ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೋಗಿಗಳ ಸೇವೆಯಲ್ಲಿ ದೇವರನ್ನು ಕಾಣಿ’

Last Updated 13 ಮೇ 2017, 9:17 IST
ಅಕ್ಷರ ಗಾತ್ರ

ಹಾವೇರಿ: ‘ಅಶಕ್ತರು, ರೋಗಿಗಳ ಸೇವೆಯು ದೇವರ ಪೂಜೆಗಿಂತಲೂ ಮಿಗಿಲು. ರೋಗಿಗಳ ಸೇವೆಯಲ್ಲಿಯೇ ದೇವರನ್ನು ಕಾಣುವ ವೈದ್ಯಕೀಯ ಸಂಬಂಧಿತ ವೃತ್ತಿಗಳು ಅತ್ಯಂತ ಶ್ರೇಷ್ಠ’ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಶ್ಲಾಘಿಸಿದರು.

ನಗರದಲ್ಲಿನ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಶುಶ್ರೂಷಕರ ಸಂಘದ ಜಿಲ್ಲಾ ಘಟಕ ಆಶ್ರಯದಲ್ಲಿ ಶುಕ್ರವಾರ ನಡೆದ ‘ಫ್ಲಾರೆನ್ಸ್ ನೈಟಿಂಗೇಲ್ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

‘ಋಷಿಗಳು ತಪಸ್ಸಿನ ಮೂಲಕ ದೇವರನ್ನು ಹುಡುಕುತ್ತಾರೆ, ಪೂಜಾರಿಗಳು ಪೂಜೆಯ ಮೂಲಕ ಹುಡುಕುತ್ತಾರೆ. ವೈದ್ಯಕೀಯ ವೃತ್ತಿಯಲ್ಲಿರುವ ಶುಶ್ರೂಷಕಿಯರು ಹಾಗೂ ವೈದ್ಯರು ರೋಗಿಗಳ ಸೇವೆಯಲ್ಲಿ ದೇವರನ್ನು ಕಾಣಲು ಸಾಧ್ಯ’ ಎಂದರು.

‘ಎಲ್ಲ ಶುಶ್ರೂಷಕಿಯರು ಫ್ಲಾರೆನ್ಸ್ ನೈಟಿಂಗೇಲ್ ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ರೋಗಿಗಳ ಸೇವೆಯೇ ಪರಮ ಗುರಿ ಎಂದು ಕಾಯಕದಲ್ಲಿ ಲೀನವಾಗಬೇಕು’ ಎಂದರು. 

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸುನೀಲಚಂದ್ರ ಅವರಾದಿ ಮಾತನಾಡಿ, ‘ಆಸ್ಪತ್ರೆಗಳನ್ನು ‘ನರ್ಸಿಂಗ್ ಹೋಂ’ ಎಂದು ಕರೆಯುತ್ತಾರೆಯೇ ವಿನಃ ‘ಡಾಕ್ಟರ್‌ ಹೋಂ’ ಎಂದು ಕರೆಯುವುದಿಲ್ಲ. ಎಲ್ಲ ಆಸ್ಪತ್ರೆಗಳಲ್ಲಿಯೂ ಶುಶ್ರೂಷಕಿಯರ ಸೇವೆ ಅಮೂಲ್ಯ. ಅವರಿಲ್ಲದೇ ಆಸ್ಪತ್ರೆಯಲ್ಲಿ ಯಾವುದೇ ಕೆಲಸಗಳು, ಸುಸೂತ್ರವಾಗಿ ನಡೆಯಲು ಸಾಧ್ಯವಿಲ್ಲ’ ಎಂದರು.

‘ಅರೆ ವೈದ್ಯಕೀಯ ವೃತ್ತಿಗಳಿಗೆ ಹಿಂದೆ ಹೆಚ್ಚಿನ ಪ್ರೋತ್ಸಾಹವಿರಲಿಲ್ಲ. ಆದರೆ, ಇಂದು ಪ್ರೋತ್ಸಾಹ ಹಾಗೂ ಬೇಡಿಕೆ ಹೆಚ್ಚಿದೆ. ಆಧುನಿಕತೆಗೆ ತಕ್ಕಂತೆ ವೈದ್ಯಕೀಯ ವೃತ್ತಿಯಲ್ಲಿಯೂ ಹಲವು ವಿಭಾಗಗಳು ಬೆಳೆಯುತ್ತಿವೆ. ಪ್ರತಿಯೊಬ್ಬ ಶುಶ್ರೂಷಕಿಯರು ಫ್ಲಾರೆನ್ಸ್ ನೈಟಿಂಗೇಲ್‌ ಅವರ ಬಗ್ಗೆ ತಿಳಿದುಕೊಳ್ಳಬೇಕು’ ಎಂದರು. 

‘ಹಾವೇರಿಯ ಜ್ಯೋತಿ ಹಿರೇಗೌಡ್ರ  ನರ್ಸಿಂಗ್‌ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ,  ಬೆಂಗಳೂರಿನಲ್ಲಿ ನಡೆಯುವ ಫ್ಲಾರೆನ್ಸ್ ನೈಟಿಂಗೇಲ್ ದಿನಾಚರಣೆಯಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾಳೆ’ ಎಂದರು.

ಕರ್ನಾಟಕ ರಾಜ್ಯ ಸರ್ಕಾರಿ ಶುಶ್ರೂಷಕರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ವಿನಾಯಕ ಕುಲಕರ್ಣಿ ಮಾತನಾಡಿ, ‘ಆಗರ್ಭ ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ, ಬಡ ರೋಗಿಗಳ ಸೇವೆ ಮಾಡಿದ ಫ್ಲಾರೆನ್ಸ್ ನೈಟಿಂಗೇಲ್ ಅವರು ‘ಲೇಡಿ ಆಫ್‌ ವಿತ್‌ ಲ್ಯಾಂಪ್‌’ (ದೀಪದೊಂದಿಗಿನ ಮಹಿಳೆ) ಎಂದೇ ಪ್ರಸಿದ್ಧಿ ಪಡೆದಿದ್ದರು. ರೋಗಿಗಳ ಸೇವೆಯೇ ತಮ್ಮ ಗುರಿ ಎಂಬಂತೆ ಬದುಕಿದ್ದರು’ ಎಂದರು.

ಜಿಲ್ಲಾ ಮಟ್ಟದ ಪ್ರಶಸ್ತಿ: ಜಯಮ್ಮ ಅಗಡಿ, ರಾಜೇಶ್ವರ ಭಟ್ಟ, ರಕ್ಷಿತಾ, ಲಲಿತಾ ಹಿರೇಮಠ, ನಿರ್ಮಲಾ, ಸ್ಮಿತಾ ನಾಯಕ್‌ ಹಾಗೂ ಸಾವಿತ್ರಿ ಪಟಗಾರ ಅವರಿಗೆ ಜಿಲ್ಲಾ ಮಟ್ಟದ ‘ಅತ್ಯುತ್ತಮ ಶುಶ್ರೂಷಕಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಹಾಗೂ ‘ಬೆಸ್ಟ್‌ ಸ್ವೀಪರ್’ ಪ್ರಶಸ್ತಿಯನ್ನು ರವಿ ಕೋಟಿ ಅವರಿಗೆ ನೀಡಲಾಯಿತು.

ಜಿಲ್ಲಾ ಆಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ.ನಾಗರಾಜ ನಾಯ್ಕ, ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರಭಾಕರ,  ರವಿಕಾಂತ ಮಾಂಡ್ರೆ, ಡಾ.ರಾಜಕುಮಾರ, ಪಾಲಾಕ್ಷಯ್ಯ, ಆರ್. ಕುದರಿ, ಶಸ್ತ್ರಚಿಕಿತ್ಸಕ ಡಾ.ಜಾನ್ ದೇವಧರ, ಪರಿಸರ ವೇದಿಕೆಯ ಅಧ್ಯಕ್ಷೆ ಮಾಧುರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT