ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗ ಪ್ರಕ್ರಿಯೆ ವಿಳಂಬಗತಿ ತಪ್ಪಲಿ

Last Updated 12 ಮೇ 2017, 19:30 IST
ಅಕ್ಷರ ಗಾತ್ರ

ಮೇವು ಹಗರಣಗಳಿಗೆ ಸಂಬಂಧಿಸಿದಂತೆ ಎಲ್ಲಾ  ನಾಲ್ಕು ಪ್ರಕರಣಗಳ ವಿಚಾರಣೆಯನ್ನು ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಅಧ್ಯಕ್ಷ ಲಾಲು ಪ್ರಸಾದ್ ಅವರು ಪ್ರತ್ಯೇಕವಾಗಿ ಎದುರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಜೊತೆಗೆ ಒಂಬತ್ತು ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸಬೇಕು ಎಂಬಂಥ ಕಟ್ಟುನಿಟ್ಟಿನ ಆದೇಶವನ್ನೂ ಸುಪ್ರೀಂ ಕೋರ್ಟ್ ನೀಡಿರುವುದರಿಂದ ಲಾಲು ಪ್ರಸಾದ್ ಅವರಿಗೆ ಮತ್ತೊಮ್ಮೆ ಸಂಕಷ್ಟದ ದಿನಗಳು ಎದುರಾಗಲಿವೆ. ಇದಲ್ಲದೆ ಲಾಲು ಅವರ ಮೇಲಿದ್ದ ಒಳಸಂಚು ಪ್ರಕರಣವನ್ನು ಕೈಬಿಟ್ಟ ಜಾರ್ಖಂಡ್ ಹೈಕೋರ್ಟ್ ಆದೇಶವನ್ನೂ ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.  ಇದೂ ಸಹ  ಲಾಲು ಪ್ರಸಾದ್‌ಗೆ ತೀವ್ರ ಹಿನ್ನಡೆ ಉಂಟುಮಾಡುವಂತಹದ್ದು.

ವಾಸ್ತವವಾಗಿ ಈ ಪ್ರಕರಣವನ್ನು ನ್ಯಾಯಾಂಗದ ವಿಳಂಬಕ್ಕೆ ದೊಡ್ಡ ಉದಾಹರಣೆಯಾಗಿ ನೋಡಬಹುದು. ಅದರಲ್ಲೂ ರಾಜಕೀಯ ನೇತಾರರು ಹಗರಣದಲ್ಲಿ ಒಳಗೊಂಡಾಗ ಸಿಬಿಐ ದುರ್ಬಳಕೆಯ ವಿಚಾರವೂ ಇಲ್ಲಿ ಮುಖ್ಯವಾಗುತ್ತದೆ. ಹೀಗಾಗಿ ಈ ಪ್ರಕರಣದಲ್ಲಿ ತೋರಿದ ಜಡತೆ ಅಥವಾ ನಿಷ್ಕ್ರಿಯತೆಗಾಗಿ ಸಿಬಿಐ ಅನ್ನು ಸುಪ್ರೀಂ ಕೋರ್ಟ್ ತೀವ್ರ  ತರಾಟೆಗೆ ತೆಗೆದುಕೊಂಡಿರುವುದು ಮುಖ್ಯವಾದದ್ದು. ‘ಸಿಬಿಐ ಪಂಜರದ ಗಿಳಿ’ ಎಂದು ಈ ಹಿಂದೆ ಸ್ವತಃ ಸುಪ್ರೀಂ ಕೋರ್ಟ್ ಬಣ್ಣಿಸಿತ್ತು. ಹೀಗಾಗಿ ಸಿಬಿಐ ತನ್ನ ‘ಯಜಮಾನ’ನ ಹಿಡಿತದಲ್ಲಿಯೇ ಇರುತ್ತದೆ ಎಂಬುದನ್ನು ವಿವರಿಸಿ ಹೇಳಬೇಕಿಲ್ಲ. ಇಲ್ಲದಿದ್ದಲ್ಲಿ ಲಾಲು ಪ್ರಸಾದ್‌ಗೆ ಅನುಕೂಲಕರವಾಗಿ ಬಂದ ಜಾರ್ಖಂಡ್ ಹೈಕೋರ್ಟ್‌ನ  ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು  ಸಿಬಿಐ ಅಷ್ಟು ವಿಳಂಬ ಮಾಡಿದ್ದೇಕೆ? ಈ ವಿಳಂಬದ ಹಿಂದಿನ ಲೆಕ್ಕಾಚಾರಗಳೇನು? ಈ ಪ್ರಶ್ನೆಗಳಿಗಂತೂ ಸಮಾಧಾನದ ಉತ್ತರ ನೀಡುವುದು ಸಾಧ್ಯವಿಲ್ಲ.

ಲಾಲು ಪ್ರಸಾದ್ ಅವರು 1990ರಿಂದ 1997ರವರೆಗೆ  ಬಿಹಾರದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸುಮಾರು ₹900 ಕೋಟಿ ದುರ್ಬಳಕೆಯ ಮೇವು ಹಗರಣ ಬೆಳಕಿಗೆ ಬಂದು ಈಗಾಗಲೇ ಎರಡು ದಶಕಗಳು ಕಳೆದುಹೋಗಿವೆ ಎಂಬುದನ್ನು ನಾವು ಮರೆಯುವಂತಿಲ್ಲ. ಇಷ್ಟರ ನಡುವೆಯೂ ಮೇವು ಹಗರಣದ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ 2013ರಲ್ಲಿ  ಲಾಲು ಅವರಿಗೆ ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯದಿಂದ ಜೈಲು ಶಿಕ್ಷೆಯಾಗಿದ್ದು  ಹೊಸ ಭರವಸೆ ಮೂಡಿಸುವಂತಹದ್ದಾಗಿತ್ತು. ಈ ಪ್ರಕರಣದಲ್ಲಿ ಲಾಲು ಜಾಮೀನು ಪಡೆದುಕೊಂಡು ಈಗ ಹೊರಗಿದ್ದಾರೆ.

ಉನ್ನತ ಅಧಿಕಾರ ಸ್ಥಾನಗಳಲ್ಲಿ ಭ್ರಷ್ಟಾಚಾರ ನಿರ್ಮೂಲನೆಗಾಗಿ ‘ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆ' 2014ರಲ್ಲೇ ಜಾರಿಗೆ ಬಂದಿದ್ದರೂ ಲೋಕಪಾಲ ನೇಮಕದಲ್ಲಿ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ವಿಳಂಬನೀತಿಯೂ  ಇತ್ತೀಚೆಗಷ್ಟೇ  ಸುಪ್ರೀಂ ಕೋರ್ಟ್‌ನಿಂದ  ಟೀಕೆಗೆ ಒಳಗಾಗಿತ್ತು ಎಂಬುದನ್ನೂ ಇಲ್ಲಿ ಸ್ಮರಿಸಬಹುದು. ಲಾಲು ವಿರುದ್ಧ ಭ್ರಷ್ಟಾಚಾರ ಆರೋಪದ ಕುರಿತಾದ  ನ್ಯಾಯಾಂಗ ಪ್ರಕ್ರಿಯೆ  ಅಂತೂ ಈಗ ಸುಪ್ರೀಂ ಕೋರ್ಟ್ ಆದೇಶದಿಂದ ಮರುಚಾಲನೆಗೊಳ್ಳುತ್ತಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಇದು ಮುಜುಗರದ ಸಂಗತಿಯಾಗುವ ಸಾಧ್ಯತೆ ಇದೆ. ಏಕೆಂದರೆ ಬಿಹಾರದಲ್ಲಿ ಆಡಳಿತಾರೂಢ ಜನತಾದಳ (ಸಂಯುಕ್ತ) ಮಿತ್ರಪಕ್ಷವಾಗಿದೆ ಲಾಲು ಅವರ ಆರ್‌ಜೆಡಿ. 2015ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ  ಈ ಎರಡೂ ಪಕ್ಷಗಳು ಒಂದಾಗಿ ಸೆಣಸಿ ಭಾರಿ ಜಯ ಗಳಿಸಿದ್ದವು. ನಿತೀಶ್ ಅವರ ಸ್ವಚ್ಛ ಆಡಳಿತದ  ವರ್ಚಸ್ಸಿಗೆ ಇದರಿಂದ ಆಗಬಹುದಾದ ಹಾನಿಯೂ ಕಡಿಮೆಯದಲ್ಲ. ಜೊತೆಗೆ, 2019ರಲ್ಲಿ ಲೋಕಸಭಾ ಚುನಾವಣೆಗಾಗಿ ಲಾಲು ಅವರ ಪಕ್ಷ ಸೇರಿದಂತೆ ವಿವಿಧ ಪ್ರಾದೇಶಿಕ  ರಾಜಕೀಯ ಪಕ್ಷಗಳ  ಒಗ್ಗೂಡುವಿಕೆ ತಡೆಯಲು ಬಿಜೆಪಿಗೆ ಇದು ಹೊಸ ಅಸ್ತ್ರವೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT