ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಮನೆ ಪ್ರವೇಶದ್ವಾರದಲ್ಲಿ ಅಗ್ನಿ ಅವಘಡ

Last Updated 13 ಮೇ 2017, 10:20 IST
ಅಕ್ಷರ ಗಾತ್ರ

ಮೈಸೂರು: ನಗರದ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಯ ವರಾಹ ದ್ವಾರದಲ್ಲಿರುವ ಎಸ್‌ಬಿಐ ಎಟಿಎಂ ಬ್ಯಾಟರಿ ಶುಕ್ರವಾರ ಬೆಳಿಗ್ಗೆ ಸ್ಫೋಟ ಗೊಂಡು ಅಗ್ನಿ ಅನಾಹುತ ಸಂಭವಿಸಿದೆ. ಪಾರಂಪರಿಕ ಕಟ್ಟಡಕ್ಕೆ ಧಕ್ಕೆ ಉಂಟಾಗಿ ಗೋಡೆಯ ಮಣ್ಣು ಉದುರಿದೆ.

ಎಟಿಎಂ ಯಂತ್ರದಲ್ಲಿದ್ದ ಲಕ್ಷಾಂತರ ರೂಪಾಯಿ ನಗದು ಸೇರಿದಂತೆ ಪೀಠೋಪಕರಣಗಳು ಭಸ್ಮವಾಗಿವೆ. ಪಕ್ಕದ ಟಿಕೇಟ್‌ ಕೌಂಟರ್‌ಗೂ ಹಾನಿಯುಂಟಾಗಿದ್ದು, ದಾಖಲೆಗಳು ಆಹುತಿಯಾಗಿವೆ. ಭದ್ರತಾ ಸಿಬ್ಬಂದಿಯ ಶಸ್ತ್ರಾಗಾರದಲ್ಲಿದ್ದ ರೈಫಲ್‌ಗಳನ್ನು ಸುರಕ್ಷಿತವಾಗಿ ಹೊರಗೆ ತರಲಾಗಿದೆ.

ಟಿಕೆಟ್‌ ಕೌಂಟರ್‌ ಬಳಿಯ ಕಟ್ಟಡದಿಂದ ಬೆಳಿಗ್ಗೆ 6.10ರ ಸುಮಾರಿಗೆ ದಟ್ಟ ಹೊಗೆ ಬರುತ್ತಿರುವುದನ್ನು ವಾಯು ವಿವಾರಕ್ಕೆ ಬಂದಿದ್ದ ಸಾರ್ವಜನಿಕರು ಗಮನಿಸಿ ಸರಸ್ವತಿಪುರಂನ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಕ್ಷಿಪ್ರ ಕಾರ್ಯಪಡೆ ವಾಹನ ಹಾಗೂ ನೀರಿನ ಟ್ಯಾಂಕರ್‌ನೊಂದಿಗೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಒಂದು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

‘ಎಟಿಎಂ ಯಂತ್ರ ಹೊತ್ತಿ ಉರಿ ಯುತ್ತಿತ್ತು. ಕೊಠಡಿಯಿಂದಲೂ ಬೆಂಕಿ ಹೊರಬರುತ್ತಿತ್ತು. ಬಾಗಿಲು ಒಡೆದು ನೀರು ಹರಿಸಿ ಬೆಂಕಿಯನ್ನು ತಹಬಂದಿಗೆ ತಂದೆವು. ಶಸ್ತ್ರಾಸ್ತ್ರ ಕೊಠಡಿಗೆ ಬೆಂಕಿಯ ಕೆನ್ನಾಲಿಗೆ ಚಾಚದಂತೆ ತಡೆದೆವು. ಕೊಠಡಿಯಲ್ಲಿದ್ದ 6 ರೈಫಲ್‌ಗಳು, ಪೊಲೀಸರ ಟ್ರಂಕ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಸುರಕ್ಷಿತ ವಾಗಿ ಹೊರಗೆ ತಂದೆವು’ ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅಗ್ನಿಶಾಮಕ ಸಿಬ್ಬಂದಿ ಎಂ.ಥಾಮಸ್‌ ಮಾಹಿತಿ ನೀಡಿದರು.

‘ಎಟಿಎಂಗೆ ಅಳವಡಿಸಿದ ಬ್ಯಾಟರಿ ಬಿಸಿಯಾಗಿ ಸ್ಫೋಟಗೊಂಡಿದೆ. ಇದರ ತೀವ್ರತೆಗೆ ಕೊಠಡಿಯ ಒಳಭಾಗದ ಕಟ್ಟಡಕ್ಕೆ ಧಕ್ಕೆ ಉಂಟಾಗಿರುವ ಸಾಧ್ಯತೆ ಇದೆ. ಯಂತ್ರಕ್ಕೆ ಬೆಂಕಿ ಹೊತ್ತಿಕೊಂಡು ವಿದ್ಯುತ್‌ ಶಾರ್ಟ್‌  ಸರ್ಕಿಟ್‌ ಉಂಟಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಕೊಠಡಿಯ ಚಾವಣಿ ಸಂಪೂರ್ಣ ಕರಕಲಾಗಿದೆ. ಶಸ್ತ್ರಾಗಾರಕ್ಕೆ ಬೆಂಕಿ ವಿಸ್ತರಿಸಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು’ ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಯೂನುಸ್‌ ಅಲಿ ಕೌಸರ್‌ ತಿಳಿಸಿದ್ದಾರೆ.

ಸಮೀಪದಲ್ಲಿದ್ದ ವಿನಾಯಕಸ್ವಾಮಿ ದೇಗುಲಕ್ಕೆ ಯಾವುದೇ ಹಾನಿಯಾಗಿಲ್ಲ. ಎಟಿಎಂ ಭದ್ರತಾ ಸಿಬ್ಬಂದಿ ನಸುಕಿನ 5.50ರ ವರೆಗೆ ಕೊಠಡಿಯಲ್ಲಿದ್ದರು. ಅನಾಹುತ ಸಂಭವಿಸುವುದಕ್ಕೂ 20 ನಿಮಿಷ ಮುನ್ನ ಹೊರಗೆ ಬಂದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶ್ವಾನದಳ ಹಾಗೂ ಬಾಂಬ್‌ ಪತ್ತೆದಳದ ಸ್ಥಳ ಪರಿಶೀಲನೆ ನಡೆಸಿದವು.

ಎಟಿಎಂಗೆ ವಿರೋಧ
ಮೈಸೂರು: ಅರಮನೆಗೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ವರಾಹದ್ವಾರದ ಟಿಕೆಟ್‌ ಕೌಂಟರ್‌ ಸಮೀಪದಲ್ಲಿ ಎಟಿಎಂ ತೆರೆಯಲು ಆಡಳಿತ ಮಂಡಳಿಯು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ (ಎಸ್‌ಬಿಐ) ಅನುಮತಿ ನೀಡಿದೆ.  2015ರ ಸೆಪ್ಟೆಂಬರ್‌ನಿಂದ ಇದು ಕಾರ್ಯನಿರ್ವಹಿಸುತ್ತಿದೆ.

‘ಭದ್ರತೆಯ ದೃಷ್ಟಿಯಿಂದ ಎಟಿಎಂ ತೆರೆಯುವುದಕ್ಕೆ ಸಮ್ಮತಿ ನೀಡಿರಲಿಲ್ಲ. ಅರಮನೆ ಅಂಗಳದಲ್ಲಿ ಇಂತಹ ಚಟುವಟಿಕೆಗೆ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಕೂಡ ವಿರೋಧ ವ್ಯಕ್ತಪಡಿಸಿತ್ತು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ದಳ ರಚನೆಗೆ ಸಿಗದ ಅವಕಾಶ
ಮೈಸೂರು: ಅಂಬಾವಿಲಾಸ ಅರಮನೆಯ ದೀಪಾಲಂಕಾರಕ್ಕೆ ಒಂದು ಲಕ್ಷಕ್ಕೂ ಹೆಚ್ಚು ವಿದ್ಯುತ್‌ ಬಲ್ಬ್‌ಗಳನ್ನು ಅಳವಡಿಸಲಾಗಿದೆ. ಇವುಗಳನ್ನು ಪರಿಶೀಲಿಸಿದ ಅಗ್ನಿಶಾಮಕ ಇಲಾಖೆಯು ಸುರಕ್ಷತೆಯ ದೃಷ್ಟಿಯಿಂದ ವಿಧಾನಸೌಧದ ಮಾದರಿಯಲ್ಲಿ ದಳ ರಚನೆಗೆ 2013ರಲ್ಲಿ ನಿರ್ಧರಿಸಿದೆ.

ಆದರೆ ಇದಕ್ಕೆ ಅರಮನೆ ಆಡಳಿತ ಮಂಡಳಿ ಅನುಮತಿ ನೀಡಿಲ್ಲ. 1897ರ ಫೆ. 28ರಂದು ಜಯಲಕ್ಷ್ಮಮ್ಮಣ್ಣಿ ಅವರ ವಿವಾಹದ ಸಂದರ್ಭದಲ್ಲಿ ಸಂಭವಿಸಿದ ಅಗ್ನಿ ಅನಾಹುತಕ್ಕೆ ಹಳೆಯ ಅರಮನೆಗೆ ಆಹುತಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT