ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಕಾವ್ಯ ಓದುವುದೇ ಪುಣ್ಯದ ಕೆಲಸ

Last Updated 13 ಮೇ 2017, 10:44 IST
ಅಕ್ಷರ ಗಾತ್ರ

ಮಂಡ್ಯ: ‘ಉತ್ತಮ ಕೃತಿಗಳು ಓದುಗರ ಮನಸ್ಸನ್ನು ಅರಳಿಸುತ್ತವೆ. ಮಹನೀಯರ ಬಗ್ಗೆ ರಚಿಸಿದ ಮಹಾಕಾವ್ಯ ಓದುವುದೇ ಒಂದು ಪುಣ್ಯದ ಕೆಲಸ’ ಎಂದು ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ.ವಿ.ಡಿ. ಸುವರ್ಣಾ ಅಭಿಪ್ರಾಯ  ವ್ಯಕ್ತಪಡಿಸಿದರು.

ನಗರದ ಬ್ರಾಹ್ಮಣ ಸಭಾದಲ್ಲಿ  ಶುಕ್ರವಾರ ನಡೆದ ಡಾ.ಪ್ರದೀಪ್‌ಕುಮಾರ್‌ ಹೆಬ್ರಿ ಅವರ ‘ದಿಗ್ವಿಜೇತ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.‘ಆಚಾರ್ಯ ರಾಮಾನುಜ ಸೇರಿದಂತೆ ಇತರೆ ಮಹನೀಯರ ನೆನಪು ಉಳಿದಿದೆ ಎಂದರೆ ಅವರ ಬಗ್ಗೆ ಕೃತಿಕಾರರು ಬರೆದ ಸಾಹಿತ್ಯವೇ ಕಾರಣ. ಅವರ ಬಗ್ಗೆ ತಿಳಿದುಕೊಳ್ಳುವ ಸೌಭಾಗ್ಯ ನಮ್ಮದಾಗಿದೆ. ಇಂದಿಗೂ ಇತಿಹಾಸವನ್ನು ಕೆದಕಿದರೆ ಮಹನೀಯರ ಆದರ್ಶ ಬದುಕಿನ ಬಣ್ಣ ಗೋಚರಿಸುತ್ತದೆ’ ಎಂದು ಹೇಳಿದರು.

‘ಸಮಾಜಕ್ಕೆ ಕೊಡುಗೆ ನೀಡಿದ ಮಹಾನ್‌ ವ್ಯಕ್ತಿಗಳ ಹಾದಿ ಗುರುತಿಸಿದರೆ ಅವರು ಹೀಗೂ ಜೀವನ ನಡೆಸಿದ್ದರು ಎಂಬುದು ಅರಿವಾಗುತ್ತದೆ. ಅದು ಮನುಷ್ಯನ ಮನುಷ್ಯತ್ವದ ಬದಲಾವಣೆಗೂ ಸಹಕಾರಿ ಆಗಿದೆ. ರಾಮಾನುಜರ ಅವರ ನೆನಪು ಉಳಿದಿದೆ ಎಂದರೆ ವೈಷ್ಣವ ಸಮುದಾಯದ ಕೊಡುಗೆ ಅಪಾರ ಎನಿಸುತ್ತದೆ’ ಎಂದು ಹೇಳಿದರು.

ಕಾವ್ಯವನ್ನು ಓದಿದರೆ ಸಾಲದು ಅದನ್ನು ಅನುಭವಿಸಬೇಕು. ಆಗ ಮಾತ್ರ ಕಾವ್ಯದಲ್ಲಿರುವ ಆಳ ಅರ್ಥವಾಗುತ್ತದೆ. ‘ದಿಗ್ವಿಜೇತ’ ಕೃತಿಯಲ್ಲಿಯೂ ಅಷ್ಟೇ ಸುಖ, ದುಃಖ ಎಲ್ಲವೂ ಪದಗಳ ರೂಪದಲ್ಲಿ ಗಮನ ಸೆಳೆಯುತ್ತವೆ. ಅದನ್ನು ಓದಿದಾಗ ಮನಸು ಹಗುರವಾಗುತ್ತದೆ’ ಎಂದರು.

‘ಯಾವುದೇ ಒಂದು ಸಾಧನೆ ಮಾಡಿದಾಗ ವಿರೋಧಿಗಳು ಹುಟ್ಟಿಳ್ಳುತ್ತಾರೆ ನಿಜ. ಆದರೆ ಅವರೇ ನಾವು ಇನ್ನಷ್ಟು ಸಾಧನೆಯ ಶಿಖರವನ್ನೇರಲು ಪ್ರೇರಣೆಯಾಗಿ ನಿಲ್ಲುತ್ತಾರೆ ಎಂಬುದನ್ನು ಮನಸಿನಲ್ಲಿಟ್ಟುಕೊಂಡು ಮುನ್ನಡೆಯಬೇಕು’ ಎಂದು ಹೇಳಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ ಚಾಮಲಾಪುರ, ‘ಹೆಬ್ರಿ ಅವರು ವೃತ್ತಿಯಲ್ಲಿ ವೈದ್ಯರಾದರೂ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ವಚನ ಸಾಹಿತ್ಯದ ಬಗ್ಗೆ ಅಧ್ಯಯನ ಮಾಡಿ ಹಲವು ಮಹಾಕಾವ್ಯ ರಚಿಸಿ ಓದುಗರಿಗೆ ಉಣ ಬಡಿಸುತ್ತಿದ್ದಾರೆ. ಅದು ಹೀಗೆ ಮುಂದುವರಿಯಲಿ’ ಎಂದು ಹೇಳಿದರು.ಜನತಾ ಶಿಕ್ಷಣ ಟ್ರಸ್ಟ್‌ ಅಧ್ಯಕ್ಷ ಡಾ.ಎಚ್‌.ಡಿ. ಚೌಡಯ್ಯ ಅವರು ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಹೊಳಲು ಶ್ರೀಧರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT