ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧನ ಕಾಣ್ಕೆಗೊಂದು ಬೆಳಕಿಂಡಿ

Last Updated 13 ಮೇ 2017, 19:30 IST
ಅಕ್ಷರ ಗಾತ್ರ

ನಟರಾಜ್ ಬೂದಾಳು ಅವರ ‘ಲೋಕವನ್ನು ಕಾಣಲು ಬುದ್ಧ ಕಣ್ಣು’ ಬೌದ್ಧ ಧರ್ಮದ ಬಗೆಗೆ ಸಂಕ್ಷಿಪ್ತವಾದ ಅತ್ಯುತ್ತಮ ಬರವಣಿಗೆ.
ಬುದ್ಧನ ಕಾಣ್ಕೆಯನ್ನು ಅರಿಯಲು ವಿಜ್ಞಾನ ಮತ್ತು ಸಾಂಪ್ರದಾಯಿಕ ಧರ್ಮಗಳು ಬೇರೂರಿಸಿರುವ ಭ್ರಮೆಗಳಿಂದ ಹೊರಬರಬೇಕು. ಇಲ್ಲದಿದ್ದರೆ ಅವನನ್ನು ತಪ್ಪಾಗಿ ಅರ್ಥಮಾಡಿಕೊಳ್ಳುವ ಅಥವಾ ಆಸೆಯೇ ದುಖಕ್ಕೆ ಕಾರಣ ಎಂದು ಸರಳೀಕರಿಸುವ ಸಾಧ್ಯತೆಗಳೇ ಹೆಚ್ಚು.

ಜಗತ್ತಿನ ನಿರಂತರ ಚಲನಶೀಲತೆಯನ್ನು ಸಾಂಪ್ರದಾಯಿಕ ಧರ್ಮಗಳು ಜಗತ್ತು ನಶ್ವರ ಎಂದು ಅರ್ಥೈಸಿ ಜೀವವಿರೋಧಿ ತತ್ವಗಳನ್ನು ಬೋಧಿಸಿದವು. ಬುದ್ಧ ಜೀವನದಿಂದ ವಿಮುಖವಾಗಿ ಪರಲೋಕದ ಬದುಕಿನಲ್ಲಿ ಸಾರ್ಥಕತೆಯನ್ನು ಹುಡುಕುವ ದಾರಿಯನ್ನು ಹೇಳದೆ, ಈ ಬದುಕನ್ನು ಪ್ರತಿಕ್ಷಣವೂ ಅದು ಇರುವಂತೆಯೇ ಅಪ್ಪಿಕೊಳ್ಳಬೇಕೆಂದು ಬೋಧಿಸಿದ.

ಈ ಕ್ಷಣದ ಸತ್ಯಕ್ಕೆ ನಮ್ಮ ಮನೋವ್ಯಾಪಾರಗಳು ಒಡ್ಡುವ ಅಂತರಂಗದ ವಿರೋಧವೇ ತಲ್ಲಣಗಳ ಮೂಲ ಎನ್ನುವುದು ಅವನ ಸರಳ ಕಾಣ್ಕೆ. ಹಾಗಾಗಿ ಈ ಕ್ಷಣದ ಬದುಕು ಅರಿವು ಮತ್ತು ಸತ್ಯಗಳು ಮಾತ್ರ ನಮ್ಮ ಮನಸ್ಸನ್ನು ಸಮಸ್ಥಿತಿಯಲ್ಲಿಡಬಲ್ಲವು.  ಬುದ್ಧನ ಕಾಣ್ಕೆಗಳಿರುವುದು ಅರಿತು ಪಾಲಿಸುವುದಕ್ಕಲ್ಲ, ಅನುಭವಿಸಿ ಅಂತರ್ಗತವಾಗಿಸಿಕೊಳ್ಳಲು.  
–ನಡಹಳ್ಳಿ ವಸಂತ್, ಶಿವಮೊಗ್ಗ

*
ಪಾರಂಪರಿಕ ಶೋಷಣೆಯಲ್ಲಿ ಮಹಿಳೆ
ನಾಗಮಂಗಲ ಕೃಷ್ಣಮೂರ್ತಿ ಅವರ ‘ಡಾಟರ್ಸ್ ಆಫ್ ಸಂಕಣ್ಣೆ’ ಕಥೆ (ಮೇ 7) ಮನಮಿಡಿಸಿತು. ಜನಪದರ ಬದುಕಿನ ನಿತ್ಯಸತ್ಯಗಳ ಕಾಲಘಟ್ಟಗಳ ತಲೆಮಾರುಗಳ ಪರಿಧಿಯಲ್ಲಿ, ಹೆಣ್ಣಿನ ಶೋಷಣೆಯ ಪರಾಕಾಷ್ಠತೆ ಅಭಿವ್ಯಕ್ತಿಸಿದ್ದಾರೆ. ಮಡದಿಯ ಶೀಲವನ್ನು ಶಂಕಿಸಿದ ನೀಲಯ್ಯ ಅವಳಿಗೆ ಲಕ್ಷ್ಮಣರೇಖೆಯ ಜಾಗೃತಿಯಲ್ಲಿ ಕಟ್ಟಿಹಾಕಿ ಹೆಜ್ಜೇನು ಬೇಟೆಗೆ ತೆರಳಿದಾಗ, ಬಹಳ ಕಾಲದವರೆಗೂ ಹಿಂದಿರುಗದೆ ಆಕಸ್ಮಿಕವಾಗಿ ಪತ್ನಿ ಎಂದು ಅರಿಯದೆ ಸಂಧಿಸಿದರೂ, ಹೆಣ್ಣೆಂದು ಮಾತ್ರ ಅವನ ಸಂಯಮದ ಕಟ್ಟೆಯೊಡೆಯುತ್ತದೆ.

ಅವನ ಮೃಗೀಯ ವರ್ತನೆಯಲ್ಲಿ ಅಬಲೆಯಾಗಿದ್ದ ಸಂಕಣ್ಣೆ, ತದನಂತರದಲ್ಲಿ ನಿಜ ಪರಿಸ್ಥಿತಿಯನ್ನು ಅರಿತು ಪತಿಯನ್ನು ಚಿಂತನ–ಮಂಥನದಲ್ಲಿ ದೂರೀಕರಿಸುವ ನಿಟ್ಟಿನಲ್ಲಿ ಸಬಲಳಾದರೂ, ಮುಂದಿನ ತಲೆಮಾರುಗಳ ಹೆಣ್ಣುಮಗಳು ಇಂದಿನ ಹೈಟೆಕ್ ಯುಗದಲ್ಲಿ ಅತ್ಯಾಚಾರಕ್ಕೆ ಒಳಗಾದದ್ದು ವಿಪರ್ಯಾಸ. ಶೋಷಣೆಯ ಶೃಂಖಲೆಗಳಿಂದ ಮುಕ್ತಳಾಗಲು ಮುಂದಿನ ನಾಳೆಗಳವರೆಗೂ ಕಾಯಬೇಕಾಗುವುದೇನೊ?
–ಪೂರ್ಣಿಮಾ ಮೂರ್ತಿ, ಬೆಂಗಳೂರು

*
ಬೆರಗು ಮೂಡಿಸಿದ ಕಥೆ
‘ಡಾಟರ್ಸ್ ಆಫ್ ಸಂಕಣ್ಣೆ’ ಜನಪದ ಕಥನ ಶೈಲಿಯಲ್ಲಿ ಪ್ರಾರಂಭವಾಗಿ, ಕಥನ ತಂತ್ರದ ಎಲ್ಲಾ ಆಯಾಮಗಳನ್ನು ಬಳಸಿಕೊಂಡಿದೆ.  ಭಾಷೆಯನ್ನು ಒಡೆದು ಕಟ್ಟುವ ರೀತಿ ಬೆರಗು ಮೂಡಿಸುತ್ತದೆ. ಕಥೆಯ ಕೊನೆಯ ಸಾಲುಗಳಂತೂ ವಾಸ್ತವಕ್ಕೆ ಹಿಡಿದ ಕನ್ನಡಿಯಂತಿವೆ.  ಇದು ಬಹಳ ದಿನ ಕಾಡುವ ಕಥೆ.
–ಅ.ಸಿ. ಸಿದ್ದೇಗೌಡ, ಅರಳಕುಪ್ಪೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT