ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15ರಿಂದ ಮಾವು ಮಾರಾಟ ಮೇಳ

Last Updated 13 ಮೇ 2017, 11:05 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ಮೊದಲ ಬಾರಿಗೆ ಮಾವು ಮತ್ತು ಹಲಸು ಹಣ್ಣಿನ ಪ್ರದರ್ಶನ ಹಾಗೂ ಮಾರಾಟ ಮೇಳ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆಯ ಸಹಭಾಗಿತ್ವದಲ್ಲಿ ಮೇಳವನ್ನು ಆಯೋಜಿಸಿದೆ.

‘ಜಿಲ್ಲಾಡಳಿತ ಭವನದ ಮುಂಭಾಗ ಮೇ 15ರಿಂದ 17ರವರೆಗೆ ಬೆಳಿಗ್ಗೆ 9ರಿಂದ ಸಂಜೆ 7ಗಂಟೆಯವರೆಗೆ 12 ಅಂಗಡಿ ಮಳಿಗೆಗಳಲ್ಲಿ ವಿವಿಧ ಜಾತಿ ಮಾವು ಹಾಗೂ ಹಲಸಿನ ಹಣ್ಣು ಮಾರಾಟ ಹಾಗೂ ಪ್ರದರ್ಶನ ಏರ್ಪಡಿಸಲಾಗಿದೆ’ ಎಂದು ನಿಗಮದ ನಿರ್ದೇಶಕ ಬಿ.ಕೆ. ರವಿಕುಮಾರ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಬೆಳೆಗಾರರಿಂದ ನೇರವಾಗಿ ಗ್ರಾಹಕರಿಗೆ ಕಡಿಮೆ ದರದಲ್ಲಿ ಸ್ವಾದಿಷ್ಟ ತಾಜಾಹಣ್ಣು ಒದಗಿಸುವುದರ ಜತೆಗೆ, ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು ಮೇಳದ ಉದ್ದೇಶ. ಗ್ರಾಹಕರ ಪ್ರತಿಕ್ರಿಯೆ ಆಧರಿಸಿ ಮೇಳದ ಅವಧಿ ವಿಸ್ತರಿಸಲಾಗುವುದು’ ಎಂದು ತಿಳಿಸಿದರು.

‘ಬಾದಾಮಿ, ರಸಪುರಿ, ಮಲ್ಲಿಕಾ, ಸೆಂದೂರಾ, ಮಲಗೋಬಾ, ತೋತಾಪುರಿ, ನೀಲಂ, ಆಮ್ರಪಾಲಿ, ಕೇಸರ್ ಸೇರಿದಂತೆ ಇತರೆ ತಳಿಯ ಮಾವು ಮಾರಾಟ ಮಾಡಲಾಗುವುದು. ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಿಂದ 50ಕ್ಕೂ ಹೆಚ್ಚು ವಿವಿಧ ಜಾತಿಯ ಮಾವು ತಳಿಯನ್ನು ತರಿಸಿ ಪ್ರದರ್ಶಿಸಲಾಗುವುದು’ ಎಂದರು.

‘ಜಾಣಗೆರೆ, ಚಂದ್ರ, ಗಮ್ಮಲೇಸ್‌ ಹಲಸು ಸೇರಿದಂತೆ ಹಲವು ತಳಿಯ ಹಲಸಿನ ಹಣ್ಣುಗಳನ್ನು ಮೇಳದಲ್ಲಿ ಮಾರಾಟ ಮಾಡಲಾಗುತ್ತದೆ. ರಾಮನಗರ, ಚನ್ನಪಟ್ಟಣ ಸೇರಿದಂತೆ ಸ್ಥಳೀಯ ರೈತರು ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪಾಧ್ಯಕ್ಷ ಮಹದೇವಸ್ವಾಮಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ಡಾ.ಎಸ್‌. ಆನಂದ್‌, ರಾಜು ಹಾಜರಿದ್ದರು.
ಉದ್ಘಾಟನೆ:  ಮೇ 15ರಂದು ಬೆಳಿಗ್ಗೆ 10ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಮೇಳ ಉದ್ಘಾಟಿಸಲಿದ್ದಾರೆ. ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಆರ್. ಧ್ರುವನಾರಾಯಣ ಮಾವಿನ ತಳಿಗಳ ಪ್ರದರ್ಶನದ ಮಳಿಗೆ ಉದ್ಘಾಟಿಸಲಿದ್ದಾರೆ.

ವಿಧಾನ ಪರಿಷತ್‌ ಉಪಸಭಾಪತಿ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ರಾಮಚಂದ್ರ, ಶಾಸಕರಾದ ಎಸ್. ಜಯಣ್ಣ, ಆರ್.ನರೇಂದ್ರ, ಎಂ.ಸಿ.ಮೋಹನ್‌ಕುಮಾರಿ, ಕೆ.ಟಿ. ಶ್ರೀಕಂಠೇಗೌಡ, ಎಸ್‌. ನಾಗರಾಜು, ಆರ್. ಧರ್ಮಸೇನಾ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಎಲ್. ಗೋಪಾಲಕೃಷ್ಣ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT