ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖಜಾನೆ ಕೊಳ್ಳೆ ಹೊಡೆಯಲು ಸುರಂಗ ಮಾರ್ಗ’

Last Updated 13 ಮೇ 2017, 19:44 IST
ಅಕ್ಷರ ಗಾತ್ರ

ಬೆಂಗಳೂರು: ‘ಖಜಾನೆ ಕೊಳ್ಳೆ ಹೊಡೆಯಲು ಸುರಂಗ ಮಾರ್ಗ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ’ ಎಂದು ಕೇಂದ್ರ ಸಂಸದೀಯ ಸಚಿವ ಅನಂತಕುಮಾರ್‌ ಟೀಕಿಸಿದರು.

ಶನಿವಾರ ನಡೆದ ಬಿಜೆಪಿ ಬೆಂಗಳೂರು ನಗರ ಜಿಲ್ಲಾ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, ‘ಬಸವೇಶ್ವರ ವೃತ್ತದಿಂದ ಹೆಬ್ಬಾಳ ಮೇಲ್ಸೇತುವೆವರೆಗೆ  ಸುರಂಗ ಮಾರ್ಗ ನಿರ್ಮಿಸಲು ಮುಂದಾಗಿರುವುದು ಜನರ ಅನುಕೂಲಕ್ಕೆ ಅಲ್ಲ. ಇದರ ವಿರುದ್ಧ ಬಿಜೆಪಿ ಸಂಘಟಿತ ಹೋರಾಟ ನಡೆಸಬೇಕಿದೆ’ ಎಂದು ಹೇಳಿದರು.

‘ಸ್ವಚ್ಛ ಭಾರತ ಅಭಿಯಾನದಲ್ಲಿ ಬೆಂಗಳೂರು ನಗರ 210ನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರ ನೀಡಿದ ಅನುದಾನ ಬಳಸಿಕೊಳ್ಳುವಲ್ಲಿ ರಾಜ್ಯ ವಿಫಲವಾಗಿದೆ. ಇದಕ್ಕೆ ಸರ್ಕಾರದ ಬೇಜವಾಬ್ದಾರಿಯೇ ಕಾರಣ’ ಎಂದು ಆಪಾದಿಸಿದರು.

‘ತಿಪ್ಪಗೊಂಡನಹಳ್ಳಿ ಪ್ರದೇಶವನ್ನು ಭೂಗಳ್ಳರ ಕೈಗೆ ಕೊಟ್ಟಿರುವ ಸರ್ಕಾರ ಈ ಜಲಾಶಯವನ್ನೇ ಸಮಾಧಿ ಮಾಡಲು ಮುಂದಾಗಿದೆ. ಅರ್ಕಾವತಿ ನದಿ ಹಾಗೂ ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಉಳಿಸಲು ಹೋರಾಟ ರೂಪಿಸಬೇಕು’ ಎಂದು ಕರೆ ನೀಡಿದರು.

ಬೆಂಗಳೂರು ಉಪನಗರ ರೈಲು ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ನೀಡಲು ಒಪ್ಪಿಗೆ ಸೂಚಿಸಿದೆ. ಆದರೆ, ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ದೂರಿದರು.

‘ಭ್ರಷ್ಟಾಚಾರದಲ್ಲಿ ಕರ್ನಾಟಕಕ್ಕೆ ದೇಶದಲ್ಲಿಯೇ ನಂಬರ್‌ 1 ಪಟ್ಟ ಕೊಡಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ. ಇದು  ರಾಜ್ಯದ ಆರೂವರೆ ಕೋಟಿ ಜನರಿಗೆ ನೀಡಿದ ಕೊಡುಗೆ. ಅಹಂಕಾರ, ಅಸಡ್ಡೆ, ಅವ್ಯವಹಾರ, ದುರಾಡಳಿತವೇ ಸಿದ್ದರಾಮಯ್ಯ ಅವರ ನಾಲ್ಕು ವರ್ಷದ ಸಾಧನೆ. ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೈಕಮಾಂಡ್‌ಗೆ ಕಪ್ಪ ಕಾಣಿಕೆ ನೀಡಿದ್ದು ಸರ್ಕಾರದ ಹೆಗ್ಗಳಿಕೆ’ ಎಂದು ಜರಿದರು.

‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಕಾಂಗ್ರೆಸ್‌ ಸರ್ಕಾರದ ದುರಾಡಳಿತದ ಕೇಂದ್ರ ಬಿಂದು. ಮರಳು ದಂಧೆಯಿಂದ ಅರ್ಕಾವತಿ ಡಿ ನೊಟಿಫಿಕೇಶನ್‌ವರೆಗೆ ಸಾಲು ಸಾಲು ಅಕ್ರಮಗಳನ್ನು ಸರ್ಕಾರ ಪೋಷಿಸಿದೆ. ಹೀಗಾಗಿಯೇ ಭ್ರಷ್ಟಾಚಾರದಲ್ಲಿ ರಾಜ್ಯಕ್ಕೆ ನಂಬರ್‌ ಒನ್‌ ಪಟ್ಟ ಸಿಕ್ಕಿದೆ’ ಎಂದರು.

ಕೇಂದ್ರ ಯೋಜನೆ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ. ಸದಾನಂದಗೌಡ ಮಾತನಾಡಿ, ‘ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯಕ್ಕೆ ಮಿಷನ್‌–150, ಬೆಂಗಳೂರು ನಗರ ಜಿಲ್ಲೆಯಲ್ಲಿ ಮಿಷನ್‌ –28 ನಮ್ಮ ಗುರಿಯಾಗಬೇಕು. ಈ ಹಂತದಲ್ಲಿ ಕಾರ್ಯಕರ್ತರು ಮೈಮರೆತು ಕುಳಿತುಕೊಳ್ಳದೇ ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ನಿರಂತರ ಹೋರಾಟ ನಡೆಸಬೇಕು’ ಎಂದು ಎಚ್ಚರಿಸಿದರು.

**

‘ನ್ಯಾಯ ಕೊಡಿಸುವುದು ರಾಜ್ಯದ ಹೊಣೆ’

ಕಾವೇರಿ ನೀರಿನ ಪಾಲಿನಲ್ಲಿ ರಾಜ್ಯಕ್ಕೆ ನ್ಯಾಯ ಸಿಕ್ಕಿಲ್ಲ. ಈ ವಿಷಯದಲ್ಲಿ ನ್ಯಾಯ ಕೊಡಿಸುವುದು ರಾಜ್ಯ ಸರ್ಕಾರದ ಹೊಣೆ ಎಂದೂ ಅನಂತ್‌ಕುಮಾರ್‌ ಪ್ರತಿಪಾದಿಸಿದರು.

ಕೇಂದ್ರ ಸರ್ಕಾರ ಈಗಾಗಲೇ ಸುಪ್ರೀಂಕೋರ್ಟ್‌ಗೆ ತನ್ನ ನಿಲುವು ತಿಳಿಸಿದೆ. ಕಾವೇರಿ ಜಲವ್ಯಾಜ್ಯಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ತನ್ನ ವಕೀಲರ ಮೂಲಕ ಸುಪ್ರೀಂಕೋರ್ಟ್‌ನಲ್ಲಿ ಸಮರ್ಥವಾಗಿ ವಾದ ಮಂಡಿಸದೇ ಇದ್ದರೆ ಬೆಂಗಳೂರಿಗೆ ಮುಂದಿನ ದಿನಗಳಲ್ಲಿ ಕುಡಿಯುವ ನೀರೂ ಸಿಗುವುದಿಲ್ಲ ಎಂದೂ ಅವರು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT