ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಏಳನೇ ಸ್ಥಾನಕ್ಕೇರಿದ ಜಿಲ್ಲೆ

Last Updated 13 ಮೇ 2017, 8:35 IST
ಅಕ್ಷರ ಗಾತ್ರ

ಕೋಲಾರ: ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಜಿಲ್ಲೆಯು ಶೇ 78.51 ಫಲಿತಾಂಶ ಪಡೆಯುವುದರೊಂದಿಗೆ ರಾಜ್ಯ ಮಟ್ಟದಲ್ಲಿ 7ನೇ ಸ್ಥಾನಕ್ಕೆ ಏರಿದೆ.
ಕಳೆದ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯು ಶೇ 78.64 ಫಲಿತಾಂಶ ಸಾಧನೆಯೊಂದಿಗೆ ರಾಜ್ಯ ಮಟ್ಟದಲ್ಲಿ 21ನೇ ಸ್ಥಾನದಲ್ಲಿತ್ತು. ಈ ಬಾರಿ ಒಟ್ಟಾರೆ ಫಲಿತಾಂಶ ಸ್ವಲ್ಪ ಇಳಿಕೆಯಾಗಿದ್ದರೂ ಜಿಲ್ಲೆಯು 7ನೇ ಸ್ಥಾನಕ್ಕೆ ತಲುಪಿದೆ. ಜಿಲ್ಲೆಯಿಂದ ಈ ಬಾರಿ ಪರೀಕ್ಷೆ ತೆಗೆದುಕೊಂಡಿದ್ದ 19,159 ವಿದ್ಯಾರ್ಥಿಗಳ ಪೈಕಿ 14,985 ಮಂದಿ ಉತ್ತೀರ್ಣರಾಗಿದ್ದಾರೆ.

ಪರೀಕ್ಷೆಗೆ ಕುಳಿತಿದ್ದ 9,649 ಬಾಲಕರ ಪೈಕಿ 7,277 ಮಂದಿ ತೇರ್ಗಡೆಯಾಗಿದ್ದು, ಶೇ 75.42 ಫಲಿತಾಂಶ ಬಂದಿದೆ. ಅದೇ ರೀತಿ 9,510 ಬಾಲಕಿಯರ ಪೈಕಿ 7,708 ಮಂದಿ ಉತ್ತೀರ್ಣರಾಗಿದ್ದು, ಶೇ 81.05 ಫಲಿತಾಂಶ ಬಂದಿದೆ. ಇದರೊಂದಿಗೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ 41 ಶಾಲೆಗಳು ಶೇ 100 ಫಲಿತಾಂಶ ಸಾಧನೆ ಮಾಡಿವೆ. ಇದರಲ್ಲಿ 9 ಸರ್ಕಾರಿ ಪ್ರೌಢ ಶಾಲೆಗಳು, 1 ಅನುದಾನಿತ ಶಾಲೆ ಹಾಗೂ 31 ಅನುದಾನ ರಹಿತ ಶಾಲೆಗಳು ಸೇರಿವೆ.

ಮುಳಬಾಗಿಲು ತಾಲ್ಲೂಕಿನ ಅಮರಜ್ಯೋತಿ ಶಾಲೆಯ ವಿದ್ಯಾರ್ಥಿನಿ ಕೆ.ಎನ್.ನಯನಾ 622 ಅಂಕ ಗಳಿಸುವ ಮೂಲಕ ಜಿಲ್ಲೆಗೆ ಮೊದಲಿಗರಾಗಿದ್ದಾರೆ. ಅವರು ಕನ್ನಡದಲ್ಲಿ 125, ಇಂಗ್ಲಿಷ್‌, ಹಿಂದಿ ಮತ್ತು ಸಮಾಜದಲ್ಲಿ 100ಕ್ಕೆ 100 ಅಂಕ ಗಳಿಸಿದ್ದಾರೆ. ಕೋಲಾರದ ಚಿನ್ಮಯ ಶಾಲೆಯ ಎಂ.ಸ್ಫೂರ್ತಿ 621 ಅಂಕ ಪಡೆದು ಜಿಲ್ಲೆಗೆ ಎರಡನೇ ಸ್ಥಾನ ಗಳಿಸಿದ್ದಾರೆ.

ಧೈರ್ಯ ತುಂಬಬೇಕು: ‘ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದೇವೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಪೋಷಕರು ಕಡಿಮೆ ಅಂಕ ಬಂದಿವೆ ಅಥವಾ ಅನುತ್ತೀರ್ಣರಾಗಿದ್ದರೆ ಎಂಬ ಕಾರಣಕ್ಕೆ ಮಕ್ಕಳನ್ನು ನೋಯಿಸಬಾರದು. ಮಕ್ಕಳ ಮನಸ್ಸು ಸೂಕ್ಷ್ಮವಾಗಿದ್ದು, ಪೋಷಕರು ಅವರಲ್ಲಿ ಧೈರ್ಯ ತುಂಬಬೇಕು’ ಎಂದು ಪರೀಕ್ಷಾ ನೋಡಲ್‌ ಅಧಿಕಾರಿ ನಾಗೇಂದ್ರ ಪ್ರಸಾದ್‌ ಹೇಳಿದ್ದಾರೆ.

ಸುಧಾರಣೆಗೆ ಸೂಚನೆ: ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯನ್ನು 10ನೇ ಸ್ಥಾನದೊಳಗೆ ತರಲೇಬೇಕೆಂದು ಪಟ್ಟು ಹಿಡಿದಿದ್ದ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಬಿ.ಬಿ.ಕಾವೇರಿ ಅವರು ನಿಯಮಿತವಾಗಿ ಮುಖ್ಯ ಶಿಕ್ಷಕರ ಮತ್ತು ಶಿಕ್ಷಕರ ಸಭೆ ನಡೆಸಿ ಫಲಿತಾಂಶ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ಸೂಚನೆ ನೀಡಿದ್ದರು.

ಫಲಿತಾಂಶ ಕುಸಿದರೆ ಆಯಾ ವಿಷಯದ ಶಿಕ್ಷಕರನ್ನೇ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದರು. ಜತೆಗೆ ಇಲಾಖೆಯು ಸಿದ್ಧಪಡಿಸಿದ್ದ ಅಧ್ಯಾಯವಾರು ವರ್ಕ್‌ ಶೀಟ್‌, ಪ್ರತಿ ವಿಷಯದ ತಲಾ 6 ಮಾದರಿಯ ಪ್ರಶ್ನೆಪತ್ರಿಕೆಗಳ ಬಳಕೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ಫಲಿತಾಂಶ ಹಿನ್ನಡೆಗೆ ಜೂನಿಯರ್ ಕಾಲೇಜುಗಳ ಫಲಿತಾಂಶ ಕುಸಿತವೇ ಕಾರಣ ಎಂದು ಅರಿತ ಸಿಇಒ ಕಾವೇರಿ ಅವರು ಪರೀಕ್ಷೆಗೆ 2 ತಿಂಗಳು ಮುನ್ನಾ ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಉಪ ಪ್ರಾಂಶುಪಾಲರು ಮತ್ತು ಶಿಕ್ಷಕರ ಸಭೆ ನಡೆಸಿದ್ದರು. ಸಭೆಯಲ್ಲಿ ಶಿಕ್ಷಕರಿಗೆ ಮಾರ್ಗದರ್ಶನ ನೀಡಿ, ಫಲಿತಾಂಶ ಹೆಚ್ಚಳಕ್ಕೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವಂತೆ ಕಟ್ಟಪ್ಪಣೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT