ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನನುಭವ ಮೀರಿದ ಆಕರ್ಷಕ ವ್ಯಕ್ತಿತ್ವ

Last Updated 13 ಮೇ 2017, 19:30 IST
ಅಕ್ಷರ ಗಾತ್ರ

ಫ್ರಾನ್ಸ್‌ ದೇಶ ಲಲಿತ ಕಲೆಗಳ ಪ್ರೇಮದ ಪರಿಮಳಕ್ಕೆ ಹೆಸರಾದುದು. ಈ ಪರಿಮಳದ ಹೊಸ ರಾಯಭಾರಿಯಂತೆ ಕಾಣಿಸುತ್ತಿರುವವರು ಎಮ್ಯಾನುಯಲ್‌ ಮ್ಯಾಕ್ರನ್‌. ಫ್ರಾನ್ಸ್‌ನ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮ್ಯಾಕ್ರನ್‌ ತಮ್ಮ ರಾಜಕೀಯ ಯಶಸ್ಸಿನ ಜೊತೆಗೆ ವಿಲಕ್ಷಣ ಪ್ರೇಮಕಥನದ ಕಾರಣದಿಂದಲೂ ವಿಶ್ವದ ಗಮನಸೆಳೆದಿದ್ದಾರೆ.

ಮ್ಯಾಕ್ರನ್‌ ಅವರಿಗಿನ್ನೂ 39 ವರ್ಷ (ಡಿ. 21, 1977). ಪ್ರಜಾಪ್ರಭುತ್ವ ಚಾಲ್ತಿಯಲ್ಲಿರುವ ಫ್ರಾನ್ಸ್‌ನ ಅತಿ ಕಿರಿಯ ಅಧ್ಯಕ್ಷ ಎನ್ನುವುದು ಅವರ ಅಗ್ಗಳಿಕೆ. ಅರಸೊತ್ತಿಗೆಯ ಕಾಲದ ನೆಪೋಲಿಯನ್‌ ಬೋನಾಪಾರ್ಟೆ 35ನೇ ವಯಸ್ಸಿಗೆ ದೊರೆಯಾದುದನ್ನು ಹೊರತುಪಡಿಸಿದರೆ, ನಲವತ್ತರ ಒಳಗಿನ ಕಿರಿಯನೊಬ್ಬ ಅಧಿಕಾರದ ಚುಕ್ಕಾಣಿ ಹಿಡಿದ ಉದಾಹರಣೆ ಫ್ರಾನ್ಸ್‌ ಇತಿಹಾಸದಲ್ಲಿಲ್ಲ. ಅಲ್ಲಿಯ ಜನ ಅನುಭವಕ್ಕಿಂತಲೂ ಯುವ ನಾಯಕತ್ವವನ್ನು ಬಯಸುತ್ತಿರುವುದಕ್ಕೆ ಮ್ಯಾಕ್ರನ್‌ ಸೂಚನೆಯಂತಿದ್ದಾರೆ.

ವೃತ್ತಿಯಿಂದ ಬ್ಯಾಂಕರ್‌ ಆಗಿದ್ದ ಮ್ಯಾಕ್ರನ್‌ರ ರಾಜಕೀಯ ಏಳಿಗೆ ಈ ಕಾಲದ ಧಾವಂತಕ್ಕೆ ಹೇಳಿಮಾಡಿಸಿದಂತಹುದು. 2006ರಿಂದಲೇ ‘ಸೋಷಿಯಲಿಸ್ಟ್ ಪಕ್ಷ’ದ ಒಡನಾಟದಲ್ಲಿದ್ದರೂ, 2014ರಲ್ಲಿ ಹೊಲಾಂಡೆ ಅವರ ಮಂತ್ರಿಮಂಡಲದಲ್ಲಿ ಹಣಕಾಸು ಮತ್ತು ಕೈಗಾರಿಕಾ ಸಚಿವರಾಗುವ ಮೂಲಕ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡರು. ಆದರೆ, ಅಧ್ಯಕ್ಷ ಚುನಾವಣೆಗೆ ಮುನ್ನ ಅವರೆಂದೂ ಮತದಾನದ ಅಗ್ನಿಪರೀಕ್ಷೆಗೆ ತಮ್ಮನ್ನೊಡ್ಡಿಕೊಂಡವರಲ್ಲ. ಆಡಳಿತಾರೂಢ ಪಕ್ಷದ ಬಗ್ಗೆ ದೇಶದಲ್ಲಿ ಪ್ರತಿಕೂಲ ಗಾಳಿ ಬೀಸುತ್ತಿರುವುದನ್ನು ಗುರುತಿಸಿದ ಅವರು, ಕಳೆದ ಆಗಸ್ಟ್‌ನಲ್ಲಿ ಸಚಿವ ಸ್ಥಾನ ತ್ಯಜಿಸಿ ‘ಎನ್‌ ಮಾರ್ಚ್‌’ ಎನ್ನುವ ರಾಜಕೀಯ ಪಕ್ಷ ಹುಟ್ಟುಹಾಕಿದರು. ವರ್ಷವಿನ್ನೂ ತುಂಬದ ಪಕ್ಷದ ರೂವಾರಿ ಈಗ ದೇಶದ ಅತ್ಯುನ್ನತ ಪದಕ್ಕೆ ಆಯ್ಕೆಯಾಗಿದ್ದಾರೆ. ಈ ಮೂಲಕ, ಹೊಸ ಪಕ್ಷವೊಂದರ ಹುರಿಯಾಳು ದೇಶದ ಚುಕ್ಕಾಣಿ ಹಿಡಿಯುವ ಚಾರಿತ್ರಿಕ ಘಟನೆಗೆ ಆಧುನಿಕ ಫ್ರಾನ್ಸ್‌ನ ಆರು ದಶಕಗಳ ಇತಿಹಾಸ ಸಾಕ್ಷಿಯಾಗಿದೆ.

‘ನಮ್ಮ ರಾಜಕಾರಣ ವ್ಯವಸ್ಥೆ ಆಂತರಿಕವಾಗಿ ಟೊಳ್ಳಾಗಿದೆ. ನಾನು ಈ ವ್ಯವಸ್ಥೆಯನ್ನು ನಿರಾಕರಿಸುವೆ’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದ ಅವರು, ‘ಪ್ರಜಾಪ್ರಭುತ್ವ ಕ್ರಾಂತಿ’ಯ (ಡೆಮಾಕ್ರಟಿಕ್‌ ರೆವೊಲ್ಯೂಷನ್‌) ಕನಸು ಕಂಡಿದ್ದರು. ‘ನಾನು ಫ್ರಾನ್ಸ್‌ ಜನರ ಅಧ್ಯಕ್ಷನಾಗಲು ಬಯಸುವೆ. ದೇಶಭಕ್ತಿಯ ಆಯ್ಕೆಯಾಗಲು ಬಯಸುತ್ತೇನೆ’ ಎಂದಿದ್ದರು.

ಚುನಾವಣೆಯಲ್ಲಿ ಮ್ಯಾಕ್ರನ್‌ ಅನುಸರಿಸಿದ ತಂತ್ರಗಾರಿಕೆ ವಿಶಿಷ್ಟವಾದುದು. ಮೂರು ಲಕ್ಷ ಮನೆಗಳಿಗೆ ತೆರಳಿದ್ದ ‘ಎನ್‌ ಮಾರ್ಚ್‌’ ಕಾರ್ಯಕರ್ತರು ಸುಮಾರು 25 ಸಾವಿರ ಜನರ ಸಂದರ್ಶನಗಳನ್ನು ಧ್ವನಿಮುದ್ರಿಸಿಕೊಂಡಿದ್ದರು. ಈ ಸಂದರ್ಶನಗಳ ಆಧಾರದ ಮೇಲೆ ಜನರ ಅಗತ್ಯಗಳನ್ನು ಊಹಿಸಿದ ಮ್ಯಾಕ್ರನ್‌, ಅದಕ್ಕನುಸಾರವಾಗಿ ತಮ್ಮ ಪ್ರಚಾರತಂತ್ರ ರೂಪಿಸಿಕೊಂಡಿದ್ದರು. ಅವರ ರಾಜಕೀಯ ಅನನುಭವವನ್ನು ಎದುರಾಳಿಗಳು ಎತ್ತಿತೋರಿಸಿದರು. ಆದರೆ, ಎಡ ಅಥವಾ ಬಲ ವಿಚಾರಧಾರೆಗಳಿಂದ ಸಮಾನ ಅಂತರ ಕಾಯ್ದುಕೊಂಡು, ಮ್ಯಾಕ್ರನ್‌ ಪ್ರಸ್ತಾಪಿಸಿದ ವಿಷಯಗಳು ಜನರ ಗಮನಸೆಳೆದವು. ಕಾನೂನಾತ್ಮಕ ವಲಸೆಗೆ ನಿಯಂತ್ರಣ ಹೇರಿಕೆ, ನಿರುದ್ಯೋಗದ ಪ್ರಮಾಣ ಇಳಿಕೆ, ಭಯೋತ್ಪಾದನೆ ವಿರುದ್ಧ ಕಟ್ಟುನಿಟ್ಟು ಕ್ರಮ, ನವೀಕರಿಸಬಹುದಾದ ಇಂಧನ ಮೂಲಗಳಿಗೆ ಒತ್ತು, ವಾರಕ್ಕೆ 36 ತಾಸು ಕೆಲಸದ ಅವಧಿ – ಇವುಗಳೆಲ್ಲ ಮತದಾರರ ಗಮನಸೆಳೆದವು. ಅಂತಿಮ ಹಂತದ ಸ್ಪರ್ಧೆಯಲ್ಲಿ ಎದುರಾಳಿಗಳಾಗಿದ್ದ ಮರೀನ್‌ ಲೆ ಪೆನ್‌ ಹಾಗೂ ಮ್ಯಾಕ್ರನ್‌, ಮೊದಲ ಹಂತದ ಚುನಾವಣೆಯಲ್ಲಿ ಪಡೆದಿದ್ದ ಮತಗಳಲ್ಲಿ ದೊಡ್ಡ ವ್ಯತ್ಯಾಸವೇನೂ ಇರಲಿಲ್ಲ. ಮರೀನ್‌ ಶೇ. 21.5 ಮತಗಳನ್ನು ಪಡೆದಿದ್ದರೆ, ಮ್ಯಾಕ್ರನ್‌ ಶೇ. 23.8 ಮತಗಳನ್ನು ಪಡೆದಿದ್ದರು. ಆದರೆ, ಅಂತಿಮ ಸುತ್ತಿನಲ್ಲಿ ಮ್ಯಾಕ್ರನ್‌ ಶೇ. 65.1 ಮತಗಳನ್ನು ಪಡೆದು, ಮರೀನ್‌ (ಶೇ. 34.9 ಮತಗಳು) ವಿರುದ್ಧ ದೊಡ್ಡ ಗೆಲುವು ಸಾಧಿಸಿದರು.

ರಾಜಕಾರಣವಷ್ಟೇ ಅಲ್ಲ, ಮ್ಯಾಕ್ರನ್‌ರ ವೈಯಕ್ತಿಕ ಜೀವನ ಕೂಡ ವರ್ಣರಂಜಿತವಾದುದು. ಅವರು ಹಾಗೂ ಅವರ ಪತ್ನಿಯ ನಡುವೆ 25 ವರ್ಷಗಳ ವಯಸ್ಸಿನ ಅಂತರವಿದೆ. ಶಾಲಾ ದಿನಗಳಲ್ಲಿ ಬ್ರಿಗೆಟ್ಟಿ ಟ್ರಾಗ್‌ನೆಕ್ಸ್‌ ಎನ್ನುವ ರಂಗಶಿಕ್ಷಕಿಯೊಂದಿಗೆ ಒಲವು ಕೊನರಿದಾಗ ಮ್ಯಾಕ್ರನ್‌ ಇನ್ನೂ ಹದಿನೈದರ ಬಾಲಕ. ಬ್ರಿಗೆಟ್ಟಿ ನಿರ್ದೇಶನದ ನಾಟಕದಲ್ಲಿ ಅಭಿನಯಿಸುವ ಸಂದರ್ಭದಲ್ಲಿ, ‘ಈಕೆ ತನ್ನ ಬದುಕನ್ನು ನಿರ್ದೇಶಿಸಿದರೆ ಚೆನ್ನಾಗಿರುತ್ತದೆ’ ಎಂದು ಹುಡುಗನಿಗೆ ಅನ್ನಿಸಿದೆ. ಪ್ರೇಮದ ಪರಿಮಳ ಮನೆಯವರೆಗೂ ತಲುಪಿದೆ. ಮ್ಯಾಕ್ರನ್‌ ಅಪ್ಪ–ಅಮ್ಮ ಇಬ್ಬರೂ ವೈದ್ಯರು. ಆತುರದ ನಿರ್ಧಾರ ಕೈಗೊಳ್ಳುವುದು ಬೇಡ ಎಂದು ಪೋಷಕರು ಮಗನನ್ನು ಅಮೀನ್ಸ್‌ನಿಂದ ಪ್ಯಾರಿಸ್‌ಗೆ ಸಾಗಹಾಕಿದರು. ಆದರೆ, ಅಲ್ಲಿ ವಿದ್ಯಾಭ್ಯಾಸ ಮುಗಿಸಿ ಮನೆಗೆ ಮರಳಿದ ಮ್ಯಾಕ್ರನ್‌ ಮತ್ತೆ ಬ್ರೆಗೆಟ್ಟಿ ಎದುರು ಪ್ರೇಮನಿವೇದನೆ ಸಲ್ಲಿಸಿದರು. ಆ ವೇಳೆಗಾಗಲೇ ಆಕೆಗೆ ಮದುವೆಯಾಗಿ ಮೂವರು ಮಕ್ಕಳಿದ್ದರು. ಯುವಪ್ರೇಮಿಯ ಪ್ರಸ್ತಾಪವನ್ನು ಒಪ್ಪಿಕೊಂಡ ಅವರು, ಮೊದಲ ಪತಿಗೆ ವಿಚ್ಛೇದನ ನೀಡಿದರು. ಬ್ರೆಗೆಟ್ಟಿ ಮಕ್ಕಳು ಕೂಡ ಅಮ್ಮನ ಮರುಮದುವೆಗೆ ಹಸಿರುನಿಶಾನೆ ತೋರಿದರು (ಇಬ್ಬರು ಮಲಮಕ್ಕಳು ಮ್ಯಾಕ್ರನ್‌ ಗಿಂತಲೂ ವಯಸ್ಸಿನಲ್ಲಿ ದೊಡ್ಡವರು!). 2016ರಲ್ಲಿ ಮದುವೆ ನಡೆಯಿತು.

ಬ್ರೆಗೆಟ್ಟಿ ಬಗ್ಗೆ ಮ್ಯಾಕ್ರನ್‌ಗೆ ಅಪಾರ ಗೌರವ. ವೈಯಕ್ತಿಕ ಜೀವನ ಹಾಗೂ ರಾಜಕಾರಣದ ಗೆಲುವಿನಲ್ಲಿ ಪತ್ನಿಯ ಪಾತ್ರ ಮುಖ್ಯವಾದುದು ಎಂದವರು ಹೇಳಿಕೊಂಡಿದ್ದಾರೆ. ಅವರ ಭಾಷಣಗಳಲ್ಲಿ ಪತ್ನಿಯ ‘ಹಸ್ತಕ್ಷೇಪ’ ಇಲ್ಲದಿಲ್ಲ. ಆ ಸಹಕಾರ ಆಡಳಿತದಲ್ಲೂ ಮುಂದುವರಿಯುವ ಬಗ್ಗೆ ಮ್ಯಾಕ್ರನ್‌ ಸುಳಿವು ನೀಡಿದ್ದಾರೆ.

ಪ್ಯಾರಿಸ್‌ಗೆ 120 ಕಿ.ಮೀ. ದೂರದಲ್ಲಿರುವ ಅಮೀನ್ಸ್‌ (Amiens) ಮ್ಯಾಕ್ರನ್‌ರ ಊರು. ‘ನನ್ನ ಬದುಕನ್ನು ನಾನೇ ಆಯ್ದುಕೊಳ್ಳುವೆ’ ಎಂದು ಊರು ತೊರೆದ ಮ್ಯಾಕ್ರನ್‌ಗೆ ಬೆನ್ನೆಲುಬಾಗಿ ನಿಂತಿದ್ದು ಹೆನ್ರಿ ಹರ್ಮಂಡ್‌ ಎನ್ನುವ ಉದ್ಯಮಿ.

ಪಿಯಾನೊ ನುಡಿಸುವುದರಲ್ಲಿ ಪರಿಣತರಾದ ಮ್ಯಾಕ್ರನ್‌, ತತ್ತ್ವಶಾಸ್ತ್ರದಲ್ಲೂ ಒಲವುಳ್ಳವರು. ಅವರ ಭಾಷಣಗಳಲ್ಲಿ ತತ್ತ್ವಶಾಸ್ತ್ರದ ಛಾಯೆ ಕಾಣಿಸುತ್ತದೆ. ಮಾತುಗಳಲ್ಲಿ ಪ್ರಜಾಪ್ರಭುತ್ವದ ಒಲವು ಕಾಣಿಸುತ್ತದೆ. ‘ಪ್ರತಿಯೊಬ್ಬರು ತಮ್ಮ ಧರ್ಮವನ್ನು ಘನತೆಯಿಂದ ಅನುಸರಿಸಲು ಅವಕಾಶ ಕಲ್ಪಿಸುವುದು ನಮ್ಮ ಕರ್ತವ್ಯ’ ಎನ್ನುವ ನಿಲುವು ಅವರದು. ವಿಶ್ವದ ಅನೇಕ ಭಾಗಗಳಲ್ಲಿ ಇರುವಂತೆ ಫ್ರಾನ್ಸ್‌ನಲ್ಲೀಗ ಮುಸ್ಲಿಂ ಸಮುದಾಯದ ಬಗ್ಗೆ ಒಂದು ವರ್ಗ ಅಸಮಾಧಾನ ಹೊಂದಿದೆ. ಈ ಹಿನ್ನೆಲೆಯಲ್ಲಿ, ‘ಹೊಸ ಕಾನೂನು, ಹೊಸ ಪಠ್ಯ, ಹೊಸ ಮಾನದಂಡಗಳನ್ನು ತರುವ ಬಗ್ಗೆ ವೈಯಕ್ತಿಕವಾಗಿ ನನಗೆ ನಂಬಿಕೆಯಿಲ್ಲ’ ಎನ್ನುವ ಮಾತು ವಿಶೇಷ ಎನ್ನಿಸುತ್ತದೆ.

‘ಎನ್‌ ಮಾರ್ಚ್‌’ ಎಂದರೆ ‘ನಡೆ ಮುಂದೆ’ ಎಂದರ್ಥ. ಆದರೆ, ಮ್ಯಾಕ್ರನ್‌ ಅವರು ನಡೆಯುವ ದಾರಿ ಸಲೀಸಾಗಿಲ್ಲ. ಅಧ್ಯಕ್ಷರಾಗಿ ಅಧಿಕಾರದ ಸೂತ್ರಗಳನ್ನು ಹಿಡಿದರೂ ಅವರ ರಾಜಕಾರಣದ ನಾಳೆಗಳು ಸರಳವಾಗಿಲ್ಲ. ‘ಎನ್ ಮಾರ್ಚ್‌’ ಹೊಸ ಪಕ್ಷವಾದುದರಿಂದ, ಸಂಸತ್‌ನಲ್ಲಿ ಅವರು ಏಕಾಂಗಿ. ಹೊಸ ಕಾಯ್ದೆಗಳಿಗೆ ಅನುಮೋದನೆ ಪಡೆಯಲು ಇತರ ಪಕ್ಷಗಳ ಸಹಕಾರ ಪಡೆಯಬೇಕಾಗಿದೆ. ಇನ್ನೊಂದು ತಿಂಗಳಲ್ಲಿ ನಡೆಯುವ ಶಾಸಕಾಂಗ ಚುನಾವಣೆಗಳಲ್ಲಿ ಪಕ್ಷದ ಅಸ್ತಿತ್ವ ಸಾಬೀತುಪಡಿಸುವ ಜವಾಬ್ದಾರಿಯನ್ನೂ ಅವರು ನಿರ್ವಹಿಸಬೇಕಾಗಿದೆ. ಫ್ರಾನ್ಸ್‌ನಲ್ಲಿ ಈಚಿನ ದಿನಗಳಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ಚಟುವಟಿಕೆಗಳಿಗೆ ಉತ್ತರವನ್ನು ಕಂಡುಕೊಳ್ಳುವ ಸವಾಲನ್ನು ಎದುರಿಸಬೇಕಾಗಿದೆ.

ಇಂದು ಮ್ಯಾಕ್ರನ್‌ ಅಧಿಕೃತವಾಗಿ ಅಧ್ಯಕ್ಷ ಸ್ಥಾನದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇಡೀ ಫ್ರಾನ್ಸ್‌ ‘ನಡೆ ಮುಂದೆ’ ಎನ್ನುವ ಉತ್ಸಾಹದಲ್ಲಿದೆ. ಅಂದರೆ, ಮ್ಯಾಕ್ರನ್‌ ಅವರ ಪ್ರಣಯದ ದಿನಗಳಿನ್ನು ಮುಗಿದವು ಎಂದರ್ಥ. ಈಗ ಮುಂದಿರುವುದು, ದಕ್ಷತೆ ಹಾಗೂ ವಿವೇಕದಿಂದ ಕೆಲಸ ಮಾಡುವ ಸಮಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT