ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ಕೈ ಮೀರಿಲ್ಲ ಪರಿಸ್ಥಿತಿ

Last Updated 12 ಮೇ 2017, 19:30 IST
ಅಕ್ಷರ ಗಾತ್ರ

ಕಾಶ್ಮೀರದಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯು ಅಲ್ಲಿನ ಸನ್ನಿವೇಶಗಳನ್ನು ನಿಭಾಯಿಸುವಲ್ಲಿ ಕೇಂದ್ರ ಹಾಗೂ ಜಮ್ಮು ಮತ್ತು ಕಾಶ್ಮೀರ ಸರ್ಕಾರಗಳ ಕಾರ್ಯತಂತ್ರ ವೈಫಲ್ಯವನ್ನು ಎತ್ತಿ ತೋರುತ್ತಿದೆ. ಪಾಕಿಸ್ತಾನದ ದ್ವೇಷಮಯ ಸಂಚುಗಳನ್ನು ನಿರರ್ಥಕಗೊಳಿಸುವ ನಿಟ್ಟಿನಲ್ಲಿ, ಕಾಶ್ಮೀರ ಸಮಸ್ಯೆಗೆ ರಾಜಕೀಯ ಪರಿಹಾರವನ್ನು ಕಂಡುಕೊಳ್ಳುವುದು ಅಗತ್ಯ. ಆದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಬಗ್ಗೆ ಅಸಡ್ಡೆ ತೋರುತ್ತಿರುವುದು, ದೇಶದ ಹಿತಚಿಂತಕರೆಲ್ಲರನ್ನೂ ಚಿಂತೆಗೀಡು ಮಾಡುವ ಸಂಗತಿಯಾಗಿದೆ.

ಮುಂಬರುವ ದಿನಗಳಲ್ಲಿ ಕಾಶ್ಮೀರ ತುಂಬಾ ಕಠಿಣ  ಮತ್ತು ಸಂಕಷ್ಟಮಯ ದಿನಗಳನ್ನು ಎದುರಿಸಬೇಕಾಗುತ್ತದೆ ಎಂಬುದು ಗೋಚರವಾಗುತ್ತಿದೆ.  ಪರಿಸ್ಥಿತಿಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೈಯಿಂದ ಜಾರುತ್ತಿರುವುದು ಇನ್ನಷ್ಟು ಕಳವಳಕಾರಿ ವಿದ್ಯಮಾನ.

ಹತ್ತು ತಿಂಗಳ ಹಿಂದೆ ಅಶಾಂತಿ ಭುಗಿಲೆದ್ದ ಬಳಿಕ, ಎರಡೂ ಸರ್ಕಾರಗಳು ರಾಜ್ಯದಲ್ಲಿ ಸಹಜ ಸ್ಥಿತಿಯನ್ನು ಕಾಪಾಡುವ ಸಂಬಂಧ ಕೇವಲ ಗಡುವುಗಳನ್ನು ನಿಗದಿ ಮಾಡುತ್ತಿವೆ. ದುರದೃಷ್ಟವಶಾತ್‌ ಈ ಎಲ್ಲ ಗಡುವುಗಳೂ ಮುರಿದುಬಿದ್ದಿವೆ. ಕಾಶ್ಮೀರವು  ಭೌಗೋಳಿಕವಾಗಿ ಭಾರತದಲ್ಲೇ ಇದ್ದರೂ ಅದು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ದೇಶದಿಂದ ದೂರ ಸರಿಯುತ್ತಿದೆ.

ಕಾಶ್ಮೀರದಲ್ಲಿನ ಭಯೋತ್ಪಾದನೆ ಇತ್ತೀಚಿನ ವರ್ಷಗಳಲ್ಲಿ ತೀವ್ರವಾದ ಬದಲಾವಣೆ ಕಾಣುತ್ತಿದೆ. ಈಗ ಸ್ಥಳೀಯರೇ ಅಲ್ಲಿನ ಭಯೋತ್ಪಾದನೆ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ್ದಾರೆ. 1989ರ ನಂತರದ ವರ್ಷಗಳನ್ನು ಪರಿಗಣಿಸಿದರೆ, 2012ರಲ್ಲಿ ಭಯೋತ್ಪಾದನೆ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿತ್ತು. ಇದನ್ನು ನಿಯಂತ್ರಿಸುತ್ತಿದ್ದ ವಿದೇಶಿ ಸಂಘಟನೆಗಳಿಗೆ ಸೀಮಿತ ಪ್ರದೇಶದಲ್ಲಿ ನಗಣ್ಯ ಎನ್ನಬಹುದಾದಷ್ಟು ಮಾತ್ರ ಸಾರ್ವಜನಿಕರ ಬೆಂಬಲ ವ್ಯಕ್ತವಾಗಿತ್ತು.

ಹೀಗೆ ಭಯೋತ್ಪಾದಕ ಚಟುವಟಿಕೆ ಮತ್ತು ಜನರಲ್ಲಿ ಪರಕೀಯ ಭಾವನೆ ಬಹಳಷ್ಟು ಕಡಿಮೆ ಪ್ರಮಾಣದಲ್ಲಿ ಇದ್ದ ಸಮಯವಾದ 2014ರಲ್ಲಿ ವಿಧಾನಸಭಾ ಚುನಾವಣೆ ನಡೆಯಿತು. ಇತಿಹಾಸದಲ್ಲೇ ದಾಖಲೆ ಪ್ರಮಾಣದಲ್ಲಿ, ಅಂದರೆ ಶೇ 70ರಷ್ಟು ಜನ ತಮ್ಮ ಹಕ್ಕನ್ನು ಚಲಾಯಿಸಿದರು. ಇದಕ್ಕೆ ಕೆಲವು ಸ್ಥಳೀಯ ಕಾರಣಗಳೂ ಇದ್ದಿರಬಹುದು.

ಪ್ರಾದೇಶಿಕ ಪಕ್ಷವಾದ ಪಿಡಿಪಿಯು ಬಲಪಂಥೀಯ ಬಿಜೆಪಿ ಜೊತೆ ಸೇರಿ ಮೈತ್ರಿ ಸರ್ಕಾರ ರಚಿಸಲು ತೆಗೆದುಕೊಂಡ ನಿರ್ಧಾರ ಮಾತ್ರ, ದೇಶದ ಮುಸ್ಲಿಂ ಬಹುಸಂಖ್ಯಾತ ಏಕೈಕ ರಾಜ್ಯವಾದ ಕಾಶ್ಮೀರದ ಜನರಿಗೆ ಅಷ್ಟಾಗಿ ಹಿಡಿಸಲಿಲ್ಲ. ಈ ನಿರ್ಧಾರದಿಂದ ಪಿಡಿಪಿಯು ತಮ್ಮ ವಿಶ್ವಾಸಕ್ಕೆ ಎರವಾಯಿತು ಎಂಬ ಭಾವನೆ ಅವರಲ್ಲಿ ಬೇರೂರಿತು.

ಭಯೋತ್ಪಾದನೆಯ ಹೊಸ ಅಲೆಯ ಪ್ರತಿನಿಧಿಯಂತೆ ಕಂಡುಬಂದ ಬುರ್ಹಾನ್‌ ವಾನಿಯನ್ನು 2016ರ ಜುಲೈ 8ರಂದು ಭದ್ರತಾ ಪಡೆಗಳು ದಕ್ಷಿಣ ಕಾಶ್ಮೀರದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಹತ್ಯೆ ಮಾಡುವುದರೊಂದಿಗೆ ಇದೆಲ್ಲ ತೀವ್ರ ಸ್ವರೂಪ ಪಡೆದುಕೊಂಡಿತು. ಅದಾದ ನಂತರ ಭುಗಿಲೆದ್ದ ಗಲಭೆಗಳು ಈಗಲೂ ಮುಂದುವರಿದಿವೆ. 120ಕ್ಕೂ ಹೆಚ್ಚು ಪ್ರತಿಭಟನಾಕಾರರು ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಹತರಾಗಿದ್ದಾರೆ. ಸಾವಿರಾರು ಜನ ಗಾಯಗೊಂಡಿದ್ದಾರೆ ಅಥವಾ ಅಂಗಹೀನರಾಗಿದ್ದಾರೆ. 

ಇದು ರಾಜ್ಯದಲ್ಲಿ ಉಗ್ರರ ಪರ ಅನುಕಂಪ ಸೃಷ್ಟಿಗೆ  ಕಾರಣವಾಗಿದೆ. ಒಂದು ರೀತಿಯಲ್ಲಿ ಅವರನ್ನೇ ಧರ್ಮಭೀರುಗಳು ಎಂಬಂತೆ ಭಾವಿಸುವ ಪರಿಸ್ಥಿತಿ ಸಹ ನಿರ್ಮಾಣವಾಗಿದೆ. ಇದೇ ವೇಳೆ, ದೇಶದ ವಿರುದ್ಧ ಆಕ್ರೋಶ ಹಲವು ಪಟ್ಟುಗಳಷ್ಟು ಹೆಚ್ಚಾಗಿದೆ.

ಇಲ್ಲಿನ ಜನರು ರಾಜ್ಯ ಸರ್ಕಾರದ ಬಗ್ಗೆ ಭ್ರಮನಿರಸನಗೊಂಡಿರುವುದಕ್ಕೆ ಮತ್ತು ಈ ಭಾವನೆ  ಕಳೆದ ಮೂರು ವರ್ಷಗಳಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿರುವುದಕ್ಕೆ ಕಾರಣಗಳೇನು ಎನ್ನುವ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಆದರೆ ಆರ್ಥಿಕವಾದ ನಿಶ್ಚಲತೆ ಕೂಡ ಒಂದು ಕಾರಣವಾಗಿದೆ ಎನ್ನಬಹುದು. ಯುವಕರಿಗೆ, ಅದರಲ್ಲೂ ಓದಿದವರಿಗೆ ಸರ್ಕಾರಿ ನೌಕರಿ ಬಿಟ್ಟು ಬೇರೆ ಯಾವ ರೀತಿಯ ಉದ್ಯೋಗವೂ ದೊರೆಯುತ್ತಿಲ್ಲ. ಸರ್ಕಾರಿ ನೌಕರಿಗಳನ್ನು ಸಹ ಅಧಿಕಾರಸ್ಥರಿಗೆ ಹತ್ತಿರವಾದವರಿಗೆ ಮನಸೋಇಚ್ಛೆ ನೀಡಲಾಗುತ್ತಿದೆ. ಇದು ಯುವಜನರಲ್ಲಿ ಆಕ್ರೋಶ ಮಡುಗಟ್ಟಲು ಕಾರಣವಾಗಿದೆ. ಅದೇ ರೀತಿ, ಯಾವುದೇ ಸರಿಯಾದ ಉತ್ತರದಾಯಿತ್ವ ಇಲ್ಲದೆ ರಾಜ್ಯದ ನಿಧಿಯನ್ನು ದುರ್ಬಳಕೆ ಮಾಡುತ್ತಿರುವುದು ಸಹ ಯುವಜನರಲ್ಲಿ ಅಸಮಾಧಾನಕ್ಕೆ ಎಡೆ ಮಾಡಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆಯೂ, ಕಾಶ್ಮೀರದಲ್ಲಿ ಎಲ್ಲವೂ ಮುಗಿದುಹೋಗಿದೆ ಎಂದು ಹೇಳಲು ಸಾಧ್ಯವಿಲ್ಲ. ಈಗಲೂ ಎರಡೂ ಸರ್ಕಾರಗಳು ಸೂಕ್ತವಾದ ಕ್ರಮ ಕೈಗೊಂಡರೆ ಪರಿಸ್ಥಿತಿಯನ್ನು ತಹಬಂದಿಗೆ ತರಬಹುದು. ಮೋದಿ ನೇತೃತ್ವದ ಸರ್ಕಾರ, ಎಲ್ಲ ಬಗೆಯ ರಾಜಕೀಯ ಅಭಿಪ್ರಾಯಗಳನ್ನು ಒಳಗೊಂಡ ರಾಜ್ಯದ ಸಂಘಟನೆಗಳ ಜೊತೆ ಪೂರ್ವ ಷರತ್ತುಗಳಿಲ್ಲದೆ ರಾಜಕೀಯ ಸಂವಾದಕ್ಕೆ ಚಾಲನೆ ನೀಡಿದರೆ, ಹತಾಶೆಗೊಂಡಿರುವ ಜನರಲ್ಲಿ ಆಡಳಿತದ ಬಗ್ಗೆ ಒಂದು ಮಟ್ಟಿನ ವಿಶ್ವಾಸ ಬೆಳೆಯುತ್ತಾ ಹೋಗುತ್ತದೆ. ಹೀಗೆ ನಮ್ಮದೇ ಜನರೊಟ್ಟಿಗೆ ನಡೆಸುವಂತಹ ಮಾತುಕತೆಯು ಪಾಕಿಸ್ತಾನದ ಸೇಡಿನ ಸಂಚುಗಳನ್ನು ನಿರರ್ಥಕಗೊಳಿಸಲು ನೆರವಾಗುತ್ತದೆ.

ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ, ಚುನಾವಣೆ ವೇಳೆ ನೀಡಿದ್ದ ಆಶ್ವಾಸನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಮುಂದಾಗಬೇಕು. ಆಡಳಿತ ನಿಷ್ಕ್ರಿಯಗೊಂಡಿರುವುದರಿಂದ ನಿರುದ್ಯೋಗ ತಾಂಡವವಾಡುತ್ತಿದೆ. ಇದರಿಂದ ಜನ ನಲುಗಿಹೋಗಿದ್ದಾರೆ. ಹೀಗಾಗಿ ಉದ್ಯೋಗ ನೇಮಕಾತಿ ಅಭಿಯಾನಗಳನ್ನು ನಡೆಸುವ ಮೂಲಕ, ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸಾವಿರಾರು ಹುದ್ದೆಗಳನ್ನು ತುಂಬಲು ಮುಂದಾಗಬೇಕು. ಇದೇ ವೇಳೆ, ಅರ್ಹ ಪ್ರತಿಭಾವಂತ ಅಭ್ಯರ್ಥಿಗಳಿಗಷ್ಟೇ ಅವಕಾಶ ದೊರೆಯುತ್ತದೆ ಎನ್ನುವ ಖಾತರಿಯನ್ನು ಮೂಡಿಸಬೇಕಾದ ವಾತಾವರಣವೂ ನಿರ್ಮಾಣವಾಗಬೇಕಾಗಿದೆ.

**

-ಝುಲ್ಫೀಕರ್‌ ಮಜೀದ್‌, ಪ್ರಜಾವಾಣಿ, ಶ್ರೀನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT