ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ.ವಿಗಾಗಿ ಬೇಸ್ತು ಬಿದ್ದ, ಕೊನೆಗೂ ಗೆದ್ದ!

ಅಕ್ಷರ ಗಾತ್ರ

ಜಾಹೀರಾತುಗಳಿಂದಲೇ ವ್ಯವಹಾರ ವೃದ್ಧಿಸಿಕೊಳ್ಳುವ ಕಂಪೆನಿಗಳು ತಮ್ಮ ಸರಕುಗಳನ್ನು ಮಾರಾಟಮಾಡಲು ಎಲ್ಲಿಲ್ಲದ ಸರ್ಕಸ್ ಮಾಡುತ್ತವೆ. ‘ಬೈ ಒನ್ ಗೆಟ್ ಒನ್’, ರಿಯಾಯಿತಿ, ಗಿಫ್ಟ್‌ ಹ್ಯಾಂಪರ್, ಲಕ್ಕಿ ಕೂಪನ್ ಹೀಗೆ ನಾನಾ ತರಹದ ಆಮಿಷಗಳನ್ನು ಒಡ್ಡುತ್ತವೆ. ಈ ಮೂಲಕ ಸರಕುಗಳನ್ನು ಮಾರಾಟಮಾಡಿ ದುಪ್ಪಟ್ಟು ಲಾಭ ಗಳಿಸುತ್ತವೆ.

ಇಂಥ ಕೊಡುಗೆಗಳ ಸಾಚಾತನವನ್ನು ಇಲ್ಲಿ ಪ್ರಶ್ನಿಸುವುದು ಬೇಡ. ಆದರೆ ಇಂಥದ್ದೇ ಕೊಡುಗೆಯನ್ನು ಕೊಂಡು ಬೇಸ್ತು ಬಿದ್ದು ಕೊನೆಗೂ ಗೆದ್ದ ವ್ಯಕ್ತಿ ಶಿವಣ್ಣನವರ ಬಗ್ಗೆ ಹೇಳಹೊರಟಿದ್ದೇನೆ.

ಕಲರ್‌ ಟಿ.ವಿಯೊಂದನ್ನು ಖರೀದಿಸಲು ಇಚ್ಛಿಸಿದ್ದ ಶಿವಣ್ಣ ಅವರು, ಹಬ್ಬದ ಸಮಯದಲ್ಲಿ ಕೊಡುಗೆ ಬರುವುದನ್ನೇ ಕಾಯುತ್ತಿದ್ದರು. ಆ ದಿನ ಬಂದೇ ಬಿಟ್ಟಿತು. ಬಣ್ಣದ ಟಿ.ವಿಯನ್ನು ಠೀವಿಯಿಂದ ಖರೀದಿಸಿದರು ಅವರು. ಮನೆಯಲ್ಲಿ ಹಬ್ಬದ ವಾತಾವರಣ.

ಆದರೆ ಈ ಖುಷಿ ಎರಡುವರ್ಷವೂ ಉಳಿಯಲಿಲ್ಲ. ಎರಡು ವರ್ಷ ತುಂಬುವುದರೊಳಗೇ ಟಿ.ವಿ ಕೆಟ್ಟುನಿಂತಿತು. ಕಷ್ಟಪಟ್ಟು ಕೂಡಿಟ್ಟ ಹಣದಲ್ಲಿ ತಂದ ಟಿ.ವಿಗೆ ಹೀಗಾಯಿತಲ್ಲ ಎಂದು ಕೊರಗಿದರು ಶಿವಣ್ಣ.

ಟಿ.ವಿ ಖರೀದಿಸಿದ ಅಂಗಡಿಗೆ  ಹೋಗಿ ವಿಷಯ ತಿಳಿಸಿದರು. ಆಗ ಅಂಗಡಿಯವರು ಟಿ.ವಿ ಕಂಪೆನಿಯ ಏಜೆಂಟ್‌ ಒಬ್ಬನನ್ನು ಶಿವಣ್ಣನವರ ಮನೆಗೆ ಕಳುಹಿಸಿದರು. ಏಜೆಂಟ್‌, ಟಿ.ವಿ ರಿಪೇರಿ ಮಾಡಿದಂತೆ ಮಾಡಿ ‘ಇನ್ನು ಮುಂದೆ ಹೀಗೆ ಆಗುವುದಿಲ್ಲ’ ಎಂದು ಹೇಳಿ ಹೋದ. ‘ಒಂದು ವೇಳೆ ಪುನಃ ತೊಂದರೆ ಆದರೆ ಭಯಪಡುವುದು ಬೇಡ. ಇದಕ್ಕಿನ್ನೂ ವಾರಂಟಿ ಇದೆ. ಇದು ಕೆಟ್ಟರೆ ಹೊಸ ಟಿ.ವಿ ಕೊಡುತ್ತೇವೆ’ ಎಂದರು ಅಂಗಡಿಯ ಮ್ಯಾನೇಜರ್‌.

ರಿಪೇರಿ ಮಾಡಿದ ತಿಂಗಳೊಳಗೇ ಟಿ.ವಿ ಪುನಃ ಕೆಟ್ಟಿತು. ಶಿವಣ್ಣ ಮತ್ತೆ ಅಂಗಡಿಗೆ ಹೋಗಿ ವಿಷಯ ತಿಳಿಸಿದರು. ಟಿ.ವಿ ಕೆಟ್ಟು ಅನೇಕ ದಿನಗಳ ನಂತರ ಅಂತೂ ಟಿ.ವಿ ಕಂಪೆನಿಯ ಏಜೆಂಟ್‌ ಒಬ್ಬ ಶಿವಣ್ಣನವರ ಮನೆಗೆ ಬಂದ. ‘ಹೈ ವೋಲ್ಟೇಜ್’ನಿಂದಾಗಿ ಇದರ ಪ್ಯಾನಲ್ ಹೋಗಿದೆ ಎಂದ ಆತ ರಿಪೇರಿಗೆ ₹ 18 ಸಾವಿರ ಖರ್ಚಾಗುತ್ತದೆ ಎಂದ. ಇಪ್ಪತ್ತು ಸಾವಿರ ರೂಪಾಯಿಯ ಟಿ.ವಿಯ ರಿಪೇರಿಗೆ ಹದಿನೆಂಟು ಸಾವಿರ! ಶಿವಣ್ಣನಿಗೆ ತಲೆಯೇ ತಿರುಗಿದಂತಾಯಿತು.

ಟಿ.ವಿ ಖರೀದಿಸಿದ ಅಂಗಡಿಗೆ ಮತ್ತೊಮ್ಮೆ ಧಾವಿಸಿದರು ಶಿವಣ್ಣ ‘ನೀವು ಹಿಂದೆ ಮಾತುಕೊಟ್ಟಂತೆ ಟಿ.ವಿ ರಿಪೇರಿ ಮಾಡಿಕೊಡಿ ಇಲ್ಲವೇ ಬೇರೆ ಟಿ.ವಿ ಕೊಡಿ’ ಎಂದರು. ಅಂಗಡಿ ಮ್ಯಾನೇಜರ್‌ ಇದಕ್ಕೆ ಸುತರಾಂ ಒಪ್ಪಲಿಲ್ಲ. ‘ವಾರಂಟಿ ಅವಧಿ ಮುಗಿದಿರುವ ಕಾರಣ, ಹೊಸತನ್ನು ನಿಮಗೆ ಕೊಡಲಾಗದು’ ಎಂದರು. ಮಾತಿಗೆ ಮಾತು ಬೆಳೆದಾಗ ಅಂಗಡಿಯವರು ಶಿವಣ್ಣ ಅವರನ್ನು ಬಲವಂತದಿಂದ ಹೊರಗೆ ಕಳುಹಿಸಲು ಯತ್ನಿಸಿದರು.

ಅಲ್ಲಿಯವರೆಗೆ ಬೇಡಿಕೊಳ್ಳುತ್ತಿದ್ದ ಶಿವಣ್ಣನ ಅವರಿಗೆ ಅಂಗಡಿಯವರ ವರ್ತನೆಯಿಂದ ಸಿಟ್ಟು ನೆತ್ತಿಗೇರಿತು. ‘ಟಿ.ವಿ ರಿಪೇರಿ ಮಾಡಿಕೊಡಿ ಇಲ್ಲವೇ ಬೇರೆ ಟಿ.ವಿ ಕೊಡಿ. ನಿಮ್ಮ ಮಾತಿನಂತೆ ನಡೆದುಕೊಳ್ಳದಿದ್ದರೆ ನಾನು ಗ್ರಾಹಕರ ವೇದಿಕೆಯಲ್ಲಿ ನಿಮ್ಮ ವಿರುದ್ಧ ಪ್ರಕರಣ ದಾಖಲಿಸುತ್ತೇನೆ’ ಎಂದು ಏರು ಧ್ವನಿಯಲ್ಲಿ ಹೇಳಿದರು. ಅಂಗಡಿ ಮ್ಯಾನೇಜರ್ ಅಷ್ಟೇ ಜಬರ್ದಸ್ತಾಗಿ, ‘ಏನು ಮಾಡುತ್ತಿಯೋ ಮಾಡಿಕೋ. ವಾರಂಟಿ ಅವಧಿ ಮುಗಿದಿರುವ ಕಾರಣ, ಉಚಿತವಾಗಿ ರಿಪೇರಿನೂ ಮಾಡಲ್ಲ, ಹೊಸ ಟಿ.ವಿನೂ ಕೊಡಲ್ಲ. ನೀನು ಗ್ರಾಹಕರ ವೇದಿಕೆಗೆ ಹೋದರೆ ನಾವೇನು ಹೆದರಿಕೊಳ್ಳುತ್ತೇವೆ ಎಂದುಕೊಂಡಿಯಾ? ನಮ್ಮ ಕಂಪೆನಿಯಲ್ಲೂ ಹಿರಿಯ ವಕೀಲರು ಇದ್ದಾರೆ. ಏನು ಮಾಡಬೇಕು ಎಂದು ನಮಗೂ ಗೊತ್ತು’ ಎಂದರು. ಇಷ್ಟು ಹೇಳುತ್ತಲೇ ಶಿವಣ್ಣ ಅವರನ್ನು ಅಂಗಡಿಯಿಂದ ಹೊರಕ್ಕೆ ಹಾಕಲು ಭದ್ರತಾ ಸಿಬ್ಬಂದಿಯನ್ನೂ ಕರೆದರು! ಅಷ್ಟರಲ್ಲಿ ಅಂಗಡಿಯ ಭದ್ರತಾ ಸಿಬ್ಬಂದಿ ಬಂದು ‘ನೀವು ಇಲ್ಲಿಂದ ಹೊರಗೆ ಹೋಗಿ, ಇಲ್ಲದಿದ್ದರೆ ಪೊಲೀಸರನ್ನು ಕರೆಸಬೇಕಾಗುತ್ತದೆ’ ಎಂದು ಹೇಳಿದ.
ಈ ಘಟನೆ ವೇಳೆ ಅಂಗಡಿಯಲ್ಲಿ ಗ್ರಾಹಕರು ತುಂಬಾ ಮಂದಿ ಇದ್ದರು. ಅವರ ಮುಂದೆ ತಮಗೆ ಆದ ಅವಮಾನದಿಂದ ಕುಗ್ಗಿದರು ಶಿವಣ್ಣ.

ಅಲ್ಲಿಂದ ನೇರ ಮನೆಗೆ ಬಂದವರೇ ವಾರಂಟಿ ಕಾರ್ಡ್‌ನಲ್ಲಿ ಇದ್ದ ಎಲ್ಲ ವಿಷಯವನ್ನು ಓದಿದರು. ‘ಕಂಡಿಷನ್ಸ್‌ ಅಪ್ಲೈ’ (ಷರತ್ತು ಅನ್ವಯಿಸುತ್ತದೆ) ಎಂದು ಕೆಳಗೆ ಕಣ್ಣಿಗೆ ಕಾಣದಷ್ಟು ಸಣ್ಣದಾಗಿ ಮುದ್ರಣಗೊಂಡ ಅಕ್ಷರಗಳನ್ನು ಭೂತಗನ್ನಡಿ ಹಿಡಿದುಕೊಂಡು ಓದಿದರು. ವಾರಂಟಿ ಅವಧಿಯ ಕಾಲಂ ಅಡಿ ಅಂಗಡಿಯ ಮಾರಾಟ ಪ್ರತಿನಿಧಿ ಬರೆದ ದಿನಾಂಕ ಥಟ್ಟನೆ ಗಮನ ಸೆಳೆಯಿತು.  2012ರಲ್ಲಿ ಟಿ.ವಿ ಖರೀದಿಯಾಗಿತ್ತು. ‘ವಾರಂಟಿ ಅವಧಿ 2017ರವರೆಗೆ ಇದೆ’ ಎಂದು ಅದರಲ್ಲಿ ಉಲ್ಲೇಖವಾಗಿತ್ತು. ಅಂದರೆ ಒಟ್ಟೂ ಐದು ವರ್ಷ. ಅದರ ಕೆಳಗೆ ಮ್ಯಾನೇಜರ್‌ ಸೀಲ್‌ ಹಾಕಿ ಸಹಿ ಕೂಡ ಹಾಕಿದ್ದರು. ಆದರೆ ಆಗಿನ್ನೂ ಎರಡು ವರ್ಷವಾಗಿತ್ತು.

ಇಷ್ಟೇ ಸಾಕಾಯಿತು ಶಿವಣ್ಣ ಅವರಿಗೆ. ಮಾರನೆ ದಿನ ಅವರು ವಾರಂಟಿ ಕಾರ್ಡ್  ಹಿಡಿದು ಪರಿಚಿತ ವಕೀಲರ ಹತ್ತಿರ ಹೋದರು. ವಕೀಲರು ‘ಟಿ.ವಿಗೆ ಐದು ವರ್ಷ ವಾರಂಟಿ ಯಾರು ಕೊಡುತ್ತಾರೆ? ಸುಮ್ಮನೆ ಕೋರ್ಟ್‌ಗೆ ಅಲೆದಾಡಬೇಡ. ಈ ಪ್ರಕರಣ ಗ್ರಾಹಕರ ವೇದಿಕೆಯಲ್ಲಿ ನಿಲ್ಲುವುದಿಲ್ಲ. ಆದ್ದರಿಂದ ಹೊಸ ಟಿ.ವಿ ತೆಗೆದುಕೊಂಡು ಬಿಡು’ ಎಂದರು.

ನಂತರ ಶಿವಣ್ಣ ಅವರು ವಾರಂಟಿ ಕಾರ್ಡ್‌ ತೋರಿಸಿದಾಗ ವಕೀಲರಿಗೆ ಶಿವಣ್ಣ ಹೇಳುತ್ತಿರುವುದಲ್ಲಿ ಸತ್ಯಾಂಶ ಇದೆ ಎನ್ನಿಸಿತು. ‘ನೀವು ಹೇಳಿದ್ದು ಸರಿ ಇದೆ. ಇದು ಒಳ್ಳೆಯ ಪಾಯಿಂಟ್’ ಎಂದು ಹೇಳಿದರು. ತಡ ಮಾಡದೇ, ಅಂಗಡಿ ಮಾಲೀಕ ಹಾಗೂ ಟಿ.ವಿ ಕಂಪೆನಿಗಳಿಗೆ ಲೀಗಲ್‌ ನೋಟಿಸ್‌ ಜಾರಿ ಮಾಡಿದರು.

ನೋಟಿಸ್ ಜಾರಿಯಾಗುತ್ತಿದ್ದಂತೆ ಅಂಗಡಿಯ ಮಾಲೀಕನ ಮುಖ ಇಂಗು ತಿಂದ ಮಂಗನಂತಾಯಿತು. ಕೂಡಲೇ ಅಂಗಡಿಯ ಪ್ರತಿನಿಧಿ ಒಬ್ಬನನ್ನು ಶಿವಣ್ಣನವರ ಮನೆಗೆ ಕಳಿಸಿದರು. ಶಿವಣ್ಣನವರ ಮನೆಗೆ ಬಂದ ಪ್ರತಿನಿಧಿ, ‘ನೋಡಿ ಸಾರ್‌. ಇದರಲ್ಲಿ ನಮ್ಮ ಮಾಲೀಕರ ತಪ್ಪು ಏನೂ ಇಲ್ಲ. ಅದೇನೋ ಮಿಸ್ಟೇಕ್‌ ಆಗಿ ವಾರಂಟಿ ಕಾರ್ಡ್‌ನಲ್ಲಿ ಐದು ವರ್ಷ ವಾರಂಟಿ ಅವಧಿ ಎಂದು ನಮೂದಾಗಿಬಿಟ್ಟಿದೆ. ಆದರೂ ಪರವಾಗಿಲ್ಲ. ನಿಮಗೆ ಬೇರೆ ಟಿ.ವಿ ಕೊಡುತ್ತೇವೆ. ಸುಖಾಸುಮ್ಮನೆ ಕೋರ್ಟ್‌ ಗೀರ್ಟ್‌ ಎಲ್ಲಾ ಯಾಕೆ? ಇದರಿಂದ ನಿಮಗೂ ಅಲೆದಾಟ, ನಮಗೂ ಅಲೆದಾಟ. ಅವೆಲ್ಲಾ ಬೇಡ ಬಿಡಿ. ನಿಮಗೆ ಮಾರಾಟಮಾಡಿದ ಟಿ.ವಿ ಮಾಡೆಲ್ ಈಗ ಉತ್ಪಾದನೆ ಆಗುತ್ತಿಲ್ಲ. ಆದರೂ ಕಂಪೆನಿಗೆ ಅಂಥದ್ದೇ ಟಿ.ವಿಯನ್ನು ಸರಬರಾಜು ಮಾಡುವಂತೆ ವಿನಂತಿಸಿಕೊಂಡಿದ್ದೇವೆ. ಅದು ಬಂದ ತಕ್ಷಣ ಕೊಡುತ್ತೇವೆ’ ಎಂದ.

ಶಿವಣ್ಣ ಕೊಂಚ ನಿರಾಳರಾದರು. ಆದರೂ ಹಿಂದಿನ ಘಟನೆಗಳನ್ನೆಲ್ಲಾ ನೆನಪಿಸಿಕೊಂಡು ಬುದ್ಧಿ ಉಪಯೋಗಿಸಿದರು. ‘45 ದಿನಗಳೊಳಗಾಗಿ ನೀವು ಟಿ.ವಿ ಕೊಟ್ಟರೆ ನಾನು ಪ್ರಕರಣ ದಾಖಲಿಸುವುದಿಲ್ಲ. ಇಲ್ಲದಿದ್ದರೆ ಪ್ರಕರಣ ದಾಖಲಿಸುತ್ತೇನೆ’ ಎಂದರು. ಆರೋಪಿಗಳಿಗೆ ಲೀಗಲ್‌ ನೋಟಿಸ್‌ ಜಾರಿ ಮಾಡಿದ ನಂತರ 45 ದಿನಗಳ ಒಳಗೆ ಗ್ರಾಹಕರ ವೇದಿಕೆಗೆ ದೂರು ದಾಖಲು ಮಾಡಬೇಕು. ಇಲ್ಲದಿದ್ದರೆ ದೂರು ದಾಖಲೆಯ ಅವಧಿ ಮುಕ್ತಾಯವಾಗುತ್ತದೆ. ಆದ್ದರಿಂದ ಶಿವಣ್ಣ 45ದಿನಗಳ ಅವಧಿಯನ್ನು ಕೊಟ್ಟರು.

ಶಿವಣ್ಣ ನೀಡಿದ ಗಡುವಿಗೆ ಇನ್ನೇನು ಎರಡು ದಿನ ಇದೆ ಎನ್ನುವಾಗ ಟಿ.ವಿ ಕಂಪೆನಿಯ ಸರ್ವಿಸ್ ಏಜೆಂಟ್ ಬಂದ. ಆದರೆ ಹೊಸ ಟಿ.ವಿ ತರಲಿಲ್ಲ. ಬದಲಿಗೆ ‘ನಿಮ್ಮ ಟಿ.ವಿಯನ್ನು ರಿಪೇರಿ ಮಾಡಿ ಕೊಡುತ್ತೇವೆ’ ಎಂದು ಹೇಳಿ ಟಿ.ವಿ ಎತ್ತಿಕೊಂಡ. ಆ ಕೂಡಲೇ ಶಿವಣ್ಣ, ‘ಟಿ.ವಿ ರಿಪೇರಿಗಾಗಿ ತೆಗೆದುಕೊಂಡು ಹೋಗಿ. ಬೇಸರವಿಲ್ಲ, ಆದರೆ ಗ್ರಾಹಕರ ವೇದಿಕೆಯಲ್ಲಿ ದಾಖಲು ಮಾಡಲು ನನಗೆ ರಸೀತಿ ಬೇಕು. ದೂರು ದಾಖಲು ಮಾಡಲು ಇನ್ನು ಎರಡೇ ದಿನ ಬಾಕಿ ಇದೆ. ಆದ್ದರಿಂದ ರಿಪೇರಿಗೆ ತೆಗೆದುಕೊಂಡು ಹೋಗುವ ಮೊದಲು ರಸೀತಿ ಕೊಟ್ಟುಹೋಗಿ’ ಎಂದರು. ಬೇರೆ ದಾರಿಯಿಲ್ಲದ ಏಜೆಂಟ್‌ ರಸೀತಿ ಕೊಟ್ಟ.

ಅದಾದ ಎರಡು ದಿನಗಳು ಕಂಪೆನಿ ಅಥವಾ ಅಂಗಡಿಯಿಂದ ಸುಳಿವೇ ಇರಲಿಲ್ಲ. ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸುವ ದಿನ ಮುಗಿಯುವ ಕಾರಣ, ಶಿವಣ್ಣ ಅವರೇ ಖುದ್ದಾಗಿ ಅಂಗಡಿಯವರಿಗೆ ಕರೆ ಮಾಡಿದರು. ‘ನನ್ನ ಟಿ.ವಿ ರಿಪೇರಿ ಆಗಿದೆಯೋ ಇಲ್ಲವೋ’ ಎಂದು ವಿಚಾರಿಸಿದರು. ಅದಕ್ಕೆ ಅಲ್ಲಿಂದ ‘ರಿಪೇರಿಯಾಗಿದೆ ಸರ್‌. ಇವತ್ತು ಸಾಯಂಕಾಲ ನಿಮ್ಮ ಮನೆಗೆ ತೆಗೆದುಕೊಂಡು ಬರುತ್ತೇವೆ’ ಎಂಬ ಉತ್ತರ ಬಂತು.

ಅದು ಕೊನೆಯ ದಿನವಾಗಿದ್ದರಿಂದ ಶಿವಣ್ಣನವರಿಗೆ ಇಲ್ಲೇನೋ ಕುತಂತ್ರ ನಡೆಯುತ್ತಿದೆ ಎನ್ನಿಸಿತು. ಆದ್ದರಿಂದ ಟಿ.ವಿ ಬರುವುದನ್ನು ಕಾಯದೇ ನೇರವಾಗಿ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿಯೇ ಬಿಟ್ಟರು. ತಮ್ಮ ಅರ್ಜಿಯಲ್ಲಿ ಎಲ್ಲಾ ವಿಷಯವನ್ನು ತಿಳಿಸಿದ ಅವರು, ‘ನನಗೆ ಹೊಸ ಟಿ.ವಿ ಕೊಡುವಂತೆ ಇಲ್ಲವೇ ಅದರ ಮೌಲ್ಯವನ್ನು ಅಂಗಡಿಯವರು ವಾಪಸ್‌ ಕೊಡುವಂತೆ ನಿರ್ದೇಶಿಸಿ’ ಎಂದು ಅರ್ಜಿಯಲ್ಲಿ ಕೋರಿದರು. ಇದರ ಜೊತೆಗೆ ತಮಗೆ ಪರಿಹಾರದ ರೂಪದಲ್ಲಿ ಐದು ಸಾವಿರ  ಹಾಗೂ ವಕೀಲರ ಖರ್ಚಾದ ಎರಡು ಸಾವಿರ ರೂಪಾಯಿಗಳನ್ನು ನೀಡುವಂತೆ ಆದೇಶಿಸಬೇಕು ಎಂದು ಕೋರಿದರು.

ಪ್ರಕರಣವನ್ನು ದಾಖಲಿಸಿಕೊಂಡ ಗ್ರಾಹಕರ ವೇದಿಕೆಯು ಪ್ರತಿವಾದಿಗಳಾದ ಅಂಗಡಿ ಮಾಲೀಕ ಮತ್ತು ಕಂಪೆನಿಗೆ ನೋಟಿಸ್ ನೀಡಿತು. ಪ್ರತಿವಾದಿಗಳು ತಮ್ಮ ವಕೀಲರ ಮುಖಾಂತರ ನ್ಯಾಯಾಲಯಕ್ಕೆ ಹಾಜರಾದರೆ ಶಿವಣ್ಣ ಖುದ್ದು ವಾದ ಮಂಡಿಸಿದರು. ಗ್ರಾಹಕರ ವೇದಿಕೆಯಲ್ಲಿ ತಮ್ಮ ಹೇಳಿಕೆ ಸಲ್ಲಿಸಿದ ಪ್ರತಿವಾದಿಗಳು, ‘ಶಿವಣ್ಣ ಅವರು ವಾರಂಟಿ ಕಾರ್ಡ್‌ನಲ್ಲಿಯ ದಿನಾಂಕವನ್ನು ತಾವೇ ತಿದ್ದಿ  ನಮ್ಮ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ನಾವಷ್ಟೇ ಅಲ್ಲ, ಯಾವುದೇ ಅಂಗಡಿಯವರು ಹೀಗೆ ಐದು ವರ್ಷಗಳ ವಾರಂಟಿ ಟಿ.ವಿಗೆ ಕೊಡುವುದಿಲ್ಲ’ ಎಂದು ವಾದಿಸಿ ಅರ್ಜಿಯನ್ನು ವಜಾ ಮಾಡಬೇಕು ಎಂದು ವಿನಂತಿಸಿಕೊಂಡರು. 

ಆಗ ಶಿವಣ್ಣ, ವಾರಂಟಿ ಕಾರ್ಡನ್ನು ಕೋರ್ಟ್‌ ಮುಂದಿಟ್ಟು ‘ನಾನೇ ಇದನ್ನು ತಿದ್ದಿದ್ದೇನೆ ಎಂದು ಒಂದುಬಾರಿ ಹೇಳುವ ಮಾಲೀಕರು, ಇನ್ನೊಂದು ಸಲ ವಾರಂಟಿ ಅವಧಿಯಲ್ಲಿ ಇರುವ ದಿನಾಂಕವನ್ನು ನಾನೇ ತಪ್ಪು ತಿಳಿದುಕೊಂಡಿದ್ದೇನೆ ಎನ್ನುತ್ತಿದ್ದಾರೆ. ಅವರ ಹೇಳಿಕೆಯಲ್ಲಿ ಸಾಕಷ್ಟು ಗೊಂದಲಗಳು ಇವೆ. ವಾರಂಟಿ ಅವಧಿಯಲ್ಲಿ ಇರುವ ಅಕ್ಷರಗಳು ಯಾರದ್ದು ಎಂಬ ಬಗ್ಗೆ ಬೇಕಿದ್ದರೆ ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆಯಲಿ’ ಎಂದರು.

ಅವರ ಮಾತನ್ನು ಒಪ್ಪಿದ ನ್ಯಾಯಾಧೀಶರು, ಮಾಲೀಕರನ್ನು ಉದ್ದೇಶಿಸಿ, ‘ಇದು ಶಿವಣ್ಣ ಅವರೇ ತಿದ್ದಿದ್ದು ಎಂದಾದರೆ ದಾಖಲೆಗಳನ್ನು ತನಿಖೆಗೆ ಕಳುಹಿಸುತ್ತೇನೆ. ಒಂದು ವೇಳೆ ನಿಮ್ಮ ವಿರುದ್ಧವಾಗಿ ವರದಿ ಬಂದರೆ ಹೆಚ್ಚಿನ ದಂಡ ವಿಧಿಸಬೇಕಾಗುತ್ತದೆ. ಆಗಬಹುದೇ?’ ಎನ್ನುತ್ತಿದ್ದಂತೆ ಮಾಲೀಕರ ಪರ ವಕೀಲರು ವಿಚಾರಣೆಯನ್ನು ಒಂದು ವಾರ ಮುಂದೂಡುವಂತೆ ಕೋರಿದರು.

ಮುಂದಿನ ವಿಚಾರಣೆ ವೇಳೆ ಹಾಜರಾದ ಅವರು, ‘ಕೆಲಸದ ಒತ್ತಡದಲ್ಲಿ ಅಂಗಡಿಯ ಮಾರಾಟ ಪ್ರತಿನಿಧಿ ದಿನಾಂಕವನ್ನು ತಪ್ಪಾಗಿ ನಮೂದಿಸಿಬಿಟ್ಟಿದ್ದಾನೆ. ಆದ್ದರಿಂದ ನಾವು ಈ ಪ್ರಕರಣವನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳುತ್ತೇವೆ. ನಮ್ಮಿಂದ ತಪ್ಪಾಗಿದೆ, ಕ್ಷಮಿಸಿ’ ಎಂದರು.  ನ್ಯಾಯಾಧೀಶರ ಸೂಚನೆಯಂತೆ ರಾಜೀಸಂಧಾನಕ್ಕೆ ಶಿವಣ್ಣ  ಒಪ್ಪಿಗೆ  ಸೂಚಿಸಿದರು. ಅಂಗಡಿ ಮಾಲೀಕರು ಟಿ.ವಿಯ ಮೂಲ ಹಣವನ್ನು ಶಿವಣ್ಣ ಅವರಿಗೆ ಹಿಂದಿರುಗಿಸಿದರು.

ತಮ್ಮ ವಕೀಲರ ಮುಖಾಂತರ ಶಿವಣ್ಣ ಅವರನ್ನು ಸತಾಯಿಸುವುದಾಗಿ ನುಡಿದ ಅಂಗಡಿ ಮಾಲೀಕ ಕೊನೆಗೂ ಸೋತರು. ಖುದ್ದು ವಾದ ಮಾಡಿದ ಶಿವಣ್ಣ ಗೆದ್ದರು. ಗ್ರಾಹಕರು ತಮ್ಮ ಜವಾಬ್ದಾರಿ ಅರಿತರೆ ಇಂಥ ‘ಕಳ್ಳ’ರಿಗೆ ಸರಿಯಾದ ಪಾಠ ಕಲಿಸಬಹುದು ಎನ್ನುವುದು ಈ ಪ್ರಕರಣದಿಂದ ತಿಳಿಯುತ್ತದೆ. ಹಾಗೆನೇ ಗ್ರಾಹಕರಿಗೆ ಸಾಮಗ್ರಿಗಳನ್ನು ನೀಡುವಾಗ ಅಂಗಡಿಯವರು ಎಷ್ಟೊಂದು ಎಚ್ಚರಿಕೆಯಿಂದ ಇರಬೇಕು ಎನ್ನುವುದೂ ಇಲ್ಲಿ ಗೊತ್ತಾಗುತ್ತದೆ. (ಹೆಸರು ಬದಲಾಯಿಸಲಾಗಿದೆ)

**

– ಡಾ. ಮಲ್ಲಿಕಾರ್ಜುನ  ಗುಮ್ಮಗೋಳ
(
ಲೇಖಕರು ನ್ಯಾಯಾಂಗ ಇಲಾಖೆ ಅಧಿಕಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT