ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ವಾರ್ಡ್‌ ಕೈ ಬಿಟ್ಟ ಆರೋಪ

Last Updated 13 ಮೇ 2017, 9:35 IST
ಅಕ್ಷರ ಗಾತ್ರ

ಕಾರವಾರ: ನಗರಸಭೆಯು ತನ್ನ ನಿಧಿಯಲ್ಲಿ ಕ್ರಿಯಾಯೋಜನೆ ರೂಪಿಸುವ ಸಂದರ್ಭದಲ್ಲಿ 31 ವಾರ್ಡ್‌ಗಳ ಪೈಕಿ ಸುಮಾರು 9 ವಾರ್ಡ್‌ಗಳನ್ನು ಕೈಬಿಟ್ಟಿದೆ ಎಂದು ನಗರಸಭೆಯ ಕೆಲ ಸದಸ್ಯರು ಶುಕ್ರವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ನಮ್ಮ ವಾರ್ಡ್‌ಗಳಲ್ಲಿ ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯಬೇಕಾಗಿದೆ. ಇಂಥ ಸಂದರ್ಭದಲ್ಲಿ ಕ್ರಿಯಾಯೋಜನೆ ತಯಾರಿಕೆಯಲ್ಲಿ ನಮ್ಮ ವಾರ್ಡ್‌ಗಳನ್ನು ಕೈಬಿಟ್ಟಿರುವುದು ಸರಿಯಲ್ಲ’ ಎಂದು ಸದಸ್ಯರಾದ ಪ್ರೇಮಾನಂದ ಗುನಗಾ, ರವಿ ವಿರೋಧ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಗಣಪತಿ ನಾಯ್ಕ, ‘ನಗರಸಭೆ ನಿಧಿಯಿಂದ 2017–-18ನೇ ಸಾಲಿನ ಕ್ರಿಯಾ ಯೋಜನೆಯನ್ನು ಪುನಃ ರೂಪಿಸಿ ಅನುಮೋದನೆಗಾಗಿ ಜಿಲ್ಲಾಧಿಕಾರಿ ಬಳಿ ಕಳುಹಿಸುತ್ತೇವೆ’ ಎಂದು ತಿಳಿಸಿದರು.

ಪೌರಾಯುಕ್ತ ಯೋಗೇಶ್ವರ ಮಾತನಾಡಿ, ‘ಕಾನೂನಿನ ಪ್ರಕಾರ ನಗರಸಭೆಯ ನಿಧಿಯಿಂದ ತುರ್ತು ಪರಿಸ್ಥಿತಿಯ ಕಾಮಗಾರಿಗಳನ್ನು ಮಾತ್ರ ನಡೆಸುಬಹುದು ವಿನಾ ಯಾವುದೇ ಸಾರ್ವಜನಿಕ ಕಾಮಗಾರಿ ನಡೆಸುವಂತಿಲ್ಲ’ ಎಂದು ಸಭೆಗೆ ತಿಳಿಸಿದರು.

ನಗರಸಭೆಯ ಅಧಿಕಾರಿ ಮಾತನಾಡಿ, ‘ನಗರಸಭೆಯ ನಿಧಿಯಲ್ಲಿ ₹ 1.20 ಕೋಟಿ ಪೌರ ಕಾರ್ಮಿಕರ ವೇತನಕ್ಕೆ, ₹ 80 ಲಕ್ಷ ವಿವಿಧ ಕಾಮಗಾರಿಗೆ ಮೀಸಲಿಡಲಾಗಿದೆ. ಸ್ಮಶಾನ ದುರಸ್ತಿಗಾಗಿ ₹ 5ಲ ಕ್ಷ, ನೀರು ಸರಬರಾಜು ಕಾಮಗಾರಿ ದುರಸ್ತಿಗೆ ₹15 ಲಕ್ಷ, ಒಳಚರಂಡಿ ದುರಸ್ತಿಗಾಗಿ ₹ 15 ಲಕ್ಷ, ಶೌಚಾಲಯ ದುರಸ್ತಿಗಾಗಿ ₹ 11 ಲಕ್ಷ, ರಸ್ತೆ ದುರಸ್ತಿಗೆ ₹ 20 ಲಕ್ಷ ಹಾಗೂ ಇನ್ನಿತರ ಕಾಮಗಾರಿಗೆ ಹಣ ಮೀಸಲಿಡಲಾಗಿದೆ’ ಎಂದರು.

ಸದಸ್ಯ ಗಣಪತಿ ನಾಯ್ಕ ಮಾತನಾಡಿ, ‘ನಗರಸಭೆಯ ನಿಧಿಯಿಂದ ಕ್ರಿಯಾ ಯೋಜನೆಯನ್ನು ಈ ಹಿಂದೆ ತಯಾರಿಸಿ ಜಿಲ್ಲಾಧಿಕಾರಿಗೆ ಕಳುಹಿಸಲಾಗಿದೆ. ₹ 80 ಲಕ್ಷ ಅನುದಾನದ ಕೊರತೆಯಿಂದಾಗಿ ಕೆಲವು ವಾರ್ಡ್‌ಗಳನ್ನು ಕೈಬಿಡಲಾಗಿತ್ತು’ ಎಂದು ಗಮನಕ್ಕೆ ತಂದರು.

ನಾಮನಿರ್ದೇಶಿತ ಸದಸ್ಯ ಸಂತೋಷ ನಾಯ್ಕ ಗುರುಮಠ ಮಾತನಾಡಿ, ‘ಯಾವುದೇ ಕಾಮಗಾರಿ ನಡೆಸುವುದಾ ದರೇ ನಗರಸಭೆಯಲ್ಲಿ ಹಣವಿರಬೇಕು. ಆದರೆ ನಗರಸಭೆಗೆ ಬರುವ ಆದಾಯ ದಲ್ಲಿ ಇಳಿಕೆಯಾಗಿದೆ. ಕಾಯಿದೆಯಂತೆ ನಗರಸಭೆಯ ವಿವಿಧ ಮಳಿಗೆಯಿಂದ ಬರಬೇಕಾದ ₹ 1.5 ಕೋಟಿ ಶುಲ್ಕ ಶೀಘ್ರವೇ ವಸೂಲಿಯಾದರೆ ಅನುದಾನದ ಕೊರತೆಯಿಲ್ಲದೆ ಕಾಮಗಾರಿ ನಡೆಸಬಹುದು’ ಎಂದರು. ಸಭೆಯಲ್ಲಿ ಉಪಾಧ್ಯಕ್ಷೆ ಲೀಲಾಬಾಯಿ ಠಾಣೇಕರ್, ಸ್ಥಾಯಿ ಸಮಿತಿ ಅಧ್ಯಕ್ಷ ವಿಠ್ಠಲ ಸಾವಂತ್, ಸದಸ್ಯರು, ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT