿಸಾಡುವ ಸಂಸ್ಕೃತಿಯನ್ನು ಬಿಟ್ಟು ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಸಲು ಒಪ್ಪಿ ಕೊಂಡವರಿಗೆ ಕೆಂಪು ಬಿಂದಿಯ ಮೇಲೆ ಹಸಿರು ಚುಕ್ಕೆಯನ್ನಿಟ್ಟ ಬಿಂದಿಯನ್ನು ಧರಿಸಲು ನೀಡುತ್ತಾರೆ. ಕೆಂಪಾದ ಪರಿಸರವನ್ನು ಮತ್ತೆ ಹಸಿರಾಗಿಸುವ ಸಂಕೇತವದು.

ಮಹಿಳಾ ದಿನಾಚರಣೆಯಂದು ಪ್ರಾರಂಭವಾದ ಈ ಅಭಿಯಾನದ ರೂವಾರಿಗಳು ತಮ್ಮನ್ನು ‘ಕಪ್ ಸ್ಪೆರ್ಟ್ಸ್’ ಎಂದು ಕರೆದು ಕೊಳ್ಳುವ ಸ್ವಯಂ ಸೇವಕಿಯರ ಒಂದು ಗುಂಪು. ‘ನಾವೆಲ್ಲರೂ ಈ ಪರಿಸರಸ್ನೇಹಿ ಉತ್ಪನ್ನಗಳನ್ನು ಬಳಸುತ್ತಿದ್ದೇವೆ ಮತ್ತು ಪ್ರತಿಯೊಬ್ಬ ಮಹಿಳೆಯೂ ಇವುಗಳನ್ನು ಬಳಸಲಿ ಎನ್ನುವ ಆಶಯ ನಮ್ಮದು’ ಎನ್ನುತ್ತಾರೆ, ಈ ಗುಂಪಿನ ಸದಸ್ಯರು.

ಇವರು ಇಪ್ಪತ್ತರಿಂದ ಅರವತ್ತು ವರ್ಷದ ವಯೋಮಿತಿಯ ಪ್ರಪಂಚದ ವಿಭಿನ್ನ ಭಾಗಗಳಿಂದ ಮತ್ತು ನಡೆಗಳಿಂದ ಬಂದವರು. ಆದರೆ ಹೆಚ್ಚಿನವರು ಬೆಂಗಳೂರಿನವರೇ ಆದ್ದರಿಂದ ‘ಗ್ರೀನ್ ದ ರೆಡ್’ ನಮ್ಮ ಉದ್ಯಾನ ನಗರಿಯಲ್ಲಿ ಹೆಚ್ಚಿನ ಸದ್ದು ಮಾಡುತ್ತಿದೆ. ಮಹಿಳಾ ದಿನಾಚರಣೆಯಂದೇ ಬಹಳಷ್ಟು ಕಾರ್ಯಕ್ರಮಗಳನ್ನು ನಡೆಸಿದ್ದಾರೆ.

ಅಂತೆಯೇ ಮುಂದಿನ ದಿನಗಳಲ್ಲಿ ಮತ್ತಷ್ಟು ಕಂಪೆನಿಗಳಿಗೆ ಭೇಟಿ ನೀಡಿ ಅಲ್ಲಿಯ ಮಹಿಳೆಯರಿಗೆ ಈ ಬಗ್ಗೆ ಅರಿವು ಮೂಡಿಸುವ ಯೋಚನೆ ಇವರದು, ತನ್ಮೂಲಕ ಇಡೀ ಬೆಂಗಳೂರನ್ನು ಸ್ವಚ್ಚವಾಗಿರಿಸುವ ಕಳಕಳಿಯೂ ಹೌದು, ತನ್ಮೂಲಕ, ಇಡೀ ವಿಶ್ವಕ್ಕೆ ಈ ಸಂದೇಶವನ್ನು ತಲುಪಿಸುವ ಆಸೆ ಇವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT