ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ವನೆದೆಯ ಅಜ್ಜನ ಅರಿವು

Last Updated 13 ಮೇ 2017, 19:30 IST
ಅಕ್ಷರ ಗಾತ್ರ

ಮಡಿಲಲ್ಲಿನ ಸೊಪ್ಪು ಸೋಸಿ
ನೀರಿಗಿಟ್ಟು
ಒಂದೊಂದೆ ಮಾತು ಆಡಿದರೆಲ್ಲಿ
ಕರಗುವುದೋ ಅಂತ
ಸಾರೊಳಗೆ ಕಣ್ಣೀರ ಬಸಿದು
ನುಚ್ಚಕ್ಕಿಗೆ ಹಿಟ್ಟಾಕಲು ಮರೆಯದೆ
ಒಲೆಯ ಹೊರಗೆ ಉರಿಯುತ್ತಿದ್ದ ಅಮ್ಮ
ಹಸಿದ ಕರುಳಿಗೆ ತಂಪಾದಳು

ಮೈಸವರಿ
ಮನಸ್ಸಿಗೆ ಬಸಿದ ಮಾತು
ಕೈ ತೋರಿ ಸದಾ ಪುಸ್ತಕಹೊತ್ತಿರುವ
ನಿನ್ನಜ್ಜ ಅಂಬೇಡ್ಕರ್ ಓದಿದ್ದು
ಬೀದಿಬಲ್ಬಿನಲ್ಲೆ ಅಂತೇಳಿ
ಒಂದೊಂದೆ ಪದವ ಎದೆಗಿಟ್ಟು
ಓದಲು ಅಟ್ಟುವಾಗ
ಪುಸ್ತಕ ಹಿಡಿದು ನಡೆಯುವಾಗ
ಅಜ್ಜನೆಂದರೆ ಪುಸ್ತಕ
ಓದುವುದೆಂದರೆ ಅಜ್ಜನಂತಾಗುವ ಹಂಬಲ

ಹೊತ್ತುಟ್ಟುವ ಮೊದಲೇ ಒಕ್ಕಲಿಗ್ಹೋಗಿ
ಧೂಳೆಲ್ಲವ ಕುಡಿದುಣ್ಣುವ ಅಮ್ಮನ ಜೊತೆ
ಪೋಟೊದಿಂದಲೇ ಕಣ್ಣಾಡಿಸುವ ಅಜ್ಜನ ದೃಷ್ಟಿಗೆ
ಅಲಲೆ ಅಂತಲೆ ಜೋಳಿಗೆಯೊಳಗೆ ಕುಂತಿದ್ದ
ಮುದ್ದಾದ ಕನ್ನಡ ಪದಗಳು ಕಾಲವ ಕಡೆದು
ಶಿಕ್ಷಣ ಸಂಘಟನೆ ಹೋರಾಟದ ಪದಕಟ್ಟಿದವು

ಶಾರದಾ ಪೂಜೆ ಸರಸ್ವತಿ ಪೂಜೆಯಲ್ಲಿ
ಮುಟ್ಟಿದರೆ ಮುನಿಯುವ ಮಂದಿಯೊಳಗೆ
ಅಜ್ಜನ ಹೆಸರೆತ್ತಿ ಕೈ ಮುಗಿಯಲು ಕಲಿಸಿದ
ಅಮ್ಮನ ಬೆವರು
ಪದಗಳ ನಾಡಿ ಹಿಡಿದು
ಅನ್ನಕ್ಕಿಂತ ಅಕ್ಷರಲೇಸು ಅಂದಾಗ
ಅಜ್ಜನ ಎಡೆಯಲ್ಲಿ ಅರಳಿರುವ
ಸೊಸೈಟಿ ಅಕ್ಕಿಯು ನಾಚಿಕೊಂಡಿತು

ಊರು ಬಾಯಿ ಹಲುಬಿದರು
ತಲೆಯೆತ್ತಿ ನಡೆಯಲೆಂದು
ಕತ್ತಲ ಗೂಡಲ್ಲಿ ಬೆಳಗುವ ಬಲ್ಬಿನಡಿ
ಓದಲು ಅಡರಿಕೊಂಡವನ ಎದರಿಗೆ
ಸರಿವೊತ್ತಾದರು ಅಮ್ಮ ಕುಂತಿದ್ದಾಳೆ ಅಜ್ಜನಾಗಿ
ಬೆರಳಿಗೊಂದೊಂದು ನವಿಲುಗರಿಯ ತೊಟ್ಟು

ಅಯಾಸಗೊಂಡ ಕಣ್ರೆಪ್ಪೆಗಳು
ಮುದ್ದೆಗೋರುವ ಸದ್ದಿಗೆ ಬಿರಿದು
ಕಾಳಿನೆಸರ ಎದೆಗೆಳೆದುಕೊಂಡು
ಮೈಮುರಿದ ಪೆನ್ನಿಗೆ ಕೈಯಾಡಿಸಿ
ಒಪ್ಪ ಓರಣವ ಮಾಡಿ ತಟ್ಟೆಯೊಳಗಿನ ಮುದ್ದೆಯ
ಹೊಟ್ಟೆಯೊಳಗಿಟ್ಟುಕೊಂಡವನಿಗೆ ಬಸ್ಸಿಗೆ ಕಾಸು
ಅಮ್ಮನೆ ಕೈಗಿಡುವಾಗಲು ಅಜ್ಜನ ಕಣ್ಗಾವಲು

ನಡುಬಾಗಿ ದುಡಿವ ತಲೆಯೆತ್ತಿ ನಡೆವ
ಅಮ್ಮನ ಕೈಕಾಲು ಆಡದ
ಹೊಲ ಮನೆಯೆಲ್ಲಿದೆ ಊರೊಳಗೆ
ಕೇರಿದ ಬೀಸಿದ ಸಾರಿಸಿದ ಅಂಗಳದಲ್ಲಿ
ಅಮ್ಮನೆ ಆಡಿದ ಆಡದ ಸಕಲವ ಗುಡಿಸಿ
ಒಕ್ಕಲು ತಿಪ್ಪೆಗಳಲ್ಲಿ ಸುರಿದ
ಬೂದಿಯಂತೆ ಅದರೊಳಗಿನ ಉರಿಯಂತೆ
ಮನೆ ಪೂರ ತಣ್ಣಗೆ ಒಳಗೊಳಗೆ ಬೆಚ್ಚಗೆ
ಸುಳಿದಾಡುವ ಅಮ್ಮನಿಂದಲೆ ಅಜ್ಜನೂ ಅರಿವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT