ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವು ಬೆಲೆ ಇಳಿಕೆ: ವ್ಯಾಪಾರ ಚುರುಕು

Last Updated 13 ಮೇ 2017, 9:42 IST
ಅಕ್ಷರ ಗಾತ್ರ

ಕಾರವಾರ: ಹಣ್ಣಿನ ರಾಜ ಮಾವು ನಗರದ ಮಾರುಕಟ್ಟೆಗೆ ಅಧಿಕವಾಗಿ ಬಂದಿದೆ. ದರದಲ್ಲಿ ತುಸು ಇಳಿಕೆ ಆಗಿದ್ದು, ಗ್ರಾಹಕರು ಹಣ್ಣಿನ ಖರೀದಿಯಲ್ಲಿ ತೊಡಗಿದ್ದಾರೆ. ಹಲವು ದಿನಗಳಿಂದ ಕುಸಿತ ಕಂಡಿದ್ದ ವ್ಯಾಪಾರ ಇದೀಗ ಚುರುಕುಗೊಂಡಿದೆ. 

ನಗರದ ಗಾಂಧಿ ಬಜಾರ್, ಸವಿತಾ ವೃತ್ತ, ಶಿವಾಜಿ ವೃತ್ತದ ರಸ್ತೆಬದಿಗಳಲ್ಲಿ ವಿವಿಧ ತಳಿಯ ಮಾವಿನ ಹಣ್ಣುಗಳು ಮಾರಾಟಕ್ಕಿದ್ದು, ಅದರ ಘಮಲು ರಸ್ತೆಯಲ್ಲಿ ಸಂಚರಿಸುವ ಜನರ ಮೂಗಿಗೆ ಬಡಿಯುತ್ತಿದೆ. ಹಣ್ಣಿನ ಪರಿಮಳಕ್ಕೆ ಮಾರುಹೋದ ಜನರು ಮಾರಾಟ ಸ್ಥಳದತ್ತ ಸುಳಿದು, ತಮಗೆ ಇಷ್ಟವಾದ ತಳಿಯ ಹಣ್ಣನ್ನು ಮನೆಗೆ ಕೊಂಡೊಯ್ಯು ತ್ತಿರುವುದು ಕಂಡುಬರುತ್ತಿದೆ.

ಕರಿ ಇಶಾಡ್‌ಗೆ ಬೇಡಿಕೆ: ಮಾರುಕಟ್ಟೆ ಯಲ್ಲಿ ಕರಿ ಇಶಾಡ್‌, ಅಪೂಸ್‌, ಅಲ್ಫಾನ್ಸೊ ಸೇರಿ ವಿವಿಧ ತಳಿಯ ಹಣ್ಣುಗಳು ಗ್ರಾಹಕರನ್ನು ಸೆಳೆಯುತ್ತಿವೆ. ಆರಂಭದಲ್ಲಿ ಒಂದು ಡಜನ್‌ಗೆ ₹ 300 ರಿಂದ ₹ 500ರವರೆಗೆ ಇದ್ದ ಮಾವಿನ ಹಣ್ಣ ಇದೀಗ ₹ 180ರಿಂದ ₹ 250ಕ್ಕೆ ಇಳಿದಿದೆ. ಅಪೂಸ್ ಹಾಗೂ ಬದಾಮ್ ತಳಿಯ ಹಣ್ಣಿನ ವ್ಯಾಪಾರ ಸ್ವಲ್ಪ ಕುಸಿದಿದ್ದು, ಜಿಲ್ಲೆಯ ವಿಶೇಷ ತಳಿ ಕರಿ ಇಶಾಡ್‌ಗೆ ಇದೀಗ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ.

ನಿರೀಕ್ಷೆಗೂ ಮೀರಿ ಹಣ್ಣುಗಳ ಆಗಮನ: ಈ ಬಾರಿ ಸೀಜನ್‌ಗೂ ಮುನ್ನವೇ ಮಾವು ಮಾರುಕಟ್ಟೆಗೆ ಕಾಲಿಟ್ಟಿತ್ತು. ಬರಗಾಲ, ಹವಾಮಾನ ವೈಪರೀತ್ಯದಿಂದ ಈ ಬಾರಿ ಮಾವು ಬೆಳೆಯ ಫಸಲು ಇಳಿಕೆಯಾಗಿದೆ ಎನ್ನುತ್ತಿದ್ದ ವ್ಯಾಪಾರಿಗಳಿಗೆ ಈಗ ಅಚ್ಚರಿಯಾಗಿದೆ. ಈ ಬಾರಿ ನಿರೀಕ್ಷೆಗೂ ಮೀರಿ ಹೆಚ್ಚಿನ ಹಣ್ಣುಗಳು ಮಾರುಕಟ್ಟೆಗೆ ಬಂದಿದ್ದು, ವ್ಯಾಪಾರಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಬೆಳಂಬರ, ಮುಂಡಗೋಡದ ಮಳಗಿ, ಶಿರಸಿಯ ಬನವಾಸಿ, ನೆರೆ ರಾಜ್ಯ ಗೋವಾ ಹಾಗೂ ಮಹಾರಾಷ್ಟ್ರದಿಂದಲೂ ಹಣ್ಣುಗಳು ಇಲ್ಲಿಗೆ ಬಂದಿವೆ.
‘ಜಿಲ್ಲೆಯ ಅಲ್ಲಲ್ಲಿ ಗಾಳಿ, ಮಳೆಯಾಗಿರುವುದರಿಂದ ಹಣ್ಣಿನ ದರದಲ್ಲಿ ಸ್ವಲ್ಪ ಕುಸಿದಿದೆ. ಗ್ರಾಹಕರನ್ನು ಹಣ್ಣು ಖರೀದಿಸಲು ಮುಂದಾಗುತ್ತಿ ದ್ದಾರೆ. ಹಣ್ಣಗಳು ಸಂಖ್ಯೆಗೆ ಹೋಲಿಸಿದರೆ ಖರೀದಿ ಅಷ್ಟಕಷ್ಟೆಯಾಗಿದೆ’ ಎನ್ನುತ್ತಾರೆ ವ್ಯಾಪಾರಿ ಅಹಮದ್‌ ಖ್ವಾಜಿ.

ಮಾರುಕಟ್ಟೆಗೆ ಬಾರದ ಅಪ್ಪೆಮಿಡಿ:
ಮಾವಿನ ಸೀಜನ್‌ ಆರಂಭವಾಗು ತ್ತಿದ್ದಂತೆ ಮೊದಲು ಜಿಲ್ಲೆಯ ವಿಶೇಷ ತಳಿ ಅಪ್ಪೆಮಿಡಿ ನಗರದ ಮಾರುಕಟ್ಟೆಯನ್ನು ಪ್ರವೇಶಿಸುತ್ತಿತ್ತು. ಆದರೆ ಈ ಬಾರಿ ಅಪ್ಪೆಮಿಡಿ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡಲಿಲ್ಲ. ಹೀಗಾಗಿ ಅದರಲ್ಲಿ ಉಪ್ಪಿನಕಾಯಿ ತಯಾರಿಸುತ್ತಿದ್ದ ಮಹಿಳೆಯರಿಗೆ ಸ್ವಲ್ಪ ನಿರಾಸೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT