ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹2 ಕೋಟಿ ವಾಪಸ್‌ ಕೊಡದಿದ್ದಕ್ಕೆ ಕೊಲೆ: ಇಬ್ಬರ ಬಂಧನ

Last Updated 12 ಮೇ 2017, 19:37 IST
ಅಕ್ಷರ ಗಾತ್ರ

ಬೆಂಗಳೂರು: ‘ಹಣ ದ್ವಿಗುಣಗೊಳಿಸುವುದಾಗಿ ₹2 ಕೋಟಿ ಪಡೆದಿದ್ದ  ಸುರೇಶ್‌ ಪೂಜಾರಿ ಅದನ್ನು ವಾಪಸ್‌ ಕೊಟ್ಟಿರಲಿಲ್ಲ. ಕೇಳಿದ್ದಕ್ಕೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದ. ಅದಕ್ಕೆ ಹತ್ಯೆಗೈದೆವು’.

ಜಯನಗರದ ಜೆ.ಎಸ್‌.ಎಸ್‌ ವೃತ್ತದ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಿ ಸುರೇಶ್‌ ಪೂಜಾರಿ (41) ಕೊಲೆ ಪ್ರಕರಣ ಸಂಬಂಧ ಪೊಲೀಸರು ಶುಕ್ರವಾರ ಬಂಧಿಸಿರುವ  ಬಿಳೇಕಹಳ್ಳಿಯ ರಾಕೇಶ್ (35) ಹಾಗೂ ಸುರೇಶ್‌ಗೌಡ (32)   ಈ ಹೇಳಿಕೆ ನೀಡಿದ್ದಾರೆ.

‘ದ್ವಿಗುಣದ ಆಸೆಯಿಂದ ಸ್ನೇಹಿತರ ಬಳಿ ಸಾಲ ಪಡೆದು ಕಳೆದ ವರ್ಷವೇ ಸುರೇಶ್‌ಗೆ ಕೊಟ್ಟಿದ್ದೆ. ಅವರು ಹಣ ವಾಪಸ್‌ ಕೊಡದಿದ್ದಕ್ಕೆ ಕೆಲ ಬಾರಿ ಜಗಳವೂ ಆಗಿತ್ತು’.

‘ಸುರೇಶ್‌ ಪೂಜಾರಿ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಅವರೆಲ್ಲ ಕುಂದಾಪುರದಲ್ಲಿ ಇದ್ದಾರೆ. ಜಯನಗರದ ವಸತಿ ಸಮುಚ್ಚಯದ ಫ್ಲ್ಯಾಟ್‌ಲ್ಲಿ ಸುರೇಶ್‌ ಒಬ್ಬರೇ ಇರುತ್ತಿದ್ದರು. ಅಲ್ಲಿಯೇ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದೆವು’.

‘ಮೇ 9ರಂದು ರಾತ್ರಿ ಪಾರ್ಟಿ ಅವರ ಮನೆಯಲ್ಲೇ ಪಾರ್ಟಿ ಮಾಡಿದ್ದೆವು.  ಮದ್ಯ ಸೇವಿಸಿದ ಬಳಿಕ ಸುರೇಶ್‌ನ ಬಾಯಿಗೆ ಬಟ್ಟೆ ಸುತ್ತಿದ್ದೆವು. ಬಳಿಕ ಚಾಕುವಿನಿಂದ ಕತ್ತು ಕೊಯ್ದೆವು. ಮೃತಪಟ್ಟ ಬಳಿಕ ಶವವನ್ನು ನಂತರ ಗೋಣಿಚೀಲದಲ್ಲಿ ಹಾಕಿ ಪರಾರಿಯಾದೆವು’ ಎಂದು ಆರೋಪಿಗಳು ಹೇಳಿದ್ದಾರೆ.

ಬ್ಯೂಟಿ ಪಾರ್ಲರ್‌ ನಡೆಸುತ್ತಿದ್ದ ರಾಕೇಶ್‌: ಆರೋಪಿ ರಾಕೇಶ್‌ ಮಂಗಳೂರಿನವ. ಸಹೋದರಿ ಜತೆ ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದ ಆತ,  ಬ್ಯೂಟಿಪಾರ್ಲರ್‌ ಇಟ್ಟುಕೊಂಡಿದ್ದ. ಇನ್ನೊಬ್ಬ ಆರೋಪಿ ಸುರೇಶ್‌, ಸ್ವಂತ ಉದ್ಯೋಗ ಮಾಡಿಕೊಂಡಿದ್ದಾನೆ.

‘ಪ್ರಕರಣ ಸಂಬಂಧ  ನಾರಾಯಣ ಅಲಿಯಾಸ್‌ ನರಿ, ಶ್ರೀಧರ್‌ ಸೇರಿದಂತೆ  ಮೂವರನ್ನು ವಶಕ್ಕೆ ಪಡೆದಿದ್ದೇವೆ. ಇವರು ರಾಕೇಶ್‌ ಸ್ನೇಹಿತರಾಗಿದ್ದು, ಕೃತ್ಯದ ವೇಳೆ ಜತೆಗಿದ್ದರು ಎಂಬ ಅನುಮಾನವಿದೆ. ಅದನ್ನು ಖಾತರಿಪಡಿಸಿಕೊಳ್ಳಲು ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

**

ಮೈ ಮೇಲೆ ಅರ್ಧ ಕೆ.ಜಿಯಷ್ಟು ಚಿನ್ನ

‘ಸುರೇಶ್‌ ಪೂಜಾರಿ ಯಾವಾಗಲೂ ಮೈ ಮೇಲೆ ಅರ್ಧ ಕೆ.ಜಿಯಷ್ಟು ಚಿನ್ನ ಹಾಕಿಕೊಳ್ಳುತ್ತಿದ್ದರು. ಅವರಿಗೆ ಗೋಲ್ಡ್‌ ಸುರೇಶ್‌ ಎಂಬ ಹೆಸರೂ ಇತ್ತು’ ಎಂದು ತನಿಖಾಧಿಕಾರಿ ಹೇಳಿದರು.

‘ಕೊಲೆಗೆ ಯತ್ನ, ಬೆದರಿಕೆ, ಹಲ್ಲೆ, ಹಣ ಪಡೆದು ವಂಚಿಸಿದ್ದ ಬಗ್ಗೆ 20ಕ್ಕೂ ಹೆಚ್ಚು ಪ್ರಕರಣಗಳು ಅವರ ಮೇಲಿದ್ದವು. ಕುಂದಾಪುರ ಠಾಣೆಯ ರೌಡಿಶೀಟರ್‌ ಆಗಿದ್ದ ಅವರು ಇನ್‌ಸ್ಪೆಕ್ಟರ್ ಮೇಲೂ ಹಲ್ಲೆ ನಡೆಸಿ ಜೈಲಿಗೆ ಹೋಗಿ ಬಂದಿದ್ದರು’ ಎಂದು ವಿವರಿಸಿದರು. ­

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT