ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಹತ್ತರಲ್ಲಿ ಸ್ಥಾನ ಪಡೆದ ಜಿಲ್ಲೆ

Last Updated 13 ಮೇ 2017, 9:10 IST
ಅಕ್ಷರ ಗಾತ್ರ

ಧಾರವಾಡ: ಕಳೆದ ಮೂರು ವರ್ಷ­ಗಳಲ್ಲೇ ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆ ಉತ್ತಮ ಸ್ಥಾನ ಪಡೆದಿದೆ. ವಿದ್ಯಾರ್ಥಿಗಳ, ಸಾರ್ವಜನಿಕ ಶಿಕ್ಷಣ ಇಲಾಖೆ ಸೇರಿದಂತೆ ಸರ್ಕಾರೇತರ ಸಂಸ್ಥೆಗಳ ಪರಿಶ್ರಮದ ಫಲವಾಗಿ ಧಾರವಾಡ ಫಲಿತಾಂಶದಲ್ಲಿ 10ರಿಂದ 8ನೇ ಸ್ಥಾನಕ್ಕೆ ಏರಿಕೆ ಕಂಡಿದೆ.

2015ರಲ್ಲಿ 25ನೇ ಸ್ಥಾನಕ್ಕೆ ತಲುಪಿ ತೀವ್ರ ನಿರಾಸೆ ಮೂಡಿಸಿತ್ತು. ಇದಾದ ನಂತರ 2016ರಲ್ಲಿ 15ನೇ ಸ್ಥಾನಕ್ಕೆ ಏರಿ ಸಮಾಧಾನ ಮೂಡಿಸಿತು. ಈ ವರ್ಷವೂ ಮೊದಲ 10 ಜಿಲ್ಲೆಗಳಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ರಾಜ್ಯದ ಒಟ್ಟು ಸರಾಸರಿ ಫಲಿತಾಂಶ­ಕ್ಕಿಂತ ಜಿಲ್ಲೆ ಫಲಿತಾಂಶ ಹೆಚ್ಚಾಗಿದೆ. ಪರೀಕ್ಷೆ ಬರೆದ 26,158 ಮಕ್ಕಳಲ್ಲಿ 20,218 ಮಕ್ಕಳು ಪಾಸಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 8ರಷ್ಟು ಕುಸಿದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಡಿಡಿಪಿಐ ಎನ್‌.ಎಚ್‌.ನಾಗನೂರ ‘ಈ ಬಾರಿ ಪ್ರಶ್ನೆ ಪತ್ರಿಕೆ ಕ್ಲಿಷ್ಟಕರವಾಗಿದ್ದರಿಂದ ಜಿಲ್ಲೆ ಸೇರಿದಂತೆ ರಾಜ್ಯದ ಬಹುತೇಕ ಕಡೆ ಒಟ್ಟು ಸರಾಸರಿ ಫಲಿತಾಂಶದಲ್ಲಿ ಕಡಿಮೆಯಾಗಿದೆ’ ಎಂದರು.

‘5,940 ವಿದ್ಯಾರ್ಥಿಗಳು ಅನು­ತ್ತೀರ್ಣ­ರಾಗಿದ್ದಾರೆ. ನವನಗರದ ರೋಟರಿ ಅನಿರುದ್ಧ ಕುಲಕರ್ಣಿ, ಎನ್‌.ಕೆ.ಟಕ್ಕರ್‌ ಶಾಲೆಯ ಪ್ರತೀಕ್ಷಾ ಕುರಡಗಿ ಮತ್ತು ಸುಷ್ಮಾ ಕುಲಕರ್ಣಿ 621 ಅಂಕ ಪಡೆದಿದ್ದಾರೆ. ಆದರೆ ವೈಯಕ್ತಿಕ ಫಲಿತಾಂಶದಲ್ಲಿ ಜಿಲ್ಲೆಗೆ ಸ್ಥಾನ ಬರದಿರುವುದು ಬೇಸರ ಮೂಡಿಸಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ವಿದ್ಯಾರ್ಥಿಗಳಿಗೆ ಕಠಿಣ ಅನಿಸಿದ್ದ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಹಿಂದುಳಿದ ವಿದ್ಯಾರ್ಥಿ­ಗಳನ್ನು ಗುರುತಿಸಿ ತರಬೇತಿ ಜೊತೆಗೆ ಸರಳೀಕೃತ ವಿಷಯವಾರು ಪುಸ್ತಕಗಳನ್ನು ನೀಡಲಾಗಿತ್ತು. ಇದು ಉತ್ತಮ ಅಂಕ ಪಡೆಯಲು ಅನುಕೂಲವಾಯಿತು’ ಎಂದು ವಿವರಿಸಿದರು.

ವೈಶುದೀಪ ಫೌಂಢೇಶನ್‌ನ ಶಿವಲೀಲಾ ಕುಲಕರ್ಣಿ ಮಾತನಾಡಿ, ಶಿಕ್ಷಣ ಇಲಾಖೆ ಸಿಬ್ಬಂದಿ ಶ್ರಮ ಮತ್ತು ನುರಿತ ಶಿಕ್ಷಕರ ತರಬೇತಿಯು ಉತ್ತಮ ಫಲಿತಾಂಶ ನೀಡಿದೆ. ವಿಶೇಷ ಚಾರ್ಟ್‌ಗಳು ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾದವು ಎಂದರು. ಹುಬ್ಬಳ್ಳಿಯ ವಿವಿಧೆಡೆ ರೋಟರಿ ಸಂಸ್ಥೆಗಳು 15 ದಿನಗಳ ಕಾಲ ಉಪಾ­ಹಾರದ ಪೂರೈಸುವುದರ ಜೊತೆಯಲ್ಲಿ ವಿಶೇಷ ತರಗತಿಗಳು ನಡೆಯಲು ಅನುಕೂಲ ಮಾಡಿಕೊಟ್ಟರು ಎಂದರು.

ಅನಾರೋಗ್ಯದ ನಡುವೆಯೂ ಸಾಧನೆ

ಧಾರವಾಡ: ಅನಾರೋಗ್ಯದ ಮಧ್ಯೆಯೂ ಪರೀಕ್ಷೆ ಎದುರಿಸಿ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಲ್ಲಿನ ಪವನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸ್ಫೂರ್ತಿ ಅಂಗಡಿ ಶೇ. 99.20 ಅಂಕ ಗಳಿಸಿದ್ದಾರೆ.

ಈ ಬಾರಿಯ ಪರೀಕ್ಷೆಯಲ್ಲಿ ಸಂಸ್ಕೃತ–125, ಗಣಿತ–99, ವಿಜ್ಞಾನ–98, ಕನ್ನಡ–99, ಸಮಾಜ ವಿಜ್ಞಾನ–100, ಇಂಗ್ಲಿಷ್‌ ವಿಷಯಕ್ಕೆ 99 ಅಂಕಗಳನ್ನು ಪಡೆದಿದ್ದು, ಒಟ್ಟು 620 ಅಂಕಗಳನ್ನು ಗಳಿಸಿದ್ದಾರೆ. 

ಫಲಿತಾಂಶ ಕುರಿತು ಸಂತಸ ಹಂಚಿಕೊಂಡ ಸ್ಫೂರ್ತಿ ‘ಮೊದಲಿನಿಂದಲೂ ಎಲ್ಲ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಯಲ್ಲಿ ಗುರುತಿಸಿಕೊಂಡಿದ್ದೆ. ಆದರೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿಂದಿನ ದಿನ ರಾತ್ರಿ ಇದ್ದಕ್ಕಿದ್ದಂತೆ ಹೊಟ್ಟೆ ನೋವಿನ ಬಾಧೆ ಕಾಣಿಸಿಕೊಂಡಿತು. ಚಿಕಿತ್ಸೆ ಪಡೆದು ಪರೀಕ್ಷೆ ಎದುರಿಸಿದೆ. ಹೀಗಾಗಿ ಆತಂಕವಿತ್ತು. ನಿರೀಕ್ಷೆಗೂ ಮೀರಿದ ಫಲಿತಾಂಶ ಬಂದಿದೆ. ಇದರಿಂದ ತುಂಬಾ ಖುಷಿಯಾಗುತ್ತಿದೆ. ಇದಕ್ಕೆ ಕಾರಣ ತಂದೆ–ತಾಯಿ, ಅಜ್ಜ–ಅಜ್ಜಿ ಸೇರಿದಂತೆ ಶಾಲೆಯ ಶಿಕ್ಷಕರ ಮಾರ್ಗದರ್ಶನ ಕಾರಣ ಎಂದರು.

‘ಪರೀಕ್ಷೆಗಾಗಿ ಯಾವುದೇ ವಿಶೇಷ ತಯಾರಿ ಮಾಡಿರಲಿಲ್ಲ. ಎಂದಿನಂತೆ ಪ್ರತಿದಿನ ಆಸಕ್ತಿ ಮತ್ತು ಏಕಾಗ್ರತೆಯಿಂದ ಓದುತ್ತಿದ್ದೆ. ಹೀಗಾಗಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಿದೆ. ವಿಜ್ಞಾನ ವಿಷಯದಲ್ಲಿ ಅಧ್ಯಯನ ಮುಂದುವರಿಸಿ, ಎಂಬಿಬಿಎಸ್‌ ಮಾಡುವ ಆಸೆ ಇದೆ ಎಂದು ಹೇಳಿದರು.  ತಂದೆ ರಾಜಶೇಖರ ಅಂಗಡಿ ಹೈಕೋರ್ಟ್‌ ವಕೀಲರು. ತಾಯಿ ಹೇಮಾ ಗೃಹಿಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT