ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪುಗಳಿಗೆ ಸಂದ ಅಪೂರ್ವ ಕನಸುಗಾರ

Last Updated 13 ಮೇ 2017, 19:30 IST
ಅಕ್ಷರ ಗಾತ್ರ

‘ಚಲಂ ಬೆನ್ನೂರ್‌ಕರ್ ಇನ್ನಿಲ್ಲ’(ಮೇ ರಂದು ನಿಧನ) ಎಂಬ ಸುದ್ದಿ ಕಿವಿಗೆ ಬಡಿದೊಡನೆ ಚಲನಶೀಲ ಝರಿಯೊಂದು ನಿಶ್ಚಲವಾಯಿತೇನೋ ಎಂಬಂತೆ ಮೂಕನಾಗಿಬಿಟ್ಟೆ.

ಚಲಂ ಸ್ನೇಹ ಬೆಲ್ಲದಷ್ಟೇ ಸಿಹಿ. ನಲವತ್ತು ವರ್ಷಗಳ ಹಿಂದೆ ನಾನು ಮತ್ತು ಮಂಗ್ಳೂರ ವಿಜಯ ‘ಬದುಕು–ಬರಹ’ ಎಂಬ ವೇದಿಕೆಯೊಂದನ್ನು ಆರಂಭಿಸಿದ್ದೆವು. ಇದಕ್ಕೆ ಪ್ರೇರಣೆಯಾದವರು ದೇವನೂರ ಮಹಾದೇವ. ಆ ವೇದಿಕೆಯಿಂದ ‘ಬದುಕು’ ಎಂಬ ಸಾಮಾಜಿಕ, ಸಾಹಿತ್ಯಕ, ಸಾಂಸ್ಕೃತಿಕ ಉದ್ದೇಶವನ್ನಿಟ್ಟುಕೊಂಡ ದ್ವೈಮಾಸಿಕ ಪತ್ರಿಕೆಯೊಂದನ್ನು ಪ್ರಕಟಿಸಲು ತಯಾರಿ ನಡೆಸುತ್ತಿರುವಾಗ, ನಮ್ಮಿಬ್ಬರ ಜೊತೆಗೆ ಚಲಂ ಸೇರಿಕೊಂಡ.

ಯಾವ ಮಾಯೆಯೋ ಏನೋ ನನ್ನ, ವಿಜಯನ ಎದೆಯಾಳದಲ್ಲಿ ಚಲಂ ಬೇರುಬಿಟ್ಟು ಮೇಲೆ ಹಸುರಾಗತೊಡಗಿದ. ಆತನನ್ನೇ ‘ಬದುಕು’ ಪತ್ರಿಕೆಯ ಪ್ರಧಾನ ಸಂಪಾದಕನನ್ನಾಗಿ ನೇಮಿಸಿ, ನಾವಿಬ್ಬರೂ ಸಹ ಸಂಪಾದಕರಾದೆವು. ಅಲ್ಲಿಂದ ಈ ಚಲನೆ ನಿಲ್ಲುವವರೆಗೂ ನಾವೆಲ್ಲ ಜೊತೆ ಜೊತೆಯಾಗಿ ಹತ್ತಿರದಲ್ಲೇ ಇದ್ದೆವು.

ಚಲಂ ಸಾಂಪ್ರದಾಯಿಕ ಓದನ್ನು ಓದಿದ್ದು ಕಮ್ಮಿಯೇ. ಅವರ ತಾಯಿ ಸ್ಕೂಲ್ ಟೀಚರ್ ಆಗಿದ್ದವರು. ಆದರೆ, ಚಲಂ ಲೋಕದ ಬೃಹತ್ ಶಾಲೆಯಲ್ಲಿ ಕಲಿತದ್ದೇ ಹೆಚ್ಚು. ಆತನ ಭಾಷಾ ತಿಳಿವಳಿಕೆ ಅಪಾರವಾದದ್ದು. ಧ್ವನಿಪೂರ್ಣ ಕನ್ನಡ ಭಾಷೆಯ ಜೊತೆಗೆ ಇಂಗ್ಲಿಷ್, ತಮಿಳು, ಮಲಯಾಳಿ, ತೆಲುಗು ಭಾಷೆಗಳೂ ಚಲಂ ನಾಲಗೆಯ ಮೇಲೆ ನಲಿದಾಡುತ್ತಿದ್ದವು.

ಆ ಭಾಷಾ ಬಲ, ಅಸಾಧಾರಣ ಧಾರಣಶಕ್ತಿ, ಅದ್ಭುತ ಒಳನೋಟಗಳಿಂದಾಗಿ ವಿದೇಶಗಳಲ್ಲೂ ಆತ ತನ್ನ ಛಾಪನ್ನು ಮೂಡಿಸುವಲ್ಲಿ ಸಫಲನಾಗಿದ್ದ. ವಿಶ್ವವನ್ನು ಸುತ್ತಿ ಸಾಕಷ್ಟು ಲೋಕಜ್ಞಾನವನ್ನು ಸಂಪಾದಿಸಿದ. ಮೂಲತಃ ಚಿತ್ರ ಕಲಾವಿದನಾದ ಚಲಂ, ಆ ಪ್ರಕಾರದಲ್ಲೂ ತನ್ನ ಪ್ರತಿಭೆಯನ್ನು ಅಭಿವ್ಯಕ್ತಗೊಳಿಸಿದ. ನಂತರ ಬೇರೊಂದು ಪ್ರಕಾರದಲ್ಲಿ ತೊಡಗಿಸಿಕೊಂಡ.



ಜಂಗಮ ಬದುಕು
ಎಪ್ಪತ್ತರ ದಶಕದಲ್ಲಿ ಬ್ರಷ್ ಮ್ಯಾನ್ ಎಂಬ ಅಲೆಮಾರಿ ಗುರುವಿನ ಬಳಿ ಪೇಂಟಿಂಗ್ ಕಲಿತ ಚಲಂ, ತನ್ನ ಗುರುವಿನ ಜೊತೆಗೇ ದಾವಣಗೆರೆಯಲ್ಲಿ ಅಂಗಡಿ ಮುಂಗಟ್ಟುಗಳ ಮೇಲೆ ತೂಗಾಡುವ ನಾಮಫಲಕಗಳಿಗೆ ಅತ್ಯಂತ ಆಕರ್ಷಕವಾಗಿ ಅಕ್ಷರ ವಿನ್ಯಾಸವನ್ನು ಮಾಡುತ್ತಾ ಹೊಟ್ಟೆಪಾಡಿನ ದಾರಿ ಕಂಡುಕೊಂಡಿದ್ದ. ನಂತರ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಳ್ಳಲು ಬೆಂಗಳೂರಿಗೆ ಬಂದು ಅಲ್ಲೇ ನೆಲೆ ಕಂಡುಕೊಂಡ.

ಹಗಲು ರಾತ್ರಿ ಎನ್ನದೆ ದುಡಿದು ಸಾಕಷ್ಟು ಸಂಪಾದನೆಯನ್ನೂ ಮಾಡಿದ. ಆದರೆ ‘ಇಂದಿಗೆ, ನಾಳೆಗೆ’ ಎಂದು ಕೂಡಿಡದೆ, ಗಳಿಕೆಯನ್ನು ದಾಸೋಹಗೊಳಿಸುವ ಅಪರೂಪದ ಗುಣವೂ ಆತನಲ್ಲಿತ್ತು.

ಕಥೆ, ಕವಿತೆ, ಲೇಖನಗಳನ್ನೂ ಚಲಂ ಬರೆದಿದ್ದ. ಆದರೆ ಯಥಾಪ್ರಕಾರ ಒಂದೇ ಪ್ರಕಾರಕ್ಕೆ ಅಂಟಿಕೊಳ್ಳದ ಸ್ವಭಾವದಿಂದಾಗಿ ಸಾಹಿತ್ಯ ಕೃಷಿಯನ್ನು ಮೊಟಕುಗೊಳಿಸಿದ. ಹವ್ಯಾಸಿ ಬರಹಗಾರನಂತೆ ಅಪರೂಪಕ್ಕೆ ಆಗೊಂದು ಈಗೊಂದು ಎಂಬಂತೆ ಲೇಖನ, ಅನುವಾದ ಮುಂತಾದ್ದನ್ನು ಮಾಡುತ್ತಿದ್ದರೂ ಅವನ್ನು ಎಲ್ಲೂ ಪ್ರಕಟಿಸುತ್ತಿರಲಿಲ್ಲ.

ಮೊನ್ನೆ ಮೊನ್ನೆ ‘ಕನ್ನಡ ಭಾಷಾ ಭಾರತಿ’ಗಾಗಿ ಅನುವಾದಿಸಿ ಕೊಟ್ಟ ಬರಹಗಳು ಮಾತ್ರ ಆ ಸಂಸ್ಥೆಯೇ ಪ್ರಕಟಿಸಿರುವ ಗ್ರಂಥದಲ್ಲಿ ಬೆಳಕು ಕಂಡಿವೆ. ಕನ್ನಡ ಸಾಹಿತ್ಯದ ದೊಡ್ಡ ಲೇಖಕರೆಲ್ಲ ಚಲಂಗೆ ಪರಿಚಿತರಾಗಿದ್ದರು. ಲಂಕೇಶ್, ಕಿ.ರಂ, ಡಿ.ಆರ್, ದೇವನೂರು ಸೇರಿದಂತೆ ಅನೇಕ ಪ್ರಗತಿಪರ ಚಿಂತಕರೂ ಹತ್ತಿರದವರಾಗಿದ್ದರು.

ಕಿ.ರಂ ಅವರ ಮನೆಗೆ ನನ್ನನ್ನು ಕರೆದುಕೊಂಡು ಹೋಗಿ ಅವರು ನನಗೆ ಮತ್ತಷ್ಟು ನಿಕಟವಾಗುವಂತೆ ಮಾಡಿದ್ದ. ‘ಸಂಸ್ಕಾರ’ ಸಿನಿಮಾದ ಪಟ್ಟಾಭಿ ರಾಮರೆಡ್ಡಿ ಅವರ ಮನೆಗೂ ನನ್ನನ್ನು ಕರೆದೊಯ್ದಿದ್ದ. ಪಟ್ಟಾಭಿ ಅವರಿಗೆ ಚಲಂ ತೀರಾ ಹತ್ತಿರದವರಾಗಿದ್ದರು.

ಬಂಡಾಯ ಸಾಹಿತ್ಯ ಸಂಘಟನೆಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಚಲಂ, ಅದರ ಸೃಜನಶೀಲ ಆಯಾಮಕ್ಕೆ ಸಾಕಷ್ಟು ನೆರವಾದದ್ದೂ ಉಂಟು. ಅಲ್ಲಿಂದ ಆತ ಬೇರೊಂದು ರಂಗಕ್ಕೆ, ಮತ್ತಷ್ಟು ವಿಶಾಲವಾದ ರಂಗಕ್ಕೆ, ಅಂದರೆ ಕಿರುಚಿತ್ರಗಳ ನಿರ್ಮಾಣ–ನಿರ್ದೇಶನದತ್ತ ತನ್ನ ಚಿತ್ತವನ್ನು ಹೊರಳಿಸಿದ.

ಚೌಕಟ್ಟುಗಳ ಉಲ್ಲಂಘನೆ
ಚಲಂ ಚಲನಚಿತ್ರ ನಿರ್ಮಾಣದ ಸಾಂಪ್ರದಾಯಕ ಚೌಕಟ್ಟುಗಳನ್ನು ಮೀರಿ ಆ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡದ್ದು ಆತನ ಭಿನ್ನಹಾದಿಯನ್ನೇ ಹುಡುಕುವ, ಹೊಸತಿಗಾಗಿ ತುಡಿಯುವ ಮನಃಸ್ಥಿತಿಗೆ, ಸಾಮಾಜಿಕ ಕಾಳಜಿಗೆ ಹಿಡಿದ ಕನ್ನಡಿ.

ನೊಂದವರ, ಕಡು ಬಡವರ, ಹೆಣ್ಣುಮಕ್ಕಳ ಚಿಂತಾಜನಕ ಸ್ಥಿತಿ, ತೃತೀಯ ಲಿಂಗಿಗಳ ಆರ್ತತೆಯಂಥ ವಸ್ತುಗಳನ್ನು ಆಸಕ್ತಿಯಿಂದ ಆಯ್ದುಕೊಂಡು ಕಿರುಚಿತ್ರಗಳನ್ನು ರೂಪಿಸಿದ್ದು ಚಲಂನ ವೈಶಿಷ್ಟ್ಯವನ್ನು, ಭಿನ್ನ ಚಿಂತನಾಕ್ರಮವನ್ನು ತೋರುತ್ತದೆ.

ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಬಂದಿಯಾದ ಮಹಿಳೆಗೆ ನ್ಯಾಯವನ್ನು ಕಂಡುಕೊಳ್ಳುವ ನಡೆಗಳನ್ನೇ ಪ್ರಧಾನವಾಗಿ ಕಾಣಿಸುವ ಸಲುವಾಗಿ ‘ಕೋರ್ಟ್ಸ್ ಆಫ್ ವಿಮೆನ್’ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ. ಬೆಂಕಿ ಅನಾಹುತಕ್ಕೆ ತುತ್ತಾದ ನೊಂದ ಮಹಿಳೆಯರ ಪರವಾದ ದನಿಯಾಗಿ ‘ಬರ್ನ್ಸ್‌ ಆಫ್ ಸರ್ವೈವರ್’ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದು ಆತನ ಹೆಂಗರುಳಿನ ಆಳದ ಕಳಕಳಿ ಯಾವ ತೆರನಾದ್ದು ಎನ್ನುವುದನ್ನು ಕಾಣಿಸುತ್ತದೆ.

ಸ್ವತಂತ್ರ ಸಾಕ್ಷ್ಯಚಿತ್ರಗಳ ಚಳವಳಿಯ ರೂವಾರಿಯಾಗಿ ಅದಕ್ಕೊಂದು ಮಾದರಿಯನ್ನು ರೂಪಿಸಿದ ಕೀರ್ತಿಯೂ ಚಲಂಗೆ ನ್ಯಾಯವಾಗಿಯೇ ಸಲ್ಲಬೇಕು. ಲಾತೂರಿನಲ್ಲಿ ಭೂಕಂಪನದ ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ ‘ನಾವು ಎರವರು’ ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ.

ತನ್ನ ಗೆಳೆಯ ವಂಗದೇಶದ ಅಮಿತಾವ್ ಚಕ್ರವರ್ತಿ ಅವರೊಂದಿಗೆ, ಬಂಗಾಳದ ಅಪರೂಪದ ಸೂಫಿಗಳಾದ ಬಾವುಲ್ ಜನರ ಬಗ್ಗೆ ‘ಬಿಷಾರ್ಸ್ ಆಫ್ ಬ್ಲೂಸ್’ ಎಂಬ ಅರ್ಥಪೂರ್ಣ ಸಾಕ್ಷ್ಯಚಿತ್ರ ತಯಾರಿಸಿದ್ದು ಆತನ ಆಸಕ್ತಿಯ ವೈವಿಧ್ಯವನ್ನು ಸಾರುತ್ತದೆ. 1998ರಲ್ಲಿ ‘ಸಾಕ್ಷಿ’ ಎಂಬ ಶೀರ್ಷಿಕೆಯಡಿ ‘ಸಾಕ್ಷ್ಯಚಿತ್ರಗಳ ಫಿಲ್ಮ್ ಫೆಸ್ಟಿವಲ್’ ಆಯೋಜಿಸಿದ್ದೂ ಆತನ ಕ್ರಿಯಾಶೀಲತೆಯನ್ನು ಬೊಟ್ಟು ಮಾಡಿ ತೋರುವಂಥದು.

ಪರ್ಯಾಯ ರಾಜಕಾರಣದ ಒಲವು
ಸಮತಾವಾದದ ತುಡಿತ ಇದ್ದರೂ ಚಲಂ ಕಟ್ಟಾ ಕಮ್ಯುನಿಸ್ಟ್ ಆಗಿರಲಿಲ್ಲ. ನಮ್ಮ ಭಾರತೀಯ ಕಮ್ಯುನಿಸ್ಟ್‌ ರಾಜಕಾರಣವನ್ನು ಕಾಂಗ್ರೆಸ್, ಬಿಜೆಪಿಯನ್ನು ಟೀಕಿಸಿದಷ್ಟೇ ಉಗ್ರವಾಗಿ ಟೀಕಿಸುತ್ತಿದ್ದ. ಒಂದರ್ಥದಲ್ಲಿ ‘ಲಿಬರಲ್’ ಅನ್ನುವ ರೀತಿಯ ಕಮ್ಯುನಿಸಂನ ವಕ್ತಾರನಂತಿದ್ದ. ಅದೇ ರೀತಿ ಸಮಾನ ಚಿಂತನೆಯ ಗೆಳೆಯರನ್ನು ದೇಶ ವಿದೇಶಗಳಲ್ಲಿ ಸಂಪಾದಿಸಿದ್ದ.

ಈ ದಿಶೆಯಲ್ಲಿ ತೃತೀಯ ರಾಷ್ಟ್ರಗಳ ಎಡಪಂಥೀಯ ಚಳವಳಿಗಳ ಬಗ್ಗೆ ಅಪಾರ ಕುತೂಹಲಿಯಾಗಿದ್ದ ಮತ್ತು ಅದನ್ನು ಇನ್ನಿಲ್ಲದಂತೆ ಪ್ರೋತ್ಸಾಹಿಸುತ್ತಿದ್ದ. ಶ್ರಮ ಜೀವನ ಮತ್ತು ಶ್ರಮಿಕರ ಬದುಕನ್ನು ಸಹನೀಯವಾಗಿಸುವತ್ತ ಎಡಪಂಥೀಯ ಆಲೋಚನೆಯ ಧುರೀಣರು ಪ್ರಾಮಾಣಿಕವಾಗಿ ಶ್ರಮಿಸುತ್ತಿಲ್ಲ ಎಂಬ ಬೇಸರ ಆತನಲ್ಲಿತ್ತು.

ಅಧಿಕಾರ ರಾಜಕಾರಣಕ್ಕೆ ಸಂಪೂರ್ಣ ವಿಮುಖನಾದಂತಿದ್ದ ಚಲಂ, ರಾಜಕಾರಣದ ಸೃಜನಾತ್ಮಕ ಆಯಾಮವನ್ನು ಕಾಣದೆ ಕಂಗೆಟ್ಟವನಂತೆ ಚಡಪಡಿಸುತ್ತಿದ್ದ. ವಿಲಕ್ಷಣ ಸಂತನಂತೆ ತನ್ನ ಬದುಕನ್ನು ಸರಳವಾಗಿ ಕಟ್ಟಿಕೊಂಡಿದ್ದ ಆತನಲ್ಲಿ ಯಾವುದೇ ಪೂರ್ವಗ್ರಹಗಳಿರಲಿಲ್ಲ.

ಗಾಂಧೀಜಿಯ ಅಹಿಂಸಾ ತತ್ವವನ್ನು ಒಪ್ಪಿ, ನೆಹರೂ ರಾಜಕಾಣದ ಬಗ್ಗೆಯೂ ಅಧಿಕಾರಯುತವಾಗಿ ಚರ್ಚಿಸಬಲ್ಲವನಾಗಿದ್ದ. ಸ್ವಾತಂತ್ರ್ಯಾನಂತರದಲ್ಲಿ ಭಾರತದ ರಾಜಕಾರಣ ತಲುಪಿದ ದುಸ್ಥಿತಿಗೆ ಕೆಂಡವಾಗುತ್ತಿದ್ದ ಚಲಂ ಪರ್ಯಾಯ ರಾಜಕೀಯ ವ್ಯವಸ್ಥೆ ಸಾಧ್ಯವಾಗಬೇಕೆಂದು ಆಶಿಸುತ್ತಿದ್ದ.

ರಾಜಕಾರಣದ ಮೂಲ ಬೇರು ದಯೆ, ಮನುಷ್ಯ ಹಾಗೂ ಸಕಲ ಜೀವಾತ್ಮಗಳ ಪ್ರೀತಿಯೇ ಆಗಬೇಕೆಂಬುದು ಈ ಗೆಳೆಯನ ಆಕಾಂಕ್ಷೆ. ಹೊಳಲ್ಕರೆ ತಾಲೂಕಿನ ಚಿಕ್ಕಜಾಜೂರಿನಲ್ಲಿ ಹುಟ್ಟಿ, ಸಂತೇಬೆನ್ನೂರಿನಂಥ ಮತ್ತೊಂದು ಹಳ್ಳಿಯಲ್ಲಿ ಬೆಳೆದ ಚಲಂ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ರಾಜಕೀಯ ಚಿಂತನೆಯ ಮಟ್ಟಕ್ಕೆ ಏರಿದ್ದು ಒಂದು ಸೋಜಿಗ.

ತಳ ಸಮುದಾಯಗಳ ಗೆಳೆಯರನ್ನೇ ಹೆಚ್ಚಾಗಿ ಹೊಂದಿದ್ದ ಚಲಂ ‘ದಸಂಸ’ ಮೂಲರೂಪದ ಪತನಕ್ಕೆ ಅತೀವವಾಗಿ ಮರುಗುತ್ತಿದ್ದ. ಜಾತ್ಯತೀತ, ರೂಢಿಗತ ಧರ್ಮಗಳಾಚೆ ಆರೋಗ್ಯಕರವಾಗಿ ಚಿಂತಿಸಬಲ್ಲ ಮನುಷ್ಯರನ್ನು ಹೊಂದಿರುವ ಬಯಲು ದೇಶವೊಂದರ ಅಸ್ತಿತ್ವವನ್ನು ಕನಸುತ್ತಿದ್ದ ಚಲಂ, ಸಂಪೂರ್ಣ ವಿಕಾಸವನ್ನೇ ಧ್ಯಾನಿಸುತ್ತಿದ್ದ. ಯಾವ ಗ್ರಂಥಗಳನ್ನೂ ಆತ ಪ್ರಕಟಿಸುವ ಗೋಜಿಗೆ ಹೋಗಲಿಲ್ಲ. ಗೆಳೆಯರು ಆತನ ಖಾಸಗಿ ಮಾತುಗಳನ್ನೇ ದಾಖಲಿಸಿದ್ದರೂ ಅದೊಂದು ಅಮೂಲ್ಯ ಗ್ರಂಥವೇ ಆಗುತ್ತಿತ್ತು.

ಸ್ಫುರದ್ರೂಪಿಯಾಗಿದ್ದ ಚಲಂ ನಿಧಾನಕ್ಕೆ ಕೃಶನಾಗುತ್ತಿದ್ದುದನ್ನು ಗಮನಿಸಿದ ನನ್ನಂಥ ಗೆಳೆಯರು, ಆತನ ಹಲವು ವ್ಯಸನಗಳನ್ನು ಹಿಡಿತಕ್ಕೆ ತರಲು ಹೆಣಗಾಡಿದರೂ ಸಫಲರಾಗಲಿಲ್ಲ. ಕಾಲನ ಕ್ರೂರ ಪದಾಘಾತಕ್ಕೆ ಸಿಲುಕಿದ ಚಲಂ ಅಸಹಾಯಕನಾಗಿದ್ದ. ತನ್ನನ್ನು ತಾನೇ ಮರೆಯುತ್ತಿದ್ದ.

ಈಗ ನೋಡಿದರೆ ತನ್ನೆಲ್ಲ ಸುಂದರ ಆಲೋಚನೆಗಳನ್ನೂ, ಸಾಂಸ್ಕೃತಿಕ–ಸಾಮಾಜಿಕ ಚಲನೆಗಳೆಲ್ಲವನ್ನೂ ನಮಗಾಗಿ ಬಿಟ್ಟುಕೊಟ್ಟು ತಾನು ಸ್ತಬ್ಧವಾಗಿಬಿಟ್ಟಿದ್ದಾನೆ. ಆ ಗೆಳೆಯನಿಗೆ ನಮಸ್ಕಾರವೆನ್ನಲೆ? ಗಂಟಲು ಬಿಗಿದು ಬರುವಾಗ ಮಾತಿಗೆಲ್ಲಿ ಪುರುಸೊತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT