ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಗಾಂವ್ ಗುಡ್ಡಗಳ ನಡುವೆ ಮತ್ತೆ ಪುಟಿದೆದ್ದ ಮಹಾತ್ಮ ಗಾಂಧಿ

Last Updated 13 ಮೇ 2017, 19:30 IST
ಅಕ್ಷರ ಗಾತ್ರ

ಗಾಂಧೀಜಿ ಬದುಕು, ತತ್ವಗಳು ಮತ್ತು ಜೀವನವಿಧಾನವನ್ನು ಹೊಸಪೀಳಿಗೆಗೆ ದಾಟಿಸುವ; ಗಾಂಧೀಜಿಯನ್ನು ಸಾರ್ವಕಾಲಿಕ ಸತ್ಯವಾಗಿ ಉಳಿಸಿಕೊಳ್ಳುವ ಉದ್ದೇಶ ಇಟ್ಟುಕೊಂಡಿರುವ ‘ಗಾಂಧಿ ತೀರ್ಥ’ ಅಕ್ಷರಶಃ ಈಗ ಜಾಗತಿಕ ನೆಲೆಯಲ್ಲಿ ತೀರ್ಥಕ್ಷೇತ್ರವಾಗಿ ಬೆಳೆದು ನಿಂತಿದೆ.

ಹಿರಿಯ ಗೆಳೆಯರಾದ ಡಾ. ಡಿ.ಎನ್. ಕುಲಕರ್ಣಿ ಅವರು ‘ಜಲಗಾಂವ್‌ಗೆ ಭೇಟಿ ನೀಡುವ ಪ್ರತಿಯೊಬ್ಬರೂ ನೋಡಲೇಬೇಕಾದ ಒಂದು ತೀರ್ಥಕ್ಷೇತ್ರವಿದೆ. ಅದು ಗಾಂಧಿ ತೀರ್ಥ. ನೀವೊಮ್ಮೆ ಭೇಟಿ ನೀಡಲೇಬೇಕು’ ಎಂದಾಗ ನಾನು, ‘ತೀರ್ಥ ಮತ್ತು ತೀರ್ಥಕ್ಷೇತ್ರಗಳು ಎರಡರಿಂದಲೂ ನಾನು ಬಹುದೂರ’ ಎಂದು ನಕ್ಕು ನುಡಿದೆ.

ಅದಕ್ಕವರು ‘ಗಾಂಧಿ ತೀರ್ಥ ಎಂದರೆ ತೀರ್ಥಕ್ಷೇತ್ರವಲ್ಲ. ಇದು ಮಹಾತ್ಮ ಗಾಂಧೀಜಿ ಅವರ ಅತ್ಯಾಧುನಿಕ ವಸ್ತು ಸಂಗ್ರಹಾಲಯ ಮತ್ತು ಅಧ್ಯಯನ ಕೇಂದ್ರ. ಈ ತರಹದ ಗಾಂಧಿ ಸ್ಮಾರಕ ಬೇರೆಲ್ಲೂ ಇಲ್ಲ. ತಮಾಷೆ ಸಾಕು. ಮಧ್ಯಾಹ್ನ ಹೋಗಿ ನೋಡಿ ಬನ್ನಿ’ ಎಂದು ಆಜ್ಞೆ ಮಾಡಿದರು.

ಹಿರಿಯರ ಆಜ್ಞೆಗೆ ತಲೆಬಾಗಿ, ನಡುಮಧ್ಯಾಹ್ನ ಸುಡು ಬಿಸಿಲಿನಲ್ಲಿ ಗಾಂಧಿ ತೀರ್ಥದ ಎದುರು ನಿಂತಾಗ ದಿಙ್ಮೂಢನಾದೆ. ಗಾಂಧಿ ತೀರ್ಥ ಹೀಗಿರುತ್ತದೆ ಎಂದು ನಾನಂತೂ ಖಂಡಿತ ನಿರೀಕ್ಷಿಸಿರಲಿಲ್ಲ! ಅದೂ ಜಲಗಾಂವ್‌ನ ಗುಡ್ಡಗಳ ಸಾಲಿನ ನಡುವೆ!

ಮಹಾರಾಷ್ಟ್ರದ ಪ್ರಸಿದ್ಧ ಪ್ರವಾಸಿ ತಾಣವಾದ ಅಜಂತ–ಎಲ್ಲೋರಾ ಗುಹೆಗಳಿಂದ ಕೇವಲ 60 ಕಿಲೋಮೀಟರ್ ದೂರದಲ್ಲಿರುವ ಜಲಗಾಂವ್ ಪಟ್ಟಣ ಚಿನ್ನಾಭರಣಗಳ ಉತ್ಪಾದನೆಗೆ ಹೆಸರುವಾಸಿ. ಬಾಳೆಯನ್ನು ಬೆಳೆಯುವಲ್ಲಿ ದೇಶದಲ್ಲಿಯೇ ಈ ಜಿಲ್ಲೆಗೆ ಅಗ್ರಸ್ಥಾನ.

ಪ್ರಪಂಚದ ಅತಿದೊಡ್ಡ ಕೃಷಿ ಸಲಕರಣೆ, ಹನಿ ನೀರಾವರಿ ಸಲಕರಣೆಗಳನ್ನು ಉತ್ಪಾದಿಸುವ ‘ಜೈನ್ ಇರಿಗೇಷನ್ ಸಿಸ್ಟಮ್ ಲಿಮಿಟೆಡ್’ ಕೇಂದ್ರ ಕಚೇರಿ ಕೂಡ ಇಲ್ಲಿಯೇ ಇದೆ. ‘ಜೈನ್ ಇರಿಗೇಷನ್ ಸಿಸ್ಟಮ್ ಲಿಮಿಟೆಡ್’ ಸಂಸ್ಥಾಪಕ ದಿವಂಗತ ಡಾ. ಭವರ್‌ಲಾಲ್ ಎಚ್. ಜೈನ್ ಕನಸಿನ ಕೂಸು ‘ಗಾಂಧಿ ರೀಸರ್ಚ್ ಫೌಂಡೇಷನ್’ (ಜಿಆರ್‌ಎಫ್).

ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರ ಧರ್ಮಾಧಿಕಾರಿ ಅಧ್ಯಕ್ಷರಾಗಿರುವ, ‘ಜಿಆರ್‌ಎಫ್’ 2012ರಲ್ಲಿ ಸ್ಥಾಪಿಸಿರುವ ‘ಗಾಂಧಿ ತೀರ್ಥ’ ಜೈನ್ ಹಿಲ್ಸ್‌ನ ತುತ್ತತುದಿಯ ಒಂದೂವರೆ ಎಕರೆ ಪ್ರದೇಶದಲ್ಲಿ ಹರಡಿ ನಿಂತಿದೆ.

ಉರಿವ ಬಿಸಿಲ ನಡುವೆ ಹಸಿರು ತುಂಬಿದ ತೋಟದ ಹಾದಿಯಲ್ಲಿ ಮುನ್ನಡೆದು ‘ಗಾಂಧಿ ತೀರ್ಥ’ದ ಎದುರು ನಿಂತಾಗ, ದೇಹ ಬಳಲಿದ್ದರೂ ಮನಸ್ಸು ತುಂಬಿತು. ನಂತರ ಸುಮಾರು ಎರಡು ಗಂಟೆಗಳ ಅವಧಿ – ಮತ್ತೊಮ್ಮೆ ಹುಟ್ಟಿ ಬಂದ ಗಾಂಧೀಜಿಯ ಜೊತೆ, ಅವರ ಬದುಕಲ್ಲಿ ಒಂದಾಗಿ ಜೊತೆಯಾಗಿ ಹೆಜ್ಜೆ ಹಾಕಿದ ಅನುಭವ ಉಂಟಾಯಿತು. ಅದು ಅಭೂತಪೂರ್ವ ಅನುಭವ.

ನಮ್ಮ ಗುಂಪನ್ನು ವಸ್ತುಸಂಗ್ರಹಾಲಯದಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋದ ಗೈಡ್ ಸರಳವಾಗಿ ಮತ್ತು ಪರಿಣಾಮಕಾರಿಯಾಗಿ ಗಾಂಧೀಜಿ ಬದುಕನ್ನು ಅನಾವರಣ ಮಾಡುತ್ತಾ ಸಾಗಿದರು.


ಆಕಾಶದಿಂದ ಕಂಡಾಗ ‘ಗಾಂಧಿ ತೀರ್ಥ’

ಮೋಹನದಾಸ ಕರಮಚಂದರ ಕುಟುಂಬ, ಹುಟ್ಟು, ಬಾಲ್ಯ, ಓದು, ಇಂಗ್ಲೆಂಡ್ ಪಯಣ, ಭಾರತಕ್ಕೆ ಮರಳಿದ್ದು, ವೃತ್ತಿ ವೈಫಲ್ಯ, ದಕ್ಷಿಣ ಆಫ್ರಿಕಾ ಪಯಣ, ಜನಾಂಗೀಯ ನಿಂದನೆಗೆ ಒಳಗಾಗಿದ್ದು, ಗಾಂಧಿಯ ಮರುಹುಟ್ಟು, ಮರಳಿ ಭಾರತಕ್ಕೆ ಬಂದು ಸ್ವಾತಂತ್ರ್ಯ ಸಂಗ್ರಾಮದ ಭಾಗವಾಗಿದ್ದು, ಚಂಪಾರನ್, ಚೌರಿ–ಚೌರ, ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿ, ದುಂಡುಮೇಜಿನ ಸಭೆಗಳು ಮತ್ತು ಕೊನೆಯದಾಗಿ ಸ್ವಾತಂತ್ರ್ಯ ಪಡೆಯುವವರೆಗೆ ಎಲ್ಲವೂ ಇಲ್ಲಿ ದಾಖಲಾಗಿವೆ. 30 ವಿಭಾಗಗಳಲ್ಲಿ ಗಾಂಧೀಜಿಯ ಬದುಕು ಇಲ್ಲಿ ಅನಾವರಣಗೊಂಡಿದೆ. ಆದರದು ಏಕದನಿ ಮತ್ತು ಏಕಸ್ವರೂಪದಲ್ಲಿ ಅಲ್ಲ.

ದೃಶ್ಯಕಲೆ, ಶ್ರವಣ, ಛಾಯಾಚಿತ್ರಗಳು, ಕಿರುಚಿತ್ರಗಳು, ಬಯೋಸ್ಕೋಪ್, ಡಿಜಿಟಲ್ ಮಾಧ್ಯಮ, 3ಡಿ ಮ್ಯಾಪಿಂಗ್, ಮ್ಯೂರಲ್, ಇನ್‌ಸ್ಟಲೇಷನ್... ಹೀಗೆ ಎಲ್ಲ ಹಂತದಲ್ಲೂ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಗಾಂಧೀಜಿ ಬದುಕನ್ನು ಇಲ್ಲಿ  ಕಲಾತ್ಮಕವಾಗಿ ಅನಾವರಣಗೊಳಿಸಲಾಗಿದೆ.

ವಸ್ತುಸಂಗ್ರಹಾಲಯದ ಪ್ರತಿಯೊಂದು ವಿಭಾಗದಲ್ಲೂ ಪ್ರೇಕ್ಷಕರು ಮತ್ತು ಅಲ್ಲಿರುವ ವಸ್ತುಗಳ ನಡುವೆ ಇಂಟರ್ಯಾಕ್ಟಿವ್ ಸಂಬಂಧ ಇರುವಂತಹ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಅದರ ಪರಿಣಾಮವಾಗಿ ಯಾವುದೇ ಹಂತದಲ್ಲಿ ಪ್ರೇಕ್ಷಕರಿಗೆ ಬೇಸರವಾಗುವುದಿಲ್ಲ. ಎರಡು ಗಂಟೆಗಳ ಕಾಲ ಗಾಂಧಿಯೊಂದಿಗೆ ಇದ್ದು ಹೊರಬಂದ ಮೇಲೆ ಕೂಡ ಆ ಅನುಭವ – ಗಾಂಧೀಜಿ ಬದುಕು, ಜೀವನ ಮೌಲ್ಯಗಳು ಕಾಡುತ್ತಲೇ ಇದ್ದವು.

ಈ ವಸ್ತುಸಂಗ್ರಹಾಲಯದ ಒಂದೇ ಒಂದು ಕೊರತೆ ಎಂದರೆ, ಗಾಂಧಿ ಹತ್ಯೆಯ ಬಗ್ಗೆ ಎಲ್ಲಿಯೂ ಯಾವುದೇ ಉಲ್ಲೇಖ ಮಾಡದೇ ಇರುವುದು!
ವಸ್ತುಸಂಗ್ರಹಾಲಯ ‘ಗಾಂಧಿ ತೀರ್ಥ’ದ ಒಂದು ಭಾಗವಷ್ಟೇ. ಅದರ ಜೊತೆಯಲ್ಲಿಯೇ ಗಾಂಧೀಜಿಗೆ ಸಂಬಂಧಿಸಿದ ಸುಮಾರು 80,00,000 ವಸ್ತುಗಳನ್ನು ಕೂಡ ಇಲ್ಲಿ ಸಂಗ್ರಹಿಸಿಡಲಾಗಿದೆ.

ಗಾಂಧೀಜಿ ಅವರು ಬರೆದ ಪುಸ್ತಕಗಳು, ಪತ್ರಿಕಾ ಲೇಖನಗಳು, ಪತ್ರಗಳು; ಗಾಂಧೀಜಿ ಕುರಿತು ಬೇರೆಯವರು ಬರೆದ ಪುಸ್ತಕಗಳು, ಲೇಖನಗಳು, ಪತ್ರಗಳನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಮುಂದಿನ ಪೀಳಿಗೆಗಾಗಿ ಸಂರಕ್ಷಿಸಿ ಇಡುವ ಬೃಹತ್ ಯೋಜನೆ ಮತ್ತು ಆರ್ಕೈವ್ ಕೂಡ ಇಲ್ಲಿದೆ.

ಇದುವರೆಗೆ ಗಾಂಧೀಜಿ ಕುರಿತಾದ ಸುಮಾರು 13,00,000 ಪುಟಗಳನ್ನು ಆಧುನಿಕ ತಂತ್ರಜ್ಞಾನಗಳ ನೆರವಿನಿಂದ ಇಲ್ಲಿ ಡಿಜಿಟಲ್ ಮತ್ತು ಭೌತಿಕವಾಗಿ ಸಂರಕ್ಷಣೆ ಮಾಡಿ ಇಡಲಾಗಿದೆ.

ಹಾಗೆಯೇ ಗಾಂಧೀಜಿ ಅವರ ಭಾಷಣಗಳು ಮತ್ತು ಸಿನಿಮಾಗಳನ್ನು ಕೂಡ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಡಲಾಗಿದೆ. ಗಾಂಧೀಜಿ ಕುರಿತಾದ ಸಾಹಿತ್ಯ ಮತ್ತು ಬರವಣಿಗೆಗಳ ಡಿಜಿಟಲೀಕರಣ ಇಲ್ಲಿ ನಿರಂತರವಾಗಿ ನಡೆಯುತ್ತಿದ್ದು, ಅದಕ್ಕಾಗಿಯೇ ಒಂದು ವಿಶೇಷ ವಿಭಾಗವಿದೆ.

ಈ ಎಲ್ಲದರ ಮೂಲ ಉದ್ದೇಶ, ‘ಗಾಂಧಿ ತೀರ್ಥ’ವನ್ನು ಜಾಗತಿಕ ಮಟ್ಟದಲ್ಲಿ ವ್ಯಾಸಂಗ ಮತ್ತು ಸಂಶೋಧನೆಯ ಕೇಂದ್ರಬಿಂದು ಆಗಿಸುವುದು. ಗಾಂಧೀಜಿಯವರ ಸಾಮಾಜಿಕ, ರಾಜಕೀಯ, ಆರ್ಥಿಕ, ತಾತ್ವಿಕ ಮತ್ತು ಪರಿಸರದ ಕುರಿತಾದ ನಿಲುವುಗಳು ಸದಾ ಪ್ರಸ್ತುತ. ಅದರಲ್ಲಂತೂ ಧರ್ಮ, ರಾಜಕೀಯ, ಆರ್ಥಿಕ, ಪರಿಸರದ ನೆಲೆಯಲ್ಲಿ ಜಗತ್ತು ಛಿದ್ರ–ಛಿದ್ರ ಆಗುತ್ತಿರುವ ಈ ಸಂದಿಗ್ಧ ಸನ್ನಿವೇಶದಲ್ಲಿ ಗಾಂಧೀಜಿ ಬದುಕು ಮತ್ತು ತತ್ವಗಳಿಗೆ ಬಹಳಷ್ಟು ಮಹತ್ವವಿದೆ.

ಅದಕ್ಕಾಗಿ ಗಾಂಧೀಜಿ ಬದುಕನ್ನು ಇಲ್ಲಿ ಅನಾವರಣಗೊಳಿಸಿ, ಜಾಗತಿಕ ಮಟ್ಟದ ಸಂಶೋಧನೆಗೆ ಒಂದು ನೆಲೆ ನಿರ್ಮಿಸಿದ್ದು. ಪ್ರಪಂಚದ ಎಲ್ಲೆಡೆಯಿಂದ ಇಲ್ಲಿಗೆ ಗಾಂಧಿ ತತ್ವಗಳ ಅನುಯಾಯಿಗಳು ಬಂದು ಚರ್ಚೆ, ಸಂಶೋಧನೆಗಳನ್ನು ನಡೆಸಲಿ ಎನ್ನುವುದೇ ನಮ್ಮ ಉದ್ದೇಶ ಎಂದು ಭವರ್‌ಲಾಲ್ ಹೇಳುತ್ತಿದ್ದರು.

ಅದು ಕೇವಲ ಹೇಳಿಕೆಯಾಗಿ ಉಳಿಯಲಿಲ್ಲ. ತಮ್ಮ ಸ್ವಂತ ಹಣವನ್ನು ವಿನಿಯೋಗಿಸಿ ಗಾಂಧೀಜಿ ಬದುಕನ್ನು ಅನಾವರಣಗೊಳಿಸಲು ಭವರ್‌ಲಾಲ್ ಮುಂದಾದರು. ಆ ಕನಸು ನನಸಾಗಿಸಲು ಎರಡು ಸಾವಿರ ಜನರ ತಂಡ ಆರು ವರ್ಷಗಳನ್ನು ವಿನಿಯೋಗಿಸಿತು. 2006ರಲ್ಲಿ ಆರಂಭವಾದ ‘ಗಾಂಧಿ ತೀರ್ಥ’ದ ಕಾಮಗಾರಿ ಪೂರ್ಣಗೊಂಡಿದ್ದು 2012ರಲ್ಲಿ.

‘ಜಿಆರ್‌ಎಫ್’ ಆಡಳಿತ ಮಂಡಳಿ ಎಷ್ಟು ಆಳವಾಗಿ ಯೋಚನೆ ಮಾಡಿ ಈ ಯೋಜನೆ ಜಾರಿಗೆ ತಂದಿದೆ ಎಂದರೆ, ಇಲ್ಲಿನ ಎಲ್ಲ ಕಟ್ಟಡಗಳಿಗೆ ವಿದ್ಯುತ್ ಸರಬರಾಜು ಆಗುವುದು ಸೌರ ವಿದ್ಯುತ್ ಮತ್ತು ಬಯೋಗ್ಯಾಸ್ ಮೂಲಕ. ಹಸಿರು ತಂತ್ರಜ್ಞಾನ ಅಳವಡಿಸಿಕೊಂಡ ಕಟ್ಟಡ ಸಮುಚ್ಚಯ ಎಂಬ ಖ್ಯಾತಿ ‘ಗಾಂಧಿ ತೀರ್ಥ’ದ್ದು.

ಇಲ್ಲಿನ ಇಂಚಿಂಚಿನಲ್ಲೂ ಗಾಂಧೀಜಿ ತತ್ವ, ಸಿದ್ಧಾಂತಗಳು ಪ್ರತಿಬಿಂಬಿಸುತ್ತಿವೆ. ಜಲಗಾಂವ್ ಮೂಲದವರೇ ಆಗಿರುವ, ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಮಾರ್ಚ್ 25, 2012ರಂದು ‘ಗಾಂಧಿ ತೀರ್ಥ’ವನ್ನು ಉದ್ಘಾಟನೆ ಮಾಡಿದ ಮೇಲೆ ಇದುವರೆಗೆ ಸುಮಾರು 3,00,000 ಮಂದಿ ಇಲ್ಲಿಗೆ ಭೇಟಿ ನೀಡಿದ್ದಾರೆ.

‘ಗಾಂಧಿ ತೀರ್ಥ’ದ ಯಶಸ್ಸು ಕೇವಲ ಲಕ್ಷಾಂತರ ಜನರ ಭೇಟಿಗೆ ಮಾತ್ರ ಸೀಮಿತವಾಗಿಲ್ಲ. ಮೆಟ್ರೊಗಳ ಅಬ್ಬರದಿಂದ ಬಹುದೂರ ಮಹಾರಾಷ್ಟ್ರದ ಹೃದಯ ಭಾಗದಲ್ಲಿ ಅಡಗಿಕೂತಿರುವ, ಜಾಗತಿಕ ನೆಲೆಯಲ್ಲಿ ಗಾಂಧೀಜಿ ಕುರಿತಾದ ಸಂಶೋಧನಾ ಕೇಂದ್ರವಾಗಿ ಇದು ಹೊರಹೊಮ್ಮಿದೆ.
‘ನನ್ನ ಭುಜ ಅತ್ಯಂತ ಅದೃಷ್ಟಶಾಲಿ.

ಏಕೆಂದರೆ ನಾನು ಯುವಕನಾಗಿದ್ದ ಸಂದರ್ಭದಲ್ಲಿ ಗಾಂಧೀಜಿ ತಮ್ಮ ಕೈಯನ್ನು ನನ್ನ ಭುಜದ ಮೇಲಿಟ್ಟು ಹೆಜ್ಜೆ ಹಾಕುತ್ತಿದ್ದರು. ನಾನು ಅವರೊಂದಿಗೆ ಜೊತೆಯಾಗಿ ಹೆಜ್ಜೆ ಹಾಕುತ್ತಿದ್ದೆ. ಬಾಲ್ಯದಿಂದಲೇ ಗಾಂಧೀಜಿ ಪ್ರಭಾವಕ್ಕೆ ಒಳಗಾಗುವ ಅವಕಾಶ ನನಗೆ ಸಿಕ್ಕಿದ್ದು ಅದೃಷ್ಟವೇ ಸರಿ. ಈಗಿನ ಯುವಕರಲ್ಲಿ ಗಾಂಧೀಜಿ ಜೀವನದ ಬಗ್ಗೆ ತಿಳಿವಳಿಕೆ ಮೂಡಿಸುವ ಅಗತ್ಯವಿದೆ.

ಗಾಂಧಿ ತೀರ್ಥ ನನ್ನ ಪ್ರಕಾರ ಆವತ್ತು ಗಾಂಧೀಜಿ ನನ್ನ ಭುಜದ ಮೇಲೆ ಇಡುತ್ತಿದ್ದ ಕೈನ ಮುಂಚಾಚಿದ ಭಾಗ. ಹೇಗೆ ನಾನು ಗಾಂಧೀಜಿ ಪ್ರಭಾವಕ್ಕೆ ಒಳಗಾದೆನೋ, ಅದೇ ರೀತಿಯಲ್ಲಿ ಈಗಿನ ಯುವಪೀಳಿಗೆಯನ್ನು ಗಾಂಧೀಜಿ ಜೀವನ, ತತ್ವಾದರ್ಶಗಳ ಪ್ರಭಾವಕ್ಕೆ ಒಳಗಾಗುವಂತೆ ಮಾಡಬೇಕು ಎನ್ನುವ ಮೂಲ ಉದ್ದೇಶ ಗಾಂಧಿ ತೀರ್ಥದ್ದಾಗಿದೆ.

ಕೇವಲ ವಸ್ತು ಸಂಗ್ರಹಾಲಯದಿಂದ ಅದು ಸಾಧ್ಯವಿಲ್ಲ. ಅದಕ್ಕಾಗಿಯೇ ನಾವು ಗಾಂಧೀಜಿ ಕುರಿತಾದ ಪುಸ್ತಕಗಳು ಮತ್ತು ನಿಯತಕಾಲಿಕಗಳನ್ನು ಪ್ರಕಟ ಮಾಡುತ್ತಿದ್ದೇವೆ. ಜೊತೆಗೆ ಗಾಂಧಿ ಅಧ್ಯಯನ ಕೇಂದ್ರ ಕೂಡ ಇದೆ’ ಎನ್ನುತ್ತಾರೆ ‘ಜಿಆರ್‌ಎಫ್’ ಅಧ್ಯಕ್ಷ ನ್ಯಾಯಮೂರ್ತಿ ಚಂದ್ರಶೇಖರ ಧರ್ಮಾಧಿಕಾರಿ.

ಜಗತ್ತಿನ ಯಾವುದೇ ಭಾಗದಿಂದ ಬರುವ ಸಂಶೋಧನಾ ವಿದ್ಯಾರ್ಥಿಗಳಿಗೆ ಅಥವಾ ಸಂಶೋಧಕರಿಗೆ ಇಲ್ಲಿನ ‘ಗಾಂಧಿ ಅಧ್ಯಯನ ಕೇಂದ್ರ’ದ ಬಾಗಿಲು ಸದಾ ತೆರೆದಿರುತ್ತದೆ. ಇಲ್ಲಿಗೆ ಬರುವ ಸಂಶೋಧಕರು ಅಥವಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಉಳಿದುಕೊಳ್ಳುವ ಮತ್ತು ಆಹಾರದ ವ್ಯವಸ್ಥೆಯಿದೆ. ಸ್ಕಾಲರ್‌ಷಿಪ್ ಕೂಡ ಲಭ್ಯವಿದೆ. ಹಾಗೆ ಬಂದ ಸಂಶೋಧಕರು ಎಷ್ಟು ದಿನ ಬೇಕಾದರೂ ಇಲ್ಲಿ ನೆಲೆನಿಂತು ಅಧ್ಯಯನ ಮಾಡಬಹುದು. ಇಲ್ಲಿನ ಗ್ರಂಥಾಲಯ ಮತ್ತು ಆರ್ಕೈವ್ ಅನ್ನು ಅವರು ಉಚಿತವಾಗಿ ಬಳಸಿಕೊಳ್ಳಬಹುದು.

ಅದಲ್ಲದೇ ಗಾಂಧೀಜಿ ಅವರ ಗ್ರಾಮೀಣಾಭಿವೃದ್ಧಿ ಮಾದರಿಯನ್ನು ಆಧರಿಸಿದ ಒಂದು ವರ್ಷದ ಸ್ನಾತಕೋತ್ತರ ಡಿಪ್ಲೊಮೊ ಕೋರ್ಸ್ ಅನ್ನು ‘ಗಾಂಧಿ ಅಧ್ಯಯನ ಕೇಂದ್ರ’ ನಡೆಸುತ್ತದೆ. ಗ್ರಾಮೀಣಾಭಿವೃದ್ಧಿ ಮತ್ತು ಸಮಾಜಸೇವೆ ಮಾಡಲು ಇಚ್ಛಿಸುವ, ಯಾವುದೇ ಪದವೀಧರ ಅಭ್ಯರ್ಥಿ ಈ ಕೋರ್ಸ್‌ಗೆ ಸೇರಿಕೊಳ್ಳಬಹುದು. ಇದು ಪೂರ್ಣ ಸ್ಕಾಲರ್‌ಷಿಪ್ ಇರುವ ಕೋರ್ಸ್ ಆಗಿದ್ದು, ಡಿಪ್ಲೊಮೊ ಪದವಿ ಪಡೆದ ಪ್ರತಿಯೊಬ್ಬರಿಗೂ ಕೆಲಸವನ್ನು ಕೂಡ ‘ಜಿಆರ್‌ಎಫ್’ ಹುಡುಕಿಕೊಡುತ್ತದೆ.

ಮಹಾರಾಷ್ಟ್ರದ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಗಾಂಧಿ ವಿಚಾರ್ ಸಂಸ್ಕಾರ ಪರೀಕ್ಷಾ ನಡೆಸುವ ಜಿಆರ್‌ಎಫ್, ಎಳೆಯ ವಯಸ್ಸಿನಲ್ಲಿಯೇ ಮಕ್ಕಳು ಗಾಂಧೀಜಿ ತತ್ವ–ಸಿದ್ಧಾಂತಗಳಿಗೆ ಒಳಗಾಗಿ ಜೀವನ ರೂಪಿಸಿಕೊಳ್ಳುವಂತೆ ಪ್ರಯತ್ನಗಳನ್ನು ಮಾಡುತ್ತಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಗಾಂಧೀಜಿಯ ಗ್ರಾಮಸ್ವರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸಲು ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಕೂಡ ‘ಜಿಆರ್‌ಎಫ್’ ಹಮ್ಮಿಕೊಳ್ಳುತ್ತಿದೆ. ಒಟ್ಟಾರೆ ಸಮಗ್ರವಾಗಿ ಗಾಂಧಿ ತತ್ವಗಳನ್ನು ಹರಡುವ ಯತ್ನದಲ್ಲಿ ‘ಜಿಆರ್‌ಎಫ್’ ನಿರತವಾಗಿದೆ.

ಸುಮಾರು ಮೂರು ಗಂಟೆಗಳ ಕಾಲ ‘ಗಾಂಧಿ ತೀರ್ಥ’ದ ಪ್ರತಿಯೊಂದು ವಿಭಾಗಕ್ಕೂ ಭೇಟಿ ನೀಡಿ, ಅಲ್ಲಿನ ಸಿಬ್ಬಂದಿಯ ಜೊತೆ ಮಾತನಾಡಿ ಹೊರಗಡಿಯಿಡುತ್ತಿದ್ದಾಗ, ‘ಭವರ್‌ಲಾಲ್ ಜೈನ್ ಅವರ ಕನಸಂತೂ ಈಗ ನನಸಾಗಿ ಕಣ್ಣ ಮುಂದಿದೆ. ಆದರೆ, ಭವಿಷ್ಯದಲ್ಲಿ ಕೂಡ ಇದೇ ತತ್ವ, ಆದರ್ಶಗಳ ತಳಹದಿಯ ಮೇಲೆ ಗಾಂಧಿ ತೀರ್ಥ ಶಾಶ್ವತವಾಗಿ ಉಳಿದು, ಬೆಳೆಯಲಿದೆಯೇ?’ ಎಂಬ ಸಣ್ಣ ಪ್ರಶ್ನೆ ಮನದಲ್ಲಿ ಉದ್ಭವಿಸಿತು. ಆದರೆ, ‘ಜಿಆರ್‌ಎಫ್’ ಆಡಳಿತ ಮಂಡಳಿಯ ಸದಸ್ಯರ ಪೈಕಿ ಒಬ್ಬರಾಗಿರುವ ಭವರಲಾಲ್ ಪುತ್ರ, ಅಶೋಕ್ ಭವರ್‌ಲಾಲ್ ಜೈನ್, ‘ಜಿಆರ್‌ಎಫ್ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ನಮ್ಮ ಕುಟುಂಬ ಒಂದಿಷ್ಟು ದೊಡ್ಡ ಮೊತ್ತದ ಹಣವನ್ನು ಠೇವಣಿಯಾಗಿ ಇಟ್ಟಿದೆ.

ಆ ಹಣಕಾಸಿನ ನೆರವಿನಿಂದ ನಿರಂತರವಾಗಿ ಗಾಂಧೀಜಿ ತತ್ವಗಳು, ಸಿದ್ಧಾಂತಗಳನ್ನು ನಿತ್ಯಸತ್ಯವಾಗಿ ಉಳಿಸುವ ಯತ್ನ ಮಾಡುತ್ತೇವೆ. ಮುಂದಿನ ಯುವ ಪೀಳಿಗೆಗೆ ಗಾಂಧಿ ತತ್ವ–ಸಿದ್ಧಾಂತಗಳನ್ನು ತಲುಪಿಸುವ ಯತ್ನ ಮಾಡುತ್ತಲೇ ಇರುತ್ತೇವೆ. ಎಲ್ಲಕ್ಕಿಂತ ಮುಖ್ಯವಾಗಿ ಜಾಗತಿಕ ನೆಲೆಯಲ್ಲಿ ಅತ್ಯುನ್ನತ ಗಾಂಧಿ ಅಧ್ಯಯನ ಕೇಂದ್ರವನ್ನಾಗಿ ಗಾಂಧಿ ತೀರ್ಥವನ್ನು ಅಭಿವೃದ್ಧಿ ಪಡಿಸುತ್ತೇವೆ’ ಎಂಬ ಭರವಸೆ ನೀಡುತ್ತಾರೆ.

ಕಳೆದ ನಾಲ್ಕು ದಶಕಗಳಿಂದ ‘ಜೈನ್ ಇರಿಗೇಷನ್ ಸಿಸ್ಟಮ್ ಲಿಮಿಟೆಡ್’ ಒಂದು ಕಾರ್ಪೋರೇಟ್ ಕಂಪೆನಿಯಾಗಿಯೂ, ಗಾಂಧೀಜಿ ತತ್ವ–ಸಿದ್ಧಾಂತಗಳನ್ನು ಅಳವಡಿಸಿಕೊಂಡೇ ಬೆಳೆದುನಿಂತಿದೆ. ಆ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ವಿಶ್ಲೇಷಿಸಿದರೆ ‘ಜಿಆರ್‌ಎಫ್’ ಹಾದಿ ಸ್ಪಷ್ಟವಾಗಿದೆ. ಗುರಿ ನಿಚ್ಚಳವಾಗಿದೆ.

ಜಗತ್ತಿನ ಯಾವುದೇ ಭಾಗದಿಂದ, ಯಾರೇ ಸಂಶೋಧಕರು ಬಂದರೂ ‘ಜಿಆರ್‌ಎಫ್’ ಲೈಬ್ರರಿ ಮತ್ತು ಆರ್ಕೈವ್‌ನಲ್ಲಿ ಇರುವ ಗಾಂಧೀಜಿಗೆ ಸಂಬಂಧಿಸಿದ ಲಕ್ಷಾಂತರ ಪುಟಗಳ ಬರಹಗಳು, ನೂರಾರು ಸಿನಿಮಾಗಳು, ಧ್ವನಿಸುರುಳಿಗಳು ಮುಕ್ತವಾಗಿ ಅವರಿಗೆ ಲಭ್ಯವಾಗುತ್ತವೆ. ಅದೇ ರೀತಿಯಲ್ಲಿ ಪಾಮರರು ಬಂದರೂ ಇಲ್ಲಿರುವ ವಸ್ತು ಸಂಗ್ರಹಾಲಯದ ಬಾಗಿಲು ಅವರಿಗೆ ಸದಾ ತೆರೆದಿರುತ್ತದೆ. ಇಲ್ಲಿ ಬಡವ–ಬಲ್ಲಿದ, ಪೇಟೆಯವ–ಹಳ್ಳಿಯವ, ಪಂಡಿತ–ಪಾಮರ ಎಲ್ಲರೂ ಒಂದೇ.

‘ಗಾಂಧಿ ತೀರ್ಥ’ ಮಿಂದೆದ್ದು ಸತ್ಯದರ್ಶನವಾದ ಮೇಲೆ ಅಲ್ಲಿನ ಹೂತೋಟದಲ್ಲಿ ನಿಂತಾಗ ಕಿವಿಯಲ್ಲಿ ಮಾರ್ಟಿನ ಲೂಥರ್ ಹೇಳಿದ್ದ ಮಾತುಗಳು ಪ್ರತಿಧ್ವನಿಸಿದವು. ಗಾಂಧೀಜಿ ಇಂದಿಗೂ ಎಂದೆಂದಿಗೂ ಪ್ರಸ್ತುತ ಮತ್ತು ಅನಿವಾರ್ಯ. ಈ ಭೂಮಿಯ ಮೇಲೆ ಮಾನವೀಯ ನಿಲುವುಗಳು ಜೀವಂತವಾಗಿರಬೇಕಾದಲ್ಲಿ, ಗಾಂಧೀಜಿ ಇರಲೇಬೇಕಾಗುತ್ತದೆ.

ಜಗತ್ತು ಅಕಸ್ಮಾತ್ ಗಾಂಧೀಜಿಯನ್ನು ಮರೆತಲ್ಲಿ ಅಥವಾ ಕಡೆಗಣಿಸಿದಲ್ಲಿ ಅದರ ಪ್ರತಿಫಲವನ್ನು ಭವಿಷ್ಯದ ಪೀಳಿಗೆ ಉಣ್ಣಬೇಕಾಗುತ್ತದೆ. ಆ ಮಾತು ನಿತ್ಯಸತ್ಯ. ಆ ನಿತ್ಯಸತ್ಯವನ್ನು ಸದಾ ನೆನಪಿಸುವ ಶಕ್ತಿಯಾಗಿ, ಜಗತ್ತನ್ನು ಮತ್ತೆ ಗಾಂಧೀಜಿಯ ತತ್ವ–ಸಿದ್ಧಾಂತಗಳತ್ತ ಆಕರ್ಷಿಸುವ ಶಕ್ತಿಕೇಂದ್ರವಾಗಿ ಕಣ್ಣ ಮುಂದೆ ನಿಂತಿತ್ತು ‘ಗಾಂಧಿ ತೀರ್ಥ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT