ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಿಸುವ ಸಂಸ್ಕೃತಿ ಬೆಳೆಸಿಕೊಳ್ಳಲು ಸಲಹೆ

Last Updated 13 ಮೇ 2017, 10:45 IST
ಅಕ್ಷರ ಗಾತ್ರ

ಮಂಡ್ಯ: ‘ಓದುವ ಸಂಸ್ಕೃತಿ ಅಳಿಸಿ ಹೋಗುತ್ತಿದೆ. ಈ ಹೊತ್ತಿನಲ್ಲಿ ಆಲಿಸುವ ಸಂಸ್ಕೃತಿಯನ್ನಾದರೂ ರೂಢಿಸಿಕೊಳ್ಳಬೇಕು’ ಎಂದು ಮನ್‌ಮುಲ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಟಿ. ಗುರುಲಿಂಗಯ್ಯ ಹೇಳಿದರು.ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ  ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದಿಂದ ಶುಕ್ರವಾರ ನಡೆದ  ‘ಮಾದಾರ ಚನ್ನಯ್ಯ ಅವರ ವಚನಗಳ ವಿಮರ್ಶೆ ಹಾಗೂ ಪರಿಚಯ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಹಿತ್ಯ ಸಂಪತ್ತನ್ನು ಯುವ ಸಮುದಾಯಕ್ಕೆ ಹಂಚಬೇಕು. ಆ ಮೂಲಕ ಸಾಹಿತ್ಯಾಸಕ್ತರನ್ನು ಸಮಾಜದಲ್ಲಿ ಹುಟ್ಟುಹಾಕಬೇಕು. ಯುವಜನರು ವಚಗಳ ಮಹತ್ವ ಅರಿತು ವಚನಕಾರರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಡೆದರೆ ಸಂಸ್ಕಾರ, ಸಾಮರಸ್ಯದ ಸಮಾಜ ಸೃಷ್ಟಿಸಬಹುದು. ಇದರಿಂದ ಉತ್ತಮ ಹಾದಿಯಲ್ಲಿ ನಡೆಯುವ ಮಕ್ಕಳು ಸಮಾಜಕ್ಕೆ ಹೊಸ ಕೊಡುಗೆ ನೀಡಲು ಸಹಕಾರಿಯಾಗುತ್ತದೆ’ ಎಂದು ಹೇಳಿದರು.

‘ಮಾದಾರ ಚನ್ನಯ್ಯ ಅವರ ವಚನಗಳು ಬಸವಣ್ಣನ  ಕಾಲಘಟ್ಟಕ್ಕಿಂತಲೂ ಮೊದಲಿನವು.  ಚನ್ನಯ್ಯನ  ಕಾಯಕ ಚಪ್ಪಲಿ ಹೊಲಿಯುವುದಾದರೂ ವಚನ ಸಾಹಿತ್ಯ ಕ್ಷೇತ್ರದಲ್ಲಿ ಸಮಾಜಕ್ಕೆ ನೀಡಿರುವ ಕೊಡುಗೆ ಅಗ್ರಗಣ್ಯ. ಇಂದಿಗೂ ಅವರ ವಚನಗಳು ಸಮಾಜದಲ್ಲಿ ಸಮಾನತೆ ಮೂಡಿಸುವ ಯುಕ್ತಿಯಾಗಿವೆ ಎಂದು ಸ್ಮರಿಸಿದರು.

ಮಾದಾರ ಚನ್ನಯ್ಯ ತಮ್ಮ ವಚನ ಸಾಹಿತ್ಯ ಚಳವಳಿಯ ಮೂಲಕ ಸಮಾಜ ಕಣ್ಣು ತೆರೆಸುವ ಕೆಲಸ ಮಾಡಿದ್ದರು. ಸಮುದಾಯದಲ್ಲಿದ್ದ ಕಲುಷಿತ ವಾತಾವರಣವನ್ನು ಪರಿಶುದ್ಧಗೊಳಿಸುವ ನಿಟ್ಟಿನಲ್ಲಿ ಅವರು ಮಾಡಿರುವ ಕೆಲಸಗಳು ಅನನ್ಯ’ ಎಂದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ ಚಾಮಲಾಪುರ, ‘ಮಾದಾರ ಚನ್ನಯ್ಯ ಅವರು ಎಲ್ಲರಿಗೂ ನಿದರ್ಶನವಾಗಿ ನಿಲ್ಲುತ್ತಾರೆ. ಜಾತಿ ವ್ಯವಸ್ಥೆಯನ್ನು ತಮ್ಮ ವಚನಗಳ ಮೂಲಕ ತೊಡೆದು ಹಾಕಲು ಶ್ರಮಪಟ್ಟರು. ಇಂತಹ ಮಹನೀಯರ ವಚನ ಓದುವುದರಿಂದ ಮನಸ್ಸು ಅರಳುತ್ತದೆ’ ಎಂದು ಹೇಳಿದರು.

ಮಾದಾರ ಚನ್ನಯ್ಯ ಅವರನ್ನು ಕುರಿತು ಸರ್ಕಾರಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಎಂ.ವೈ.ಶಿವರಾಂ ಉಪನ್ಯಾಸ ನೀಡಿದರು. ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ರಾಜಾನಾಯ್ಕ್‌ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಪ್ರೊ.ಎಚ್‌.ಎಸ್‌. ಮುದ್ದೇಗೌಡ ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ಮ.ಸಿ. ನಾರಾಯಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT