ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ: 33ನೇ ಸ್ಥಾನಕ್ಕೆ ಕುಸಿದ ಜಿಲ್ಲೆ!

Last Updated 13 ಮೇ 2017, 10:14 IST
ಅಕ್ಷರ ಗಾತ್ರ

ಬಾಗಲಕೋಟೆ: ಈ ಬಾರಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ 64.53ರಷ್ಟು ಫಲಿತಾಂಶದೊಂದಿಗೆ ರಾಜ್ಯಮಟ್ಟದಲ್ಲಿ ಬಾಗಲಕೋಟೆ 33ನೇ ಸ್ಥಾನ ಪಡೆದಿದೆ. ಕೊನೆಯ ಸ್ಥಾನ ಪಡೆದ ಬೀದರ್‌ಗಿಂತ ಒಂದು ಹೆಜ್ಜೆ ಮಾತ್ರ ಮುಂದಿದೆ. ಕಳೆದ ಎಂಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರ್‍ಯಾಂಕ್‌ ಸೂಚ್ಯಂಕ ಪಟ್ಟಿಯಲ್ಲಿ ಜಿಲ್ಲೆ ಅತ್ಯಂತ ಕೆಳಗೆ ಕುಸಿದಿದೆ.

ಕಳೆದ ವರ್ಷ ಶೇ 86.11ರಷ್ಟು ಫಲಿತಾಂಶದೊಂದಿಗೆ ರಾಜ್ಯಮಟ್ಟದಲ್ಲಿ ಏಳನೇ ಸ್ಥಾನ ಬಾಗಲಕೋಟೆಯ ಪಾಲಾಗಿತ್ತು. ಈ ಬಾರಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ವಿಕಾಸ್‌ ಸುರಳಕರ್‌ ಸ್ವತಃ ಮುಂದೆ ನಿಂತು ಪರೀಕ್ಷಾ ಕೇಂದ್ರಗಳಲ್ಲಿ ನಕಲು ಮಾಡಲು ಅವಕಾಶ ಮಾಡಿಕೊಡಲಿಲ್ಲ. ಈ ಬಿಗಿ ಕ್ರಮವೇ  ಜಿಲ್ಲೆಯ ಸ್ಥಾನಮಾನ ಪ್ರಪಾತಕ್ಕೆ ಕುಸಿಯಲು ಕಾರಣ ಎಂದು ಶೈಕ್ಷಣಿಕ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

2014–15ರಲ್ಲಿ ಅಂದಿನ ಸಿಇಒ ಎಸ್‌.ಎಸ್‌.ನಕುಲ್‌ ಅವರು ತಾಳಿದ್ದ ಬಿಗಿ ನಿಲುವಿನ ಕಾರಣಕ್ಕೆ ಜಿಲ್ಲೆ 30ನೇ ಸ್ಥಾನಕ್ಕೆ ಕುಸಿದಿತ್ತು. ಮರು ವರ್ಷವೇ ಏಳನೇ ಸ್ಥಾನಕ್ಕೆ ಏರಿಕೆಯಾಗಿ ಎಲ್ಲರೂ ಹುಬ್ಬೇರಿಸುವಂತಾಗಿತ್ತು. ರ್‍ಯಾಂಕ್‌ ಸೂಚ್ಯಂಕದ ಏರಿಕೆಗೆ ನಕುಲ್‌ ಅವರ ವರ್ಗಾವಣೆಯೇ ಕಾರಣ ಎಂದು ಆಗಲೂ ಹೇಳಲಾಗಿತ್ತು.

ಇದು ನೈಜ ಗುಣಮಟ್ಟ: ‘ಈ ಫಲಿತಾಂಶ ಜಿಲ್ಲೆಯ ಶೈಕ್ಷಣಿಕ ವ್ಯವಸ್ಥೆಯ ನೈಜ ಗುಣಮಟ್ಟ ಬಿಂಬಿಸುತ್ತಿದೆ. ಇದರಿಂದ ನಿರಾಶರಾಗಬೇಕಿಲ್ಲ. ಶಿಕ್ಷಕರು, ಇಲಾಖೆಯ ಅಧಿಕಾರಿಗಳು ಹಾಗೂ ಪೋಷಕರು  ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ ಹೆಸರು ಬಹಿರಂಗಪಡಿಸಲು ಇಚ್ಛಿಸದ ಶಿಕ್ಷಕರೊಬ್ಬರು ಹೇಳುತ್ತಾರೆ.

‘ಕಳೆದ ವರ್ಷ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ 90ಕ್ಕೂ ಹೆಚ್ಚು ಅಂಕ ಪಡೆದ ಇಬ್ಬರು ಹಾಸ್ಟೆಲ್‌ ಬಾಲಕಿಯರು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಥಮ ಪಿಯುಸಿಗೆ ವಿಜ್ಞಾನ ವಿಭಾಗ ಆಯ್ದುಕೊಂಡಿದ್ದ ಅವರು, ಓದಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ನಮಗೆ ಸಾಧನೆ ಮಾಡಲು ಆಗುತ್ತಿಲ್ಲ, ಕಷ್ಟವಾಗುತ್ತಿದೆ ಎಂದು ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದರು.

ಆ ಪರಿಸ್ಥಿತಿ ಯಾವ ಮಕ್ಕಳಿಗೂ ಬರಬಾರದು. ಜಿಲ್ಲೆಯ ಶೇಕಡಾವಾರು ಫಲಿತಾಂಶ ಕಡಿಮೆಯಾಗಿದ್ದರೂ ಅದು ಗುಣಮಟ್ಟದಿಂದ ಕೂಡಿರಬೇಕು’ ಎಂಬುದು ಅವರ ಅಭಿಮತ.

‘ಜಿಲ್ಲೆಯ ಶಿಕ್ಷಣ ವ್ಯವಸ್ಥೆಯಲ್ಲಿ ಆಡಳಿತಾತ್ಮಕ ಲೋಪಗಳು ಹೆಚ್ಚಾಗಿವೆ. ಕಳೆದ ಶೈಕ್ಷಣಿಕ ವರ್ಷಾಂತ್ಯದಲ್ಲಿ ಅವುಗಳನ್ನು ಗುರುತಿಸಿ ಸರಿಪಡಿಸುವ ಕೆಲಸಕ್ಕೆ ಕೈ ಹಾಕಲಾಯಿತು. ಶಾಲೆಗೆ ತೆರಳಿ ಪಾಠ ಮಾಡದ ಶಿಕ್ಷಕರನ್ನು ಗುರುತಿಸಿ ಮತ್ತೆ ಶಾಲೆಗೆ ಕಳುಹಿಸಬೇಕಿದೆ. ಆ ನಿಟ್ಟಿನಲ್ಲಿ ಶಾಲಾಭಿವೃದ್ಧಿ ಸಮಿತಿ ಸೇರಿದಂತೆ ಪೋಷಕರ ಸಮೂಹವೂ ತನ್ನ ಜವಾಬ್ದಾರಿ ನಿರ್ವಹಿಸಬೇಕಿದೆ’ ಎಂದು ಇಲಾಖೆ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ.

ಪಲ್ಲವಿ ಸಾಧನೆ: ಫಲಿತಾಂಶದಲ್ಲಿ ಜಿಲ್ಲೆಯ ಸ್ಥಾನದಲ್ಲಿ ಕುಸಿತ ಕಂಡರೂ ಬನಹಟ್ಟಿಯ ಪಲ್ಲವಿ ರವೀಂದ್ರ ಶಿರಹಟ್ಟಿ 625ಕ್ಕೆ 625 ಅಂಕಗಳಿಸಿ ರಾಜ್ಯದ ಜನತೆ ಜಿಲ್ಲೆಯತ್ತ ತಿರುಗಿ ನೋಡುವಂತೆ ಮಾಡಿದ್ದಾಳೆ.

ಫಲಿತಾಂಶ ಸವಾಲಾಗಿ ಸ್ವೀಕರಿಸ ಲಿದ್ದೇವೆ. ಮೊದಲ ದಿನದಿಂದಲೇ ಗುಣಮಟ್ಟ ಹೆಚ್ಚಳಕ್ಕೆ ಕಾರ್ಯ ಯೋಜನೆ ರೂಪಿಸಲಾಗಿದೆ. ಮುಂದಿನ ವರ್ಷ ಐದರಲ್ಲಿ ಒಂದು ಸ್ಥಾನ ನಿಶ್ಚಿತ
ವಿಕಾಸ್ ಸುರಳಕರ್
ಜಿಲ್ಲಾ ಪಂಚಾಯ್ತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT