ರಂಗ ಬಿನ್ನಹ

ಸಲಿಂಗಿ ಹೆಣ್ಣುಗಳ ‘ದೊಹರಿ ಜಿಂದಗಿ’

‘ದೊಹರಿ ಜಿಂದಗಿ’ ಹಿಂದಿ ನಾಟಕ ಸಲಿಂಗಕಾಮವನ್ನು ಸಹಾನುಭೂತಿಯಿಂದ ನೋಡಲು ಒತ್ತಾಯಿಸುವ ವಿಶಿಷ್ಟ ರಂಗಪ್ರಯೋಗ. ಹಲವು ಮೋಹಕ ದೃಶ್ಯಗಳ ಈ ನಾಟಕದಲ್ಲಿ, ಕಲಾವಿದೆಯರು ದಿಟ್ಟತನದಿಂದ ನಟಿಸಿದ್ದಾರೆ...

ಸಲಿಂಗಿ ಹೆಣ್ಣುಗಳ ‘ದೊಹರಿ ಜಿಂದಗಿ’

‘ದೊಹರಿ ಜಿಂದಗಿ’ (ಇಬ್ಬಗೆಯ ಬದುಕು) ಹಿಂದಿ ನಾಟಕ. ಇತ್ತೀಚೆಗೆ ನಡೆದ, ಧಾರವಾಡ ರಂಗಾಯಣದ ‘ರಾಷ್ಟ್ರೀಯ ನಾಟಕೋತ್ಸವ’ದಲ್ಲಿ ಪ್ರಯೋಗಗೊಂಡ ಈ ನಾಟಕ, ಲೆಸ್ಬಿಯನ್‌ಗಳ (ಸ್ತ್ರೀ ಸಲಿಂಗಿಗಳು) ಪ್ರೇಮ–ಕಾಮ ಮತ್ತು ದಾಂಪತ್ಯದ ಕಥೆಯ ಅಪರೂಪದ ರಂಗಪ್ರಯೋಗ.

ಸಲಿಂಗಕಾಮ ನಮ್ಮ ಸಮಾಜದಲ್ಲಿ ಸ್ವೀಕೃತವಲ್ಲದ ಸಂಗತಿ. ಇವರುಗಳ ಅನನ್ಯತೆಯ ನೈಸರ್ಗಿಕರೂಪಿ ಜೈವಿಕ–ಮಾನಸಿಕ ಸ್ಥಿತಿಯನ್ನು ನಾವ್ಯಾಕೆ ಒಪ್ಪುವುದಿಲ್ಲ? ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಲೇ ಇರುತ್ತದೆ.

ಮನುಕುಲದ ಚರಿತ್ರೆಯುದ್ಧಕ್ಕೂ ಸಲಿಂಗಕಾಮವೂ ಅಸ್ತಿತ್ವದಲ್ಲಿದೆ. ಆದೆರೆ, ಇದನ್ನು ನಮ್ಮ ಸಮಾಜ ಒಪ್ಪಲು ಸಿದ್ಧವಿಲ್ಲ. ಈ ವಿರೋಧಾಭಾಸವನ್ನು ಶೋಧಿಸುವ ಪ್ರಾಮಾಣಿಕ ಪ್ರಯತ್ನ ‘ದೊಹರಿ ಜಿಂದಗಿ’ ನಾಟಕದಲ್ಲಿದೆ. 

ರಂಗದಮೇಲೆ ಸ್ತ್ರೀ ಸಲಿಂಗ ಪ್ರೇಮ–ಕಾಮದ ಕತೆಯನ್ನು ‘ಬೋಲ್ಡ್’ ಆಗಿ ಅಭಿವ್ಯಕ್ತಿಸುವ ಈ ನಾಟಕದ ರಂಗಪ್ರಯೋಗಗಳು ದೇಶದ ತುಂಬಾ ಯಶಸ್ವಿಯಾಗಿ ನಡೆಯುತ್ತಿವೆ. ನೇಹಾ ಸಿಂಗ್, ಭೂಮಿಕಾ ದುಬೆ ಹಾಗೂ ಗುರ್ಲಿನ್ ಜಜ್ ಎನ್ನುವ ಮೂವರು ಯುವತಿಯರು ಈ ರಂಗಕೃತಿಯ ಶಕ್ತಿಗಳು. ಅವರಿಗೆ ನೆರವಾಗಿ ನಿಂತಿರುವುದು, ಕೃಷ್ಣ ಭಾರದ್ವಾಜ.

ಇದೊಂದು ರಾಜಸ್ತಾನಿ ಜಾನಪದ ಕತೆ. ವಿಜಯದಾನ ದೇಥಾ ಅವರು ಈ ಕತೆಯನ್ನು ಪುನರ್ ಸೃಷ್ಟಿಸಿದ್ದಾರೆ. ಸ್ತ್ರೀ ಸಮಾನತೆಯ ಚಿಂತನೆಯ ಈ ಲೇಖಕ ‘ಧೋಹರಿ ಜಿಂದಗಿ’ಯಲ್ಲಿ ಅದನ್ನು ಉಳಿಸಿಕೊಳ್ಳಲು ಯತ್ನಿಸಿದ್ದಾರೆ.

ತೀಜಾ (ಭೂಮಿಕಾ ದುಬೆ) ಮತ್ತು ಬೀಜಾ (ನೇಹಾ ಸಿಂಗ) ಪ್ರೇಮ–ಕಾಮದಲ್ಲಿ ಸಂಭ್ರಮಿಸುವ ಗೆಳತಿಯರು. ಬೀಜಾ ಸ್ತ್ರೀದೇಹಿಯಾದರೂ ಮಾನಸಿಕವಾಗಿ ಪುರುಷನಾಗಿ ತೀಜಾಳನ್ನು ಪ್ರೀತಿಸುವ ಪ್ರಿಯಕರ–ಯಜಮಾನ. ಇವರಿಬ್ಬರ ಪ್ರೇಮ–ಕಾಮಗಳ ನೈಜ ಅಭಿನಯ ನಾಟಕದ ಗಟ್ಟಿತನ. ಕಥೆಯ ಮುಖ್ಯ ಸಂವೇದನೆ ಅಥವಾ ಕೇಂದ್ರಬಿಂದು ಕಾಮ! ಮತ್ತು ಅದರ ಬಯಕೆಯೂ ಹೌದು.

ದೈಹಿಕ ವಾಂಛೆ, ಆಕರ್ಷಣೆ, ಲೀಲಾಜಾಲವಾಗಿ ಜರುಗುವ ಕಾಮದಾಟಗಳು ದೃಶ್ಯಕಾವ್ಯದಂತೆ ರಂಗದಮೇಲೆ ರೂಪು ಪಡೆಯುತ್ತವೆ. ರಂಗದಮೇಲೆ ದೃಶ್ಯಕ್ಕನುಗುಣವಾಗಿ ಚಿತ್ರಕಲಾಕೃತಿಗಳು ಅನಾವರಣಗೊಳ್ಳುತ್ತವೆ.

ನಾಟಕದ ಶಕ್ತಿ ಅಡಗಿರುವುದು ಈ ಹೆಂಗಳೆಯರ ಅಭಿನಯದಲ್ಲಷ್ಟೇ ಅಲ್ಲ; ರಾಜಸ್ತಾನದ ಜಾನಪದ ಹಾಡು–ಕುಣಿತಗಳಲ್ಲೂ ಇದೆ. ರಾಜಸ್ತಾನದ ಜಾನಪದ ಕತೆ ಹೇಳುವ ಪರಂಪರೆಯ ‘ಕಾವಳ’ ಪ್ರಕಾರವನ್ನು ನಿರ್ದೇಶಕಿ ಗುರ್ಲಿನ್ ಜಜ್ ದುಡಿಸಿಕೊಂಡಿದ್ದಾರೆ.

‘ದೊಹರಿ ಜಿಂದಗಿ’ಯ ಕಥೆಯು ಹುಟ್ಟಿಕೊಂಡ ಊರು ಬೋರುಂದಾ. ಅಲ್ಲಿ ಕಥೆಗಾರ ದೇಥಾನ ಕುಟುಂಬ ನೆಲೆಸಿದೆ. ದೇಥಾ ನಮ್ಮ ಮಧ್ಯೆಯಿಲ್ಲ. ಅವರ ಮಕ್ಕಳು ಅಪ್ಪ ಹಾಕಿಕೊಟ್ಟ ಸಾಮಾಜಿಕ ಮಾರ್ಗದಲ್ಲಿ ಹೆಜ್ಜೆಯಿಡುತ್ತಿದ್ದಾರೆ. ಈ ನಾಟಕದ ಪ್ರೇರಣಾಶಕ್ತಿಯಾದ ದಲಿತ ಮಹಿಳೆಯನ್ನು ಇವರು ಭೇಟಿಮಾಡಿ, ಆಕೆಯಿಂದ ಸ್ಥಳೀಯ ಭಾಷೆ, ಸಂಸ್ಕೃತಿ, ಬದುಕು, ಸಂಗೀತ, ಹಾಡುಗಳನ್ನು ಕಲಿತು ಅಧ್ಯಯನ ಮಾಡಿದರು. ಅದು ಈ ನಾಟಕದ ಪ್ರಯೋಗಕ್ಕೆ ವಿಶಿಷ್ಟ ಸಂವೇದನೆ ಮತ್ತು ಒಳನೋಟ ತಂದುಕೊಟ್ಟಿದೆ.

ನಾಟಕದುದ್ದಕ್ಕೂ ಹಲವು ಮೋಹಕ ದೃಶ್ಯಗಳಿವೆ. ಬೀಜಾನ ಸ್ನಾನದ ದೃಶ್ಯವೊಂದರಲ್ಲಿ ಪಾತ್ರಧಾರಿ ನೇಹಾ ಸಿಂಗ್ ಪ್ರೇಕ್ಷಕರತ್ತ ಬೆನ್ನು ನೀಡಿ ಅರೆಬೆತ್ತಲಾಗುವುದು ನಗ್ನ ಕಲಾಕೃತಿಯೊಂದನ್ನು ನೋಡಿದ ಅನುಭವ ನೀಡುತ್ತದೆ.

ಬೀಜಾ ಪುರುಷರೂಪಧಾರಿಯಾಗಿ (ಕೃಷ್ಣಾ ಭಾಗವತ) ತೀಜಾಳನ್ನು ಸಂಭೋಗಿಸುವುದು, ತೀಜಾ–ಬೀಜಾ ಪರಸ್ಪರ ಎದುರುಗೊಂಡು ವಿವಸ್ತ್ರವಾಗುವುದು, ಚುಂಬಿಸುವುದು –ಇವೆಲ್ಲವು ನಾಟಕದ ಓಘದ ಒಟ್ಟಿಗೆ ಓಟಪಡೆದು ರೂಪಕಗಳಾಗಿ ಕಾಡುತ್ತವೆ. ಹಾಡು, ಸಂಭಾಷಣೆ, ಅಭಿನಯದ ಕ್ರಿಯೆ ಮತ್ತು ನೆಳಲುಬೆಳಕಿನಾಟದಲ್ಲಿ ಇವು ಏಕರೂಪಗೊಳ್ಳುತ್ತವೆ.

ಇಂಥ ಕಥೆ ರೂಪುಗೊಳ್ಳಲು ಅಲ್ಲಿ ಅರಳಿದ ಬದುಕಿನ ಗಾಢ ಅನುಭವ ಮುಖ್ಯ. ಜಿಪುಣರಿಗೆ ಹೆಣ್ಣುಮಕ್ಕಳು ಹುಟ್ಟಿದರೆ ವರನಕಡೆಯವರು ವರದಕ್ಷಿಣೆ ದುರಾಸೆಗಾಗಿ ಕಾಡುತ್ತಾರೆಂದು, ಹೆಣ್ಣುಮಕ್ಕಳನ್ನೇ ಗಂಡೆಂದು ಪರಿಭಾವಿಸುವ ಸ್ಥಿತಿಯಿದೆ. ಹೆಣ್ಣುಗಳೇ ಗಂಡುರೂಪವಾಗಿ ಕಾಮದಾಟ ಹೂಡುವ ಸಂಗತಿಗಳಿವೆ. ಸಾಮಾಜಿಕ ನೈತಿಕತೆ ಮತ್ತು ಲೈಂಗಿಕತೆಯ ಸವಾಲುಗಳು ಪರಸ್ಪರ ಮುಖಾಮುಖಿಗೊಳ್ಳುತ್ತವೆ.

ಇಂಥ ಒಂದು ಸೂಕ್ಷ್ಮ ಎಳೆಯನ್ನು ನಿರ್ದೇಶಕಿ ಗುರ್ಲಿನ್ ನಾಟಕವಾಗಿಸಿದ್ದಾರೆ. ನೇಹಾ ಸಿಂಗ್ ಮತ್ತು ಧ್ರುವ ಲೋಹಮಿ ಇದರ ನಿರ್ಮಾತೃಗಳು. ನೇಹಾ ಸಿಂಗ್ ಮತ್ತು ಭೂಮಿಕಾ ದುಬೆಯವರ ಅಭಿನಯವೇ ಈ ಪ್ರಯೋಗದ ಕೇಂದ್ರ.

ಅದರ ಮಧ್ಯ ಬೀಜಾಳ ಗಂಡುರೂಪದಲ್ಲಿ ಬರುವ ಕೃಷ್ಣ ಭಾರದ್ವಾಜ ಅವರೂ ತಮ್ಮ ಅಭಿನಯ ಕಾಣ್ಕೆ ನೀಡಿದ್ದಾರೆ. ಈ ನಾಟಕ ಇದೇ ತಿಂಗಳು ಬೆಂಗಳೂರಲ್ಲಿ ಜರುಗಲಿರುವ ‘ಸಿಜಿಕೆ ರಂಗೋತ್ಸವ’ದಲ್ಲಿ ಪ್ರಯೋಗಗೊಳ್ಳಲಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಚಾಂಪಿಯನ್ನರ ಗುರು

ಮಿನುಗುಮಿಂಚು
ಚಾಂಪಿಯನ್ನರ ಗುರು

19 Nov, 2017
 ನವಿಲಿಗೇಕೆ ಸಾವಿರ ಕಣ್ಣು?

ಮುಕ್ತಛಂದ
ನವಿಲಿಗೇಕೆ ಸಾವಿರ ಕಣ್ಣು?

19 Nov, 2017
‘ಫೋಟೊ’ಮೇನಿಯಾ?

ಮುಕ್ತಛಂದ
‘ಫೋಟೊ’ಮೇನಿಯಾ?

19 Nov, 2017
ಹಲಸಿನ ಹಣ್ಣಿನ ‘ಅಪ್ಪ’

ಆಹ್ ಸ್ವಾದ
ಹಲಸಿನ ಹಣ್ಣಿನ ‘ಅಪ್ಪ’

19 Nov, 2017

ಮಕ್ಕಳ ಕವನ
ಲೋಡೋರಿನ ಜಲಪಾತ

‘The Cataract of Lodore’ 1820ರಲ್ಲಿ ಇಂಗ್ಲಿಷ್‌ ಕವಿ ರಾಬರ್ಟ್‌ ಸೌದಿ ಬರೆದ ಕವನ. ಇಂಗ್ಲಂಡ್‌ನ ಕುಂಬ್ರಿಯಾ ಪ್ರದೇಶದಲ್ಲಿರುವ ಲೋಡೋರ್‌ ಜಲಪಾತವನ್ನು ವರ್ಣಿಸಿ ಬರೆದದ್ದು....

19 Nov, 2017