ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಯಂ ಅನುಶಾಸನವೇ ಅಪಘಾತ ಇಳಿಕೆಗೆ ದಾರಿ’

Last Updated 13 ಮೇ 2017, 19:30 IST
ಅಕ್ಷರ ಗಾತ್ರ

1978ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದ ಬಿ.ಎನ್.ಗಂಗಾಧರ್, 1982ರಿಂದ ನಿಮ್ಹಾನ್ಸ್‌ನಲ್ಲಿ ಮನೋರೋಗ ವೈದ್ಯರಾಗಿ ಸೇವೆ ಆರಂಭಿಸಿದರು. ಈ ಮಧ್ಯೆ, ಕೆಲ ಕಾಲ ಜಿಗಣಿಯ ‘ಎಸ್‌–ವ್ಯಾಸ’ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದರು. ನಿಮ್ಹಾನ್ಸ್‌ನಲ್ಲಿ 17 ವರ್ಷ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಅವರು, ಕಳೆದ ಎರಡೂವರೆ ವರ್ಷಗಳಿಂದ ವರ್ತನೆ ವಿಜ್ಞಾನ ವಿಭಾಗದ ಡೀನ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2016ರ ಮೇ ತಿಂಗಳಿನಿಂದ ನಿಮ್ಹಾನ್ಸ್‌ನ ನಿರ್ದೇಶಕರಾಗಿದ್ದಾರೆ.

ಅಪಘಾತಗಳಲ್ಲಿ ಗಾಯಗೊಂಡ ನೂರಕ್ಕೂ ಹೆಚ್ಚು ಮಂದಿಗೆ ಪ್ರತಿದಿನ ಚಿಕಿತ್ಸೆ ನೀಡುವ ನಿಮ್ಹಾನ್ಸ್, ಇದೀಗ  ‘ಅಂಡರ್‌ರೈಟರ್ಸ್ ಲ್ಯಾಬೊರೇಟರಿ’ (ಯುಎಲ್) ಸಂಸ್ಥೆ ಜತೆ ಸೇರಿ ದೇಶದ ರಸ್ತೆ ಸುರಕ್ಷತೆ ಬಗ್ಗೆ ಅಧ್ಯಯನ ನಡೆಸಿದೆ. ಅಪಘಾತ ಹೆಚ್ಚಳಕ್ಕೆ ಕಾರಣಗಳು ಹಾಗೂ ಅವುಗಳ ನಿಯಂತ್ರಣಕ್ಕೆ ಇರುವ  ಮಾರ್ಗಗಳ ಬಗ್ಗೆ ಗಂಗಾಧರ್ ಅವರು ‘ಪ್ರಜಾವಾಣಿ’ ಜತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

* ಸಂಶೋಧನಾ ವರದಿ ಬಗ್ಗೆ ಹೇಳಿ...
ನಿತ್ಯ 400 ಮಂದಿಯಂತೆ ದೇಶದಲ್ಲಿ ಪ್ರತಿ ವರ್ಷ ಒಂದೂವರೆ ಲಕ್ಷ ಮಂದಿ ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ. ಈ ಸಂಖ್ಯೆ ಕಡಿಮೆಯಾಗಬೇಕು ಹಾಗೂ ಜನರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ಅಧ್ಯಯನ ನಡೆಸಿದ್ದೇವೆ. ರಾಷ್ಟ್ರೀಯ ಅಪರಾಧ ದಾಖಲಾತಿ ಘಟಕ (ಎನ್‌ಸಿ ಆರ್‌ಬಿ), ರಾಜ್ಯ ಅಪರಾಧ ದಾಖಲಾತಿ ಘಟಕ (ಎಸ್‌ಸಿಆರ್‌ಬಿ), ಪೊಲೀಸ್ ಇಲಾಖೆ, ಆಸ್ಪತ್ರೆಗಳು, ಇತರೆ ಸರ್ಕಾರೇತರ ಸಂಸ್ಥೆಗಳಿಂದ ವಾಸ್ತವ ಅಂಕಿ ಅಂಶ ಸಂಗ್ರಹಿಸಿ ಸಿದ್ಧಪಡಿಸಿರುವ ಈ ವರದಿ, ಅಪಘಾತಗಳ ಬಗ್ಗೆ ಅಧ್ಯಯನ ನಡೆಸುವವರಿಗೆ ದಾಖಲೆಯಾಗಿ ಉಳಿಯಲಿದೆ.

* ರಾಜ್ಯದಲ್ಲಿ ಅಪಘಾತಗಳ ಸ್ಥಿತಿಗತಿ ಹೇಗಿದೆ?
ಅಧ್ಯಯನದ ಪ್ರಕಾರ 2015–16ರಲ್ಲಿ ರಾಜ್ಯದಲ್ಲಿ 10,856 ಮಂದಿ ಅಪಘಾತಗಳಿಂದ ಮೃತಪಟ್ಟಿದ್ದಾರೆ. ಈ ಸಂಖ್ಯೆಯಲ್ಲಿ ಪುರುಷರ ಪಾಲು ಶೇ 81.7ರಷ್ಟಿದ್ದು (9,528), ಮಹಿಳೆಯ ಪಾಲು ಶೇ 12.3 (1,328). ಸತ್ತವರಲ್ಲಿ 394 (ಶೇ 3.6) ಮಂದಿ 18 ವರ್ಷದ ಒಳಗಿನವರಾಗಿದ್ದು, 674 ಮಂದಿ (ಶೇ 6.2) 65 ವರ್ಷದ ಮೇಲಿನ ವಯೋಮಾನದವರು.

ರಾಜ್ಯ ವ್ಯಾಪ್ತಿಯಲ್ಲಿ 6,432 ಕಿ.ಮೀ ವಿಸ್ತೀರ್ಣದ ರಾಷ್ಟ್ರೀಯ ಹೆದ್ದಾರಿಗಳಿದ್ದು, ಈ ರಸ್ತೆಗಳಲ್ಲಿ 3,657 (ಶೇ 33.7) ಮಂದಿ ಮೃತಪಟ್ಟಿದ್ದಾರೆ. ಅಂತೆಯೇ 19,721 ಕಿ.ಮೀ ವಿಸ್ತೀರ್ಣವಿರುವ ರಾಜ್ಯ ಹೆದ್ದಾರಿಗಳಲ್ಲಿ 2,889 (ಶೇ 26.6) ಸಾವು ಸಂಭವಿಸಿವೆ. 2,95,655 ಕಿ.ಮೀ ಉದ್ದದ ಇತರೆ ರಸ್ತೆಗಳಲ್ಲಿ 4,310 (ಶೇ 39.7) ಮಂದಿ ಪ್ರಾಣ ಬಿಟ್ಟಿದ್ದಾರೆ.

* ಗಾಯಾಳುಗಳಿಗೆ ನಿಮ್ಹಾನ್ಸ್‌ನಲ್ಲೇ ಚಿಕಿತ್ಸೆ ಏಕೆ?
ತಲೆಗೆ ಗಾಯವಾಗಿದೆ ಎಂದ ಕೂಡಲೇ ನಿಮ್ಹಾನ್ಸ್‌ಗೆ ಕರೆದೊಯ್ಯಬೇಕು ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಆದರೆ, ಬಹುತೇಕ ಅಪಘಾತಗಳಲ್ಲಿ ತಲೆಗೆ ಪೆಟ್ಟಾಗುವುದರ ಜತೆಗೆ ದೇಹದ ಇತರೆ ಭಾಗಗಳೂ ಊನವಾಗಿರುತ್ತವೆ. ಶೇ 80ರಷ್ಟು ಇಂಥ ಪ್ರಕರಣಗಳನ್ನೇ ನಾವು ನಿರ್ವಹಿಸುತ್ತಿದ್ದೇವೆ. ಅಪಘಾತಗಳಲ್ಲಿ ಗಾಯಗೊಂಡ 120 ಮಂದಿ ನಿತ್ಯ ನಿಮ್ಹಾನ್ಸ್‌ಗೆ ಬರುತ್ತಾರೆ.

ಮಿದುಳಿಗೆ ಹಾನಿಯಾಗಿ ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿದ್ದವರನ್ನು ಮಾತ್ರ ದಾಖಲು ಮಾಡಿಕೊಳ್ಳುತ್ತೇವೆ. ಇಲ್ಲವಾದರೆ, ಸಂಬಂಧಪಟ್ಟ ಆಸ್ಪತ್ರೆಗಳಿಗೆ ಶಿಫಾರಸು ಮಾಡುತ್ತೇವೆ. ತಲೆಗೆ ಹೊಡೆತ ಬಿದ್ದು ಕೋಮಾ ಸ್ಥಿತಿಯಲ್ಲಿದ್ದರೂ ಏಕೆ ಆಸ್ಪತ್ರೆಗೆ ದಾಖಲಿಸಿಕೊಳ್ಳುತ್ತಿಲ್ಲ ಎಂದು ಗಾಯಾಳುಗಳ ಸಂಬಂಧಿಕರು ವಾದಿಸುವುದು ಸಾಮಾನ್ಯ. ಸರ್ಜರಿ ಅಗತ್ಯವಿಲ್ಲದವರಿಗೆ ಇತರೆ ಆಸ್ಪತ್ರೆಯ ಆರೈಕೆಯೇ ಸಾಕು.

* ಮರಣ ಸಂಖ್ಯೆ ಕಡಿಮೆ ಮಾಡಲು ಕೈಗೊಂಡಿರುವ ಕ್ರಮಗಳೇನು?
ಅಪಘಾತದಲ್ಲಿ ತಲೆಗೆ ಗಾಯವಾದಾಗ ಒಂದು ಆಸ್ಪತ್ರೆಗೆ ಕರೆದೊಯ್ಯುವುದು, ಕೈ–ಕಾಲು ಮುರಿದಿದ್ದರೆ ಇನ್ನೊಂದು ಆಸ್ಪತ್ರೆಗೆ ವರ್ಗಾಯಿಸುವುದು, ದವಡೆಗೆ ಪೆಟ್ಟಾಗಿದ್ದರೆ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯುವುದು... ಹೀಗೆ ಪದೇ ಪದೇ ಗಾಯಾಳುವನ್ನು ಸ್ಥಳಾಂತರ ಮಾಡಿದರೆ ಆತನ ಪರಿಸ್ಥಿತಿ ಏನಾಗಬೇಡ. ಹೀಗಾಗಿ, ಎಲ್ಲ ಚಿಕಿತ್ಸೆಯೂ ಒಂದೇ ಸೂರಿನಡಿ ಸಿಗುವಂಥ ವ್ಯವಸ್ಥೆಗೆ ಮುಂದಡಿ ಇಟ್ಟಿದ್ದೇವೆ.

ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ವತಿಯಿಂದ ದೆಹಲಿಯಲ್ಲಿ ‘ಅಪಘಾತದ ಸಮಗ್ರ ತುರ್ತು ಚಿಕಿತ್ಸಾ ಘಟಕ’ ಸ್ಥಾಪಿಸಲಾಗಿದೆ. ಅಪಘಾತದಿಂದ ದೇಹದ ಯಾವಭಾಗಕ್ಕೆ ಹಾನಿಯಾದರೂ ಅಲ್ಲೇ ಚಿಕಿತ್ಸೆ ಸಿಗುತ್ತಿದೆ. ಅದೇ ಮಾದರಿಯ ಕೇಂದ್ರವನ್ನು ಬೆಂಗಳೂರಿನಲ್ಲೂ ಸ್ಥಾಪಿಸಲು ನಿರ್ಧರಿಸಿದ್ದೇವೆ.  ಇದಕ್ಕಾಗಿ ಸರ್ಕಾರ ಕೆ.ಆರ್.ಪುರದಲ್ಲಿ 40 ಎಕರೆ ಜಾಗ ಮಂಜೂರು ಮಾಡಿದೆ.  ₹ 150 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ನಕ್ಷೆ ಸಿದ್ಧವಾಗುತ್ತಿದೆ. ನಾಲ್ಕೈದು ವರ್ಷಗಳಲ್ಲಿ ಕಟ್ಟಡ ತಲೆ ಎತ್ತಲಿದ್ದು, ಎಲ್ಲ ತಜ್ಞರೂ ಒಟ್ಟಿಗೇ ಸಿಗಲಿದ್ದಾರೆ.

* ಗೋಲ್ಡನ್ ಅವರ್‌ನಲ್ಲಿ ಜನರ ಪ್ರತಿಕ್ರಿಯೆ ಹೇಗಿರಬೇಕು?
ಅಪಘಾತಕ್ಕೊಳಗಾದ ವ್ಯಕ್ತಿಯ ಜೀವ ರಕ್ಷಣೆಗೆ ಇರುವ ಮೊದಲ ಒಂದು ಗಂಟೆ ಅವಧಿಯನ್ನು ‘ಗೋಲ್ಡನ್ ಅವರ್’ ಎಂದು ಕರೆಯಲಾಗುತ್ತದೆ. ಇಂಥ ಅವಧಿಯಲ್ಲಿ ಗಾಯಾಳುವಿಗೆ ಸಾರ್ವಜನಿಕರ ಸ್ಪಂದನೆ ಮುಖ್ಯವಾಗಿರುತ್ತದೆ. ನಮ್ಮ ಅಧ್ಯಯನದ ಪ್ರಕಾರ ರಾಜ್ಯದ ಒಟ್ಟು ಮಾರಣಾಂತಿಕ ಅಪಘಾತಗಳಲ್ಲಿ ಮೂರನೇ ಒಂದರಷ್ಟು ರಷ್ಟು ಗಾಯಾಳುಗಳು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಶೇ 20 ರಷ್ಟು ಮಂದಿ ಆಸ್ಪತ್ರೆಗಳಿಗೆ ಕರೆದೊಯ್ಯುವ ಮಾರ್ಗ ಮಧ್ಯೆ ಹಾಗೂ ಉಳಿದವರು ಆಸ್ಪತ್ರೆಗಳಲ್ಲಿ ಕೊನೆಯುಸಿರೆಳೆದಿದ್ದಾರೆ.

ಅಪಘಾತ ಸಂಭವಿಸಿದ ಕೂಡಲೇ ಜನ ಕಾನೂನಿನ ಚೌಕಟ್ಟನ್ನೂ ಲೆಕ್ಕಿಸದೆ ರಕ್ಷಣೆಗೆ ಮುಂದಾಗಬೇಕು. ಪ್ರತಿಯೊಬ್ಬರಿಗೂ ಪ್ರಾಥಮಿಕ ಚಿಕಿತ್ಸೆಯ ಜ್ಞಾನವಿರಬೇಕು. ತಲೆ ಅಲುಗಾಡದಂತೆ ಕುತ್ತಿಗೆಯನ್ನು ಹಿಡಿದುಕೊಂಡೇ ಗಾಯಾಳುವನ್ನು ಮೇಲೆತ್ತಬೇಕು. ಆದಷ್ಟು ಬೇಗ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕು. ಗಾಯಾಳುವಿನ ಸುತ್ತಲೂ ನಿಂತು  ಉಸಿರುಗಟ್ಟುವಂತ ಸ್ಥಿತಿ ನಿರ್ಮಾಣ ಮಾಡಬಾರದು.

* ಅಪಘಾತ ನಿಯಂತ್ರಣದಲ್ಲಿ ಜನರ ಪಾತ್ರ ಏನು?
ಅಪಘಾತಗಳಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಶೇ 70ರಷ್ಟು ಮಂದಿ ತಲೆಗೆ ಪೆಟ್ಟಾಗಿದ್ದರಿಂದಲೇ ಜೀವ ಕಳೆದುಕೊಳ್ಳುತ್ತಿದ್ದಾರೆ.  ಹೀಗಾಗಿ ಬೈಕ್ ಓಡಿಸುವಾಗ ಹೆಲ್ಮೆಟ್ ಹಾಗೂ ಕಾರು ಚಲಾಯಿಸುವಾಗ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ. ಈ ನಿಯಮಗಳ ಪಾಲನೆಯಿಂದ ಮರಣ ಪ್ರಮಾಣ ಶೇ 40ರಷ್ಟಂತೂ ಕಡಿಮೆ ಮಾಡಬಹುದು. ಆದರೆ, ಜನ ಸ್ವಯಂ ಅನುಶಾಸನ ಹಾಕಿಕೊಳ್ಳದ ಹೊರತು, ಎಷ್ಟೇ ಕಾಯ್ದೆ–ಕಾನೂನುಗಳನ್ನು ತಂದರೂ ಈ ಸಂಖ್ಯೆ ಇಳಿಕೆಯಾಗುವುದಿಲ್ಲ.

* ಸಂಸ್ಥೆ ವತಿಯಿಂದ ಯಾವುದಾದರೂ ಸಮೀಕ್ಷೆಗಳು ನಡೆದಿವೆಯೇ?
ಮಾರಣಾಂತಿಕ ಅಪಘಾತಗಳ ಬಗ್ಗೆ ನಿಮ್ಹಾನ್ಸ್ ಸುಮಾರು 20 ವರ್ಷಗಳಿಂದ ಅಧ್ಯಯನ ನಡೆಸುತ್ತ ಬಂದಿದೆ. ತಲೆಗೆ ಪೆಟ್ಟಾಗಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಸರ್ಕಾರಕ್ಕೆ ಪ್ರತಿ ವರ್ಷವೂ ವರದಿ ಸಲ್ಲಿಸುತ್ತಿದ್ದೇವೆ. ಅಪಘಾತಕ್ಕೆ ಸಂಬಂಧಿಸಿದಂತೆ ನಾವು ಮಾಡಿರುವ ಅನೇಕ ಸಂಶೋಧನೆಗಳು ಸಹ ರಾಜ್ಯದಲ್ಲಿ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗುವುದಕ್ಕೆ ಕಾರಣವಾಗಿವೆ. ಪಾನಮತ್ತ ಚಾಲನೆಯಿಂದ ಸಂಭವಿಸಿದ ಸಾವುಗಳ ಬಗ್ಗೆಯೂ ಸಂಸ್ಥೆ ವತಿಯಿಂದ ಸಮೀಕ್ಷೆ ನಡೆಯುತ್ತಿದೆ. ನಿಮ್ಹಾನ್ಸ್ ಸಮುದಾಯ ಆರೋಗ್ಯ ಕೇಂದ್ರದಿಂದಲೂ ‘ರಸ್ತೆ ಸುರಕ್ಷತೆ’  ಕುರಿತ ಕಿರುಹೊತ್ತಗೆ ಬಿಡುಗಡೆ ಮಾಡಿ ಅರಿವು ಮೂಡಿಸುತ್ತಿದ್ದೇವೆ.

* ಅಪಘಾತಗಳಲ್ಲಿ ಯುವ ಪೀಳಿಗೆಯ ಪಾಲು ಎಷ್ಟಿದೆ?
‘ದೇಶದಲ್ಲಿ ಸಂಭವಿಸಿದ ಒಟ್ಟು ಅಪಘಾತಗಳಲ್ಲಿ 21–34 ವರ್ಷ ವಯೋಮಾನದವರ ಪಾಲು ಶೇ 30ರಷ್ಟಿದೆ. ಸತ್ತವರ ಸಂಖ್ಯೆಯಲ್ಲಿಯೂ ಈ ವರ್ಗದ ಪಾಲು ಶೇ 38ರಷ್ಟಿದೆ. ಪಾನಮತ್ತ ಚಾಲನೆ, ಹೆಲ್ಮೆಟ್ ಧರಿಸಲು ನಿರಾಸಕ್ತಿ,  ವೇಗದ ಚಾಲನೆ ಇದಕ್ಕೆ ಪ್ರಮುಖ ಕಾರಣಗಳು.

ಸಾಮಾನ್ಯವಾಗಿ ಅಪಘಾತಕ್ಕೆ ತುತ್ತಾಗುವಂಥವರು ಸಣ್ಣ ವಯಸ್ಸಿನವರು. ಅವರ ಶರೀರದ ಎಲ್ಲ ಭಾಗಗಳೂ ಆರೋಗ್ಯವಾಗಿರುತ್ತವೆ. ದುರ್ದೈವದಿಂದ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ ಅವರ ಅಂಗಾಗಗಳಾದರೂ ಉಪಯೋಗವಾಗಬೇಕು. ಒಬ್ಬ ಜೀವ ಕಳೆದುಕೊಂಡರೂ, ಆತನ ಅಂಗಾಂಗಗಳಿಂದ ನಾಲ್ಕೈದು ಮಂದಿಯ ಜೀವ ಉಳಿಸಲು ಅವಕಾಶ ಇರುತ್ತದೆ. ಈ ನಿಟ್ಟಿನಲ್ಲೂ ವೈದ್ಯರು, ಗಾಯಾಳುಗಳ ಸಂಬಂಧಿಕರೂ ಯೋಚಿಸಬೇಕಾಗುತ್ತದೆ.

* ರಸ್ತೆಗಳ ಸ್ಥಿತಿಗತಿ ಬಗ್ಗೆ ಏನು ಹೇಳುತ್ತೀರಾ?
2015–16ರಲ್ಲಿ ದೇಶದಲ್ಲಿ ಸಂಭವಿಸಿದ ಒಟ್ಟು ಅಪಘಾತಗಳಲ್ಲಿ ಕೆಟ್ಟ ರಸ್ತೆಗಳ ಪಾಲು ಶೇ 1.4 ಇದೆ. ದೇಶದ ವಿವಿಧೆಡೆ ಸುಮಾರು 10,444 ಕಿ.ಮೀ ರಸ್ತೆಯ ಸ್ಥಿತಿಗತಿ ಬಗ್ಗೆ ಅಧ್ಯಯನ ನಡೆಸಿರುವ ‘ಇಂಡಿಯಾ ರ‍್ಯಾಪ್’ ಸಂಶೋಧನಾ ಸಂಸ್ಥೆ, ದೇಶದ ರಸ್ತೆಗಳ ಗುಣಮಟ್ಟಕ್ಕೆ 5ಕ್ಕೆ 3 ಅಂಕಗಳನ್ನು ನೀಡಿದೆ. ಅಂದರೆ, ರಸ್ತೆಗಳ ಗುಣಮಟ್ಟ ಸುಧಾರಿಸಬೇಕಿದೆ. ರಾಜ್ಯದ ರಸ್ತೆಗಳ ಪರಿಸ್ಥಿತಿಯೂ  ಹೀಗೇ ಇದೆ. ಅಪಘಾತ ವಲಯಗಳನ್ನು ಪತ್ತೆ ಹಚ್ಚಿ, ಅಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.

* ಚಾಲನೆ ವೇಳೆ ಮೊಬೈಲ್ ಬಳಕೆ ಬಗ್ಗೆ ಅಧ್ಯಯನ ನಡೆದಿದೆಯೇ?

2008ರಲ್ಲಿ ಸರ್ಕಾರೇತರ ಸಂಸ್ಥೆಯೊಂದು ನಡೆಸಿದ ಅಧ್ಯಯನದ ಪ್ರಕಾರ ಒಟ್ಟು ವಾಹನ ಸವಾರರಲ್ಲಿ ಶೇ 6.5ರಷ್ಟು ಮಂದಿ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡುತ್ತಿದ್ದರು. ಈ ವರ್ಷ ‘ಸೇವ್‌ ಲೈಫ್ ಫೌಂಡೇಷನ್’  ಕೂಡ ಇಂಥದ್ದೊಂದು ಅಧ್ಯಯನ ನಡೆಸಿದ್ದು, ಹೆಚ್ಚು ಮೊಬೈಲ್ ಬಳಸುವ ಸವಾರರಿರುವ ಮಹಾನಗರ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಕೋಲ್ಕತ್ತಾ ಹಾಗೂ ಮುಂಬೈ ನಗರಗಳು ನಂತರದ ಸ್ಥಾನಗಳಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT