ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡೇ ದಿನದಲ್ಲಿ 8,500 ಅರ್ಜಿ ಬಿಕರಿ

Last Updated 13 ಮೇ 2017, 19:40 IST
ಅಕ್ಷರ ಗಾತ್ರ

ಬೆಂಗಳೂರು: ದ್ವಿತೀಯ ಪಿ.ಯು ಪರೀಕ್ಷೆ ಫಲಿತಾಂಶ ಪ್ರಕಟವಾಗಿ ಎರಡು ದಿನಗಳಾಗಿವೆ. ಅಷ್ಟರಲ್ಲೇ ಪದವಿ ಕಾಲೇಜುಗಳಲ್ಲಿ ಅರ್ಜಿ ಪಡೆಯಲು ವಿದ್ಯಾರ್ಥಿಗಳು, ಪೋಷಕರು ಸಾಲುಗಟ್ಟಿ ನಿಂತಿದ್ದಾರೆ.

ಶನಿವಾರದವರೆಗೆ ನಗರದ 30 ಕಾಲೇಜುಗಳಲ್ಲಿ ಸುಮಾರು 8,500 ಪ್ರವೇಶ ಅರ್ಜಿಗಳು ಬಿಕರಿಯಾಗಿವೆ. ವಿಜ್ಞಾನ ಮತ್ತು ಕಲಾ ಕಾಲೇಜುಗಳಿಗೆ ಹೋಲಿಸಿದರೆ ವಾಣಿಜ್ಯ ಕಾಲೇಜುಗಳ ಅರ್ಜಿಗಳಿಗೆ ಹೆಚ್ಚು  ಬೇಡಿಕೆ ಇದೆ.

ನ್ಯಾಷನಲ್‌ ಕಾಲೇಜು, ವಿಜಯಾ ಕಾಲೇಜು, ಎನ್‌.ಎಂ.ಕೆ.ಆರ್‌.ವಿ. ಕಾಲೇಜು, ಶೇಷಾದ್ರಿಪುರ ಕಾಲೇಜು, ನಿಜಲಿಂಗಪ್ಪ ಕಾಲೇಜು, ಎಂ.ಇ.ಎಸ್‌. ಕಾಲೇಜುಗಳಲ್ಲಿ ಅರ್ಜಿ ಪಡೆಯುವವರ ಸಂಖ್ಯೆ ತುಸು ಹೆಚ್ಚಿತ್ತು. ಒಂದೊಂದು ಕಾಲೇಜುಗಳಲ್ಲಿ ಒಂದು ರೀತಿಯ ಕಟ್‌್ ಆಫ್‌ ಅಂಕ ನಿಗದಿಪಡಿಸಲಾಗಿದೆ. 

ನಗರದ ಪಿಇಎಸ್‌ ಪದವಿ ಕಾಲೇಜಿನಲ್ಲಿ ಶನಿವಾರ 700 ಅರ್ಜಿಗಳು ವಿತರಣೆಯಾಗಿವೆ. ತಾಸುಗಟ್ಟಲೆ ಸಾಲುಗಳಲ್ಲಿ ನಿಲ್ಲಲು ಬಯಸದ ಅನೇಕರು, ‘ಆನ್‌ಲೈನ್‌ ಮೂಲಕ ಅರ್ಜಿ ಪಡೆಯುತ್ತೇವೆ’ ಎಂದು ವಾಪಸಾದರು. ಹಾಗಾಗಿ ನೇರವಾಗಿ ಅರ್ಜಿ ಪಡೆದವರ ಸಂಖ್ಯೆ ಕಡಿಮೆ. ‘ಆನ್‌ಲೈನ್‌ನಲ್ಲಿ ಎಷ್ಟು ಅರ್ಜಿಗಳು ಡೌನ್‌ಲೋಡ್‌ ಆಗಿವೆ ಎಂಬ ಮಾಹಿತಿ ಇಲ್ಲ. ನೇರ ದಾಖಲಾತಿಗೆ ಶೇ 90 ಕಟ್‌ ಆಫ್‌ ಅಂಕ ನಿಗದಿ ಮಾಡಲಾಗಿದೆ’ ಎಂದು ಪಿಇಎಸ್‌ ಕಾಲೇಜಿನ ಪ್ರಾಂಶುಪಾಲ  ಎ.ವಿ. ಚಂದ್ರಶೇಖರ್‌ ತಿಳಿಸಿದರು.

ಮಹಾರಾಣಿ ಮಹಿಳಾ ಕಲಾ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಪ್ರಾಂಶುಪಾಲರಾದ ಶಾಂತಕುಮಾರಿ, ‘ಪದವಿ ತರಗತಿ ಪ್ರವೇಶಕ್ಕೆ ಎರಡು ದಿನಗಳಿಂದ ಅರ್ಜಿ ನೀಡುತ್ತಿದ್ದೇವೆ.  200 ಅರ್ಜಿಗಳನ್ನು ನೀಡಿದ್ದೇವೆ. ಕಲಾ ವಿಭಾಗಕ್ಕೆ ಈ ಬಾರಿಯೂ ಬೇಡಿಕೆ ಇಲ್ಲ. ಸಪ್ಲಿಮೆಂಟರಿ ಪರೀಕ್ಷೆ ಫಲಿತಾಂಶ ಬಂದ ನಂತರ ಕಲಾ ವಿಭಾಗಕ್ಕೆ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಬಹುದು’ ಎಂದರು

ನ್ಯಾಷನಲ್‌ ಕಾಲೇಜಿನಲ್ಲಿ 500  ಅರ್ಜಿಗಳು ಬಿಕರಿಯಾಗಿವೆ. ‘ವಾರಾಂತ್ಯವಾಗಿರುವುದರಿಂದ ಹೆಚ್ಚು ಅರ್ಜಿಗಳು ವಿತರಣೆಯಾಗಿಲ್ಲ. ಸೋಮವಾರಕ್ಕೆ ಈ ಸಂಖ್ಯೆ ಹೆಚ್ಚುತ್ತದೆ’ ಎಂದು ಕಾಲೇಜಿನ ಸಿಬ್ಬಂದಿ ರವಿ ಹೆಗ್ಡೆ ತಿಳಿಸಿದರು.

**

ಒಂದೇ ರೀತಿಯ ಕಟ್‌ ಆಫ್ ಅಂಕ
‘ಒಂದೇ ರೀತಿಯ ಕಟ್‌ ಆಫ್ ಅಂಕ ನಿಗದಿ ಪಡಿಸುವಂತೆ ಎಲ್ಲಾ ಕಾಲೇಜುಗಳಿಗೂ ಸೂಚನೆ ನೀಡಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಸಚಿವ ತನ್ವೀರ್‌ ಸೇಠ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಆದರೆ, ಆ ಬಗ್ಗೆ ಯಾವುದೇ ಕಾಲೇಜುಗಳಿಗೂ ಮಾಹಿತಿ ಇಲ್ಲ.

ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಶಿಖಾ, ‘ಸಚಿವರ ಹೇಳಿಕೆ ಅನುಷ್ಠಾನಗೊಳಿಸುವ ಬಗ್ಗೆ ಶೀಘ್ರ ಕ್ರಮಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

ಎಂಇಎಸ್‌ 4000 ಅರ್ಜಿ ವಿತರಣೆ: ಎಂಇಎಸ್‌ ಪಿಯು ಕಾಲೇಜು ಮೊದಲ ದಿನದಲ್ಲೇ 4000 ಅರ್ಜಿಗಳನ್ನು ವಿತರಣೆ ಮಾಡಿದೆ. 2500 ಅರ್ಜಿಗಳು ವಿಜ್ಞಾನ, 1,800 ವಾಣಿಜ್ಯ ಮತ್ತು 100 ಕಲಾ ವಿಭಾಗದಲ್ಲಿ ಅರ್ಜಿಗಳನ್ನು ವಿತರಣೆ ಮಾಡಲಾಗಿದೆ. ಈ ವರ್ಷ ವಿಜ್ಞಾನ ವಿಭಾಗಕ್ಕೆ ಶೇ 97 ಕಟ್‌ ಆಫ್‌ ಅಂಕ ನಿಗದಿಪಡಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಎಲ್‌. ರಾಮು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT