ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬ

Last Updated 13 ಮೇ 2017, 11:08 IST
ಅಕ್ಷರ ಗಾತ್ರ

ಚಾಮರಾಜನಗರ: ರಾಷ್ಟ್ರೀಯ ಹೆದ್ದಾರಿ 209ರ ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರರ ವಿರುದ್ಧ ಜಿಲ್ಲಾಧಿಕಾರಿ ಬಿ.ರಾಮು ಅಸಮಾಧಾನ ವ್ಯಕ್ತಪಡಿಸಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ  ಅವರು, ‘ರೇಷ್ಮೆ ಮಾರುಕಟ್ಟೆಯಿಂದ ಸಂತೇಮರಹಳ್ಳಿ ವೃತ್ತದವರೆಗೆ ಕಾಮಗಾರಿ ಪೂರ್ಣಗೊಂಡಿದೆ. ಮುಂದೆಯೂ ಕಾಮಗಾರಿ ನಡೆಸಲು ತೊಂದರೆ ಇಲ್ಲ’ ಎಂದರು.

‘ಆದರೆ ಕಾಮಗಾರಿ ಮುಗಿಸುವಲ್ಲಿ ಗುತ್ತಿಗೆದಾರರು ವಿಫಲರಾಗಿದ್ದಾರೆ. ಅವರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಮುಖ್ಯ ಎಂಜಿನಿಯರ್‌ಗೆ ಸೂಚಿಸಿದ್ದೇನೆ’ ಎಂದು ತಿಳಿಸಿದರು. ‘ಡಿವಿಯೇಷನ್‌ ರಸ್ತೆ ಬಳಿ ಕಾಮಗಾರಿ ನಡೆಸದಂತೆ ಏಳೆಂಟು ಜನರ ಗುಂಪು ಬೆದರಿಕೆ ಹಾಕುತ್ತಿದೆ. ಅವರ ವಿರುದ್ಧ ಕ್ರಮ ಜರುಗಿಸಲು ಪೊಲೀಸ್‌ ವರಿಷ್ಠಾಧಿಕಾರಿಗೆ ನಿರ್ದೇಶಿಸಿದ್ದೇನೆ. ಅದು ನ್ಯಾಯಾಲಯದಲ್ಲಿಯೇ ತೀರ್ಮಾನವಾಗಬೇಕಾದರೆ ಅದಕ್ಕೂ ಸಿದ್ಧರಿದ್ದೇವೆ’ ಎಂದು ಹೇಳಿದರು.

100 ಅಡಿ ರಸ್ತೆ: ‘ನಗರದ ಬಿ.ರಾಚಯ್ಯ ಜೋಡಿ ರಸ್ತೆಯನ್ನು 100 ಅಡಿಗೆ ವಿಸ್ತರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು. ಭುವನೇಶ್ವರಿ ವೃತ್ತದಿಂದ ರಾಮಸಮುದ್ರದವರೆಗಿನ ಜೋಡಿ ರಸ್ತೆಯನ್ನು 80 ಅಡಿಗೆ ಸೀಮಿತಗೊಳಿಸಲಾಗುತ್ತದೆ ಎಂಬ ವರದಿಗಳನ್ನು ಅವರು ತಳ್ಳಿಹಾಕಿದರು.

‘ಜೋಡಿ ರಸ್ತೆಯನ್ನು 100 ಅಡಿ ಎಂದೇ ನಿಗದಿಗೊಳಿಸಲಾಗಿದೆ. ಸೂಕ್ತ ಯೋಜನೆಗಳನ್ನೂ ರೂಪಿಸಲಾಗಿದೆ. ₹37 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಇದೇ 20ರಂದು ಟೆಂಡರ್‌ ಕರೆಯಲಾಗುವುದು’ ಎಂದು ತಿಳಿಸಿದರು.

ಕೆರೆ ಸ್ವಯಂಕೃತ ಅಪರಾಧ: ಬುಧವಾರ ಸುರಿದ ಮಳೆಗೆ ನಗರದ ಡಾ. ಬಿ.ಆರ್‌. ಅಂಬೇಡ್ಕರ್‌ ಕ್ರೀಡಾಂಗಣ ನೀರಿನಿಂದ ತುಂಬಿಕೊಂಡು ಅವ್ಯವಸ್ಥೆ ಉಂಟಾದ ಘಟನೆಗೆ ಪ್ರತಿಕ್ರಿಯಿಸಿದ ಅವರು, ‘ಕೆರೆಯನ್ನೇ ಕ್ರೀಡಾಂಗಣ ಮಾಡಲಾಗಿದೆ. ಇದು ಸ್ವಯಂಕೃತ ಅಪರಾಧ’ ಎಂದರು.‘ಈ ಕ್ರೀಡಾಂಗಣಕ್ಕೆ ಚರಂಡಿ ವ್ಯವಸ್ಥೆ ಇಲ್ಲ. ಕ್ರೀಡಾಂಗಣದಲ್ಲಿ ನೀರು ನಿಲ್ಲದಂತೆ ಚರಂಡಿ ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದರು.

ಯುವಜನರಿಗೆ ಕೌಶಲ ಅಭಿವೃದ್ಧಿ ತರಬೇತಿ

ಚಾಮರಾಜನಗರ: ‘ಮುಖ್ಯಮಂತ್ರಿಗಳ ಕೌಶಲ ಅಭಿವೃದ್ಧಿ ಯೋಜನೆಯಡಿ ಯುವಜನರಿಗೆ ವಿವಿಧ ಕ್ಷೇತ್ರಗಳಲ್ಲಿ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಮೇ 15ರಂದು ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಏಕಕಾಲಕ್ಕೆ ಚಾಲನೆ ದೊರಕಲಿದೆ’ ಎಂದು ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯೋಜನೆಯ ವೆಬ್‌ ಪೋರ್ಟಲ್‌ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 11 ಗಂಟೆಗೆ ಉದ್ಘಾಟಿಸಲಿದ್ದಾರೆ. ಜಿಲ್ಲೆಯಲ್ಲಿ ಅದೇ ಸಮಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಅವರು ಕೆಡಿಪಿ ಸಭಾಂಗಣದಲ್ಲಿ ವೆಬ್‌ ಪೋರ್ಟಲ್‌ಗೆ ಚಾಲನೆ ನೀಡಲಿದ್ದಾರೆ. ಕೊಳ್ಳೇಗಾಲದ ತಾಲ್ಲೂಕು ಪಂಚಾಯಿತಿ ಸಭಾಂಗಣ, ಗುಂಡ್ಲುಪೇಟೆಯ ಪ್ರಾಥಮಿಕ ಶಾಲಾ ಶಿಕ್ಷಕರ ಭವನ ಮತ್ತು ಯಳಂದೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಚಾಲನೆ ನೀಡಲಾಗುವುದು’ ಎಂದು ಹೇಳಿದರು.

‘16 ರಿಂದ 35 ವರ್ಷ ವಯೋಮಿತಿಯವರು ಈ ತರಬೇತಿಗೆ ಅರ್ಹರಾಗಿರುತ್ತಾರೆ. ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದ್ದು, ಯುವಜನರು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿನ ತರಬೇತಿಗೆ ನೋಂದಣಿ ಮಾಡಿಸಿಕೊಳ್ಳಬಹುದು. ಈ ವೇಳೆ ಆಧಾರ್‌ ಕಾರ್ಡ್‌ ತರುವುದು ಕಡ್ಡಾಯ’ ಎಂದು ತಿಳಿಸಿದರು.

‘8,300 ಯುವಜನರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಪರಿಶಿಷ್ಟ ಜಾತಿಗೆ ಶೇ 20, ಪರಿಶಿಷ್ಟ ಪಂಗಡದವರಿಗೆ ಶೇ 7, ಅಲ್ಪಸಂಖ್ಯಾತರಿಗೆ ಶೇ 15 ಮತ್ತು ಅಂಗವಿಕಲರಿಗೆ ಶೇ 3ರಷ್ಟು ಆದ್ಯತೆ ನೀಡಲಾಗುತ್ತದೆ. ಮಹಿಳೆಯರಿಗೆ ಶೇ 30ರಷ್ಟು ಆದ್ಯತೆ ಇದೆ. ಜಾತಿವಾರು ಅವಕಾಶ ಆಯಾ ಪ್ರದೇಶದ ಅವರ ಜನಸಂಖ್ಯೆಗೆ ಅನುಗುಣವಾಗಿ ಬದಲಾಗಬಹುದು’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT